ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಹುಬಲಿ ಕ್ಷೇತ್ರಕ್ಕೆ 3 ಪಕ್ಷಗಳ ಲಗ್ಗೆ

ಶ್ರವಣಬೆಳಗೊಳ ಕ್ಷೇತ್ರದಲ್ಲಿ ಏರುತ್ತಿರುವ ರಾಜಕೀಯದ ಕಾವು
Last Updated 21 ಡಿಸೆಂಬರ್ 2022, 16:25 IST
ಅಕ್ಷರ ಗಾತ್ರ

ಚನ್ನರಾಯಪಟ್ಟಣ: ವಿಧಾನಸಭಾ ಚುನಾವಣೆಗೆ ಮೂರು ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆ ಬಿರುಸುಗೊಂಡಿದ್ದು, ಈಗಿನಿಂದಲೇ ಸಿದ್ಧತೆ ಆರಂಭವಾಗಿದೆ.

ಜೆಡಿಎಸ್‌ನಿಂದ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಸಿ.ಎನ್. ಬಾಲಕೃಷ್ಣ ಅವರೇ ಅಭ್ಯರ್ಥಿ ಎನ್ನುವುದು ಖಾತರಿಯಾಗಿದೆ. ಇನ್ನು ಕಾಂಗ್ರೆಸ್‌ನಲ್ಲಿ ವಿಧಾನ ಪರಿಷತ್‌ ಮಾಜಿ ಸದಸ್ಯ ಎಂ.ಎ. ಗೋಪಾಲಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜೆ.ಎಂ. ರಾಮಚಂದ್ರ, ಮಾಜಿ ಸಚಿವ ದಿ. ಎಚ್.ಸಿ, ಶ್ರೀಕಂಠಯ್ಯ ಅವರ ಮೊಮ್ಮಗ ಎಚ್.ಸಿ. ದೀಪು, ಸೊಸೆ ರಾಜೇಶ್ವರಿ ಅವರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ.

ಶಾಸಕ ಬಾಲಕೃಷ್ಣ ಅವರಿಗೆ ಟಿಕೆಟ್ ಪಕ್ಕಾ ಆಗಿದ್ದು, ಹ್ಯಾಟ್ರಿಕ್‌ ಗೆಲುವಿಗೆ ತಯಾರಿ ಆರಂಭಿಸಿದ್ದಾರೆ. 2013, 2018ರಲ್ಲಿ ಗೆಲುವು ಸಾಧಿಸಿರುವ ಅವರು, 2018 ಚುನಾವಣೆಯಲ್ಲಿ 51 ಸಾವಿರ ಮತಗಳ ಅಂತರದಿಂದ ಜಯ ಗಳಿಸಿದ್ದರು. ‘ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವ, ಸದಾ ಜನರೊಂದಿಗಿನ ಒಡನಾಟ ನನಗೆ ಇಷ್ಟ’ ಎನ್ನುವ ಶಾಸಕ ಬಾಲಕೃಷ್ಣ ಅವರಿಗೆ, ಮತದಾರರು ಈ ಬಾರಿಯೂ ಬೆಂಬಲ ನೀಡಲಿದ್ದಾರೆ ಎನ್ನುವ ಕುತೂಹಲ ಕ್ಷೇತ್ರದಲ್ಲಿ ಮನೆ ಮಾಡಿದೆ.

ಕಾಂಗ್ರೆಸ್‌ ಟಿಕೆಟ್‌ ಬಯಸಿರುವ ಗೋಪಾಲಸ್ವಾಮಿ, 2016 ರಿಂದ 2022ವರೆಗೆ ವಿಧಾನ ಪರಿಷತ್‌ ಸದಸ್ಯರಾಗಿದ್ದರು. ಕಳೆದ ವಾರ ಉಚಿತ ಆರೋಗ್ಯ ತಪಾಸಣಾ ಶಿಬಿರ, ಜನಾಶೀರ್ವಾದ ಸಮಾವೇಶ ಹಾಗೂ ಮ್ಯೂಸಿಕಲ್ ನೈಟ್ ಕಾರ್ಯಕ್ರಮ ಆಯೋಜಿಸುವ ಮೂಲಕ ಜನರ ಬಳಿಗೆ ತೆರಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹೋಬಳಿ ಮಟ್ಟದಲ್ಲಿಯೂ ಉಚಿತ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸುವ ಮೂಲಕ ಚುನಾವಣೆಯ ತಾಲೀಮು ಆರಂಭಿಸಿದ್ದಾರೆ. ಟಿಕೆಟ್ ಸಿಗಲಿದೆ ಎಂಬ ಹುಮ್ಮಸ್ಸು ಗೋಪಾಲಸ್ವಾಮಿ ಅವರಲ್ಲಿ ತುಸು ಹೆಚ್ಚಾಗಿಯೇ ಇದ್ದಂತೆ ಕಾಣುತ್ತಿದೆ.

ಕಾಂಗ್ರೆಸ್‌ನಿಂದ ಮತ್ತೊಬ್ಬ ಆಕಾಂಕ್ಷಿ ಜೆ.ಎಂ. ರಾಮಚಂದ್ರ ಕೂಡ ಹೈಕಮಾಂಡ್ ಮಟ್ಟದಲ್ಲಿ ಲಾಬಿ ನಡೆಸುತ್ತಿದ್ದಾರೆ. ದೀಪು ಮತ್ತು ರಾಜೇಶ್ವರಿ ಕೂಡ ಟಿಕೆಟ್‍ಗಾಗಿ ಹೈಕಮಾಂಡ್ ಮಟ್ಟದಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ. ಶ್ರೀಕಂಠಯ್ಯ ಅವರ ಕುಟುಂಬಕ್ಕೆ ಟಿಕೆಟ್ ಸಿಗಬಹುದು ಎನ್ನುವ ಮಾತು ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ. ಈ ನಾಲ್ವರ ಜೊತೆ ಎಪಿಎಂಸಿ ನಿರ್ದೇಶಕ ಎಂ. ಶಂಕರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎನ್.ಡಿ. ಕಿಶೋರ್, ಮನೋಹರ್ ಕುಂಬೇನಹಳ್ಳಿ ಸಹ ಕಾಂಗ್ರೆಸ್‌ನಿಂದ ಕಣಕ್ಕಿಳಿಯಲು ಅರ್ಜಿ ಹಾಕಿದ್ದಾರೆ.

ಬಿಜೆಪಿಯಿಂದ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎ.ಸಿ. ಆನಂದ್ ಕುಮಾರ್ ಕಣಕ್ಕಿಳಿಯುವ ಸಾಧ್ಯತೆ ಇದೆ. ಕೋವಿಡ್ ಸಂದರ್ಭದಲ್ಲಿ ಕ್ಷೇತ್ರದ ಜನರಿಗೆ ನೆರವು ನೀಡಿದ್ದು, ಅಭ್ಯರ್ಥಿಯಾಗುವ ಆಶಯ ಹೊಂದಿದ್ದಾರೆ. ಮೋದಿ ಹಾಗೂ ರಾಜ್ಯ ಸರ್ಕಾರದ ಕಾರ್ಯಕ್ರಮಗಳನ್ನೇ ನೆಚ್ಚಿಕೊಂಡಿರುವ ಬಿಜೆಪಿ, ಸಂಘಟನಾತ್ಮಕವಾಗಿ ಇನ್ನಷ್ಟು ಬಲಿಷ್ಠ ಆಗಬೇಕಿದೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.

‘ಮೊದಲೇ ಅಭ್ಯರ್ಥಿ ಘೋಷಿಸಿ’

ಕಾಂಗ್ರೆಸ್ ಪಕ್ಷದಲ್ಲಿ ಚುನಾವಣೆ ಹತ್ತಿರ ಇರುವಾಗ ಅಭ್ಯರ್ಥಿಯನ್ನು ಆಯ್ಕೆ ಮಾಡುವುದಕ್ಕಿಂತ ಆರು ತಿಂಗಳ ಮುಂಚೆಯೇ ಘೋಷಣೆ ಮಾಡಿದರೆ ಒಳಿತು ಎಂಬ ಒತ್ತಾಯ ಈ ಹಿಂದೆ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಕೇಳಿ ಬಂದಿತ್ತು.

ಆದರೆ ಇದುವರೆಗೆ ಅಭ್ಯರ್ಥಿ ಘೋಷಣೆ ಮಾಡಿಲ್ಲ. ರಾಜ್ಯದಲ್ಲಿ ಈ ಸಲ ಅಧಿಕಾರಕ್ಕೆ ಬರುವ ವಿಶ್ವಾಸ ಹೊಂದಿರುವ ಕಾಂಗ್ರೆಸ್, ಅಳೆದು ತೂಗಿ ಗೆಲ್ಲುವ ಅಭ್ಯರ್ಥಿಯನ್ನು ಕಣಕ್ಕಿಳಿಸುವ ನಿರ್ಧಾರಕ್ಕೆ ಬಂದಂತಿದೆ. ಹಾಗಾಗಿ ಕ್ಷೇತ್ರದ ಜನರ ಒಲವು ಯಾರತ್ತ ಇದೆ ಎನ್ನುವ ಆಂತರಿಕ ಸಮೀಕ್ಷೆಯನ್ನು ಆಧರಿಸಿ, ಟಿಕೆಟ್‌ ನೀಡುವ ಯೋಜನೆ ರೂಪಿಸಿದೆ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT