ಭಾನುವಾರ, ಮೇ 9, 2021
23 °C

ಮುಗಿಲು ಮುಟ್ಟಿದ ‘ಜೈ ಶ್ರೀರಾಮ್‌’ ಘೋಷಣೆ : 7ನೇ ವರ್ಷದ ಹನುಮ ಜಯಂತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೇಲೂರು: ಇಲ್ಲಿನ ಲಕ್ಷ್ಮೀಪುರ ಬಡಾವಣೆಯ ವೀರಾಂಜನೇಯಸ್ವಾಮಿ ದೇವಾಲಯದ 7ನೇ ವರ್ಷದ ವಾರ್ಷಿಕೋತ್ಸವ ಮತ್ತು ಹನುಮ ಜಯಂತಿ ಅಂಗವಾಗಿ ಬುಧವಾರ ಏರ್ಪಡಿಸಿದ್ದ ಬೃಹತ್‌ ಶೋಭಾಯಾತ್ರೆ ವಿಜೃಂಭಣೆಯಿಂದ ನಡೆಯಿತು.

ಕೇಸರಿ ಬಾವುಟಗಳನ್ನು ಹಿಡಿದಿದ್ದ ಸಹಸ್ರಾರು ಹನುಮ ಭಕ್ತರು ಕೂಗಿದ ಜೈ ಶ್ರೀರಾಮ್‌ ಘೋಷಣೆ ಮುಗಿಲು ಮುಟ್ಟಿತ್ತು.
ಲಕ್ಷ್ಮೀಪುರ ಬಡಾವಣೆಯ ವೀರಾಂಜ ನೇಯ ಸ್ವಾಮಿ ದೇವಾಲಯದಿಂದ ಆರಂಭಗೊಂಡ ಶೋಭಾಯಾತ್ರೆ ದೇವಾಂಗ ಬೀದಿ, ಮುಖ್ಯರಸ್ತೆ, ನೆಹರೂ ನಗರ, ಹೊಳೆಬೀದಿ, ಚನ್ನಕೇಶವ ದೇವಾಲಯ, ಅಂಬೇಡ್ಕರ್‌ ವೃತ್ತದ ಮೂಲಕ ಹಾದು ವೀರಾಂಜನೇಯ ಸ್ವಾಮಿ ದೇವಾಲಯದ ಬಳಿ ಅಂತ್ಯಗೊಂಡಿತು.

ವಿಶೇಷವಾಗಿ ಅಲಂಕರಿಸಿದ್ದ ಹೂವಿನ ಮಂಟಪದಲ್ಲಿ ಆಂಜನೇಯ ಸ್ವಾಮಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಹತ್ತಾರು ಬೃಹತ್‌ ಹೂವಿನ ಹಾರಗಳನ್ನು ಹಾಕಲಾಗಿತ್ತು. ಮೆರವಣಿಗೆಯಲ್ಲಿ ಆಂಜನೇಯಸ್ವಾಮಿ ಸ್ತಬ್ಧಚಿತ್ರಗಳನ್ನು ಒಳಗೊಂಡ ರಥ, ಕೊರಗಜ್ಜ ನಾಸಿಕ್‌ ಡೋಲು, ಅಣ್ಣಮ್ಮ ತಮಟೆ, ಡಿಜೆ, ವಿವಿಧ ಬಗೆಯ ವಾದ್ಯಗಳು ಗಮನ ಸೆಳೆದವು. ಹನುಮ ಭಕ್ತರು ಡಿಜೆ ಹಾಡಿಗೆ ತಕ್ಕಂತೆ ನೃತ್ಯ ಮಾಡಿದರು. ಮಹಿಳೆಯರು, ಮಕ್ಕಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಶೋಭಾಯಾತ್ರೆಯಲ್ಲಿ ಶಿವಾಜಿ ಭಾವಚಿತ್ರಗಳನ್ನೊಳಗೊಂಡ ಕೇಸರಿ ಬಾವುಟಗಳು ರಾರಾಜಿಸಿದವು. ಇಡೀ ಬೇಲೂರು ಪಟ್ಟಣವನ್ನು ಕೇಸರಿ ಬಂಟಿಂಗ್ಸ್‌ ಮತ್ತು ಬಾವುಟ ಗಳಿಂದ ಸಿಂಗರಿಸಲಾಗಿತ್ತು. ಪಟ್ಟಣ ಕೇಸರಿಮಯವಾಗಿತ್ತು.
ಶೋಭಾಯಾತ್ರೆಗೂ ಮುನ್ನ ವೀರಾಂಜನೇಯ ಸ್ವಾಮಿ ದೇವಾಲಯ ದಲ್ಲಿ ರಾಮತಾರಕ ಹೋಮ, ಹವನ ಗಳು ನಡೆದವು. ಮಂಗಳಾರತಿ ನಂತರ 5 ಸಾವಿರಕ್ಕೂ ಹೆಚ್ಚು ಜನರಿಗೆ ಅನ್ನ ಸಂತರ್ಪಣೆ ನಡೆಯಿತು. ಬೇಲೂರು ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮ ಗಳಿಂದ ಜನರು ಆಗಮಿಸಿದ್ದರು.

ಶೋಭಾಯಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಡಿವೈಎಸ್‌ಪಿ ನಾಗೇಶ್‌ ಮತ್ತು ಸಿಪಿಐ ಸಿದ್ದೇಶ್ವರ್‌ ನೇತೃತ್ವದಲ್ಲಿ ಪಟ್ಟಣ ದೆಲ್ಲೆಡೆ ಪೊಲೀಸ್‌ ಬಿಗಿ ಭದ್ರತೆ ಏರ್ಪಡಿಸ ಲಾಗಿತ್ತು. ಮೆರವಣಿಗೆಯುದ್ದಕ್ಕೂ ಪೊಲೀಸ್‌ ಸರ್ಪಗಾವಲು ಹಾಕಲಾಗಿತ್ತು. ಆಯಕಟ್ಟಿನ ಸ್ಥಳಗಳಲ್ಲಿ ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿತ್ತು.

ಶಾಸಕ ಕೆ.ಎಸ್‌.ಲಿಂಗೇಶ್‌, ಹನುಮ ಜಯಂತಿ ಸೇವಾ ಸಮಿತಿ ಅಧ್ಯಕ್ಷ ಮೋಹನ್‌ಕುಮಾರ್‌, ಮುಖಂಡರಾದ ಹುಲ್ಲಹಳ್ಳಿ ಸುರೇಶ್‌, ರೇಣುಕುಮಾರ್‌, ಎನ್‌.ಆರ್.ಸಂತೋಷ್‌, ಅಭಿಗೌಡ, ಜಿ.ಕೆ.ಕುಮಾರ್‌, ಜೆಡಿಎಸ್‌ ತೊ.ಚ.ಅನಂತ ಸುಬ್ಬರಾಯ, ಅರ್ಚಕ ರಾದ ರಾಮಚಂದ್ರಭಟ್‌ ಮತ್ತು ಪ್ರಶಾಂತ್‌ ಭಟ್‌ ಪೂಜಾ ಕಾರ್ಯಗಳನ್ನು ನಡೆಸಿಕೊಟ್ಟರು.

ಸಿಹಿ, ಮಜ್ಜಿಗೆ ವಿತರಿಸಿದ ಮುಸ್ಲಿಮರು

ಹನುಮ ಜಯಂತಿ ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದ ಹನುಮ ಭಕ್ತರಿಗೆ ಪಟ್ಟಣದ ಜಾಮಿಯ ಮಸೀದಿ ಬಳಿ ಮುಸ್ಲಿಂ ಸಮುದಾಯದವರು ಸಿಹಿತಿಂಡಿ, ಮಜ್ಜಿಗೆ, ನೀರು ವಿತರಿಸಿ ಶುಭಕೋರಿದರು. ಆಂಜನೇಯಸ್ವಾಮಿಯ ಉತ್ಸವಮೂರ್ತಿಗೆ ಹೂವಿನ ಹಾರ ಅರ್ಪಿಸುವ ಮೂಲಕ ಭಾವೈಕ್ಯ ಮೆರೆದರು. ಮುಖಂಡರಾದ ತಜ್‌ಮುಲ್‌ಪಾಷ, ಅಕ್ರಂ, ಇಕ್ಬಾಲ್‌, ಜಾಕಿರ್‌ ಪಾಷ, ಅಬ್ದುಲ್‌ ಖಾದರ್‌, ಫಾರೂಕ್‌, ಜಮಾಲುದ್ದೀನ್ ಇದ್ದರು.

ನಾಗಾ ಸಾಧುಗಳು, ವಿದೇಶಿ ದಂಪತಿ ಭಾಗಿ

ಹನುಮ ಜಯಂತಿ ಅಂಗವಾಗಿ ನಡೆದ ಹೋಮ ಹವನಗಳಲ್ಲಿ ನಾಗಾ ಸಾಧುಗಳು ಮತ್ತು ವಿದೇಶಿ ದಂಪತಿ ಭಾಗವಹಿಸಿ ಗಮನಸೆಳೆದರು. ಪ್ರತಿವರ್ಷದಂತೆ ಈ ವರ್ಷವೂ ಹರಿದ್ವಾರ ಮತ್ತು ಹೃಷಿಕೇಶದಿಂದ ಆಗಮಿಸಿದ್ದ ನಾಗಾ ಸಾಧುಗಳು ಸ್ವತಃ ಹೋಮ ಹವನ ನಡೆಸಿದರು. ಅಲ್ಲದೆ, ಆಂಜನೇಯಸ್ವಾಮಿಗೆ ಪೂಜೆ ಸಲ್ಲಿಸಿದರು.

ಫ್ರಾನ್ಸ್‌ನಿಂದ ಬಂದಿದ್ದ ಸೆಬಾಸ್ಟಿನ್‌ ಮತ್ತು ಸ್ಯಾಯೋ ಹನುಮ ಜಯಂತಿಯ ಪೂಜಾ ಕಾರ್ಯಗಳಲ್ಲಿ ಮಂಗಳವಾರದಿಂದಲೇ  ಭಾಗವಹಿಸಿದ್ದರು. ಬುಧವಾರವೂ ಸಹ ಶೋಭಾಯಾತ್ರೆಯಲ್ಲಿ ಭಾಗವಹಿಸಿ ಗಮನ ಸೆಳೆದರು. ಹನುಮ ಜಯಂತಿಯಲ್ಲಿ ಭಾಗವಹಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.