ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಳೇಬೀಡು: ಪ್ರವಾಸಿಗರನ್ನು ಆಕರ್ಷಿಸುತ್ತಿರುವ ದ್ವಾರಸಮುದ್ರ

ಕೋಡಿ ಬಿದ್ದ ಕೆರೆ: ನೀರಿಗೆ ಇಳಿದು ಸಂಭ್ರಮಿಸಿದ ಜನರು
Published : 23 ಆಗಸ್ಟ್ 2024, 4:56 IST
Last Updated : 23 ಆಗಸ್ಟ್ 2024, 4:56 IST
ಫಾಲೋ ಮಾಡಿ
Comments

ಹಳೇಬೀಡು: ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಬುಧವಾರ ಹಳೇಬೀಡಿನ ದ್ವಾರಸಮುದ್ರ ಕೆರೆ ಭರ್ತಿಯಾಗಿ ಕೋಡಿ ಬಿದ್ದಿದೆ. ಕೋಡಿಯಲ್ಲಿ ಹಾಲ್ನೊರೆಯಂತೆ ನೀರು ಧುಮ್ಮಿಕ್ಕುತ್ತಿದೆ. ಕೆರೆ ಕೋಡಿಯಲ್ಲಿ ಸೃಷ್ಟಿಯಾಗಿರುವ ಜಲಪಾತದ ಸೊಬಗು ಜನರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

ರಾತ್ರಿ 2 ಗಂಟೆಯ ನಂತರ ಕೋಡಿಯಲ್ಲಿ‌ ಭೋರ್ಗರೆಯುತ್ತ ಹರಿಯುವ ನೀರಿನ ಶಬ್ದ ಹಳೇಬೀಡಿನ ವಸತಿ ಪ್ರದೇಶದತ್ತ ಕೇಳಿ ಬಂದಿದೆ. ಕೆಲವು ಮಂದಿ ತಡರಾತ್ರಿ ಕತ್ತಲಲ್ಲಿಯೇ ಕೆರೆ ಕೋಡಿ ವೀಕ್ಷಣೆ ಮಾಡಿದ್ದಾರೆ. ಬುಧವಾರ ಮುಂಜಾನೆ ಸೂರ್ಯೋದಯಕ್ಕೂ ಮೊದಲೇ ಜನರು ಕೆರೆಯತ್ತ ಜಮಾಯಿಸಿ ಕೋಡಿಯಲ್ಲಿ ಹರಿಯುತ್ತಿದ್ದ ನೀರಿನಲ್ಲಿ ಸಂಭ್ರಮಿಸಿದರು.

ಹೊಯ್ಸಳೇಶ್ವರ ದೇವಾಲಯದ ಸಮೀಪದಲ್ಲೇ ದ್ವಾರಸಮುದ್ರ‌ ಕೆರೆ ಇದೆ. ಹೀಗಾಗಿ ಕೋಡಿಯಲ್ಲಿ ಸೃಷ್ಟಿಯಾದ ಜಲಧಾರೆಯ ಸೊಬಗು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಪ್ರವಾಸಿಗರು ಹಾಗೂ ಸ್ಥಳೀಯರೆನ್ನದೇ ಸಾಕಷ್ಟು ಮಂದಿ ಕೋಡಿ ನೀರಿಗೆ ಮೈಯೊಡ್ಡಿ ಸಂಭ್ರಮಿಸುವ ದೃಶ್ಯ ಕಂಡು ಬರುತ್ತಿದೆ.    

ನಾಲ್ಕು ವರ್ಷದಿಂದ ದ್ವಾರಸಮುದ್ರ ಕೆರೆ ಕೋಡಿ ಹರಿಯುತ್ತಿದೆ. ಈ ವರ್ಷ ಬಿಸಿಲಿನ ಧಗೆಗೆ ಕೆರೆಯಲ್ಲಿ ಸಂಗ್ರಹವಾಗಿದ್ದ ನೀರಿನ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿತ್ತು. ಈ ವರ್ಷ ದ್ವಾರಸಮುದ್ರ ಕೆರೆಗೆ ನೀರು ಬರುತ್ತದೆಯೇ ಎಂಬ ಆತಂಕ ಜನರಲ್ಲಿ ಮೂಡಿತ್ತು. ಈ ವರ್ಷ ಮಳೆ ಸುರಿದು ಇಳೆ ತಂಪಾಗಿದ್ದರಿಂದ ರೈತರಲ್ಲಿ ಮಂದಹಾಸ ಮೂಡಿದೆ.  ಹಿಂದೊಮ್ಮೆ‌ 14 ವರ್ಷ ಕೆರೆ ಒಣಗಿತ್ತು.

ಕೆರೆ ಕೋಡಿ ಬಿದ್ದರೂ ಕೆರೆ ಬಳಿ ಕೆಲವು ಜನರು ಕಸ ಸುರಿಯುವುದನ್ನು ನಿಲ್ಲಿಸಿಲ್ಲ. ಕೆರೆ ಆವರಣ ಗಲೀಜಾಗುತ್ತಿದೆ. ಇದರಿಂದ ಪ್ರವಾಸಿತಾಣದ ವೈಭವಕ್ಕೆ ಕಪ್ಪು ಚುಕ್ಕೆ ಇಟ್ಟಂತಾಗಿದೆ ಎಂಬ ಮಾತು ಸ್ಥಳೀಯರಿಂದ ಕೇಳಿ ಬರುತ್ತಿದೆ. 

ಕೋಡಿ ಬಿದ್ದಿರುವ ಹಳೇಬೀಡಿನ ದ್ವಾರಸಮುದ್ರ ಕೆರೆಯಲ್ಲಿ ಸಂಭ್ರಮಿಸಿದ ಜನರು. 
ಕೋಡಿ ಬಿದ್ದಿರುವ ಹಳೇಬೀಡಿನ ದ್ವಾರಸಮುದ್ರ ಕೆರೆಯಲ್ಲಿ ಸಂಭ್ರಮಿಸಿದ ಜನರು. 
ಕಸ ಸಂಗ್ರಹಿಸಲು ಟ್ರ್ಯಾಕ್ಟರ್ ನಿಯೋಜಿಸಲಾಗಿದೆ. ದ್ವಾರಸಮುದ್ರ ಕೆರೆ ಸೇರಿದಂತೆ ಎಲ್ಲಿಯೂ ಕಸ ಹಾಕಬಾರದು. ಈ ಕುರಿತು ಶಿಸ್ತಿನ ಕ್ರಮ ಕೈಗೊಳ್ಳುತ್ತೇವೆ
ಎಸ್.ಸಿ. ವಿರೂಪಾಕ್ಷ ಹಳೇಬೀಡು ಪಿಡಿಒ
ಕೆರೆಯ ಸೊಬಗು ನೋಡುವುದಕ್ಕೆ ಆನಂದ ನೀಡುತ್ತಿದೆ. ಕೆರೆ ಭರ್ತಿ ಆಗಿರುವುದರಿಂದ ಅಂತರ್ಜಲ ಹೆಚ್ಚುತ್ತದೆ. ಇದರಿಂದ ರೈತರಿಗೆ ಅನುಕೂಲ ಆಗಲಿದೆ.
ಜಯಣ್ಣ ಗೋಣೆಸೋಮನಹಳ್ಳಿ ರೈತ

ಸೆಲ್ಫಿಗೆ ಮುಗಿಬಿದ್ದ ಯುವಕರು 

ಕೆರೆ ಕೋಡಿಯಲ್ಲಿ ಮೊಬೈಲ್ ಪೋನ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳುವ‌ ಯುವಕರು ಅಪಾಯ ಮರೆತು ಮುನ್ನುಗ್ಗುತ್ತಿದ್ದಾರೆ. ಕೋಡಿಗೆ ಅಡ್ಡಲಾಗಿ ಕಟ್ಟಿರುವ ಕಟ್ಟೆಯ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳುವ ದೃಶ್ಯ‌ ಕಂಡು ಬರುತ್ತಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಕಾಲು ಜಾರಿ ಕೆರೆಗೆ ಬೀಳುವ ಸಾಧ್ಯತೆ ಇದೆ. ಹರಿಯುವ ನೀರಿನ ವೇಗ ಹೆಚ್ಚಾಗಿರುವುದರಿಂದ ಸಣ್ಣ ನೀರಾವರಿ ಇಲಾಖೆ ಹಾಗೂ ಗ್ರಾಮ ಪಂಚಾಯಿತಿಯವರು ತಂತಿ ಬೇಲಿ ಹಾಕಬೇಕು. ನೀರಿಗೆ ಇಳಿಯದೇ ವೀಕ್ಷಣೆ ಮಾಡಲು ಅವಕಾಶ ಕಲ್ಪಿಸಬೇಕು ಎಂದು ರೈತ ಮುಖಂಡ ತಟ್ಟೆಹಳ್ಳಿ ಶ್ರೀನಿವಾಸ ಮನವಿ ಮಾಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT