ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಿ - ರೈತರ ಪ್ರತಿಭಟನೆ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕೋಡಿಹಳ್ಳಿ ನೇತೃತ್ವದಲ್ಲಿ ರೈತರ ಪ್ರತಿಭಟನೆ
Published 5 ಸೆಪ್ಟೆಂಬರ್ 2023, 12:24 IST
Last Updated 5 ಸೆಪ್ಟೆಂಬರ್ 2023, 12:24 IST
ಅಕ್ಷರ ಗಾತ್ರ

ಹಾಸನ: ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಬೇಕು, ಜಿಲ್ಲೆಯ ತೆಂಗು ಬೆಳೆಗಾರರ ಸಮಸ್ಯೆ ನಿವಾರಣೆ, ಸೂಕ್ತ ಬರ ಪರಿಹಾರ ಘೋಷಣೆ, ರೈತ ಕುಟುಂಬಕ್ಕೆ ಪಡಿತರ ಚೀಟಿ ವ್ಯವಸ್ಥೆ ಸುಧಾರಣೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ರೈತರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ರಾಜ್ಯದ ರೈತರನ್ನು ಕಡೆಗಣಿಸಿ ತಮಿಳುನಾಡಿಗೆ ನೀರು ಹರಿಸಿರುವುದು ಖಂಡನೀಯ, ನಮ್ಮ ರೈತರ ಬೆಳೆಗೆ ಅಗತ್ಯ ನೀರು ರಾಜ್ಯದ ಪ್ರಮುಖ ಜಲಾಶಯದಲ್ಲಿ ಸಂಗ್ರಹ ಇಲ್ಲದ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಹರಿಸಿ, ರಾಜ್ಯದ ರೈತರಿಗೆ ಕಾಂಗ್ರೆಸ್ ಸರ್ಕಾರ ದ್ರೋಹ ಎಸಗಿದೆ. ಕೂಡಲೇ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಕಳೆದ ವರ್ಷ ₹ 18ಸಾವಿರಕ್ಕೆ ಮಾರಾಟವಾಗುತ್ತಿದ್ದ ಕ್ವಿಂಟಲ್ ಕೊಬ್ಬರಿ, ಈಗ ₹ 4 ಸಾವಿರ ಕನಿಷ್ಠ ಬೆಲೆಗೆ ಖರೀದಿಯಾಗುತ್ತಿದೆ. ಕೇಂದ್ರ ಸರ್ಕಾರದ ಆದೇಶದಂತೆ ಎರಡು ತಿಂಗಳಿನಿಂದ ರೈತರಿಂದ ಕೊಬ್ಬರಿ ಖರೀದಿಸುತ್ತಿದ್ದು, ನಾಫೆಡ್ ಖರೀದಿ ಪ್ರಕ್ರಿಯೆ 20 ದಿನಗಳಿಂದ ಸ್ಥಗಿತಗೊಂಡಿದೆ. ಕೂಡಲೇ ನಾಫೆಡ್‌ ಮೂಲಕ ಖರೀದಿ ಪ್ರಾರಂಭಿಸಬೇಕು ಪ್ರತಿ ಕ್ವಿಂಟಲ್ ಕೊಬ್ಬರಿಗೆ ನ್ಯಾಯ ಸಮ್ಮತ ₹ 25ಸಾವಿರ ನೀಡುವಂತೆ ಆಗ್ರಹಿಸಿದರು.

ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದ್ದು, ಆಲೂಗಡ್ಡೆ, ಶುಂಠಿ, ಜೋಳ ಸೇರಿದಂತೆ ವಿವಿಧ ತರಕಾರಿ ಬೆಳೆಗಳು, ತೋಟಗಾರಿಕೆ ಬೆಳೆಗಳು ಒಣಗುವ ಪರಿಸ್ಥಿತಿ ಎದುರಾಗಿದೆ. ರೈತರು ಈಗಾಗಲೇ ಬೀಜ, ಗೊಬ್ಬರ, ಔಷಧಿ ಸೇರಿದಂತೆ ಬೇಸಾಯಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡಿದ್ದು, ಜಿಲ್ಲೆಯ ಎಂಟು ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿ ಸೂಕ್ತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.

ಸುಮಾರು ಐದು ವರ್ಷದಿಂದ ಪಡಿತರ ಚೀಟಿಗೆ ಹೊಸದಾಗಿ ಅರ್ಜಿ ಪಡೆದಿಲ್ಲ. ಅಧಿಕಾರಿಗಳ ಬೀಜವಾಬ್ದಾರಿಯಿಂದ ಕೆಲವೊಂದು ಪಡಿತರ ಚೀಟಿಗಳು ಎಪಿಎಲ್ ಪಡಿತರ ಚೀಟಿಗಳಾಗಿಯೇ ಉಳಿದಿದ್ದು, ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಆಧಾರ್ ನೋಂದಣಿ ಆಗುತ್ತಿಲ್ಲ. ಹೊಸ ಅರ್ಜಿಯನ್ನು ಸಲ್ಲಿಸದೇ, ತಿದ್ದುಪಡಿಯನ್ನೂ ಮಾಡದೇ ತೊಂದರೆಯಾಗಿದ್ದು, ಬಡವರಿಗೆ ಆಘಾತ ಉಂಟಾಗಿದೆ ಎಂದು ಹೇಳಿದರು.

ರೈತರ ಎಲ್ಲ ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಸಬೇಕು ಎಂದು ಮನವಿ ನೀಡಿದ ಕೋಡಿಹಳ್ಳಿ ಚಂದ್ರಶೇಖರ್ ಅವರ ಮಾತನ್ನು ಆಲಿಸಿದ ಜಿಲ್ಲಾಧಿಕಾರಿ ಸಿ. ಸತ್ಯಭಾಮಾ, ಸರ್ಕಾರದ ಮಟ್ಟದಲ್ಲಿ ರೈತರ ಬೇಡಿಕೆಗಳನ್ನು ಮುಂದಿಟ್ಟು ಪರಿಹಾರ ಒದಗಿಸುವ ಭರವಸೆ ನೀಡಿದರು.

ಉಪಾಧ್ಯಕ್ಷ ಆನೆಕೆರೆ ರವಿ, ಕಮಲಮ್ಮ, ರಂಗಮ್ಮ ಸೇರಿದಂತೆ ಹಲವು ರೈತರು ಭಾಗವಹಿಸಿದ್ದರು.

ಹೇಮಾವತಿ ಪ್ರತಿಮೆಯಿಂದ ಡಿಸಿ ಕಚೇರಿವರೆಗೆ ಮೆರವಣಿಗೆ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ರೈತರು ರಾಜ್ಯದ ಜಲಾಶಯಗಳ ನೀರು ಖಾಲಿ ಮಾಡಿದ ಸರ್ಕಾರ: ಆಕ್ರೋಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT