ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಟ್ಟೆ ಪ್ರಕರಣ: ರಾಷ್ಟ್ರೀಯ ಪಕ್ಷಗಳಿಂದ‌ ಬೇಜವಾಬ್ದಾರಿ ವರ್ತನೆ– ಕುಮಾರಸ್ವಾಮಿ

Last Updated 21 ಆಗಸ್ಟ್ 2022, 11:01 IST
ಅಕ್ಷರ ಗಾತ್ರ

ಹಾಸನ: ಜನರು ನೆರೆ ಹಾವಳಿಯಿಂದ ತತ್ತರಿಸಿ ಹೋಗಿದ್ದಾರೆ. ಆದರೆ, ಎರಡೂ ರಾಜಕೀಯ ಪಕ್ಷಗಳಿಗೆ ಈ ಬಗ್ಗೆ ಗಮನವಿಲ್ಲ. ಮೊಟ್ಟೆ ಎಸೆದರೆಂದು ಪಾದಯಾತ್ರೆ, ಅದಕ್ಕೆ ವಿರೋಧವಾಗಿ ಮತ್ತೊಂದು ಪಾದಯಾತ್ರೆ ನಡೆಸಲಾಗುತ್ತಿದೆ. ಎರಡೂ ಪಕ್ಷಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿವೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ‌ ನಾಯಕ ಎಚ್.ಡಿ‌. ಕುಮಾರಸ್ವಾಮಿ ಟೀಕಿಸಿದರು.

ಹೊಳೆನರಸೀಪುರ ತಾಲ್ಲೂಕಿನ‌ ಹರದನಹಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತ‌ನಾಡಿದ ಅವರು, 2019ರಲ್ಲಿ ನೆರೆ ಹಾವಳಿ ಸಂದರ್ಭದಲ್ಲಿ ಮನೆ ಕಳೆದುಕೊಂಡವರಿಗೆ ಇಂದಿಗೂ ಸೂರನ್ನು ಒದಗಿಸಿಲ್ಲ. ನೆರೆ ಹಾವಳಿಗೆ ತುತ್ತಾಗಿ ಮೂರು ವರ್ಷಗಳಿಂದ ಶೆಡ್ ನಲ್ಲಿ ಇರುವ ಬಗ್ಗೆ ಮಾಧ್ಯಮದಲ್ಲಿ ಓದುತ್ತಿದ್ದೇನೆ. ಇಂಥ ಪರಿಸ್ಥಿತಿಯಲ್ಲಿರುವ ಜನರನ್ನು ನೋಡದೆ ಅವರ ಸಂಕಷ್ಟಕ್ಕೆ ಸಂಬಂಧಿಸಿದ ಎರಡು ರಾಷ್ಟ್ರೀಯ ಪಕ್ಷಗಳು ಕೇವಲ ಪಾದಯಾತ್ರೆಯ ನಾಟಕ ಮಾಡುತ್ತಿವೆ ಎಂದು ಹೇಳಿದರು.

ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಸಂದರ್ಭದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ನಡವಳಿಕೆಯನ್ನು ಜನ ನೋಡಿದ್ದಾರೆ. ಜಾಹಿರಾತುಗಳ ಮೂಲಕ ಹೋರಾಟಗಾರರನ್ನು ಅವಹೇಳನ ಮಾಡಿರುವುದನ್ನು ಕಂಡಿದ್ದೇವೆ. ಎಲ್ಲ ಬೆಳವಣಿಗೆಗಳು ಸಂಘರ್ಷಕ್ಕೆ ಕಾರಣವಾಗಿವೆ ಎಂದು ತಿಳಿಸಿದರು.

ರಾಜ್ಯದಲ್ಲಿ ನೂರಾರು ಸಮಸ್ಯೆಗಳಿದ್ದರೂ ರೈತ ಪರ ಯೋಚಿಸಬೇಕಾದ ಸರ್ಕಾರ, ಕೇವಲ ವಿರೋಧ ಪಕ್ಷದ ನಾಯಕರ ಬಗ್ಗೆ ಮಾತನಾಡುವ ಮೂಲಕ ಬೇಜವಾಬ್ದಾರಿ ಪ್ರದರ್ಶನ ಮಾಡುತ್ತಿರುವುದನ್ನು ಜನ ನೋಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ.

ಇಂತಹ ಸಮಾವೇಶ ಎಷ್ಟು ನೋಡಿಲ್ಲ

ದಾವಣಗೆರೆ ಕಾರ್ಯಕ್ರಮದ ನಂತರ ಎರಡು ಪಕ್ಷಗಳು ಹತಾಶವಾಗಿವೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು,
ಇಂತಹ ಸಮಾವೇಶಗಳು ಎಷ್ಟು ನಡೆದಿಲ್ಲ‌. ರಾಜ್ಯದಲ್ಲಿನಾವು ಕಾಣದೆ ಇರುವ ಸಿದ್ಧರಾಮೋತ್ಸವನಾ? ಎಂತೆಂಥ ಸಮಾವೇಶಗಳನ್ನು ಎಷ್ಟು ಪಕ್ಷಗಳು ಮಾಡಿಲ್ಲ? ಸುಮ್ಮನೆ ಅವರ ಚಪಲಕ್ಕೆ ಹೇಳಿಕೊಳ್ಳುತ್ತಾರೆ.ಇಂತಹ ಉತ್ಸವಗಳಿಂದ ಜನ ಓಟು ಹಾಕುತ್ತಾರೆ ಎಂದು ತಿಳಿದುಕೊಂಡಿದ್ದರೆ, ಅವರು ಭ್ರಮಾ ಲೋಕದಲ್ಲಿದ್ದಾರೆ ಅಷ್ಟೇ ಎಂದು‌ ತಿರುಗೇಟು ನೀಡಿದರು.

ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆದರೆ ಸಹಕಾರ ನೀಡುತ್ತೇನೆ ಎಂಬ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ನಂಜಾವದೂತ ಸ್ವಾಮೀಜಿ ಏನು ಹೇಳಿದ್ದಾರೊ, ಅದಕ್ಕೆ ಹಿನ್ನೆಲೆಯಾಗಿ ನಾನು ಆ ರೀತಿ ಹೇಳಿದ್ದೇನೆ ಎಂದರು.

ಮುಖ್ಯಮಂತ್ರಿ ಆಗಬೇಕಾದರೆ ಭಗವಂತನ ಆಶೀರ್ವಾದ ಬೇಕು. ಆ ಭಗವಂತ ಆಶೀರ್ವಾದ ಕೊಟ್ಟಾಗ ನಮ್ಮದು ಸಹಕಾರ ಇದೆ ಎಂದು ಹೇಳಿದ್ದೇನೆ. ನಮ್ಮ ಪಕ್ಷವನ್ನು ನಾನು ಸಂಘಟನೆ ಮಾಡುತ್ತಿದ್ದೇನೆ. ಅವರ ಪಕ್ಷವನ್ನು ಅವರು ಸಂಘಟನೆ ಮಾಡುತ್ತಿದ್ದಾರೆ ಎಂದರು.

ಜೆಡಿಎಸ್ ಪಕ್ಷವನ್ನು ಸ್ವತಂತ್ರವಾಗಿ ಅಧಿಕಾರಕ್ಕೆ ತರಬೇಕೆಂದು ನಾನು ಹೋರಾಟ ಮಾಡುತ್ತಿದ್ದೇನೆ. ಅವರು ಮುಖ್ಯಮಂತ್ರಿ ಆಗಬೇಕೆಂದು ಆಸೆ ಪಟ್ಟಿದ್ದಾರೆ. ಅವರ ಆಸೆಗೆ ನಾನೇಕೆ ನಿರಾಸೆ ತರಬೇಕು. ಅದಕ್ಕೆ ನಾನು ಹೇಳಿದ್ದೇನೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.

ಆ.26 ರಂದು ಕಾಂಗ್ರೆಸ್‌ನಿಂದ ಹಮ್ಮಿಕೊಂಡಿರುವ ಪಾದಯಾತ್ರೆಗೆ ನಾನೇನು ಮಹತ್ವ ಕೊಡೋದಿಲ್ಲ. ಜನವೂ ಮಹತ್ವ ಕೊಡದೆ ಇರುವುದು ಒಳ್ಳೆಯದು. ಅದೇನು ಜನರ ಪರವಾಗಿ, ಜನತೆಯ ಹಿತಕ್ಕಾಗಿ ಮಾಡುತ್ತಿರುವ ಪಾದಯಾತ್ರೆಯಲ್ಲ. ಅದಕ್ಕೆ ಜನ ಯಾವುದೇ ರೀತಿಯ ಪ್ರೋತ್ಸಾಹ ಕೊಡದೆ ಇರುವುದು ಒಳ್ಳೆಯದು ಎಂದರು.

ಮನೆ‌‌‌ ದೇವರಿಗೆ ಪೂಜೆ
ಇವತ್ತು ನಮ್ಮ ದೇವರಾದ ದೇವಿರಮ್ಮ ದೇವರಿಗೆ ನನ್ನ ಮೊಮ್ಮಗನ ಮುಡಿ ಕೊಡಲು ಬಂದಿದ್ದೇನೆ. ನಮ್ಮ ತಂದೆಯವರೆ ಏಳಿಗೆಗೆ, ಬದುಕಿಗೆ ಸಂಪೂರ್ಣ ರಕ್ಷಣೆ ಕೊಟ್ಟು ಅವರ ಬದುಕನ್ನು ಹಳ್ಳಿಯಿಂದ ದೆಹಲಿ ಮಟ್ಟಕ್ಕೆ ತೆಗೆದುಕೊಂಡು ಹೋದ ನಮ್ಮ ಕುಲ ದೇವರು ಹರದನಹಳ್ಳಿಯ ಶಿವನ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಲು ಬಂದಿದ್ದೇನೆ ಎಂದು ಕುಮಾರಸ್ವಾಮಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT