ಸೋಮವಾರ, ಸೆಪ್ಟೆಂಬರ್ 20, 2021
22 °C

ಮಕ್ಕಳ ತಜ್ಞ ಡಾ.ರಾಜೀವ್‌ ಇನ್ನಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿ.ರಾಜೀವ್

ಹಾಸನ: ಅನಾರೋಗ್ಯದಿಂದ ಬಳಲುತ್ತಿದ್ದ ಜಿಲ್ಲೆಯ ಹೆಸರಾಂತ ಮಕ್ಕಳ ತಜ್ಞ, ರಾಜೀವ್‌ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ವಿ.ರಾಜೀವ್ (64) ಬುಧವಾರ ನಿಧನರಾದರು.

ಕೋವಿಡ್ ಸೋಂಕು ಹಾಗೂ ಇತರ ಆರೋಗ್ಯ ಸಮಸ್ಯೆಯಿಂದಾಗಿ ಅವರನ್ನು ವಾರದ ಹಿಂದೆ ಬೆಂಗಳೂರಿನ ಬಿಜಿಎಸ್‌ ಗ್ಲೋಬಲ್‌ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮಂಗಳವಾರ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ವೆಂಟಿಲೇಟರ್‌ ಅಳ ವಡಿಸಿ ಚಿಕಿತ್ಸೆ ಮುಂದು ವರಿಸಲಾಗಿತ್ತು.

ಅವರಿಗೆ ಪತ್ನಿ ಡಾ.ಬಿ.ಎನ್.ರತ್ನ, ಪುತ್ರ ಡಾ.ರಂಜೀತ್ ರಾಜೀವ್‌, ಪುತ್ರಿ ಡಾ.ರಚನಾ ರಾಜೀವ್ ಇದ್ದಾರೆ. ನಗರದ ಬಿ.ಎಂ.ರಸ್ತೆಯಲ್ಲಿ ರಾಜೀವ್‌ ಎಜುಕೇಶನ್ ಟ್ರಸ್ಟ್ ಆವರಣದಲ್ಲಿ ರಾತ್ರಿ ಅಂತ್ಯಕ್ರಿಯೆ ನೆರವೇರಿತು.

ಅರಕಲಗೂಡು ತಾಲ್ಲೂಕಿನ ಜಿಟ್ಟೇ ನಹಳ್ಳಿ ಗ್ರಾಮದ ವಿಷಕಂಠೇಗೌಡ-ನಂಜಮ್ಮ ದಂಪತಿ ಪುತ್ರರಾಗಿ 1956ರಲ್ಲಿ ಜನಿಸಿದ ರಾಜೀವ್, ಮಕ್ಕಳ ವೈದ್ಯರಾಗಿ ಹೆಚ್ಚು ಜನಪ್ರಿಯತೆ ಪಡೆದಿದ್ದರು. ಸುಮಾರು 4 ದಶಕಗಳಿಗೂ ಹೆಚ್ಚು ಕಾಲ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರ ಪತ್ನಿ ಬಿ.ಎನ್.ರತ್ನ ಸಹ ವೈದ್ಯರು. ಪುತ್ರ ಡಾ.ರಂಜೀತ್ ರಾಜೀವ್ ಮಕ್ಕಳ ತಜ್ಞ. ಮಗಳು ಡಾ.ರಚನಾ ರಾಜೀವ್ ಅವರೂ ರೇಡಿಯಾಲಾಜಿಸ್ಟ್ ಆಗಿದ್ದಾರೆ.

1985ರಿಂದ ಹಾಸನದಲ್ಲಿ ಮಕ್ಕಳ ವೈದ್ಯರಾಗಿ ಕೆಲಸ ಆರಂಭಿಸಿದ ಡಾ.ರಾಜೀವ್, ರಾಜೀವ್ ನರ್ಸಿಂಗ್ ಹೋಂ ಹೆಸರಿನ ಸಂಸ್ಥೆ ಆರಂಭಿಸಿ ವೈದ್ಯ ಸೇವೆ ವಿಸ್ತರಿಸಿದರು. ರಾಜೀವ್ ಇನ್‌ಸ್ಟಿಟ್ಯೂಟ್ ಆಫ್ ಆಯುರ್ವೇದಿಕ್ ಮೆಡಿಕಲ್ ಸೈನ್ಸ್, ರಾಜೀವ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ರಾಜೀವ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ರಾಜೀವ್ ಪಾಲಿಟೆಕ್ನಿಕ್, ರಾಜೀವ್ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್, ರಾಜೀವ್ ಸ್ಕೂಲ್ ಆಫ್ ನರ್ಸಿಂಗ್, ರಾಜೀವ್ ಕಾಲೇಜ್ ಆಫ್ ಎಜುಕೇಶನ್, ರಾಜೀವ್ ಇನ್‌ಸ್ಟಿಟ್ಯೂಟ್ ಆಫ್ ಪ್ಯಾರಾ ಮೆಡಿಕಲ್ ಸೈನ್ಸ್ ಆರಂಭಿಸಿದ್ದಾರೆ.

ಈವರೆಗೆ 120ಕ್ಕೂ ಆರೋಗ್ಯ ಶಿಬಿರ ಮಾಡಿರುವ ಡಾ.ರಾಜೀವ್ ಮತ್ತವರ ತಂಡ, 50ಕ್ಕೂ ಹೆಚ್ಚು ಆರೋಗ್ಯ ಜಾಗೃತಿ ಶಿಬಿರ, ಜಾಥಾ ಮಾಡಿದ್ದರು. ಬಡರೋಗಿಗಳಿಗೆ ಉಚಿತ ವೈದ್ಯ ಕೀಯ ಸೇವೆ ನೀಡುವುದರ ಜೊತೆಗೆ ಬಡ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಿದ್ದಾರೆ. ಇವರ ಸಾಧನೆ ಪರಿಗಣಿಸಿ 60ಕ್ಕೂ ಹೆಚ್ಚು ವಿವಿಧ ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ.

ದೇವೇಗೌಡರ ಕಂಬನಿ: ಡಾ.ರಾಜೀವ್ ಅವರ ನಿಧನಕ್ಕೆ ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ ಅವರು ಕಂಬನಿ‌ ಮಿಡಿದಿದ್ದಾರೆ. ರೈತ ಕುಟುಂಬದಿಂದ ಬಂದು ವೈದ್ಯಕೀಯ ಲೋಕದಲ್ಲಿ ಮಾದರಿಯಾಗಿ ಉತ್ತಮ ಸಾಧನೆ ಮಾಡಿದ್ದರು. ಮಕ್ಕಳ ಚಿಕಿತ್ಸೆ ವಿಷಯದಲ್ಲಿ ರಾಜೀವ್ ಮನೆ ಮಾತಾಗಿದ್ದರು. ನಿಸ್ವಾರ್ಥ ಸೇವೆಯಿಂದ ಇಡೀ ಸಮಾಜ ಮೆಚ್ಚುವ ಕೆಲಸ ಮಾಡಿದ್ದಾರೆ’ ಎಂದು ಹೇಳಿದರು.

ಶಾಸಕ ಎಚ್.ಡಿ.ರೇವಣ್ಣ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ವಿಧಾನ ಪರಿಷತ್‌ ಸದಸ್ಯ ಎಂ.ಎ. ಗೋ ಪಾಲಸ್ವಾಮಿ ಸಂತಾಪ ಸೂಚಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು