ಬುಧವಾರ, ಜೂಲೈ 8, 2020
28 °C
₹ 1.25 ಕೋಟಿ ದುರ್ಬಳಕೆ ಆರೋಪ: ಏಳು ಮಂದಿ ವಿರುದ್ಧ ಎಫ್‌ಐಆರ್‌

ಹಾಸನ ಕೆಎಸ್ಆರ್‌ಪಿ ಕಚೇರಿಯಲ್ಲಿ ಅವ್ಯವಹಾರ: ತನಿಖೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಸಿಬ್ಬಂದಿಯ ವೇತನ ಮತ್ತು ಭತ್ಯೆಗೆ ಜಮೆಯಾಗಬೇಕಿದ್ದ ₹ 1.25 ಕೋಟಿ ದುರ್ಬಳಕೆಯಾಗಿದೆ ಎಂದು ಲೆಕ್ಕ‍ಪರಿಶೋಧನಾಧಿಕಾರಿಗಳು ನೀಡಿದ ವರದಿಯ ಮೇರೆಗೆ, ಇಲ್ಲಿನ ಕೆಎಸ್‌ಆರ್‌ಪಿ ಕಮಾಂಡೆಂಟ್‌ ಸೇರಿದಂತೆ ಕಚೇರಿಯ ಏಳು ಸಿಬ್ಬಂದಿಯ ವಿರುದ್ಧ ಶಾಂತಿಗ್ರಾಮ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದೆ.

ಕೆಎಸ್‌ಆರ್‌ಪಿ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರ ಕಚೇರಿಯ ಸಹಾಯಕ ಆಡಳಿತಾಧಿಕಾರಿ ಜೆ.ಆರ್‌. ಸುಮಾ ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಲಾಗಿದ್ದು, ಗ್ರಾಮಾಂತರ ಸಿಪಿಐ ಸತ್ಯನಾರಾಯಣ ತನಿಖೆ ಆರಂಭಿಸಿದ್ದಾರೆ.

11ನೇ ಕೆಎಸ್‌ಆರ್‌ಪಿ ಘಟಕದ ವೇತನ ಶಾಖೆಯಲ್ಲಿ 2015–2016 ಅವಧಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ದ್ವಿತೀಯ ದರ್ಜೆ ಸಹಾಯಕರಾದ ವೈ.ಕೆ.ಯೋಗೀಶ್‌, ಲತಾಮಣಿ, ಕಂಪ್ಯೂಟರ್ ಸಹಾಯಕ ವೈ.ಎಚ್.ಮನು, ವೈ.ಸತ್ಯಪ್ರಕಾಶ್‌, ಶಾಖಾ ಅಧೀಕ್ಷಕ ಚಂದ್ರು (ಪ್ರಸ್ತುತ ಸಹಾಯಕ ಆಡಳಿತಾಧಿಕಾರಿ ಡಿಪಿಒ) ಕಮಾಂಡೆಂಟ್‌ ಕೃಷ್ಣಪ್ಪ ಹಾಗೂ ನಿವೃತ್ತ ಸಹಾಯಕ ಆಡಳಿತಾಧಿಕಾರಿ ಮಾದೇಗೌಡ ಅವರು ಕಚೇರಿಯಲ್ಲಿನ ಸಿಬ್ಬಂದಿ, ಪೊಲೀಸರ ಉಳಿತಾಯ ಹಾಗೂ ಭತ್ಯೆಯ ಹಣವನ್ನು ಸರಿಯಾಗಿ ಅವರ ಖಾತೆಗಳಿಗೆ ಸಂದಾಯ ಮಾಡಿಲ್ಲ. ದಾಖಲೆ ತಿದ್ದಿ, ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಕ್ಕೆ ಮೋಸ ಮಾಡಿದ್ದಾಗಿ ದೂರು ನೀಡಲಾಗಿದೆ.

‘ತನಿಖೆ ನಡೆಸಲು ಪತ್ರ ಬರೆದಿದ್ದೇ ನಾನು’

‘ಕೆಎಸ್‌ಆರ್‌ಪಿ ಕಚೇರಿಯಲ್ಲಿ ಹಣ ದುರುಪಯೋಗ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಲೆಕ್ಕ ಪರಿಶೋಧನೆ ನಡೆಸುವಂತೆ ಕೋರಿ ಮೇಲಾಧಿಕಾರಿಗಳಿಗೆ ಪತ್ರ ಬರೆದ್ದಿದ್ದೇ ನಾನು. ಆದರೆ, ಎಫ್‌ಐಆರ್‌ನಲ್ಲಿ ನನ್ನ ಹೆಸರು ಇರುವುದು ಆಶ್ಚರ್ಯವಾಗಿದೆ’ ಎಂದು ಕೆಎಸ್‌ಆರ್‌ಪಿ ಕಮಾಂಡೆಂಟ್‌ ಕೃಷ್ಣಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ನಿವೃತ್ತಿಗೆ ಹತ್ತು ತಿಂಗಳಿದೆ. ಇದರ ಹಿಂದೆ ಯಾರದೋ ಕೈವಾಡ ಇರಬಹುದು. 9 ಜನ ಲೆಕ್ಕಪರಿಶೋಧಕರು 20 ದಿನ ಕಚೇರಿಯಲ್ಲಿ ಎಲ್ಲ ದಾಖಲೆ ಪರಿಶೀಲಿಸಿದರು. ವೇತನ ಹಾಗೂ ಭತ್ಯೆ ಸಂದಾಯದ ಬಿಲ್‌ಗಳು ನನ್ನ ಗಮನಕ್ಕೆ ಬರುವುದಿಲ್ಲ. ಹಾಗಾಗಿ ಸಮಗ್ರ ತನಿಖೆ ನಡೆಸಿ ನ್ಯಾಯ ದೊರಕಿಸಿಕೊಡುವಂತೆ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ ಪ್ರವೀಣ್‌ ಸೂದ್‌ ಅವರಿಗೆ ಪತ್ರ ಬರೆಯುತ್ತೇನೆ. ಕಂಪ್ಯೂಟರ್‌ ಪರಿಣತಿ ಹೊಂದಿದವರು ಹ್ಯಾಕ್‌ ಮಾಡಿ, ಈ ರೀತಿ ಹಣ ಲಪಾಟಿಯಿಸಿರುವ ಸಾಧ್ಯತೆ ಇದೆ. ಸಿಸ್ಟಂ ಆಡ್ಮಿನ್‌ ಆಗಿದ್ದ ಮನು ಎಂಬಾತ ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ರಾಜೀನಾಮೆ ನೀಡಿದ’ ಎಂದು ತಿಳಿಸಿದರು.

ಹಾಸನ ಕೆಎಸ್‌ಆರ್‌ಪಿಯಲ್ಲಿ ನಡೆದಿರುವ ₹ 1.25 ಕೋಟಿ ಅಕ್ರಮ ಅಕ್ರಮ ಕುರಿತು ಸಿಎಜಿ ಆಕ್ಷೇಪ ವ್ಯಕ್ತಪಡಿಸಿತ್ತು. ಹೀಗಾಗಿ ತನಿಖೆಯ ಹೊಣೆಯನ್ನು ಸಿಐಡಿಗೆ ವಹಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು