ಹೊಳೆನರಸೀಪುರ: ತಾಲ್ಲೂಕಿನ ಹಳೇಕೋಟೆ ಹೋಬಳಿಯ ದೊಡ್ಡಕುಂಚೇವು ಗ್ರಾಮದ ‘ಗ್ರಾಮ ಒನ್’ ಕೇಂದ್ರದಲ್ಲಿ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಯೋಜನೆಗೆ ಆನ್‍ಲೈನ್‍ನಲ್ಲಿ ಅರ್ಜಿ ಹಾಕಲು ಪ್ರತಿಯೊಬ್ಬರಿಂದ ₹ 100 ವಸೂಲಿ ಮಾಡುತ್ತಿದ್ದಾರೆಂದು ಗ್ರಾಮಸ್ಥರು ದೂರಿದ್ದಾರೆ.
ಹಣ ಪಡೆಯುವ ದೃಶ್ಯವನ್ನು ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಿ ಮಾಧ್ಯಮಗಳಿಗೆ ಕಳುಹಿಸಿದ್ದಾರೆ. ಈ ಬಗ್ಗೆ ತಹಶೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ ಅವರ ಗಮನಕ್ಕೆ ತರಲಾಗಿದ್ದು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
‘ಈ ಕೇಂದ್ರದಲ್ಲಿ 500ಕ್ಕೂ ಹೆಚ್ಚು ಅರ್ಜಿಗಳನ್ನು ದಾಖಲಿಸಿದ್ದು ಎಲ್ಲರಿಂದ ₹ 100ನಂತೆ ₹ 50 ಸಾವಿರಕ್ಕೂ ಹೆಚ್ಚು ಹಣ ಗಳಿಸಿದ್ದಾರೆ’ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
‘ಯಾವುದೇ ಕೇಂದ್ರದಲ್ಲಿ ಅರ್ಜಿ ನೋಂದಾಯಿಸಲು ಸರ್ಕಾರ ನಿಗದಿತ ಶುಲ್ಕ ನೀಡುತ್ತದೆ. ಆದ್ದರಿಂದ ಸಾರ್ವಜನಿಕರು ಯಾವುದೇ ಕೇಂದ್ರದಲ್ಲಿ ಹಣ ನೀಡಬಾರದು. ಹಣ ಕೇಳಿದರೆ ದೂರು ನೀಡಿ’ ಎಂದು ತಹಶೀಲ್ದಾರ್ ಕೃಷ್ಣಮೂರ್ತಿ ತಿಳಿಸಿದ್ದಾರೆ.