ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನರಾಯಪಟ್ಟಣ: ನಕಲಿ ಚಿನ್ನದ ಕಾಸು ನೀಡಿ ₹6 ಲಕ್ಷ ವಂಚನೆ

Published 28 ಜೂನ್ 2023, 14:40 IST
Last Updated 28 ಜೂನ್ 2023, 14:40 IST
ಅಕ್ಷರ ಗಾತ್ರ

ಚನ್ನರಾಯಪಟ್ಟಣ: ಮಗಳ ಮದುವೆ ಮಾಡಲು ಹಣದ ಅವಶ್ಯಕತೆಯಿದೆ ಎಂದು ನಂಬಿಸಿ, 1 ಕೆ.ಜಿ ನಕಲಿ ಚಿನ್ನದ ಕಾಸುಗಳನ್ನು ಕೊಟ್ಟು, ₹ 6 ಲಕ್ಷ ವಂಚನೆ ಮಾಡಲಾಗಿದೆ.

ತಮಿಳುನಾಡು ರಾಜ್ಯದ ಕೂನೂರು ತಾಲ್ಲೂಕಿನ ಮೆಲೂರು ಗ್ರಾಮದ ರೇಣುಕಾದೇವಿ ಮೊಬೈಲ್‌ ಸಂಖ್ಯೆಗೆ ತಿಂಗಳ ಕರೆ ಮಾಡಿದ ಅಪರಿಚಿತ ವ್ಯಕ್ತಿ, ‘ನಮ್ಮ ಬಳಿಯಲ್ಲಿ ಹಳೆಯ ಚಿನ್ನದ ಕಾಸುಗಳಿದ್ದು, ಮಗಳನ್ನು ಮದುವೆ ಮಾಡಬೇಕು. ನಮಗೆ ಹಣದ ಅವಶ್ಯಕತೆ ಇದ್ದು, ಅವುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತೇವೆ. ತೆಗೆದುಕೊಳ್ಳಿ’ ಎಂದು ಹೇಳಿದ್ದ.

1 ಕೆಜಿ ಹಳೆಯ ಚಿನ್ನದ ಕಾಸುಗಳನ್ನು ₹10 ಲಕ್ಷಕ್ಕೆ ವ್ಯಾಪಾರ ಮಾಡಿಕೊಂಡು, ಚನ್ನರಾಯಪಟ್ಟಣಕ್ಕೆ ಬರುವಂತೆ ತಿಳಿಸಿದ್ದರು. ಅದರಂತೆ ಚನ್ನರಾಯಪಟ್ಟಣಕ್ಕೆ ಬಂದ ರೇಣುಕಾದೇವಿ, ಆ ವ್ಯಕ್ತಿಯಿಂದ ಒಂದು ಚಿನ್ನ ಕಾಸು ತೆಗೆದುಕೊಂಡು, ಪರೀಕ್ಷೆ ಮಾಡಿಸಿದ್ದಾರೆ. ಅದು ಅಸಲಿ ಚಿನ್ನವಾಗಿದ್ದರಿಂದ ಮತ್ತೆ ಪತಿ ಚಂದ್ರಕುಮಾರ್ ಹಾಗೂ ಅಮರಾವತಿ ಅವರೊಂದಿಗೆ ಚನ್ನರಾಯಪಟ್ಟಣಕ್ಕೆ ಬಂದ ರೇಣುಕಾದೇವಿ, ಅಪರಿಚಿತ ವ್ಯಕ್ತಿಗೆ ಕರೆ ಮಾಡಿದ್ದಾರೆ. ಬಾಗೂರು ರಸ್ತೆಯ ಬೆಲಸಿಂದ ಬೈಪಾಸ್‍ಗೆ ಬರುವುದಾಗಿ ಆ ವ್ಯಕ್ತಿ ಹೇಳಿದ್ದ.

ಅಲ್ಲಿಗೆ ಹೋದಾಗ ಆಟೊದಲ್ಲಿದ್ದ ಇಬ್ಬರು ಅಪರಿಚಿತರನ್ನು ಚಂದ್ರಕುಮಾರ್‌ ಭೇಟಿಯಾಗಿ, ಅವರಿಗೆ ₹ 6 ಲಕ್ಷ ಕೊಟ್ಟಿದ್ದು, 1 ಕೆ.ಜಿ. ಚಿನ್ನದ ಕಾಸುಗಳು ಇರುವ ಪ್ಲಾಸ್ಟಿಕ್‌ ಬ್ಯಾಗ್‌ ತೆಗೆದುಕೊಂಡಿದ್ದಾರೆ. ನಂತರ ಮೊದಲು ಕೊಟ್ಟ ಚಿನ್ನದ ಕಾಸಿನೊಂದಿಗೆ ತಾಳೆ ಮಾಡಿ ನೋಡಿದಾಗ, ಚಿನ್ನದ ಕಾಸುಗಳು ನಕಲಿಯಾಗಿದ್ದವು. ರೇಣುಕಾದೇವಿ ಅವರು ಚನ್ನರಾಯಪಟ್ಟಣ ನಗರ ಠಾಣೆಗೆ ದೂರು ನೀಡಿದ್ದಾರೆ.

ಏಣಿಯಲ್ಲಿ ವಿದ್ಯುತ್ ಪ್ರವಹಿಸಿ ವೃದ್ಧ ಸಾವು

ಹೆತ್ತೂರು: ಯಸಳೂರು ಹೋಬಳಿಯ ಆದ್ರಹಳ್ಳಿ ಗ್ರಾಮದಲ್ಲಿ ಏಣಿಯನ್ನು ತೆಗೆದುಕೊಂಡು ಹೋಗುವಾಗ ವಿದ್ಯುತ್ ತಂತಿ ತಗುಲಿ ವೃದ್ಧರೊಬ್ಬರು ಮೃತಪಟ್ಟಿದ್ದಾರೆ.

ಗ್ರಾಮದ ಹೂವಯ್ಯ (60) ತಮ್ಮ ತೋಟದಲ್ಲಿ ಮರಗಸಿ ಮಾಡುವಾಗ, ಪಕ್ಕದಲ್ಲಿ ವಿದ್ಯುತ್‌ ತಂತಿ ಜೋತು ಬಿದ್ದಿದ್ದನ್ನು ಗಮನಿಸದೇ, ಏಣಿಯನ್ನು ಎತ್ತಿಕೊಂಡು ಹೋಗುವಾಗ ವಿದ್ಯುತ್ ಪ್ರವಹಿಸಿದೆ. ವಿದ್ಯುತ್‌ ಆಘಾತಕ್ಕೆ ಒಳಗಾಗಿದ್ದ ಹೂವಯ್ಯ ಅವರನ್ನು ಚಿಕಿತ್ಸೆಗಾಗಿ ಹೆತ್ತೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಷ್ಟರಲ್ಲಿಯೇ ಅವರು ಮೃತಪಟ್ಟಿದ್ದರು.

ಈ ಬಗ್ಗೆ ಕೆಪಿಟಿಸಿಎಲ್‌ ಜೂನಿಯರ್ ಎಂಜಿನಿಯರ್ ಮತ್ತು ಲೈನ್‍ಮ್ಯಾನ್‍ಗಳಿಗೆ ತಿಳಿಸಿದ್ದರೂ, ಅಧಿಕಾರಿಗಳು ಸ್ಥಳಕ್ಕೆ ಬಾರದ್ದರಿಂದ ಹೂವಯ್ಯ ಮೃತಪಟ್ಟಿದ್ದಾರೆ. ಕೆಪಿಟಿಸಿಎಲ್‌ ನಿರ್ಲಕ್ಷವೇ ಇದಕ್ಕೆ ಕಾರಣವಾಗಿದ್ದು, ಈ ಬಗ್ಗೆ ಕಾನೂನು ಕ್ರಮ ಜರುಗಿಸುವಂತೆ ಯಸಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

₹ 3 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಚನ್ನರಾಯಪಟ್ಟಣ: ತಾಲ್ಲೂಕಿನ ಗೋವಿಕೆರೆ ಗ್ರಾಮದ ರೈತರೊಬ್ಬರು ತಮ್ಮ ಜಮೀನಿಗೆ ಹೋಗಿ ದನಗಳನ್ನು ಬಿಟ್ಟು ಬರುವಷ್ಟರಲ್ಲಿ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಲಾಗಿದೆ.

ಗ್ರಾಮದ ಕುಪ್ಪೇಗೌಡ ಅವರು, ಪತ್ನಿ ಶಿವಮ್ಮ ಅವರೊಂದಿಗೆ ಜಮೀನಿಗೆ ತೆರಳಿದ್ದು, ದನಗಳನ್ನು ಕಟ್ಟಿಹಾಕಿ ಮಧ್ಯಾಹ್ನ ಮನೆಗೆ ಬಂದಿದ್ದಾರೆ. ಅಷ್ಟರಲ್ಲಿಯೇ ಮನೆಗೆ ಹಾಕಿದ್ದ ಬೀಗವನ್ನು ಒಡೆದು ಹಾಕಿದ್ದು, ಮನೆಯ ಬೀರುವಿನಲ್ಲ ಇಟ್ಟಿದ್ದ ₹ 3 ಲಕ್ಷ ಮೌಲ್ಯದ 60 ಗ್ರಾಂ ಚಿನ್ನಾಭರಣ ಕಳವು ಮಾಡಲಾಗಿದೆ. ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗದು, ಚಿನ್ನಾಭರಣ ಕಳವು

ಚನ್ನರಾಯಪಟ್ಟಣ: ತಾಲ್ಲೂಕಿನ ಚಾಮರಾಜಪುರ ಗ್ರಾಮದ ನಟರಾಜ ಅವರು ಮನೆಗೆ ಬೀಗ ಹಾಕಿಕೊಂಡು ಬಾಗೂರಿಗೆ ಹೋಗಿ ವಾಪಸ್ ಬರುವಷ್ಟರಲ್ಲಿ ಮನೆಯಲ್ಲಿ ಚಿನ್ನಾಭರಣ, ನಗದು ಕಳವು ಮಾಡಲಾಗಿದೆ.

ಮನೆಯ ಬಾಗಿಲನ್ನು ಮುರಿದಿರುವ ಕಳ್ಳರು, ಬೀರುವಿನಲ್ಲಿಟ್ಟಿದ್ದ ₹ 40ಸಾವಿರ ನಗದು ಹಾಗೂ ₹ 44,500 ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದಾರೆ. ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟ್ರ್ಯಾಕ್ಟರ್‌ನಿಂದ ಬಿದ್ದು ವ್ಯಕ್ತಿ ಸಾವು

ಅರಸೀಕೆರೆ: ಗಂಡಸಿ ಹೋಬಳಿಯ ಚಿಕ್ಕಯರಗನಾಳು ಗ್ರಾಮದಲ್ಲಿ ಟ್ರ್ಯಾಕ್ಟರ್‌ನಿಂದ ಬಿದ್ದು, ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಗ್ರಾಮದ ಸೋಮಶೇಖರ (37) ಅವರು, ಗ್ರಾಮದ ಮಂಜೇಗೌಡ ಅವರ ಬಾಬ್ತು ಟ್ರ್ಯಾಕ್ಟರ್‌ನಲ್ಲಿ, ಗ್ರಾಮದ ಸ್ವಾಮಿ ಎಂಬುವವರ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದರು. ಟ್ರ್ಯಾಕ್ಟರ್‌ ಓಡಿಸುತ್ತಿದ್ದ ಸೋಮಶೇಖರ್‌, ಆಯತಪ್ಪಿ ಕೆಳಗೆ ಬಿದ್ದಿದ್ದು, ಕಾಲಿಗೆ ಮತ್ತು ಹಣೆಗೆ ಪೆಟ್ಟಾಗಿತ್ತು. ಹಾಸನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಗಂಡಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

₹2 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಹಳೇಬೀಡು: ಮಾದಿಹಳ್ಳಿ ಹೋಬಳಿಯ ಟಿ.ವಡ್ಡರ ಕಾಲೊನಿಯಲ್ಲಿ ಮನೆಯ ಬಾಗಿಲು ತೆರೆದು, ಬೀರುವಿನಲ್ಲಿಟ್ಟಿದ್ದ ₹2 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ.

ಗ್ರಾಮದ ರಮೇಶ್‌, ಮನೆಗೆ ಬೀಗ ಹಾಕಿಕೊಂಡು ಕೀಯನ್ನು ಬಾತ್ ರೂಂನ ಬಾಗಿಲ ಹತ್ತಿರ ಇಟ್ಟು, ಆಂಧ್ರಕ್ಕೆ ರಾಜ್ಯಕ್ಕೆ ಹೋಗಿದ್ದರು. ವಾಪಸ್‌ ಬಂದು ಬೀಗ ತೆಗೆದು ನೋಡಿದಾಗ, ಯಾರೋ ಕಳ್ಳರು ಬೀರುವಿನಲ್ಲಿಟ್ಟಿದ್ದ ಸುಮಾರು ₹ 2 ಲಕ್ಷ ಬೆಲೆ ಬಾಳುವ 40 ಗ್ರಾಂ ಚಿನ್ನಾಭರಣ ಕಳವು ಮಾಡಲಾಗಿದೆ. ಹಳೇಬೀಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT