ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಲೂರಿನ ಲಕ್ಕುಂದದಲ್ಲಿ ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಬಲಿ

Last Updated 3 ಜನವರಿ 2021, 13:12 IST
ಅಕ್ಷರ ಗಾತ್ರ

ಬೇಲೂರು: ತಾಲ್ಲೂಕಿನ ಬಿಕ್ಕೋಡು ಹೋಬಳಿ ಲಕ್ಕುಂದ ಗ್ರಾಮದ ಕೂಲಿ ಕಾರ್ಮಿಕ ರಾಜನ್ (45) ಮೇಲೆ ಭಾನುವಾರ ಕಾಡಾನೆಗಳ ಹಿಂಡು ದಾಳಿ ನಡೆಸಿ, ತುಳಿದು ಸಾಯಿಸಿವೆ. ಜತೆಯಲ್ಲಿದ್ದ ರೈಟರ್‌ ವಿಜಯ್‌ ಕುಮಾರ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಲಕ್ಕುಂದ ಗ್ರಾಮದ ಸುಲ್ತಾನ್‌ ಎಸ್ಟೇಟ್‌ನ ಕಾಫಿ ತೋಟದಲ್ಲಿ ಮೆಣಸು ಕಾಯುತ್ತಿದ್ದ ಕೇರಳದ ಮೆಟನೂರು ಗ್ರಾಮದ ಕಾರ್ಮಿಕ್‌ ರಾಜನ್‌ ಬೆಳಿಗ್ಗೆ ಆನೆ ದಾಳಿಗೆ ಸಿಲುಕಿದ್ದಾರೆ. ಆನೆ ಬರುತ್ತಿದ್ದಂತೆ ಅಲ್ಲಿಂದ ಪಾರಾಗಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಕಾಲ್ತುಳಿತಕ್ಕೆ ಸಿಲುಕಿ ಕೆಲವೇ ನಿಮಷಗಳಲ್ಲಿ ಪ್ರಾಣ ಬಿಟ್ಟಿದ್ದಾರೆ. ವ್ಯಾಪ್ತಿಯಲ್ಲಿ ಎಂಟು ಕಾಡಾನೆಗಳ ಸುತ್ತಾಟ ಮುಂದುವರಿದಿದ್ದು, ಜನರು ತೀವ್ರ ಭೀತಿ ಎದುರಿಸುತ್ತಿದ್ದಾರೆ.

ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ

ಮಲೆನಾಡು ಭಾಗದಲ್ಲಿ ಕಾಡಾನೆ– ಮಾನವ ಸಂಘರ್ಷ ಮುಂದುವರಿದಿದ್ದು, ವಾರದ ಅಂತರದಲ್ಲಿ ಮತ್ತೊಬ್ಬರು ಬಲಿಯಾಗಿದ್ದಾರೆ.

ಘಟನೆ ಬಗ್ಗೆ ಆಕ್ರೋಶಗೊಂಡ ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿದರು.

ಆಗ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು. ಸ್ಥಳಕ್ಕೆ ಸಿಪಿಐ ಸಿದ್ದರಾಮೇಶ್ವರ್ ಹಾಗೂ ಪಿಎಸ್ಐ ಮಹೇಶ್ ಭೇಟಿ ನೀಡಿ ಗ್ರಾಮಸ್ಥರನ್ನು ಸಮಾಧಾನಪಡಿಸಿ ಪರಿಸ್ಥಿತಿ ತಿಳಿಗೊಳಿಸಿದರು.

‘ಕಾಡು ಪ್ರಾಣಿಗಳ ಹಾವಳಿಯಿಂದ ಜೀವ ಭಯದಿಂದ ಕಾರ್ಮಿಕರು ಕೆಲಸಕ್ಕೆ ಬರುವುದನ್ನು ಬಿಟ್ಟಿದಾರೆ. ಆನೆಗಳ ಚಲನವಲನ ಬಗ್ಗೆ ಸ್ಪಷ್ಟ ಮಾಹಿತಿ ನೀಡುತ್ತಿಲ್ಲ. ಪ್ರಾಣ ಹಾನಿಯಾದಾಗ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡುತ್ತಾರೆ. ಶಾಶ್ವತ ಪರಿಹಾರ ಕಂಡು ಹಿಡಿಯಬೇಕು’ ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ಜಿಲ್ಲಾ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ತೊ.ಚ. ಅನಂತ ಸುಬ್ಬರಾಯ್ ಮಾತನಾಡಿ, ‘ಕಾಡಾನೆಗಳ ದಾಳಿ ತಡೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಸಕಲೇಶಪುರ, ಬೇಲೂರು, ಆಲೂರು ತಾಲ್ಲೂಕುಗಳಲ್ಲಿ ಆನೆಗಳ ಹಾವಳಿ ಹೆಚ್ಚಾಗಿದೆ. ಜಿಲ್ಲೆಯಲ್ಲಿ 6 ತಿಂಗಳ ಅವಧಿಯಲ್ಲಿಕಾಡಾನೆಗಳ ದಾಳಿಗೆ ಇಂದಿನ ಘಟನೆ ಸೇರಿ ಮೂವರು ಮೃತಪಟ್ಟಿದ್ದಾರೆ. ಎಷ್ಟೇ ಮನವಿ ಸಲ್ಲಿಸಿದ್ದರೂ ಸರ್ಕಾರ ಈ ಬಗ್ಗೆ ಗಮನಹರಿಸುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ವನ್ಯಜೀವಿ ಹೋರಾಟ ಸಮಿತಿಯ ಅಧ್ಯಕ್ಷ ರೋಹಿತ್ ಮಾತನಾಡಿ, ‘ಜಿಲ್ಲೆಯಲ್ಲಿ ಬಿಸಿಲೆ ಬಿಟ್ಟರೆ ಇತರೆಡೆ ಅರಣ್ಯವಿಲ್ಲ. ಎತ್ತಿನಹೊಳೆ, ಗುಂಡ್ಯಾ ಯೋಜನೆ ತಂದು ಕಾಡು ಹಾಳು ಮಾಡುತ್ತಿರುವುದು ಸರ್ಕಾರ’ ಎಂದು ಆರೋಪಿಸಿದರು.

ಶಾಸಕ ಕೆ.ಎಸ್‌.ಲಿಂಗೇಶ್‌ ಮಾತನಾಡಿ, ‘ಕಾಡಾನೆ ದಾಳಿಯಿಂದ ಕಾರ್ಮಿಕ ಮೃತರಾಗಿರುವುದು ದುರದೃಷ್ಟಕರ ಸಂಗತಿ. ಇಂಥ ಘಟನೆ ನಡೆದ ಸಂದರ್ಭ ಅಧಿಕಾರಿಗಳು ಪರಿಹಾರ ನೀಡಿ ಹೋದರೆ ಸಾಲದು. ಈ ರೀತಿ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಬೇಕು. ಆನೆಗಳ ಸಂತತಿ ಹೆಚ್ಚಿರುವುದರಿಂದ ಆಹಾರ ಅರಸಿ ನಾಡಿಗೆ ಬರುತ್ತಿವೆ. ಆನೆಗಳಿಗೆ ರೇಡಿಯೊ ಕಾಲರ್ ಅಳವಡಿಕೆ ಕಾರ್ಯರೂಪಕ್ಕೆ ಬರಬೇಕು’ ಎಂದು ಆಗ್ರಹಿಸಿದರು.

ವಲಯ ಅರಣ್ಯಾಧಿಕಾರಿ ಯಶ್ಮಾ ಮಾಚಮ್ಮ, ಅರಣ್ಯಾಧಿಕಾರಿ ಗುರುರಾಜ್, ಸಂತೋಷ್, ಗ್ರಾಮಸ್ಥರಾದ ಸಂದೀಪ್, ಕಿರಣ್, ತಿಮ್ಮಶೆಟ್ಟಿ, ನಾಗೇಶ್, ರವಿ ದಯಾನಂದ್, ಯಾಸೀನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT