ಶುಕ್ರವಾರ, ಏಪ್ರಿಲ್ 10, 2020
19 °C
ಹಣದ ಆಸೆಗಾಗಿ ಪ್ರೀ ವೆಡ್ಡಿಂಗ್‌ ಶೂಟ್‌ ನೆಪದಲ್ಲಿ ದರೋಡೆ

ನಾಲ್ವರ ಬಂಧನ, ಕ್ಯಾಮೆರಾ, ಕಾರು ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ : ಪ್ರೀ ವೆಡ್ಡಿಂಗ್‌ ಫೋಟೊ ಶೂಟ್‌ (ಮದುವೆಗೂ ಮೊದಲು) ಗಾಗಿ ಕರೆಸಿಕೊಂಡು ಇಬ್ಬರು ಕ್ಯಾಮೆರಾಮನ್‌ ಗಳ ಮೇಲೆ ಹಲ್ಲೆ ನಡೆಸಿ, ಕ್ಯಾಮೆರಾ, ಆಭರಣ ದೋಚಿ ಪರಾರಿಯಾಗಿದ್ದ ಪ್ರಕರಣ ಬೇಧಿಸಿರುವ ಹಾಸನ ನಗರ ಪೊಲೀಸರು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಮಲ್ಲಿಕಾರ್ಜುನ, ಆನಂದ್‌, ದಶರಥ ಕುಮಾರ್ ಹಾಗೂ ಕೋಲಾರ ಜಿಲ್ಲೆಯ ಬಾಬು ಕುಮಾರ್‌ ಅವರನ್ನು ಬಂಧಿಸಿ, ₹ 6.50 ಲಕ್ಷ ಮೌಲ್ಯದ ಡ್ರೋಣ್‌ ಕ್ಯಾಮೆರಾ , ಮೊಬೈಲ್, ಮಾರುತಿ ಕಾರು ಹಾಗೂ ಡ್ಯಾಗರ್‌ ವಶ ಪಡಿಸಿಕೊಳ್ಳಲಾಗಿದೆ ಎಂದು ಮಂಗಳವಾರ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಶ್ರೀನಿವಾಸ್‌ಗೌಡ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ರಚಿಸಲಾಗಿದ್ದ ಡಿವೈಎಸ್‌ಪಿ ಪುಟ್ಟಸ್ವಾಮಿಗೌಡ ನೇತೃತ್ವದ ವಿಶೇಷ ತಂಡ ಬೆಂಗಳೂರು, ಕೃಷ್ಣಗಿರಿ, ಮದನ್‌ಪಲ್ಲಿ, ಹೈದರಾಬಾದ್‌, ಹೊಸಕೋಟೆಯಲ್ಲಿ ಖಚಿತ ಮಾಹಿತಿ ಸಂಗ್ರಹಿಸಿ, ಬೆಂಗಳೂರಿನ ಇಂದಿರಾನಗರದಲ್ಲಿ ಆರೋಪಿಗಳನ್ನು ವಶಕ್ಕೆ ಪಡೆಯಿತು. ಹಣದ ಆಸೆಗಾಗಿ ಕೃತ್ಯವೆಸಗಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ವಿವರಿಸಿದರು.

ಪ್ರಕರಣದ ಪ್ರಮುಖ ಸೂತ್ರಧಾರ ಫೋಟೋಗ್ರಾಫರ್‌ ಛಲಪತಿ ತಲೆ ಮರೆಸಿಕೊಂಡಿದ್ದು, ಆತನ ಶೋಧ ಕಾರ್ಯ ಮುಂದುವರೆದಿದೆ. ಈತನೇ ದರೋಡೆಯ ರೂಪುರೇಷೆ ಸಿದ್ಧಪಡಿಸಿದ್ದ ಎಂದರು.

ಆರೋಪಿಗಳು ಜಸ್ಟ್‌ ಡಯಲ್‌ ಮೂಲಕ ಪ್ರೀ ವೆಡ್ಡಿಂಗ್‌ ಶೂಟ್‌ಗೆ ಬುಕ್‌ ಮಾಡಿದ್ದರು. ಫೆ. 15ರಂದು ನಾಲ್ಕು ಮಂದಿಯ ತಂಡ ಬೆಳಿಗ್ಗೆ 5 ಗಂಟೆಗೆ ಕಾರಿನಲ್ಲಿ ಸ್ಟೊಡಿಯೋ ಬಳಿ ಬಂದು ಉಮೇಶ್ ಮತ್ತು ವಿಕ್ಕಿ ಅವರನ್ನು ಹತ್ತಿಸಿಕೊಂಡು, ಹುಡುಗ, ಹುಡುಗಿ ನೇರವಾಗಿ ಶೆಟ್ಟಿಹಳ್ಳಿ ಚರ್ಚ್ ಗೆ ಬರುತ್ತಾರೆ ಎಂದು ಕರೆದುಕೊಂಡು ಹೊರಟಿದ್ದಾರೆ. ಹಾಸನ ತಾಲ್ಲೂಕಿನ ಶಂಕರನಹಳ್ಳಿ ಸಮೀಪ ಕಾರು ನಿಲ್ಲಿಸಿ, ಇಬ್ಬರು ಕ್ಯಾಮೆರಾಮನ್‌ಗಳನ್ನು ಕೆಳಗೆ ಇಳಿಸಿ ಖಾರದ ಪುಡಿ ಎರಚಿ, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಅವರ ಬಳಿ ಇದ್ದ ಏಳು ಲಕ್ಷ ರೂಪಾಯಿ ಮೌಲ್ಯದ ಡ್ರೋಣ್, ವಿಡಿಯೊ ಕ್ಯಾಮೆರಾ, ಮೊಬೈಲ್‌, ಚಿನ್ನದ ಉಂಗುರ ಕಿತ್ತುಕೊಂಡು ಪರಾರಿಯಾಗಿದ್ದರು ಎಂದು ವಿವರಿಸಿದರು.

ಬಂಧಿತರು ಜಸ್ಟ್ ಡಯಲ್ ಮೂಲಕ ಮೈಸೂರು ಸೇರಿದಂತೆ ರಾಜ್ಯದ ಹಲವೆಡೆ ಪ್ರಿ ವೆಡ್ಡಿಂಗ್ ಫೋಟೊ ಶೂಟ್‌ಗೆ ಬುಕ್‌ ಮಾಡಿ, ಹಣ, ಆಭರಣ ದೋಚಿರುವುದು ಗೊತ್ತಾಗಿದೆ. ಇವರ ವಿರುದ್ಧ ಹಲವು ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ ಎಂದರು.

ಆರೋಪಿ ಪತ್ತೆ ಕಾರ್ಯದಲ್ಲಿ ಹಾಸನ ಗ್ರಾಮಾಂತರ ವೃತ್ತ ನಿರೀಕ್ಷಕ ಸತ್ಯನಾರಾಯಣ, ಗೊರೂರು ಪೊಲೀಸ್ ಠಾಣೆ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಜಗದೀಶ್, ಕಾನ್‌ಸ್ಟೆಬಲ್‌ಗಳಾದ ಮಂಜುನಾಥ್‌, ಸುಬ್ರಹ್ಮಣ್ಯ, ಜಗದೀಶ್‌ ಶ್ರಮಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು