ಬುಧವಾರ, ನವೆಂಬರ್ 25, 2020
24 °C
ಕೈಲಾದಷ್ಟು ಸೇವೆ ಮಾಡುವೆ: ದೇವೇಗೌಡ

ಶಕ್ತಿದೇವತೆ ದರ್ಶನ ಪಡೆದ ದೊಡ್ಡಗೌಡರ ಕುಟುಂಬ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಹಾಸನಾಂಬೆ ಉತ್ಸವದ ಎರಡನೇ ದಿನವಾದ ಶುಕ್ರವಾರ ಗಣ್ಯರು ಹಾಗೂ ಜನಪ್ರತಿನಿಧಿಗಳು ಶಕ್ತಿದೇವತೆ ದರ್ಶನ ಪಡೆದರು. ಸಾರ್ವಜನಿಕರಿಗೆ ದರ್ಶನ ಇಲ್ಲದ ಕಾರಣ ದೇಗುಲ ಭಣಗುಡುತ್ತಿದೆ.

ಬೆಳಿಗ್ಗೆ ಶಾಸಕ ಎಚ್‌.ಡಿ.ರೇವಣ್ಣ, ಪತ್ನಿ ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ರೇವಣ್ಣ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಗಣೇಶ ಹಾಗೂ ಸಿದ್ದೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದರು.

ಸಂಜೆ ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ, ಪತ್ನಿ ಚನ್ನಮ್ಮ, ಪುತ್ರಿಯರಾದ ಅನಸೂಯ, ಶೈಲಜಾ ಹಾಗೂ ಮೊಮಗ ಸೂರಜ್ ರೇವಣ್ಣ ದೇವಿ ದರ್ಶನ ಪಡೆದರು. ಬಳಿಕ ಸಿದ್ದೇಶ್ವರ ಸ್ವಾಮಿ ಸನ್ನಿಧಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ದೇವೇಗೌಡರು, ‘ಪ್ರತಿ ವರ್ಷದಂತೆ ಹಾಸನಾಂಬೆ ಕುಟುಂಬ ಸಮೇತರಾಗಿ ಬಂದು ಪ್ರಾರ್ಥನೆ ಸಲ್ಲಿಸಿದ್ದೇವೆ. ಈ ಬಾರಿ ಕೊರೊನಾ ಇರುವುದರಿಂದ ಸಂದರ್ಭ ಕ್ಲಿಷ್ಟಕರವಾಗಿದೆ. ಕಳೆದ ವರ್ಷ ಲಕ್ಷಾಂತರ ಜನರು ದೇವಿಯ ದರ್ಶನ ಪಡೆದಿದ್ದರು. ವರ್ಷ ಪೂರ್ತಿ ಗರ್ಭಗುಡಿಯಲ್ಲಿ ದೀಪ ಉರಿಯುತ್ತಿರುತ್ತದೆ ಎಂಬ ಪ್ರತೀತಿ ಇದೆ. ಎಲ್ಲರಿಗೂ ಹಾಸನಾಂಬೆ ಆರೋಗ್ಯ ನೀಡಲಿ ಎಂದು ಬೇಡಿಕೊಂಡಿದ್ದೇನೆ’ ಎಂದು ಹೇಳಿದರು.

‘ಕೊನೆಗಾಲದಲ್ಲಿ ರಾಜ್ಯಸಭಾ ಸದಸ್ಯನಾಗಿದ್ದೇನೆ. ಕೈಲಾದಷ್ಟು ಜನರ‌ ಕೆಲಸ ಮಾಡುವೆ. ಕಾರ್ತಿಕ ಮಾಸದಲ್ಲಿ ಹುಟ್ಟೂರಿನಲ್ಲಿ ಪೂಜೆ ಸಲ್ಲಿಸಲಾಗುವುದು’ ಎಂದರು. ‌

ಶಾಸಕ ಎಚ್.ಡಿ.ರೇವಣ್ಣ ಮಾತನಾಡಿ, ‘ಭ್ರಷ್ಟಾಚಾರ ಮತ್ತು ಕೊರೊನಾ ಸೋಂಕು ತೊಲಗಬೇಕು. ನಾಡಿನಲ್ಲಿ ಉತ್ತಮ ಮಳೆ-ಬೆಳೆಯಾಗಿ ಸಮೃದ್ಧವಾಗಿರಲಿ ಎಂದು ದೇವಿಯಲ್ಲಿ ಪ್ರಾರ್ಥಿಸಿದ್ದೇನೆ. ವರ್ಷಕ್ಕೊಮ್ಮೆ ದರ್ಶನ ನೀಡುವ ದೇವಿಯನ್ನು ಹತ್ತಿರದಿಂದ ಕಣ್ತುಂಬಿಕೊಳ್ಳುವ ಆಸೆ ಎಲ್ಲರಿಗೂ ಇರುತ್ತದೆ. ಸಾಮಾನ್ಯ ಜನರು ಹರಕೆ ಹೊತ್ತಿರುತ್ತಾರೆ. ದರ್ಶನಕ್ಕೆ ಅವಕಾಶ ನೀಡಿದರೆ ಒಳ್ಳೆಯದು. ಯಾರದೋ ಮಾತು ಕೇಳಿಕೊಂಡು ಜಿಲ್ಲಾಧಿಕಾರಿ ಕೆಲಸ ಮಾಡಬಾರದು ಎಂದು ಕಿವಿ ಮಾತು ಹೇಳಿದರು.

ಇದೇ ವೇಳೆ ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಅವರು ದೇವೇಗೌಡ ದಂಪತಿಯನ್ನು ಸನ್ಮಾನಿಸಿದರು. ಪೊಲೀಸ್‌ ವರಿಷ್ಠಾಧಿಕಾರಿ ಆರ್‌.ಶ್ರೀನಿವಾಸ್‌ಗೌಡ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ನಂದಿನಿ, ಉಪವಿಭಾಗಾಧಿಕಾರಿ ಬಿ.ಎ.ಜಗದೀಶ್ ಇದ್ದರು.

 ಗುರುವಾರವೇ ದೇವಿ ವಿಶ್ವರೂಪ ನೋಡಲು ಜನರು ಮುಗಿ ಬಿದ್ದಿದ್ದರು. ಗರ್ಭಗುಡಿ ಬಾಗಿಲು ತೆರೆದ ನಂತರ ಕೆಲ ಸಮಯ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಸಂಜೆ ಧಾರ್ಮಿಕ ವಿಧಿವಿಧಾನಗಳ ರೀತಿ ದೇವಿಗೆ ಮಡಿವಾಳ ಸಮದಾಯದವರು ಹುಣಸಿನಕೆರೆಯಲ್ಲಿ ಮಡಿ ಮಾಡಿ ತಂದ ವಸ್ತ್ರಗಳು ಹಾಗೂ ಆಭರಣ ಧಾರಣೆ, ಪ್ರಥಮ ಪೂಜೆ, ಗರ್ಭಗುಡಿಗೆ ಸುಣ್ಣ ಬಳಿಯುವ ಕೆಲಸ ಮುಗಿಸಿದರು. ಬೆಳಗ್ಗೆ ನೈವೇದ್ಯ, ಅಭಿಷೇಕ ಜರುಗಿತು.

ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. 20 ಲೀಟರ್‌ ಕ್ಯಾನ್‌ಗಳಲ್ಲಿ ಶುದ್ಧ ನೀರಿನ ಪೂರೈಕೆ ಮಾಡಲಾಗುತ್ತಿದೆ. ಸಾರ್ವಜನಿಕರಿಗೆ ದೇವಸ್ಥಾನದ ಆವರಣ, ನಗರದ ವಿವಿಧ ಭಾಗಗಳಲ್ಲಿ ಎಲ್.ಇ.ಡಿ ಪರದೆಗಳ ಹಾಗೂ ಆನ್‍ಲೈನ್ ನೇರ ಪ್ರಸಾರದ ಮೂಲಕ ದೇವಿ ದರ್ಶನಕ್ಕಾಗಿ ಅವಕಾಶ ಕಲ್ಪಿಸಲಾಗಿದೆ. ಭಕ್ತರು ಎಲ್.ಇ.ಡಿ ಪರದೆಯಲ್ಲಿಯೇ ದೇವಿ ದರ್ಶನ ಪಡೆದು ಪುನೀತರಾದರು.

ಹಾಸನಾಂಬೆ ದರ್ಶನಕ್ಕೆ ಜಿಲ್ಲಾಡಳಿತ ರೂಪಿಸಿರುವ ಯೂಟ್ಯೂಬ್‌ ವ್ಯವಸ್ಥೆಗೆ ಉತ್ತಮ ಪ್ರೋತ್ಸಾಹ ಸಿಕ್ಕಿದೆ. hasanambalive2020 ನಲ್ಲಿ ಈವರೆಗೂ ಲಕ್ಷ ಜನರು ಕಾರ್ಯಕ್ರಮ ವೀಕ್ಷಿಸಿದ್ದಾರೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸೇರಿದಂತೆ ವಿವಿಧ ಇಲಾಖೆ ಮತ್ತು ಖಾಸಗಿ ಗ್ರೂಪ್‌ಗಳ ಫೇಸ್‌ಬುಕ್‌ ಪೇಜ್‌ನಲ್ಲಿ ಅಪಾರ ಸಂಖ್ಯೆಯ ಜನರು ಹಾಸನಾಂಬೆ ದರ್ಶನೋತ್ಸವದ ನೇರ ಪ್ರಸಾರ ವೀಕ್ಷಿಸಿದ್ದಾರೆ.

ಹಾಸನ ಹೊರವಲಯದ ಬೂವನಹಳ್ಳಿ ಬೈಪಾಸ್ ಬಳಿ ಅಳವಡಿಸಿದ್ದ ಹಾಸನಾಂಬ ಜಾತ್ರಾ ಮಹೋತ್ಸವದ ಸ್ವಾಗತ ಕಮಾನಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಕಾರಣ ಮುರಿದು ಬಿದ್ದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು