ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕನಾಗದಿದ್ದರೂ ಸೇವಕನಾಗಿ ಇರುವೆ: ಪ್ರೀತಂ ಗೌಡ

ತಾಂತ್ರಿಕವಾಗಿ ಸೋತಿದ್ದರೂ ಜನಾಭಿಪ್ರಾಯದಲ್ಲಿ ಗೆಲುವು: ಪ್ರೀತಂ ಗೌಡ
Published 18 ಮೇ 2023, 5:04 IST
Last Updated 18 ಮೇ 2023, 5:04 IST
ಅಕ್ಷರ ಗಾತ್ರ

ಹಾಸನ: ‘ವಿಧಾನಸಭೆ ಚುನಾವಣೆಯಲ್ಲಿ ತಾಂತ್ರಿಕವಾಗಿ ನಾನು ಸೋತಿದ್ದರೂ, ಜನಾಭಿಪ್ರಾಯದಲ್ಲಿ ಗೆಲುವು ಸಾಧಿಸಿದ್ದೇನೆ’ ಎಂದು ಮಾಜಿ ಶಾಸಕ ಪ್ರೀತಂ ಗೌಡ ಅಭಿಪ್ರಾಯಪಟ್ಟರು.

ನಗರದಲ್ಲಿ ತಮ್ಮ ನಿವಾಸದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ಕ್ಷೇತ್ರದ ಜನರು ಆಶೀರ್ವದಿಸಿ, ಕಳೆದ ಬಾರಿ 63 ಸಾವಿರ ಮತಗಳನ್ನು ನೀಡಿ ಗೆಲ್ಲಿಸಿದ್ದರು. ಈ ಬಾರಿ 77 ಸಾವಿರ ಮತಗಳನ್ನು ಪಡೆದಿದ್ದು, ಜನಾಭಿಪ್ರಾಯದಲ್ಲಿ ಗೆಲುವು ಸಾಧಿಸಿದ್ದೇನೆ. ಶಾಸಕನಾಗಿ ಆಯ್ಕೆ ಆಗದಿದ್ದರೂ ಜನರ ಸೇವಕನಾಗಿ ಮುಂದುವರಿಯುತ್ತೇನೆ’ ಎಂದರು.

‘ಪಕ್ಷದಿಂದ ನನಗೆ ಹಾಸನ ಹಾಗೂ ಸಕಲೇಶಪುರ ಕ್ಷೇತ್ರಗಳ ಜವಾಬ್ದಾರಿಯನ್ನು ನೀಡಲಾಗಿತ್ತು. ನನಗೆ ಪಕ್ಷ ತಾಯಿ ಇದ್ದಂತೆ ಅದರಂತೆ ಕೆಲಸ ಮಾಡಿದ್ದು, ಜನಾದೇಶಕ್ಕೆ ತಲೆಬಾಗುವುದಾಗಿ’ ಹೇಳಿದರು.

‘ಇತ್ತೀಚೆಗೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವಾಗ ಒಂದು ವರ್ಗ ನನ್ನ ಸೋಲಿಗೆ ಕಾರಣವಾಗಿದೆ ಎಂದು ಹೇಳಿದ್ದೇನೆ. ವರ್ಗ ಎಂದರೆ ಒಂದು ಪಕ್ಷದ ಪರವಾಗಿ ಮತ ಚಲಾಯಿಸುವವರಾಗಿದ್ದು, ಅವರು ಈ ಬಾರಿ ಜೆಡಿಎಸ್‌ಗೆ ಮತ ಹಾಕಿರುವುದರಿಂದ ನನಗೆ ಸೋಲಾಯಿತು. ವರ್ಗ ಎಂದರೆ ಒಂದು ಸಮುದಾಯಕ್ಕೆ ಹೇಳಿದ್ದೇನೆ ಎಂದು ಅರ್ಥ ಕಲ್ಪಿಸಬಾರದು’ ಎಂದು ಸ್ಪಷ್ಟಪಡಿಸಿದರು.

‘ಯಾರನ್ನೂ ಭಯಪಡಿಸುವ ಕೆಲಸವನ್ನು ನಾನು ಮಾಡುವುದಿಲ್ಲ. ಕಳೆದ ಬಾರಿಯಂತೆ ಈ ಬಾರಿಯೂ ಮುಸ್ಲಿಮರು ನನಗೆ ಮತ ಹಾಕಿದ್ದಾರೆ. ವೈಯಕ್ತಿಕವಾಗಿ ನಾನು ಅವರನ್ನು ಪ್ರೀತಿಸುತ್ತೇನೆ. ಇದಕ್ಕೆ ಹಲವಾರು ಉದಾಹರಣೆಗಳಿವೆ. ಕೋವಿಡ್ ಸಂದರ್ಭದಲ್ಲಿ 100 ಗ್ರಾಂ ಪಡಿತರ ನೀಡದ ರಾಜಕೀಯ ಪಕ್ಷಗಳ ನಡುವೆ ನಾನು ಎಲ್ಲರನ್ನೂ ಮಾನವೀಯತೆ ದೃಷ್ಟಿಯಿಂದ ಕಂಡಿದ್ದೇನೆ. ನನ್ನ ಐದು ವರ್ಷದ ಆಡಳಿತ ಅವಧಿಯಲ್ಲಿ ಯಾವುದೇ ಕೋಮು ಸಂಘರ್ಷ ನಡೆದಿಲ್ಲ’ ಎಂದು ಹೇಳಿದರು.

‘ರಾಜಕೀಯ ವಿಶ್ಲೇಷಣೆಯಂತೆ ಇಡೀ ರಾಜ್ಯದಲ್ಲಿ 135 ಸ್ಥಾನವನ್ನು ಪಡೆದಿರುವ ಕಾಂಗ್ರೆಸ್ ಪಕ್ಷ ಹಾಸನದಲ್ಲಿ ಕಳಪೆ ಪ್ರದರ್ಶನ ನೀಡಿದೆ. ಕಳೆದ ಬಾರಿ 40ಸಾವಿರ ಮತಗಳನ್ನು ಪಡೆದಿದ್ದ ಕಾಂಗ್ರೆಸ್‌ ಈ ಬಾರಿ ಶೇ 10 ರಷ್ಟು ಅಂದರೆ 4ಸಾವಿರ ಮತಗಳನ್ನು ಪಡೆಯುವ ಮೂಲಕ ಕಳಪೆ ಪ್ರದರ್ಶನ ನೀಡಿದೆ. ಆ ಪಕ್ಷದ ಮತಗಳು ಜೆಡಿಎಸ್‌ ಹೋಗಿವೆ ಎಂದು ವಿಶ್ಲೇಷಣೆ ಮಾಡಿದ್ದೇನೆ. ಅದಕ್ಕಾಗಿಯೇ ಒಂದು ವರ್ಗ ಎಂದು ತಿಳಿಸಿದ್ದೇನೆ’ ಎಂದರು.

‘ಯಾವುದೇ ಚುನಾವಣೆ ರಾಜಕೀಯ ನಾಯಕರಿಗೆ ಪರೀಕ್ಷೆ ಇದ್ದಂತೆ. ಮುಂದೆಯೂ ನಾನು ಕ್ಷೇತ್ರದಲ್ಲಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗಳಿಗೆ ಪಕ್ಷ ಸಂಘಟಿಸುತ್ತೇನೆ. ಲೋಕಸಭೆ ಚುನಾವಣೆಗೆ ಸಂಬಂಧಪಟ್ಟಂತೆ ರಾಷ್ಟ್ರೀಯ ಮಟ್ಟದಲ್ಲಿ ನಾಯಕರು ತೀರ್ಮಾನ ಕೈಗೊಳ್ಳಲಿದ್ದಾರೆ. ಶಾಸಕನಾಗಿ ಪ್ರೀತಂ ಗೌಡ ಅಭೂತಪೂರ್ವ ಜನ ಬೆಂಬಲ ಪಡೆದಿದ್ದು, ಜನರ ವಿಶ್ವಾಸ ಗಳಿಸಿದ್ದೇನೆ’ ಎಂದು ಹೇಳಿದರು.

ನೂತನ ಶಾಸಕರಿಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹೇಳಿದ ಪ್ರೀತಂ ಗೌಡ, ನನಗಿಂತ ಶಾಸಕರು ಕಿರಿಯರಿದ್ದಾರೆ. ಆವೇಶಕ್ಕೆ ಒಳಗಾಗದೇ ಕೆಲಸ ಮಾಡುವುದು ಸೂಕ್ತ. ಪ್ರೀತಂ ಗೌಡ ಫೌಂಡೇಶನ್ ಪಿಲ್ಲರ್ ಹಾಕಿ ಆರ್‌ಸಿಸಿ ಕಟ್ಟಡ ಕಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಜಾಗರೂಕತೆಯಿಂದ ಅಧಿಕಾರ ನಡೆಸುವಂತೆ ಸಲಹೆ ನೀಡಿದ ಅವರು ಮೂರು ದಿನಕ್ಕೆ ಅಧಿಕಾರ ಮುಗಿಯುವುದಿಲ್ಲ. ಹಾಸನದ ಸ್ವಾಭಿಮಾನ ಜನರಿಗೆ ಒಳಿತನ್ನು ಮಾಡುವ ನಿಟ್ಟಿನಲ್ಲಿ ಮುಂದುವರಿಯಲಿ ಎಂದು ಸಲಹೆ ನೀಡಿದರು.

ಪಕ್ಷದ ಮುಖಂಡ ಪ್ರೀತಿವರ್ಧನ್, ಪದಾಧಿಕಾರಿಗಳು ಹಾಜರಿದ್ದರು.

ಶಾಸಕನಾಗಿಯೇ ಕೆಲಸ ಮಾಡಬೇಕಿಲ್ಲ. ಅಧಿಕಾರ ಇಲ್ಲದಿದ್ದರೂ ದೇವಸ್ಥಾನ ಜೀರ್ಣೋದ್ಧಾರ ಕಸ ವಿಲೇವಾರಿ ನೀರು ಒದಗಿಸುವ ನಿಟ್ಟಿನಲ್ಲಿ ಜನರ ಸೇವಕನಾಗಿ ಕೆಲಸ ಮಾಡುತ್ತೇನೆ. ಪ್ರೀತಂ ಗೌಡ ಮಾಜಿ ಶಾಸಕ

ಮಾತಿನಿಂದ ಸೋತಿಲ್ಲ ‘ಪ್ರೀತಂ ಗೌಡ ಮಾತಿನಿಂದ ಚುನಾವಣೆಯಲ್ಲಿ ಸೋತರು ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಆದರೆ ಆರು ಬಾರಿ ಶಾಸಕರಾಗಿದ್ದವರು ಯಾರ ವಿರುದ್ಧ ಮಾತನಾಡದವರು ಸೋತಿದ್ದಾರೆ. ಒಂದು ಬಾರಿ ಗೆಲುವು ಸಾಧಿಸಿ ಪಕ್ಷ ವಿರೋಧಿಯಾಗದೇ ಹಾಗೂ ನಾಯಕರ ಪರ ಇದ್ದವರು ಸೋತಿದ್ದಾರೆ. ಇಂತಹ ಹಲವು ಉದಾಹರಣೆಗಳಿದ್ದು ನನ್ನ ಸೋಲಿಗೆ ಮಾತೇ ಕಾರಣ ಎಂದು ಹೇಳಲಾಗುವುದಿಲ್ಲ ಎಂದು ಪ್ರೀತಂ ಗೌಡ ಅಭಿಪ್ರಾಯಪಟ್ಟರು. ಅತಿಯಾದ ಆತ್ಮವಿಶ್ವಾಸದಿಂದ ಚುನಾವಣೆಯಲ್ಲಿ ನಾನು ಸೋತಿಲ್ಲ. ಕ್ಷೇತ್ರಕ್ಕೆ ರಾಜ್ಯ ನಾಯಕರನ್ನು ಕರೆಸಿ ಕಾರ್ಯಕ್ರಮ ಮಾಡುವ ಶಕ್ತಿ ನನಗೆ ಇತ್ತು. ಪಕ್ಷ ನನಗೆ ತಾಯಿ ಇದ್ದಂತೆ. ಆದ್ದರಿಂದ ಇತರರನ್ನು ಗೆಲ್ಲಿಸಿ ನಾನು ಮುನ್ನಡೆಯಲು ಹೊರಟೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಎರಡು ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿದ್ದು ಪಕ್ಷ ಬೆಳೆಯಲು ಸಹಕಾರಿಯಾಗಿದೆ ಎಂದರು. ಪ್ರೀತಂ ಗೌಡ ಸೋಲು– ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಮುನ್ನಡೆಯುತ್ತಿದ್ದು ಒಬ್ಬ ನಾಯಕ ಎಂದಿಗೂ ನಾಯಕನಾಗಿ ಇರುತ್ತಾನೆ. ಕ್ಷೇತ್ರದ ಜನರ ಕೆಲಸ ಮಾಡಲು ಹಿಂಜರಿಯುವುದಿಲ್ಲ. ಬಿ.ಎಸ್. ಯಡಿಯೂರಪ್ಪ ಎಚ್.ಡಿ. ದೇವೇಗೌಡ ಕುಮಾರಸ್ವಾಮಿ ಎಚ್.ಡಿ. ರೇವಣ್ಣ ಎಲ್ಲರೂ ಸೋತಂತಹ ವ್ಯಕ್ತಿಗಳಾಗಿದ್ದು ರಾಜಕೀಯದಲ್ಲಿ ಸೋಲು ಗೆಲುವು ಸಾಮಾನ್ಯ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT