ಹಾಸನ: ಎಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ

ಹಾಸನ: ನಗರದ ರಾಜೀವ್ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಹೇಮಂತ್ ಗೌಡ (20) ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬಿ.ಇ ಮೂರನೇ ಸೆಮಿಸ್ಟರ್ ವ್ಯಾಸಂಗ ಮಾಡುತ್ತಿದ್ದ ಅರಸೀಕೆರೆ ತಾಲ್ಲೂಕಿನ ಹಿರಿಯಾಳು ಗ್ರಾಮದ ಹೇಮಂತ್ ಗೌಡ ಹಾಸ್ಟೆಲ್ ಕೊಠಡಿಯಲ್ಲಿ ನೇಣು ಹಾಕಿಕೊಂಡಿದ್ದಾನೆ.
ಆತ್ಮಹತ್ಯೆಗೂ ಮುನ್ನ ವಿಡಿಯೋ ಮಾಡಿರುವ ಹೇಮಂತ್, ಅದರಲ್ಲಿ ಇಂದಿನ ಶಿಕ್ಷಣ ವ್ಯವಸ್ಥೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾನೆ. ‘ನನ್ನಪ್ಪ ಶಿಕ್ಷಕ. ಅವರ ವಿದ್ಯಾರ್ಥಿಗಳು ದೊಡ್ಡ ಸಾಧನೆ ಮಾಡಿದ್ದಾರೆ. ಏಕೆಂದರೆ ಹಿಂದಿನ ಶಿಕ್ಷಣ ವ್ಯವಸ್ಥೆ ಹಾಗಿತ್ತು. ಆದರೆ, ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಇದು ಸಾಧ್ಯವೇ ಇಲ್ಲ. ಎಂಜಿನಿಯರಿಂಗ್ ವಿದ್ಯಾರ್ಥಿ ಸೈಬರ್ ಸೆಂಟರ್ನಲ್ಲಿ ಕೆಲಸ ಮಾಡಬಹುದು ಅಷ್ಟೇ. ಶಿಕ್ಷಣ ವ್ಯವಸ್ಥೆ ಬದಲಾವಣೆ ಆಗದಿದ್ದರೆ ಸಾಧನೆ ಸಾಧ್ಯವಿಲ್ಲ’ ಎಂದು ವಿಡಿಯೋದಲ್ಲಿ ಹೇಳಿದ್ದಾನೆ.
‘ನನ್ನ ಅಂಗಾಂಗ ದಾನ ಮಾಡಿ, ಅಂತ್ಯಕ್ರಿಯೆ ವೇಳೆ ಸಿ.ಎಂ, ಶಿಕ್ಷಣ ಸಚಿವ, ಆದಿಚುಂಚನಗಿರಿ ಶ್ರೀಗಳು ಇರಬೇಕು. ನಿರ್ಮಲಾನಂದನಾಥ ಸ್ವಾಮೀಜಿ ಅವರ ಆಶೀರ್ವಾದ ಪಡೆಯುವುದು ಜೀವದ ಆಸೆಯಾಗಿತ್ತು. ನನ್ನ ಸಾವಿನ ಬಳಿಕ ತಂದೆ– ತಾಯಿ, ಇಬ್ಬರು ಅನಾಥ ಮಕ್ಕಳನ್ನು ದತ್ತು ಪಡೆದು ಸಾಕಬೇಕು. ಆ ಇಬ್ಬರಲ್ಲಿ ನಾನು ಇರುತ್ತೇನೆ’ ಎಂದು 13 ನಿಮಿಷ 21 ಸೆಕೆಂಡ್ ವಿಡಿಯೋದಲ್ಲಿ ತನ್ನ ಬಾಲ್ಯ, ವಿದ್ಯಾಭ್ಯಾಸ, ಸ್ನೇಹಿತರು, ಉಪನ್ಯಾಸಕರ ಬಗ್ಗೆ ಮಾತನಾಡಿದ್ದಾನೆ.
ತನಿಖೆ ನಡೆಸಲಾಗುವುದು: ಎಸ್ಪಿ
‘ಹೇಮಂತ್ ಗೌಡ ಆತ್ಮಹತ್ಯೆಗೂ ಮುನ್ನ ವಿಡಿಯೋ ಮಾಡಿ ಸ್ನೇಹಿತರಿಗೆ ಕಳುಹಿಸಿದ್ದಾನೆ. ಮೊಬೈಲ್ ಪರಿಶೀಲನೆ ನಡೆಸಲಾಗುವುದು, ಸದ್ಯ ತನಿಖೆ ನಡೆಯುತ್ತಿದೆ. ವಿದ್ಯಾರ್ಥಿಯ ನಡವಳಿಕೆ ಹಾಗೂ ಸ್ನೇಹಿತರ ಜತೆಗಿನ ಒಡನಾಡ ಕುರಿತು ಮಾಹಿತಿ ಕಲೆ ಹಾಕ್ಕಿದ್ದು, ತನಿಖೆ ಬಳಿಕ ಆತ್ಮಹತ್ಯೆಗೆ ನಿಖರ ಕಾರಣ ಗೊತ್ತಾಗುತ್ತದೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್ ಗೌಡ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.