ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.ಕೆ. ಶಿವಕುಮಾರ್ ಒತ್ತಡದಿಂದ ರೇವಣ್ಣ ವಿರುದ್ಧ ಎಫ್ಐಆರ್: ಜೆಡಿಎಸ್ ಮುಖಂಡ ಆರೋಪ

ಸೋಲಿನ ಭೀತಿಯಿಂದ ಈ ರೀತಿಯ ಕೃತ್ಯ: ಕೆ.ಎಸ್‌. ಲಿಂಗೇಶ್‌ ಆರೋಪ
Published 30 ಏಪ್ರಿಲ್ 2024, 14:46 IST
Last Updated 30 ಏಪ್ರಿಲ್ 2024, 14:46 IST
ಅಕ್ಷರ ಗಾತ್ರ

ಹಾಸನ: ಯಾರದ್ದೋ ಪ್ರಭಾವ, ಒತ್ತಡಗಳಿಗೆ ಮಣಿದು ಎಚ್.ಡಿ. ರೇವಣ್ಣ ಅವರನ್ನು ಎ 1 ಆರೋಪಿಯಾಗಿ ಎಫ್ಐಆರ್ ದಾಖಲು ಮಾಡಲಾಗಿದೆ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್. ಲಿಂಗೇಶ್ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರ ಸೋಲು ಕಟ್ಟಿಟ್ಟ ಬುತ್ತಿ ಎಂಬುದು ಗೊತ್ತಾಗಿದೆ. ಆದ್ದರಿಂದ ರಾಜಕೀಯವಾಗಿ ಹಣಿಯಲು ಎಚ್‌.ಡಿ. ರೇವಣ್ಣ ಅವರನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ದೂರಿದರು.

ಮುಂದೆ ಮುಖ್ಯಮಂತ್ರಿ ಆಗಬೇಕು ಎನ್ನುವವರು ಈ ರೀತಿ ಎಫ್ಐಆರ್ ಮಾಡಿಸಿದ್ದಾರೆ. ಸತ್ಯಾಸತ್ಯತೆ ತಿಳಿಯದೇ, ಜಿಲ್ಲೆಗಾಗಿ ದುಡಿದ ರೇವಣ್ಣ ಅವರ ಮೇಲೆ ಎಫ್‌ಐಆರ್ ಮಾಡಿಸಿರುವುದು ಖಂಡನೀಯ ಎಂದರು.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಹೊಳೆನರಸೀಪುರ ಪೊಲೀಸರ ಮೇಲೆ ಒತ್ತಡ ಹೇರಿ ರೇವಣ್ಣ ಅವರ ಮೇಲೆ ಪ್ರಕರಣ ದಾಖಲಿಸಿರುವುದು ನಾಚಿಕೆಗೇಡಿನ ಸಂಗತಿ. ಇದಕ್ಕೆಲ್ಲಾ ಶಿವಕುಮಾರ್ ಕಾರಣ ಎಂದು ಆರೋಪಿಸಿದರು.

ಡಿ.ಕೆ. ಶಿವಕುಮಾರ್ ಅವರು ತಮ್ಮ ಚೇಲಾಗಳನ್ನು ಕಳುಹಿಸಿ, ಮಹಿಳೆಗೆ ಆಮಿಷವೊಡ್ಡಿ, ಅವರ ಮೂಲಕ ದೂರು ಕೊಡಿಸಿದ್ದಾರೆ. ರಾಜಕಾರಣವನ್ನು ರಾಜಕಾರಣದ ರೀತಿ ಮಾಡಬೇಕು. ಆದರೆ ಈ ರೀತಿಯ ಅಧಿಕಾರ ದುರುಪಯೋಗ ಮಾಡಿಕೊಂಡು ರಾಜಕೀಯ ಪ್ರಭಾವ ಬಳಸುವುದು ಸರಿಯಲ್ಲ ಎಂದರು.

'ವಕೀಲ ದೇವರಾಜೇಗೌಡ ಪೆನ್‌ಡ್ರೈವ್ ವಿಚಾರವಾಗಿ ಹೇಳಿಕೆ ನೀಡಿದಾಗ, ಜಿಲ್ಲಾಡಳಿತ ಏನು ಮಾಡುತ್ತಿತ್ತು' ಎಂದು ಆಕ್ರೋಶ ವ್ಯಕ್ತಪಡಿಸಿದ ಲಿಂಗೇಶ್‌, 'ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು. ದೇವರಾಜೇಗೌಡರನ್ನು ಕರೆದು ಏಕೆ ವಿಚಾರಣೆ ಮಾಡಲಿಲ್ಲ' ಎಂದು ಪ್ರಶ್ನಿಸಿದರು.

'ರಾಜಕೀಯವನ್ನು ರಾಜಕೀಯವಾಗಿ ಎದುರಿಸಬೇಕು. ಅದನ್ನು ಬಿಟ್ಟು ರೇವಣ್ಣ ಅವರನ್ನು ರಾಜಕೀಯವಾಗಿ ಎದುರಿಸಲಾಗದೇ ಈ ರೀತಿ ಮಾಡಿದ್ದಾರೆ' ಎಂದರು.

'ತಪ್ಪು ಯಾರೇ ಮಾಡಿದರೂ ತಪ್ಪೇ. ಎಸ್ಐಟಿ ತನಿಖೆ ನಡೆಯಲಿ. ತಪ್ಪಿತಸ್ಥರಾಗಿದ್ದರೆ ಯಾವುದೇ ಕ್ರಮ ಕೈಗೊಳ್ಳಲಿ. ಇದರಲ್ಲಿ ಯಾರನ್ನೂ ವಹಿಸಿಕೊಳ್ಳುವುದಿಲ್ಲ' ಎಂದು ಲಿಂಗೇಶ ಸ್ಪಷ್ಟಪಡಿಸಿದ್ದರು.

ಜೆಡಿಎಸ್ ಹಾಸನ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ದ್ಯಾವೇಗೌಡ, ಆಲೂರು ತಾಲ್ಲೂಕು ಘಟಕದ ಅಧ್ಯಕ್ಷ ಮಂಜೇಗೌಡ, ಜೆಡಿಎಸ್ ವಕ್ತಾರ ಹೊಂಗೆರೆ ರಘು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT