ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನುಮ ಜಯಂತಿ: ಶೋಭಾಯಾತ್ರೆ

ಬೇಲೂರು ಶ್ರೀವೀರಾಂಜನೇಯ ಸ್ವಾಮಿ ದೇವಸ್ಥಾನದ 8ನೇ ವಾರ್ಷಿಕೋತ್ಸವ ಸಂಭ್ರಮ
Last Updated 9 ಜನವರಿ 2021, 17:12 IST
ಅಕ್ಷರ ಗಾತ್ರ

ಬೇಲೂರು: ಇಲ್ಲಿನ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದ 8ನೇ ವಾರ್ಷಿಕೋತ್ಸವ ಮತ್ತು ಹನುಮ ಜಯಂತಿ ಅಂಗವಾಗಿ ವಿಶೇಷ ಪೂಜೆ ಹಾಗೂ ಶೋಭಾಯಾತ್ರೆ ಶನಿವಾರ ನಡೆಯಿತು.

ಶ್ರೀವೀರಾಂಜನೇಯ ಸ್ವಾಮಿ ದೇವಸ್ಥಾನದ ಟ್ರಸ್ಟ್ ಮತ್ತು ಹನುಮ ಜಯಂತಿ ಸೇವಾ ಸಮಿತಿ ವತಿಯಿಂದ ಶುಕ್ರವಾರ ಮತ್ತು ಶನಿವಾರ ವೀರಾಂಜನೇಯ ಸ್ವಾಮಿಗೆ ಗುರುಪೂಜೆ, ಫಲ ಪಂಚಾಮೃತ ಅಭಿಷೇಕ, ಹೋಮ, ಮಹಾ ಮಂಗಳಾರತಿ ನೆರವೇರಿಸಲಾಯಿತು.

ಶನಿವಾರ ಮಹಾಭಿಷೇಕ, ಶ್ರೀರಾಮ ತಾರಕ ಹೋಮ, ಹನುಮ ಮೂಲ ಮಂತ್ರ ಹೋಮ, ಮಹಾ ಪೂರ್ಣಾಹುತಿ, ಮಹಾ ಮಂಗಳಾರತಿ, ವಿಶೇಷ ಅಲಂಕಾರ, ತೀರ್ಥ ಪ್ರಸಾದ ಹಾಗೂ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.

ಮಧ್ಯಾಹ್ನ ಉತ್ಸವ ಮೂರ್ತಿಯನ್ನು ವಿಶೇಷವಾಗಿ ಅಲಂಕರಿಸಿ ಸಾರೋಟಿನಲ್ಲಿ ಕೂರಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ನೂರಾರು ಯುವಕರು ಬೈಕ್ ಹಾಗೂ ಕಾರುಗಳಿಗೆ ಹನುಮನ ಚಿತ್ರವಿರುವ ಧ್ವಜಗಳನ್ನು ಕಟ್ಟಿಕೊಂಡು ಸಂಚರಿಸುತ್ತಿದ್ದರು. ನೂರಾರು ಭಕ್ತರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡರು.

ಶಾಸಕ ಕೆ.ಎಸ್.ಲಿಂಗೇಶ್ ಹಾಗೂ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಕೆ.ಸುರೇಶ್‌, ಜಿಲ್ಲಾ ಉಪಾಧ್ಯಕ್ಷ ಕೊರಟಿಕೆರೆ ಪ್ರಕಾಶ್, ರೇಣುಕುಮಾರ್, ಸಂತೋಷ್ ಸೇರಿದಂತೆ ಇತರೆ ಗಣ್ಯರು ದೇವರಿಗೆ ಪೂಜೆ ಸಲ್ಲಿಸಿ ಶೋಭಾಯಾತ್ರೆಯಲ್ಲಿ ಪಾಲ್ಗೊಂಡರು.

ಶೋಭಾಯಾತ್ರೆ ಸಂದರ್ಭ ಯಾವುದೇ ಅಹಿತಕರ ಘಟನೆ ನಡೆಯದಂತೆ ಅರಸೀಕೆರೆ ಡಿವೈಎಸ್‌ಪಿ ನಾಗೇಶ್ ಹಾಗೂ ಸಿಪಿಐ ಸಿದ್ಧರಾಮೇಶ್ವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

‘ಪ್ರತಿ ವರ್ಷ ವಿಜೃಂಭಣೆಯಿಂದ ಹನುಮ ಜಯಂತಿ ಆಚರಿಸಲಾಗುತ್ತಿತ್ತು. ಆದರೆ ಈ ಬಾರಿ ಕೊರೊನಾ ಸೋಂಕಿನ ಕಾರಣದಿಂದ ಸರಳವಾಗಿ ಆಚರಿಸಲಾಗಿದೆ. ಸುಮಾರು ಆರು ಸಾವಿರ ಜನಕ್ಕೆ ಅನ್ನಸಂತರ್ಪಣೆ ಮಾಡಲಾಗಿದೆ’ ಎಂದು ಶ್ರೀವೀರಾಂಜನೇಯಸ್ವಾಮಿ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಮೋಹನ್‌ ಕುಮಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT