ಆಲೂರು: ಸುತ್ತಲಿನ 48 ಹಳ್ಳಿಗಳಿಗೆ ಸೇರಿದ ಕೆಂಚಾಂಬ ದೇವಿ ವರ್ಷದ ದೊಡ್ಡ ಜಾತ್ರೆ ಅತ್ಯಂತ ವೈಭವ, ಭಯ, ಭಕ್ತಿಯಿಂದ ಮೇ 4ರಿಂದ 12ರವರೆಗೆ ಹರಿಹಳ್ಳಿ ಗ್ರಾಮದಲ್ಲಿರುವ ಕೆಂಚಾಂಬಿಕೆ ದೇವಸ್ಥಾನದಲ್ಲಿ ನಡೆಯುತ್ತದೆ.

ಜಾತ್ರೆ ಪ್ರಾರಂಭವಾಗುವ ಒಂದು ವಾರ ಮೊದಲು 48 ಹಳ್ಳಿಗಳಲ್ಲೂ ಸುಗ್ಗಿ ಸಾರು ಹಾಕಲಾಗುತ್ತದೆ. ಸಾರು ಹಾಕಿದ ನಂತರ 48 ಹಳ್ಳಿಗಳ ವ್ಯಾಪ್ತಿಯಲ್ಲಿ ಹಸಿ ಕೊನೆ ಕಡಿಯುವಂತಿಲ್ಲ, ಮುರಿಯುವಂತಿಲ್ಲ. ಒಗ್ಗರಣೆ ಹಾಕುವಂತಿಲ್ಲ. ರೊಟ್ಟಿ ಮಾಡುವುದು, ಮಾಂಸಾಹಾರ ಮಾಡುವುದು ನಿಷೇಧ.

ಸಾರು ಹಾಕುವ ಸಂದರ್ಭದಲ್ಲಿ ಗ್ರಾಮದ ಮಹಿಳೆಯರು ಹೊರ ಊರಿನಲ್ಲಿದ್ದಾಗ ಆಕಸ್ಮಿಕವಾಗಿ ಋತುಚಕ್ರಕ್ಕೊಳಗಾದರೆ ಊರಿನೊಳಗೆ ಪ್ರವೇಶಿಸುವಂತಿಲ್ಲ. ಸೂತಕಕ್ಕೆ ಸಿಕ್ಕಿದವರು ಹೊರ ಊರಿಗೆ ತೆರಳುತ್ತಾರೆ. ಈ ಕಟ್ಟುಪಾಡು ಇಂದಿಗೂ ನಡೆದು ಬರುತ್ತಿದೆ. ದೇವಿಗೆ ಪ್ರಾಣಿ ಬಲಿ ಇಲ್ಲ. ಕೆಂಪು ಅನ್ನದ ಬಲಿ ಅರ್ಪಿಸಲಾಗುತ್ತದೆ.

ಬುಧವಾರದಿಂದ 48 ಹಳ್ಳಿಗಳಲ್ಲಿ ಕೆಂಚಮ್ಮನವರ ಮುಖ ಕೂರಿಸಿ ಜಾತ್ರೆ ಪ್ರಾರಂಭ ಮಾಡಲಾಗುತ್ತದೆ. ಶನಿವಾರ ಎಲ್ಲ ಹಳ್ಳಿಗಳಲ್ಲೂ ದೊಡ್ಡ ಸುಗ್ಗಿ ನಡೆಯುತ್ತದೆ. ಬೆಳಗಿನ ಜಾವ ಪ್ರತಿ ಹಳ್ಳಿಗಳಲ್ಲಿ ಮಹಿಳೆಯರು ಕಳಸ ತೆಗೆದುಕೊಂಡು ಹೊಳೆ ಬಳಿ ತೆರಳಿ ಕೆಂಚಾಂಬಿಕೆ ದೇವಿಗೆ ಪೂಜೆ ಸಲ್ಲಿಸುತ್ತಾರೆ.

ಶನಿವಾರ ರಾತ್ರಿ ಹರಿಹಳ್ಳಿ ಗ್ರಾಮದ ಮೂಲ ದೇವಸ್ಥಾನದಲ್ಲಿ ಸಪ್ತಮಾತೃಕೆಯರ ಮುಖವಾಡವನ್ನಿಟ್ಟು, ರಾತ್ರಿ 10 ಗಂಟೆಯವರೆಗೆ ಅಲಂಕಾರ ಮಾಡಿ ಸುಗ್ಗಿ ನಡೆಯುತ್ತದೆ. ಮೇ 11 ರಂದು ದೊಡ್ಡ ಜಾತ್ರೆ ನಡೆಯುತ್ತದೆ. ಅಂದು ಪ್ರತಿಯೊಬ್ಬರೂ ದೇವಿ ಪಾದ ಮುಟ್ಟಿ ನಮಸ್ಕರಿಸಲು ಅವಕಾಶ ನೀಡಲಾಗುತ್ತದೆ.

ಹಿನ್ನೆಲೆ: ಹಾಸನಾಂಬ ದೇವಿ ಸೇರಿ ಒಟ್ಟು ಏಳು ಜನ ಸಹೋದರಿಯರು. ಹಿರಿಯವರಾದ ಕೆಂಚಾಂಬ (ಬ್ರಾಹ್ಮೀದೇವಿ) ಹರಿಹಳ್ಳಿಯಲ್ಲಿ ನೆಲೆಸಿದ್ದಾರೆ. ಎರಡನೇ ಮಹೇಶ್ವರಿ ದೇವಿ, ಮೂರನೇ ಕೋಮಾರಿ ದೇವಿ, ನಾಲ್ಕನೇ ವಾರಾಹಿ ದೇವಿ ಎಂಬುವವರು ಹಾಸನಾಂಬ ದೇವಾಲಯದಲ್ಲಿ ತ್ರಿಮೂರ್ತಿಗಳಾಗಿ ನೆಲೆಸಿದ್ದಾರೆ. ಐದನೇ ವೈಷ್ಣವಿ ದೇವಿ, ಆರನೇ ಇಂದ್ರಾಣಿ ದೇವಿ ಮತ್ತು ಏಳನೇ ಚಾಮುಂಡಿ ದೇವಿಯರು ದೇವಿಗೆರೆ ಕೊಳದಲ್ಲಿ ನೆಲೆಸಿದ್ದಾರೆ. ಆದ್ದರಿಂದ ಹಾಸನಾಂಬ ದೇವಾಲಯ, ಕೆಂಚಾಂಬ ದೇವಾಲಯ ಮತ್ತು ದೇವಿಗೆರೆಗೆ ಪೂರಕ ಸಂಬಂಧವಿದೆ.

ಮಹಿಷಾಸುರನೆಂಬ ರಾಕ್ಷಸನನ್ನು ಚಾಮುಂಡೇಶ್ವರಿ ಸಂಹರಿಸಿದ ನಂತರ, ಅವನ ಮಂತ್ರಿಯಾಗಿದ್ದ ರಕ್ತಬೀಜಾಸುರ ಎಂಬ ರಾಕ್ಷಸ ದೇವಿಯಿಂದ ತಪ್ಪಿಸಿಕೊಂಡು ಈ ಭಾಗಕ್ಕೆ ಬರುತ್ತಾನೆ. ಅವನ ಉಪಟಳ ದಿನೇ ದಿನೇ ತೀಕ್ಷ್ಣವಾಗಿ, ಇಲ್ಲಿಯ ಪ್ರಾಣಿ, ಪಶು, ಪಕ್ಷಿಗಳಾದಿಯಾಗಿ ಮಾನವರಿಗೂ ಬದುಕುವುದೇ ಕಷ್ಟವೆಂಬ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ಸಂದರ್ಭದಲ್ಲಿ ಮಾನವರ ಮೊರೆಗೆ ಓಗೊಟ್ಟು ರಕ್ತಬೀಜಾಸುರನ ಸಂಹಾರಕ್ಕೆಂದು ಹರಿಹಳ್ಳಿಯಲ್ಲಿ ಆದಿಶಕ್ತಿ ಅವತರಿಸುತ್ತಾಳೆ.

‘ಕೆಂಚಾಂಬಿಕಾ ದೇವಿಯು ಸರಸ್ವತಿ, ಪಾರ್ವತಿ ಹಾಗೂ ಲಕ್ಷ್ಮಿಯರ ಸಂಪೂರ್ಣ ಶಕ್ತಿ ಪಡೆದು ಇಲ್ಲಿಗೆ ಬಂದು, ರಾಕ್ಷಸರೊಡನೆ ಯುದ್ಧ ಮಾಡಿ ಅನೇಕರನ್ನು ಸಂಹಾರ ಮಾಡುತ್ತಾಳೆ. ಆದರೆ ರಕ್ತ ಬೀಜಾಸುರನನ್ನು ಕೊಲ್ಲುವುದು ಸುಲಭದ ಮಾತಾಗಿರುವುದಿಲ್ಲ. ಈತ ಬ್ರಹ್ಮನಿಂದ ವರ ಪಡೆದವನಾಗಿರುತ್ತಾನೆ. ಇವನ ಒಂದು ಹನಿ ರಕ್ತ ನೆಲಕ್ಕೆ ಬಿದ್ದರೆ ಅವನಷ್ಟೆ ಶಕ್ತಿಯುಳ್ಳ ಸಹಸ್ರ ರಾಕ್ಷಸರು ಹುಟ್ಟುತ್ತಿದ್ದರು. ಹೀಗಾಗಿ ಆದಿಶಕ್ತಿ ಕೆಂಚಾಂಬಿಕೆಯು ಈತನನ್ನು ಉಪಾಯದಿಂದ ಸಂಹರಿಸುವ ಸಂಕಲ್ಪ ಮಾಡಿ, ತನ್ನ ನಾಲಿಗೆಯನ್ನು ನೆಲದ ಮೇಲೆ ಹಾಸಿ ಅದರ ಮೇಲೆ ರಾಕ್ಷಸ ಬರುವಂತೆ ಮಾಡಿ ಕೊಂದಳು. ಹೀಗೆ ರಕ್ತ ಬೀಜಾಸುರನ ಸಂಹಾರ ಮಾಡಿದ ಸ್ಥಳದಲ್ಲೇ ಕೆಂಚಾಂಬಿಕೆ ನೆಲೆಸಿದ್ದಾಳೆ ಎಂದು ಇತಿಹಾಸ ಹೇಳುತ್ತದೆ. ಈ ಕತೆಗೆ ಪೂರಕವಾಗಿ ಇಲ್ಲಿನ ಮಣ್ಣು ಕೆಂಪಾಗಿದೆ’ ಎಂದು ಪ್ರಧಾನ ಅರ್ಚಕ ರಾಮಸ್ವಾಮಿ ಹೇಳುತ್ತಾರೆ.

ಮಣ್ಣಿನ ಮಡಿಕೆ ವ್ಯಾಪಾರ ಜೋರು: ನಿತ್ಯ ಅನ್ನ ಸಂತರ್ಪಣೆ ಪ್ರತಿಯೊಬ್ಬರೂ ಮಡಿಕೆ ಕೊಂಡು ಹೋಗುವುದು ವಾಡಿಕೆ

48 ಹಳ್ಳಿಗಳಲ್ಲಿ ಒಂದೇ ಸಂದರ್ಭದಲ್ಲಿ ಸುಗ್ಗಿ ನಡೆಯುವುದು ವಿಶೇಷ. ಕೆಂಚಾಂಬ ದೇವಿ ಅತ್ಯಂತ ಬಲಶಾಲಿ. ಸಂತಾನ ಪ್ರಾಪ್ತಿಗೆಂದು ಹರಕೆ ಹೊರುವುದು ದೇವಿ ಪಾದ ಮುಟ್ಟಿ ಎಲ್ಲರೂ ನಮಸ್ಕರಿಸುವುದು ಜಾತ್ರೆ ವಿಶೇಷ.

-ಎಚ್.ಡಿ. ರಘು ಕೆಂಚಾಂಬಿಕೆ ದೇವಾಲಯ ವ್ಯವಸ್ಥಾಪನ ಸಮಿತಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.