ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಳೇಬೀಡು | ವಾಹನ ನಿಲುಗಡೆಗೆ ಗೂಡಂಗಡಿ ತೆರವು: ಜಿಲ್ಲಾಧಿಕಾರಿ ಆದೇಶ

Published 18 ಮೇ 2024, 5:23 IST
Last Updated 18 ಮೇ 2024, 5:23 IST
ಅಕ್ಷರ ಗಾತ್ರ

ಹಳೇಬೀಡು: ಪ್ರವಾಸಿಗರು ಹೊಯ್ಸಳೇಶ್ವರ ದೇವಾಲಯ ವೀಕ್ಷಣೆ ಮಾಡಿಕೊಂಡು ಹಿಂದಿರುಗಲು ಅನುಕೂಲ ಆಗಬೇಕು ಎಂದು ಗ್ರಾಮ ಪಂಚಾಯಿತಿಯಿಂದ ದೇವಾಲಯದ ಪ್ರವೇಶ ದ್ವಾರದಲ್ಲಿ ಗೂಡಂಗಡಿ ತಲೆ ಎತ್ತದಂತೆ ಕ್ರಮ ಕೈಗೊಳ್ಳಲಾಗಿದೆ. 

ಪ್ರವೇಶ ದ್ವಾರದ ಮುಂಭಾಗದ ಮೈದಾನದಲ್ಲಿ ಸ್ವಚ್ಛತೆ ಕೈಗೊಳ್ಳಲಾಗಿದ್ದು, ಸುಗಮ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ದೊಡ್ಡ ವಾಹನಗಳು ಪಾರ್ಕಿಂಗ್ ಸ್ಥಳಕ್ಕೆ ಹೋಗಿ, ಪುನಃ ಹಿಂದಿರುಗಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿದೆ.

ಮೈದಾನದ ಅಂಚಿನಲ್ಲಿ ಹಗರೆ ರಸ್ತೆ ಬದಿಯಲ್ಲಿದ್ದ ಗೂಡಂಗಡಿ ತೆರವು ಮಾಡಿ, ಕಬ್ಬಿಣದ ಬೇಲಿ ನಿರ್ಮಿಸಲಾಗಿದೆ. ಪಾರ್ಕಿಂಗ್ ಹಾಗೂ ಹೊಯ್ಸಳೇಶ್ವರ ದೇವಾಲಯದ ಪ್ರವೇಶ ದ್ವಾರಕ್ಕೆ ದಾರಿ ತೋರಿಸುವ ಫಲಕ ಹಾಕಲಾಗಿದೆ. ಪ್ರವೇಶ ದ್ವಾರದಲ್ಲಿ ಪ್ರವಾಸಿಗರಿಗೆ ಕಿರಿಕಿರಿ ಆಗುವಂತೆ ಯಾರೊಬ್ಬರು ನಡೆದುಕೊಳ್ಳುವಂತಿಲ್ಲ. ದೂರದಿಂದ ಬರುವ ಪ್ರವಾಸಿಗರಲ್ಲಿ ಹಳೇಬೀಡಿನ ಗೌರವ ಹೆಚ್ಚುವಂತೆ ಇರಬೇಕು. ಪಾರ್ಕಿಂಗ್ ಸ್ಥಳ ಹಾಗೂ ಪ್ರವೇಶ ದ್ವಾರದಲ್ಲಿ ವ್ಯಾಪಾರ ಮಾಡುವಂತಿಲ್ಲ ಎಂದು ಕಠಿಣ ಕ್ರಮ ಕೈಗೊಳ್ಳಲಾಗಿದೆ. 

ಅಲ್ಲಲ್ಲಿ ಎಚ್ಚರಿಕೆ ಹಾಗೂ ಸೂಚನಾ ಫಲಕ ಹಾಕಲಾಗಿದ್ದು, ಏಕಕಾಲಕ್ಕೆ 100 ವಾಹನ ಬಂದರೂ ನಿಲುಗಡೆ ಮಾಡಲು ಅವಕಾಶ ಮಾಡಲಾಗಿದೆ. ದೊಡ್ಡ ಬಸ್‌ಗಳನ್ನೂ ಪಾರ್ಕಿಂಗ್ ಸ್ಥಳದಲ್ಲಿ ನಿಲುಗಡೆ ಮಾಡಲಾಗುತ್ತಿದೆ. ರಸ್ತೆ ಬದಿಯಲ್ಲಿ ಈಗ ಪ್ರವಾಸಿ ವಾಹನಗಳು ನಿಲ್ಲುತ್ತಿಲ್ಲ. ಇದರಿಂದಾಗಿ ರಸ್ತೆಯಲ್ಲಿ ವಾಹನಗಳ ಸಂಚಾರ ಸುಗಮವಾಗಿದೆ. ಪಾರ್ಕಿಂಗ್ ಜಾಗದ ಸಾಮರ್ಥ್ಯ ಮೀರಿ ಪ್ರವಾಸಿಗರ ವಾಹನ ಬಂದರೆ, ಮಾತ್ರ ರಸ್ತೆ ಬದಿಯಲ್ಲಿ ವಾಹನ ನಿಲ್ಲಲೇಬೇಕು ಎಂಬ ಮಾತು ಸ್ಥಳೀಯರಿಂದ ಕೇಳಿ ಬಂತು.

ಪಾರ್ಕಿಂಗ್ ಸ್ಥಳದ ಮುಂಭಾಗದ ರಸ್ತೆ ಬದಿಯಲ್ಲಿ ನೆಟ್ಟಿರುವ ಗಿಡಗಳು, ಮೇಲೆಳುತ್ತಿವೆ. ಮತ್ತಷ್ಟು ಗಿಡಗಳನ್ನು ನೆಟ್ಟು ಬೆಳೆಸಲು ಗುರಿ ಹೊಂದಲಾಗಿದೆ ಕೇಂದ್ರ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅನುಮತಿ ನೀಡಿದರೆ ದೊಡ್ಡ ಶೌಚಾಲಯ ನಿರ್ಮಾಣ ಮಾಡುವ ಉದ್ದೇಶವಿದೆ ಎಂಬ ಮಾತು ಗ್ರಾಮ ಪಂಚಾಯಿತಿ ಸಿಬ್ಬಂದಿ ತಿಳಿಸಿದರು.

‘ಗೂಡಂಗಡಿ ತೆರವು ಮಾಡಿ ಸ್ವಚ್ಛತೆ ಹಾಗೂ ಸುಗಮ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಲು ಸಿಬ್ಬಂದಿ ಸಹಕಾರ ನೀಡಿದರು. ಕಾರ್ಯದರ್ಶಿ, ನೀರುಗಂಟಿಗಳು, ಕಚೇರಿ ಸಿಬ್ಬಂದಿ ಹಾಗೂ ಸ್ವಚ್ಛತೆ ಕೆಲಸಗಾರರು ಸಮಯ ಮೀರಿ ಕೆಲಸ ಮಾಡಿದ್ದರಿಂದ ಹೊಯ್ಸಳೇಶ್ವರ ದೇವಾಲಯ ಪ್ರವೇಶ ದ್ವಾರ ಸ್ವಚ್ಛತೆ ಕಂಡಿತು’ ಎಂದು ಪಿಡಿಒ ಎಸ್.ಸಿ.ವಿರೂಪಾಕ್ಷ ತಿಳಿಸಿದರು.

ಅಡೆತಡೆ ಇಲ್ಲದೆ ಪ್ರವಾಸಿಗರು ದೇವಾಲಯ ವೀಕ್ಷಣೆ ಮಾಡಿ ಹಿಂದಿರುಗುತ್ತಿದ್ದಾರೆ. ಹಿಂದೆ ಹಲವಾರು ಬಾರಿ ಹೊಯ್ಸಳೇಶ್ವರ ದೇವಾಲಯಕ್ಕೆ ಭೇಟಿ ನೀಡಿದ ಪ್ರವಾಸಿಗರು ಇಂದಿನ ಕ್ರಮವನ್ನು ನೋಡಿ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

ರಂಗಸ್ವಾಮಿ
ರಂಗಸ್ವಾಮಿ
ಹಳೇಬೀಡು ಈಗ ವಿಶ್ವ ಮನ್ನಣೆ ಪಡೆದಿರುವುದರಿಂದ ಸ್ಥಳೀಯವಾಗಿಯೂ ಸೌಲಭ್ಯ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಸುಗಮ ವಾಹನ ನಿಲುಗಡೆ ಸ್ವಚ್ಛತೆ ಕ್ರಮ ಕೈಗೊಂಡಿರುವುದು ಶ್ಲಾಘನೀಯ.
ರಂಗಸ್ವಾಮಿ ಹಳೇಬೀಡು ನಿವಾಸಿ
ಎಸ್.ಸಿ. ವಿರೂಪಾಕ್ಷ
ಎಸ್.ಸಿ. ವಿರೂಪಾಕ್ಷ
ಗೂಡಂಗಡಿ ತೆರವು ಮಾಡುವಂತೆ ಹಲವು ಬಾರಿ ಮೌಖಿಕವಾಗಿ ಹೇಳವಾಗಿತ್ತು. ಈ ಕುರಿತು ದೇವಾಲಯ ಬಳಿಯ ವರ್ತಕರು ಸ್ಪಂದನೆ ನೀಡಿರಲಿಲ್ಲ. ಜಿಲ್ಲಾಧಿಕಾರಿ ಆದೇಶದ ನಂತರ ಕಠಿಣ ಕ್ರಮ ಕೈಗೊಂಡೆವು
ಎಸ್.ಸಿ.ವಿರೂಪಾಕ್ಷ ಹಳೇಬೀಡು ಪಿಡಿಒ
ಜಿಲ್ಲಾಧಿಕಾರಿ ಆದೇಶ ಪಾಲನೆ
ಏಪ್ರಿಲ್‌ನಲ್ಲಿ ಜಿಲ್ಲಾದಿಕಾರಿ ಸಿ.ಸತ್ಯಭಾಮಾ ಹೊಯ್ಸಳೇಶ್ವರ ದೇವಾಲಯಕ್ಕೆ ಬಂದಿದ್ದು ಪ್ರವೇಶ ದ್ವಾರದಲ್ಲಿ ಗೂಡಂಗಡಿ ವ್ಯಾಪಿಸಿರುವುದನ್ನು ನೋಡಿ ಅಸಮಾಧಾನ ವ್ಯಕ್ತಪಡಿಸಿದ್ದರು. ವಾಹನ ಪಾರ್ಕಿಂಗ್ ಸ್ಥಳದಲ್ಲಿಯೂ ಪ್ರವಾಸಿಗರಿಗೆ ಕಿರಿಕಿರಿ ಆಗುತ್ತಿರುವುದನ್ನು ಗಮನಿಸಿದ್ದರು. ಈ ಕುರಿತು ಹಳೇಬೀಡು ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಗೂಡಂಗಡಿ ವ್ಯಾಪಿಸಿ ಸ್ವಚ್ಛತೆ ಇಲ್ಲದಂತೆ ಕಾಣುತ್ತಿದೆ. ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆದೇಶ ಮಾಡಿದ್ದರು. ಪಿಡಿಒ ಹಾಗೂ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ಸ್ವಚ್ಛತೆಯ ಕ್ರಮ ಕೈಗೊಂಡರು. ಪಾರ್ಕಿಂಗ್ ಜಾಗದ ಸುತ್ತ ಈಗ ಕಬ್ಬಿಣದಿಂದ ಬೇಲಿ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT