ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ದಾರಿ ಯಾವುದಯ್ಯ ಪಾದಚಾರಿಗಳಿಗೆ?

Published 15 ಜುಲೈ 2023, 23:28 IST
Last Updated 15 ಜುಲೈ 2023, 23:28 IST
ಅಕ್ಷರ ಗಾತ್ರ

ಹಾಸನ: ನಗರವೂ ಸೇರಿದಂತೆ ಪಟ್ಟಣ ಪ್ರದೇಶಗಳಲ್ಲಿ ಫುಟ್‌ಪಾತ್ ಅತಿಕ್ರಮಣದಿಂದಾಗಿ ಪಾದಚಾರಿಗಳು ಸುರಕ್ಷಿತವಾಗಿ ಸಂಚಾರ ಮಾಡುವುದು ದುಸ್ತರವಾಗಿದೆ.

ಪ್ರಮುಖ ರಸ್ತೆಯ ಪಕ್ಕದಲ್ಲಿನ ವಾಣಿಜ್ಯ ಮಳಿಗೆಗಳ ಮಾಲೀಕರು ತಮ್ಮ ಅಂಗಡಿಯ ಜಾಹೀರಾತು ಫಲಕ ಸೇರಿದಂತೆ ಸಾಮಗ್ರಿಗಳನ್ನು ಇಟ್ಟು ಗ್ರಾಹಕರನ್ನು ಆಕರ್ಷಿಸುತ್ತಿರುವ ಕಾರಣ ಫುಟ್‌ಪಾತ್ ಒತ್ತುವರಿ ಜೊತೆಗೆ ಅತಿಕ್ರಮಣವಾಗುತ್ತಿರುವುದು ಸಾಮಾನ್ಯವಾಗಿದೆ. 

ಹಾಸನ ನಗರ ಪ್ರಮುಖ ರಸ್ತೆಯಾದ ಬಿಎಂ ರಸ್ತೆಯಲ್ಲಿ ಪ್ರಮುಖ ಜ್ಯುವೆಲ್ಲರಿ ಶಾಪ್, ಆಸ್ಪತ್ರೆ, ರೆಸ್ಟೋರೆಂಟ್, ಬಾರ್, ಹೋಟೆಲ್‌ಗಳ ಮಾಲೀಕರು, ಫುಟ್‌ಪಾತ್‌ಗಳನ್ನು ಒತ್ತುವರಿ ಮಾಡಿಕೊಂಡು ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿದ್ದಾರೆ. ವಿದ್ಯುತ್ ಜನರೇಟರ್ ಸೇರಿದಂತೆ ಕಾಂಪೌಂಡ್‌ಗಳನ್ನು ನಿರ್ಮಿಸಿದ್ದಾರೆ.

ನಗರದ ಎವಿಕೆ ಕಾಲೇಜು ಎದುರಿನ ರಸ್ತೆಯಲ್ಲಿ ಫುಟ್‌ಪಾತ್ ಅನ್ನು ಅತಿಕ್ರಮಣ ಮಾಡಿಕೊಂಡು ಗೂಡಂಗಡಿಗಳನ್ನು ಹಾಕಿಕೊಂಡಿದ್ದು, ಇದನ್ನು ತೆರವು ಮಾಡುವಂತೆ ಹಾಗೂ ಕಾಲೇಜು ವಿದ್ಯಾರ್ಥಿಗಳು, ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಕ್ರಮ ವಹಿಸಲು ಸಂಘ-ಸಂಸ್ಥೆಗಳು ಇತ್ತೀಚೆಗೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿದ್ದವು. ಆದರೆ ಇದುವರೆಗೂ ನಗರಸಭೆ ಆಗಲಿ ಅಥವಾ ಪೊಲೀಸ್ ಇಲಾಖೆಯಿಂದಾಗಲಿ ಗಂಭೀರವಾದ ಕ್ರಮವನ್ನು ಕೈಗೊಂಡಿಲ್ಲ ಎನ್ನುವುದು ನಾಗರಿಕರ ದೂರು.

ಅತಿಕ್ರಮಣ ತೆರವು ಮಾಡಲು ಈಗಾಗಲೇ ತಂಡ ರಚನೆ ಮಾಡಿದ್ದು, ಪ್ರತಿದಿನ ಕಾರ್ಯಾಚರಣೆ ನಡೆಯಲಿದೆ. ಈಗಾಗಲೇ ಒತ್ತುವರಿ ಮಾಡಿಕೊಂಡಿರುವ ಫುಟ್‌ಪಾತ್‌ಗಳನ್ನು ತೆರವು ಮಾಡುವಂತೆ ಮಾಧ್ಯಮ ಮತ್ತು ಆಟೊಗಳ ಮೂಲಕ ಸೂಚನೆ ನೀಡಲಾಗುವುದು. ನಂತರ ಹಂತ ಹಂತವಾಗಿ ನಗರದಲ್ಲಿ ಪಾದಚಾರಿಗಳ ಸಂಚಾರಕ್ಕೆ ಪುಟ್‌ಪಾತ್  ಅತಿಕ್ರಮಣ ತೆರವು ಮಾಡಲಾಗುವುದು ಎಂದು ನಗರಸಭೆ ಪೌರಾಯುಕ್ತ ಸತೀಶ್‌ ತಿಳಿಸಿದರು.

ಹಿರೀಸಾವೆ ಎಲ್ಲ ರೀತಿಯಲ್ಲಿಯೂ ಅಭಿವೃದ್ಧಿ ಹೊಂದುತ್ತಿರುವ ಹೋಬಳಿ ಕೇಂದ್ರ. ಆದರೆ ಇಲ್ಲಿ ರಾಷ್ಟ್ರೀಯ ಹೆದ್ದಾರಿ 75 ಮತ್ತು ರಾಜ್ಯ ಹೆದ್ದಾರಿ 8 ಸೇರಿದಂತೆ ಪ್ರಮುಖ ರಸ್ತೆಗಳು ಹಾದು ಹೋಗಿವೆ. ಆದರೆ ಯಾವ ರಸ್ತೆಯಲ್ಲಿಯೂ ಪಾದಚಾರಿ ಮಾರ್ಗಗಳಿಲ್ಲ. ಎಲ್ಲ ಕಡೆ ಸಾರ್ವಜನಿಕರು ರಸ್ತೆಯಲ್ಲಿ ನಡೆದು ಹೋಗಬೇಕಿದೆ.

ರಾಷ್ಟ್ರೀಯ ಹೆದ್ದಾರಿಯವರು ಸರ್ವಿಸ್ ರಸ್ತೆ ಪಕ್ಕದಲ್ಲಿ ಚರಂಡಿ ನಿರ್ಮಾಣ ಮಾಡಿದ್ದರೂ, ಮಳೆ ಬಂದಾಗ ನೀರು ಚರಂಡಿಗೆ ಹೋಗದೇ, ರಸ್ತೆಯಲ್ಲಿ ಹರಿಯುತ್ತದೆ. ಇನ್ನೂ ಕೆಲವು ಕಡೆ ಚರಂಡಿ ಮೇಲೆ ಹಾಕಿರುವ ಸಿಮೆಂಟ್ ಸ್ಲ್ಯಾಬ್ ಮುರಿದ್ದು ಬಿದ್ದು, ತಿಂಗಳುಗಳೇ ಕಳೆದರೂ, ಅದನ್ನು ಸರಿಪಡಿಸುವ ಬಗ್ಗೆ ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳು ಗಮನಹರಿಸಿಲ್ಲ. ಈ ಭಾಗದಲ್ಲಿ ಜನರು, ವಿದ್ಯಾರ್ಥಿಗಳು ರಸ್ತೆ ಮೇಲೆ ಹೋಗಬೇಕಿದೆ.

ಬಸ್ ನಿಲ್ದಾಣ, ಎಸ್‌ಬಿಐ, ಬ್ಯಾಂಕ್ ಆಫ್ ಬರೋಡ, ಕಾವೇರಿ ಗ್ರಾಮೀಣ ಬ್ಯಾಂಕ್, ಅಂಚೆ ಕಚೇರಿಗಳು ಈ ಪ್ರಮುಖ ರಸ್ತೆಯಲ್ಲಿ ಇವೆ. ಆದರೆ ಇವುಗಳಿಗೆ ಹೋಗಲು ಪಾದಚಾರಿ ಮಾರ್ಗ ಇಲ್ಲದೇ, ಚರಂಡಿ ಮೇಲೆ ಅಥವಾ ರಸ್ತೆಯಲ್ಲಿ ನಡೆದು ಹೋಗಬೇಕಿದೆ. ಉಳಿದ ಬಹುತೇಕ ರಸ್ತೆಗಳಲ್ಲಿಯೂ ಪಾದಚಾರಿ ಮಾರ್ಗದ ಸಮಸ್ಯೆ ಇದೆ.

ಜಾವಗಲ್ ಗ್ರಾಮದ ಹೃದಯ ಭಾಗದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 73ರ ಎರಡೂ ಬದಿಗಳಲ್ಲಿ ಸೂಕ್ತವಾದ ಪಾದಚಾರಿ ಮಾರ್ಗವನ್ನು ನಿರ್ಮಿಸದೇ ಇರುವುದರಿಂದ ಸಾರ್ವಜನಿಕರು ರಸ್ತೆಯ ಮೇಲೆ ಸಂಚರಿಸಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.

ಗ್ರಾಮದ ಬಹುತೇಕ ಸರ್ಕಾರಿ ಶಾಲಾ-ಕಾಲೇಜುಗಳು ಹಾಗೂ ಸಾರ್ವಜನಿಕ ಕಚೇರಿಗಳು ಈ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಇದ್ದು, ಕಚೇರಿಗಳಿಗೆ ನಿತ್ಯ ಬರುವ ಸಾರ್ವಜನಿಕರು ರಸ್ತೆ ಬದಿಗಳಲ್ಲಿ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ರಸ್ತೆ ಬದಿಗಳಲ್ಲಿ ಸಾರ್ವಜನಿಕರು ನಡೆದು ಹೋಗಲು ಜಾಗವೇ ಇಲ್ಲದಂತಾಗಿದೆ.

ಮತ್ತೊಂದೆಡೆ ಪಾದಚಾರಿ ಮಾರ್ಗದಲ್ಲಿಯೇ ಹಲವು ವ್ಯಾಪಾರಸ್ಥರು ತರಕಾರಿ ಹಾಗೂ ತಿಂಡಿ ತಿನಿಸುಗಳನ್ನು ಮಾರಾಟ ಮಾಡಲು ಗಾಡಿಗಳನ್ನು ನಿಲ್ಲಿಸುತ್ತಿದ್ದು, ಇದರಿಂದ ರಸ್ತೆ ಬದಿಗಳಲ್ಲಿ ಓಡಾಡಲು ಸ್ಥಳಾವಕಾಶ ಇಲ್ಲದಂತಾಗಿದೆ. 

ಅರಕಲಗೂಡು ಪಟ್ಟಣದಲ್ಲಿ ಪಾದಚಾರಿ ಮಾರ್ಗದ ನಿರ್ವಹಣೆ ಕಾರ್ಯ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಹೀಗಾಗಿ ಜನರು ರಸ್ತೆ ಮಧ್ಯದಲ್ಲಿ, ವಾಹನ ಸಂಚಾರದ ನಡುವೆ ಓಡಾಟ ನಡೆಸುವ ಅನಿವಾರ್ಯತೆ ಎದುರಾಗಿದೆ.

ಬಸ್ ನಿಲ್ದಾಣದ ಮುಖ್ಯ ರಸ್ತೆಯ ಎರಡೂ ಬದಿಯ ಪಾದಚಾರಿ ರಸ್ತೆಗಳಲ್ಲಿ ಮಳೆಯ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೇ ಕೊಚ್ಚೆ, ಕೆಸರಿನಿಂದ ತುಂಬಿದೆ. ಇಲ್ಲಿ ನಿಲ್ಲುವ ನೀರು ಮುಖ್ಯರಸ್ತೆಗೂ ಹರಿದು ವಾಹನಗಳ ಓಡಾಟದ ವೇಳೆ ಪಾದಚಾರಿಗಳಿಗೆ ಕೆಸರಿನ ಸ್ನಾನವಾಗುತ್ತಿದೆ. ಇನ್ನು ಪಟ್ಟಣದ ಪ್ರಮುಖ ವೃತ್ತ, ಜನನಿಬಿಡ ಪ್ರದೇಶಗಳಲ್ಲಿ ರಸ್ತೆ ಬದಿ ವ್ಯಾಪಾರಿಗಳ ಹಾಗೂ ವಾಹನಗಳ ನಿಲುಗಡೆಯಿಂದ ಪಾದಾಚಾರಿಗಳು ಪರದಾಟ ನಡೆಸುವಂತಾಗಿದೆ.

ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪಾದಚಾರಿ ಮಾರ್ಗ ನಿರ್ಮಾಣ ಮಾಡಿ ಕಂಬಿಗಳನ್ನು ಅಳವಡಿಸುವ  ಕುರಿತು ಸಾಮಾನ್ಯ ಸಭೆಯಲ್ಲಿ ವರ್ಷದ ಹಿಂದೆಯೇ ನಿರ್ಣಯ ಕೈಗೊಂಡು ಹಣವನ್ನೂ ಮೀಸಲಿರಿಸಲಾಗಿತ್ತು. ಆದರೆ ಇದು ಕಾರ್ಯಗತವಾಗಲಿಲ್ಲ. ಪಾದಚಾರಿಗಳಿಗೆ ಓಡಾಟಕ್ಕೆ ತೀವ್ರ ತೊಂದರೆಯಾಗಿದೆ. ಈ ಕುರಿತು ಶಾಸಕರ ಗಮನಕ್ಕೆ ತರಲಾಗಿದೆ. ರಸ್ತೆ ಬದಿ ವ್ಯಾಪಾರಿಗಳಿಗೂ ತೊಂದರೆಯಾಗಬಾರದು. ಜನರ ಓಡಾಟಕ್ಕೂ ತೊಂದರೆಯಾಗದಂತೆ ವೈಜ್ಞಾನಿಕವಾಗಿ ಪಾದಚಾರಿ ಮಾರ್ಗ ನಿರ್ಮಿಸಲು ಶಾಸಕರ ಅನುದಾನ ಒದಗಿಸುವುದಾಗಿ ಶಾಸಕ ಎ.ಮಂಜು ತಿಳಿಸಿದ್ದಾರೆ ಎಂದು ಪಟ್ಟಣ ಪಂಚಾಯಿತಿ ಸದಸ್ಯೆ ಎಚ್.ಎಸ್. ರಶ್ಮಿ ತಿಳಿಸಿದರು.

ತಾಲ್ಲೂಕು ಕೇಂದ್ರವಾಗಿರುವ ಆಲೂರಿನ ಮುಖ್ಯ ರಸ್ತೆಯಲ್ಲಿ ಪಾದಚಾರಿಗಳಿಗೆಂದು ಈವರೆಗೂ ಮಾರ್ಗವನ್ನು ಗುರುತಿಸಿಲ್ಲ. ಇದ್ದ ಒಂದು ಮುಖ್ಯ ರಸ್ತೆಯನ್ನು ಇಬ್ಭಾಗ ಮಾಡಿ ದ್ವಿಮುಖ ರಸ್ತೆಯನ್ನಾಗಿ ಪರಿವರ್ತಿಸಲಾಯಿತು.

ಒಂದೇ ರಸ್ತೆ ಇದ್ದಾಗ ಎರಡೂ ಬದಿಯಲ್ಲಿ ಪಾದಚಾರಿಗಳು ಓಡಾಡಲು ಸಂಚಾರ ಸುಗಮವಾಗಿತ್ತು. ಆದರೆ ದ್ವಿಮುಖ ರಸ್ತೆ ಮಾಡಿದ ನಂತರ ಪಾದಚಾರಿಗಳು ಸಂಚರಿಸಲು ಪ್ರತ್ಯೇಕ ಫುಟ್‍ಪಾತ್ ಇಲ್ಲದೇ ನಿತ್ಯ ಭಯದಿಂದ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ರಸ್ತೆಯಂಚಿನಲ್ಲಿ ಅಂಗಡಿ ಮುಂಗಟ್ಟುಗಳು ರಸ್ತೆಗೆ ಬಾಗಿಕೊಂಡಿರುವುದರಿಂದ ಪಾದಚಾರಿಗಳು ಓಡಾಡಲು ಹರಸಾಹಸ ಪಡಬೇಕಾಗಿದೆ. ಯಾವುದೇ ಸೂಚನಾ ಫಲಕವಿಲ್ಲದೆ ಆಗಾಗ ವಾಹನಗಳು ವಿಭಜಕಗಳಿಗೆ ಡಿಕ್ಕಿ ಹೊಡೆದು ಅಪಘಾತಗಳು ಸಂಭವಿಸುತ್ತಿವೆ. ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದರಿಂದ ರಸ್ತೆಯಂಚಿನಲ್ಲಿ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಓಡಾಡಲು ತೊಂದರೆಯಾಗಿದೆ.

ಚನ್ನರಾಯಪಟ್ಟಣದಲ್ಲಿ ಹಲವು ಕಡೆ ಪಾದಚಾರಿಗಳ ಮಾರ್ಗದಲ್ಲಿ ರಸ್ತೆ ಬದಿ ವ್ಯಾಪಾರ ಮಾಡಲಾಗುತ್ತಿದೆ. ವಾಣಿಜ್ಯ ಮಳಿಗೆಯವರು ರಸ್ತೆಯಲ್ಲಿ ನಾಮಫಲಕದ ಇಡುತ್ತಿರುವುದರಿಂದ ವಾಹನಗಳ ನಿಲುಗಡೆಗೆ ಹಾಗೂ ಪಾದಚಾರಿಗಳಿಗೆ ತೊಂದರೆಯಾಗಿದೆ. ಅಪಘಾತಕ್ಕೂ ಎಡೆಮಾಡಿಕೊಟ್ಟಿದೆ.

ಈ ಹಿಂದೆ ಪುರಸಭೆ ವತಿಯಿಂದ ವ್ಯಾಪಾರಿಗಳ ಸಭೆ ಕರೆದು ಚರ್ಚಿಸಲಾಗಿತ್ತು. ಆದರೂ ಸಮಸ್ಯೆ ಬಗೆಹರಿದಿಲ್ಲ. ರಸ್ತೆಯ ಅಂಚಿನಲ್ಲಿ ಮಾರ್ಕಿಂಗ್ ಮಾಡಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಅದು ಕೆಲದಿನಗಳಿಗೆ ಮಾತ್ರ ಜಾರಿಯಲ್ಲಿತ್ತು.  ಪಾದಚಾರಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಮೂಲಕ ಅವರ ಹಕ್ಕನ್ನು ಕಾಪಾಡಬೇಕಿದೆ ಎನ್ನುತ್ತಾರೆ ಜನತೆ.

ಪ್ರವಾಸಿ ತಾಣದಲ್ಲೂ ಅತಿಕ್ರಮಣ

ಪ್ರವಾಸಿ ತಾಣವಾಗಿರುವ ಹಳೇಬೀಡಿನಲ್ಲಿ ಸುರಕ್ಷಿತವಾದ ಪಾದಚಾರಿ ಮಾರ್ಗವೇ ಇಲ್ಲ. ಹೊಯ್ಸಳ ದೇವಾಲಯ ರಸ್ತೆಯಲ್ಲಿ ಚರಂಡಿಗಳ ಮೇಲೆ ಮುಚ್ಚಿರುವ ಚಪ್ಪಡಿ ಕಲ್ಲುಗಳು ಹಲವು ಕಡೆ ಅಸ್ತವ್ಯಸ್ತವಾಗಿವೆ. ಕೆಲವು ಸ್ಥಳದಲ್ಲಿ ಚರಂಡಿ ತೆರೆದ ಸ್ಥಿತಿಯಲ್ಲಿದ್ದು ಪಾದಚಾರಿಗಳ ಓಡಾಟಕ್ಕೆ ತೊಡಕಾಗಿದೆ. ಸೆಸ್ಕ್ ಕಚೇರಿ ಬಳಿ ಚರಂಡಿಗಳ ಮೇಲೆ ಗೂಡಂಗಡಿಗಳನ್ನು ಜೋಡಿಸಲಾಗಿದೆ. ಈ ಸ್ಥಳದಲ್ಲಿ ಪಾದಚಾರಿಗಳು ರಸ್ತೆಯಲ್ಲಿ ಓಡಾಡಬೇಕಾಗಿದೆ.

ಹೊಯ್ಸಳ ವೃತ್ತದ ಬಳಿ ಹಣ್ಣು ಹೂವಿನ ಅಂಗಡಿಗಳು ರಸ್ತೆಗೆ ಚಾಚಿದ್ದು ಪಾದಚಾರಿ ಮಾರ್ಗ ಮುಚ್ಚಿಹೋಗಿದೆ. ಹಲವು ಕಡೆ ತರಕಾರಿ ಹಣ್ಣಿನ ಅಂಗಡಿಗಳು ರಸ್ತೆಗೆ ಚಾಚುತ್ತಿವೆ. ಪ್ರವಾಸಿ ತಾಣದಲ್ಲಿ ಪಾದಚಾರಿಗಳಿಗೆ ಸುರಕ್ಷತೆಯೇ ಇಲ್ಲದಂತಾಗಿದೆ. ಶ್ರವಣಬೆಳಗೊಳ ಕಿರಿದಾದ ರಸ್ತೆಗಳಿಂದ ಕೂಡಿದ್ದು ವಾಹನ ದಟ್ಟಣೆಯಿಂದ ಪಾದಚಾರಿಗಳಿಗೆ ಮಾರ್ಗವಿಲ್ಲದೇ ಅಸುರಕ್ಷತೆಯಿಂದ ನಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಚಂದ್ರಗಿರಿ ಕಲ್ಯಾಣಿ ಬೆಂಗಳೂರು ಮೈಸೂರು ರಸ್ತೆಗಳ ಬದಿಯಲ್ಲಿ ಎಗ್ಗಿಲ್ಲದೇ ವಾಹನಗಳು ಆಟಿಕೆಗಳ ಅಂಗಡಿಗಳು ಪಾನಿಪೂರಿ ಕಬ್ಬಿನ ಜ್ಯೂಸ್ ಗೋಬಿಮಂಚೂರಿ ಅಂಗಡಿಗಳು ಒಂದೆಡೆಯಾದರೆ ತರಕಾರಿ ಮಾರಿಕಟ್ಟೆಯಂತೂ ನಗರ ಸೌಂದರ್ಯವನ್ನು ಹಾಳು ಮಾಡುವಂತಿದೆ ಎಂದು ನಾಗರಿಕರು ನಿತ್ಯ ದೂರುತ್ತಾರೆ.

ವಾಹನಗಳ ಪಾರ್ಕಿಂಗ್‌ ಗುತ್ತಿಗೆ ನೀಡುವುದರಿಂದ ಪಂಚಾಯಿತಿಗೆ ವಾರ್ಷಿಕ ₹ 10 ಲಕ್ಷಕ್ಕಿಂತಲೂ ಹೆಚ್ಚಿನ ಆದಾಯ ಬರುತ್ತಿದೆ.  ಆದರೆ ಪಾರ್ಕಿಂಗ್ ವ್ಯವಸ್ಥೆ ಇಲ್ಲದೇ ಪಟ್ಟಣದಲ್ಲಿಯೇ ಎಲ್ಲೆಂದರಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲಿಸುವ ಪರಿಪಾಟದಿಂದ ತೊಂದರೆ ಅನುಭವಿಸುತ್ತಿದ್ದೇವೆ ಎನ್ನುತ್ತಾರೆ ಮೈಸೂರು ರಸ್ತೆಯ ನಿವಾಸಿ ಸುನೀಲ್ ಪ್ರಜ್ವಲ್ ಅಡೆತಡೆಯ ಬಗ್ಗೆ ಎಸ್‌ಡಿಜೆಎಂಐ ಆಡಳಿತ ಮಂಡಳಿಯಿಂದ ದೂರು ಬಂದಿದ್ದು ಮಾರುಕಟ್ಟೆ ತೆರವುಗೊಳಿಸುವ ಬಗ್ಗೆ ಕ್ರಮ ಜರುಗಿಸುವುದಾಗಿ ಪಿಡಿಒ ಬಾಬು ಹೇಳಿದ್ದಾರೆ.

ಹಾಸನದಲ್ಲಿ ಫುಟ್‌ಪಾತ್ ಅತಿಕ್ರಮಣ ಸಂಬಂಧ ವ್ಯಾಪಕವಾಗಿ ದೂರು ಕೇಳಿ ಬಂದಿದ್ದು ಪ್ರತಿದಿನ ಒಂದೊಂದು ರಸ್ತೆಯಲ್ಲಿ ಅತಿಕ್ರಮಣ ತೆರವು ಕಾರ್ಯಾಚರಣೆಯನ್ನು ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗುವುದು.
ಸತೀಶ್, ಹಾಸನ ನಗರಸಭೆ ಆಯುಕ್ತ
ನಗರದ ಫುಡ್‌ಕೋರ್ಟ್ ಎದುರಿನ ರಸ್ತೆಗಳಲ್ಲಿ ಬೇಕಾಬಿಟ್ಟಿ ವಾಹನ ನಿಲುಗಡೆಯಾಗುತ್ತಿದ್ದು ಈ ಸಂಬಂಧ ಅಗತ್ಯ ಸೂಚನೆ ನೀಡಲು ಫುಡ್‌ಕೋರ್ಟ್‌ನಲ್ಲಿ ಅಂಗಡಿಗಳನ್ನು ಇಟ್ಟಿರುವ ಮಾಲೀಕರ ಸಭೆ ಕರೆಯಲಾಗಿದೆ.
ಮೋಹನ್, ಹಾಸನ ನಗರಸಭೆ ಅಧ್ಯಕ್ಷ
ರಸ್ತೆಯಲ್ಲೇ ಮಕ್ಕಳ ಓಡಾಟ ನಿತ್ಯ ನಮ್ಮ ಮಕ್ಕಳು ಸರ್ವಿಸ್ ರಸ್ತೆಯಲ್ಲಿ ನಡೆದುಕೊಂಡು ಶಾಲೆಗೆ ನಡೆದು ಹೋಗಬೇಕು. ಪಾದಚಾರಿ ಮಾರ್ಗವೂ ಇಲ್ಲ. ಚರಂಡಿ ಸ್ಲ್ಯಾಬ್ ಮುರಿದು ರಸ್ತೆಯಲ್ಲಿ ಹೋಗಬೇಕಿದೆ.
ಲೋಕೇಶ್ ಹಿರೀಸಾವೆ
ಪಾದಚಾರಿ ಮಾರ್ಗ ನಿರ್ಮಾಣ ಗ್ರಾಮ ಪಂಚಾಯಿತಿಗೆ ಬರುವುದಿಲ್ಲ. ಬೇಲೂರು– ಬಾಣಾವರ ರಸ್ತೆ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಸೇರಿದ್ದರೆ ಹೊಯ್ಸಳೇಶ್ವರ ದೇವಾಲಯ ರಸ್ತೆ ಲೋಕೋಪಯೋಗಿ ಇಲಾಖೆಗೆ ಸೇರಿದೆ. ಸಂಬಂಧಿಸಿದ ಇಲಾಖೆಗಳು ಪಾದಚಾರಿ ಮಾರ್ಗ ನಿರ್ಮಿಸಿ ಜನರ ಓಡಾಟಕ್ಕೆ ಅನುಕೂಲ ಮಾಡುವುದರ ಜೊತೆಗೆ ಅಂದ ಹೆಚ್ಚಿಸಬೇಕಾಗಿದೆ.
ಎಚ್.ಬಿ.ಚಂದ್ರಶೇಖರ್, ಹಳೇಬೀಡು ಗ್ರಾ.ಪಂ. ಸದಸ್ಯ
ಮುಖ್ಯ ರಸ್ತೆಯ ಎರಡು ಬದಿಗಳಲ್ಲಿ ಹಾಕಲಾಗಿದ್ದ ಅಂಗಡಿಗಳನ್ನು ಭಾಗಶಃ ತೆರವುಗೊಳಿಸಲಾಗಿದ್ದು ಪಾದಚಾರಿ ಮಾರ್ಗದಲ್ಲಿ ವ್ಯಾಪಾರ ನಡೆಸುತ್ತಿರುವ ಅಂಗಡಿಗಳ ಮಾಲೀಕರಿಗೆ ಸೂಚನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಅವುಗಳನ್ನು ತೆರವುಗೊಳಿಸಿ ಪಾದಚಾರಿ ಮಾರ್ಗದಲ್ಲಿ ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಮಾಡಿಕೊಡಲಾಗುವುದು.
ರವಿ ಜಾವಗಲ್, ಪಿಡಿಒ
ಅರಕಲಗೂಡಿನಲ್ಲಿ ಪಾದಚಾರಿ ಮಾರ್ಗದ ಅವ್ಯವಸ್ಥೆಯಿಂದ ಜನರ ಓಡಾಟಕ್ಕೆ ತೊಂದರೆಯಾಗಿದೆ. ಈ ಕುರಿತು ಮುಂದಿನ ಸಭೆಯಲ್ಲಿ ಚರ್ಚಿಸಿ ಪರಿಹಾರ ರೂಪಿಸಲು ಪ್ರಯತ್ನಿಸುತ್ತೇನೆ.
ಎಚ್.ಎಸ್.ರಶ್ಮಿ ಮಂಜು. ಅರಕಲಗೂಡು ಪ.ಪಂ. ಸದಸ್ಯೆ
ನಾನು ಇದೀಗ ತಾನೆ ಮುಖ್ಯಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದು ಪಾದಚಾರಿ ರಸ್ತೆ ಸಮಸ್ಯೆ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ.
ಬಸವರಾಜ್ ಟಾಕಪ್ಪ ಶಿಗ್ಗಾಂವಿ, ಅರಕಲಗೂಡು ಪ.ಪಂ ಮುಖ್ಯಾಧಿಕಾರಿ
ಸರ್ವಿಸ್‌ ರಸ್ತೆ ಮೇಲೆ ಅಂಗಡಿಗಳನ್ನು ಹಾಕಿಕೊಂಡಿದ್ದಾರೆ. ಆಡಳಿತ ಮಂಡಳಿ ರಚನೆಯಾದ ನಂತರ ತೆರವುಗೊಳಿಸಲು ಕ್ರಮ ಕೈಗೊಂಡು ಓಡಾಡುವವರಿಗೆ ಅನುಕೂಲ ಮಾಡಿಕೊಡಲಾಗುತ್ತದೆ.
ರಾಜೇಶ್ ಕೋಟ್ಯಾನ್, ಆಲೂರು ಪ.ಪಂ. ಮುಖ್ಯಾಧಿಕಾರಿ
ಪಟ್ಟಣದಲ್ಲಿ ಅನೇಕ ವರ್ಷಗಳ ಹಿಂದೆ ರಸ್ತೆ ವಿಸ್ತಾರ ಮಾಡಲಾಯಿತಾದರೂ ಪಾದಚಾರಿಗಳ ಸುಗಮ ಸಂಚಾರ ಸಾದ್ಯವಾಗಿಲ್ಲ. ವಾಹನಗಳ ನಿಲುಗಡೆ ಮತ್ತು  ಪಾದಚಾರಿಗಳ ಸಂಚಾರಕ್ಕೆ ತೊಂದರೆ ಆಗದಂತೆ ರಸ್ತೆ ಬದಿ ವ್ಯಾಪಾರಕ್ಕೆ ಅವಕಾಶ ಒದಗಿಸಬೇಕು.
ಸಿ.ಜಿ.ರವಿ, ರೈತಸಂಘದ ಮುಖಂಡ, ಚನ್ನರಾಯಪಟ್ಟಣ
ಪಟ್ಟಣದಲ್ಲಿ ವಾಹನಗಳ ಸುಗಮ ಸಂಚಾರ ಮತ್ತು ಪಾದಚಾರಿಗಳ ಹಿತದೃಷ್ಟಿಯಿಂದ ರಸ್ತೆಯಲ್ಲಿ ಮಾರ್ಕಿಂಗ್ ಮಾಡಿ ರಸ್ತೆಯ ಅಂಚಿನಲ್ಲಿ ವ್ಯಾಪಾರ ಮಾಡುವಂತೆ ಕ್ರಮ ತೆಗೆದುಕೊಳ್ಳಲಾಗುವುದು.
ಕೆ.ಎನ್. ಹೇಮಂತ್, ಪುರಸಭೆಯ ಮುಖ್ಯಾಧಿಕಾರಿ, ಚನ್ನರಾಯಪಟ್ಟಣ

ನಿರ್ವಹಣೆ: ಚಿದಂಬರಪ್ರಸಾದ, ಪೂರಕ ಮಾಹಿತಿ: ಸಿ.ಬಿ. ಸಂತೋಷ್‌, ಜಿ.ಚಂದ್ರಶೇಖರ್‌, ಸಿದ್ದರಾಜು, ಹಿ.ಕೃ. ಚಂದ್ರು, ಎಂ.ಪಿ. ಹರೀಶ್‌, ಎಚ್.ಎಸ್‌. ಅನಿಲ್‌ಕುಮಾರ್‌, ದೀಪಕ್‌ ಶೆಟ್ಟಿ, ಬಿ.ಪಿ.ಜಯಕುಮಾರ್‌.

ಹಾಸನದ ಮುಖ್ಯ ರಸ್ತೆಯಲ್ಲಿ ವಾಹನಗಳ ನಿಲುಗಡೆ ಮಾಡಿರುವುದು
ಹಾಸನದ ಮುಖ್ಯ ರಸ್ತೆಯಲ್ಲಿ ವಾಹನಗಳ ನಿಲುಗಡೆ ಮಾಡಿರುವುದು
ಹಿರೀಸಾವೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 75ರ ಸರ್ವಿಸ್ ರಸ್ತೆ ಪಕ್ಕದ ಚರಂಡಿ ಸ್ಲ್ಯಾಬ್ ಮುರಿದಿದೆ
ಹಿರೀಸಾವೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 75ರ ಸರ್ವಿಸ್ ರಸ್ತೆ ಪಕ್ಕದ ಚರಂಡಿ ಸ್ಲ್ಯಾಬ್ ಮುರಿದಿದೆ
ಆಲೂರು ಮುಖ್ಯ ರಸ್ತೆಯಂಚಿನಲ್ಲಿ ಪಾದಚಾರಿಗಳ ಸಂಚಾರಕ್ಕೆ ವಾಹನಗಳ ನಿಲುಗಡೆ ಅಡ್ಡಿಯಾಗಿದೆ
ಆಲೂರು ಮುಖ್ಯ ರಸ್ತೆಯಂಚಿನಲ್ಲಿ ಪಾದಚಾರಿಗಳ ಸಂಚಾರಕ್ಕೆ ವಾಹನಗಳ ನಿಲುಗಡೆ ಅಡ್ಡಿಯಾಗಿದೆ
ಹಳೇಬೀಡಿನ ಹೊಯ್ಸಳ ವೃತ್ತದ ಬಳಿ ರಸ್ತೆಗೆ ಚಾಚುತ್ತಿರುವ ಅಂಗಡಿಗಳು
ಹಳೇಬೀಡಿನ ಹೊಯ್ಸಳ ವೃತ್ತದ ಬಳಿ ರಸ್ತೆಗೆ ಚಾಚುತ್ತಿರುವ ಅಂಗಡಿಗಳು
ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯ ರಸ್ತೆಯಲ್ಲಿ ಪಾದಚಾರಿ ಮಾರ್ಗದಲ್ಲಿರುವ ಗೂಡಂಗಡಿಗಳು
ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯ ರಸ್ತೆಯಲ್ಲಿ ಪಾದಚಾರಿ ಮಾರ್ಗದಲ್ಲಿರುವ ಗೂಡಂಗಡಿಗಳು
ಜಾವಗಲ್‌ನ ರಸ್ತೆ ಬದಿಗಳಲ್ಲಿ ವಾಹನ ನಿಲ್ಲಿಸಿರುವುದರಿಂದ ವಿದ್ಯಾರ್ಥಿಗಳು ರಸ್ತೆಯ ಮೇಲೆ ನಡೆಯುವಂತಾಗಿದೆ
ಜಾವಗಲ್‌ನ ರಸ್ತೆ ಬದಿಗಳಲ್ಲಿ ವಾಹನ ನಿಲ್ಲಿಸಿರುವುದರಿಂದ ವಿದ್ಯಾರ್ಥಿಗಳು ರಸ್ತೆಯ ಮೇಲೆ ನಡೆಯುವಂತಾಗಿದೆ
ಅರಕಲಗೂಡು ಬಸ್ ನಿಲ್ದಾಣದ ಮುಖ್ಯ ರಸ್ತೆಯಲ್ಲಿನ ಪಾದಚಾರಿ ರಸ್ತೆಯ ದುಸ್ಥಿತಿ
ಅರಕಲಗೂಡು ಬಸ್ ನಿಲ್ದಾಣದ ಮುಖ್ಯ ರಸ್ತೆಯಲ್ಲಿನ ಪಾದಚಾರಿ ರಸ್ತೆಯ ದುಸ್ಥಿತಿ
ಶ್ರವಣಬೆಳಗೊಳದ ಮುಖ್ಯರಸ್ತೆಯಲ್ಲಿ ರಸ್ತೆಗಳಲ್ಲಿಯೇ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿರುವುದು
ಶ್ರವಣಬೆಳಗೊಳದ ಮುಖ್ಯರಸ್ತೆಯಲ್ಲಿ ರಸ್ತೆಗಳಲ್ಲಿಯೇ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT