ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲೂರು ತಾಲ್ಲೂಕು ಲೆಕ್ಕಕ್ಕುಂಟು ಆಟಕ್ಕಿಲ್ಲ!

ಸಕಲೇಶಪುರ ಕ್ಷೇತ್ರದ ಸೇರಿದ ತಾಲ್ಲೂಕು: ಜನಪ್ರತಿನಿಧಿಗಳ ನಿರ್ಲಕ್ಷ್ಯ
ಎಂ.ಪಿ. ಹರೀಶ್
Published 9 ಏಪ್ರಿಲ್ 2024, 7:04 IST
Last Updated 9 ಏಪ್ರಿಲ್ 2024, 7:04 IST
ಅಕ್ಷರ ಗಾತ್ರ

ಆಲೂರು: ತಾಲ್ಲೂಕು ಕೇಂದ್ರದಲ್ಲಿ ಪಂಚಾಯಿತಿ ಚುನಾವಣೆಗಳನ್ನು ಹೊರತುಪಡಿಸಿದರೆ, ಲೋಕಸಭೆ, ವಿಧಾನಸಭೆ ಚುನಾವಣೆಗಳಿಗೆ ಸಂಬಂಧಿಸಿದ ಕಾರ್ಯ ಚಟುವಟಿಕೆಗಳು ನಡೆಯದ ಕಾರಣ, ಆಲೂರು ತಾಲ್ಲೂಕು ಕೇಂದ್ರ ಎನಿಸಿದರೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ವಿಧಾನಸಭೆ ಕ್ಷೇತ್ರ ಆಗದೇ ಇರುವುದರಿಂದ ಜನಪ್ರತಿನಿಧಿಗಳು ತಾಲ್ಲೂಕಿನ ಅಭಿವೃದ್ಧಿಗೂ ಅಷ್ಟಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ ಎನ್ನುವ ಆರೋಪ ಜನರದ್ದಾಗಿದೆ.

ಆಲೂರು ಮತ್ತು ಸಕಲೇಶಪುರ ತಾಲ್ಲೂಕುಗಳು ಸೇರಿ ಒಂದು ವಿಧಾನಸಭೆ ಕ್ಷೇತ್ರವಾಗಿತ್ತು. 23 ವರ್ಷಗಳ ಹಿಂದೆ ಕ್ಷೇತ್ರ ವಿಂಗಡನೆಯಾಗುವ ಸಂದರ್ಭದಲ್ಲಿ ಸಕಲೇಶಪುರ ತಾಲ್ಲೂಕು ಹೊರತುಪಡಿಸಿ, ಆಲೂರು ತಾಲ್ಲೂಕಿಗೆ ಸಮೀಪವಿರುವ ಹಾಸನ ತಾಲ್ಲೂಕಿನ ಕೆಲ ಪ್ರದೇಶಗಳನ್ನು ಸೇರಿಸಿಕೊಂಡು ಪ್ರತ್ಯೇಕ ವಿಧಾನಸಭಾ ಕ್ಷೇತ್ರ ಮಾಡಬಹುದಿತ್ತು.

ವಿಧಾನಸಭಾ ಕ್ಷೇತ್ರವಾಗಿದ್ದರೆ, ಪ್ರತಿಯೊಂದು ಚುನಾವಣೆಯಲ್ಲೂ ತಾಲ್ಲೂಕು ಕೇಂದ್ರ ಮಿನಿ ವಿಧಾನಸೌಧದಲ್ಲಿ ಚುನಾವಣೆ ಚಟುವಟಿಕೆಗಳು ಎಡಬಿಡದೆ ಸಾಗುತ್ತಿದ್ದವು. ಆಲೂರು, ಸಕಲೇಶಪುರ ವಿಧಾನಸಭಾ ಕ್ಷೇತ್ರಕ್ಕೆ ಸೇರಿಸುವುದರಿಂದ ಆಲೂರು ತಾಲ್ಲೂಕು ಕೇಂದ್ರದಲ್ಲಿ ಕೇವಲ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ಮಾತ್ರ ಚಟುವಟಿಕೆಗಳು ಗರಿಗೆದರುತ್ತವೆ.

ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಚಟುವಟಿಕೆ ಇರುವುದಿಲ್ಲ. ಇಲ್ಲಿನ ಕಚೇರಿ ನೌಕರರು ಚುನಾವಣೆ ಕಾರ್ಯಕ್ಕಾಗಿ ಸಕಲೇಶಪುರ ಕಚೇರಿಗೆ ಹೋಗುತ್ತಿದ್ದು, ಇಲ್ಲಿನ ಮಿನಿ ವಿಧಾನಸೌಧ ಕಚೇರಿ ಭಣಗುಡುತ್ತಿದೆ.

ಆಲೂರು ತಾಲ್ಲೂಕಿನಲ್ಲಿ ಕೇವಲ ಮತಯಾಚನೆ ಮಾತ್ರ ಸಾಗುತ್ತದೆ. ವಾರದ ಸಂತೆಯಂದು ಅಭ್ಯರ್ಥಿಗಳು ಮೆರವಣಿಗೆ ನಡೆಸಿ, ತಮ್ಮ ಬಲಾಬಲ ಪ್ರದರ್ಶನ ಮಾಡುತ್ತಾರೆ. ಇದಷ್ಟೇ ತಾಲ್ಲೂಕು ಕೇಂದ್ರದಲ್ಲಿ ನಡೆಯುವ ಚುನಾವಣೆ ಚಟುವಟಿಕೆಗಳು.

ಪ್ರತ್ಯೇಕ ವಿಧಾನಸಭಾ ಕ್ಷೇತ್ರವನ್ನಾಗಿ ಮಾಡಲು ಯಾವ ಜನಪ್ರತಿನಿಧಿಗಳಿಗೂ ಇಚ್ಛಾಶಕ್ತಿ ಇಲ್ಲದ್ದರಿಂದ ಆಲೂರು ತಾಲ್ಲೂಕು ಅಭಿವೃದ್ಧಿಯಲ್ಲಿ ಹಿನ್ನಡೆಯಾಗುತ್ತಿದೆ. ಹಾಸನ ಕೇವಲ 10 ಕಿ. ಮೀ. ಅಂತರದಲ್ಲಿ ಇರುವುದರಿಂದ, ಜನಸಾಮಾನ್ಯರು ಪ್ರತಿಯೊಂದು ವ್ಯಾಪಾರ, ವಹಿವಾಟು ಮತ್ತು ಸರ್ಕಾರಿ ನೌಕರರೆಲ್ಲ ಹಾಸನ ಕೇಂದ್ರದಿಂದ ಬಂದು ಹೋಗುವುದರಿಂದ ಆಲೂರು ಕೇಂದ್ರದಲ್ಲಿ ಚಟುವಟಿಕೆಗಳು ಗೌಣವಾಗಿವೆ.

ಆಲೂರು ಬಸ್ ನಿಲ್ದಾಣ, ಪೊಲೀಸ್ ಠಾಣೆ, ಮಿನಿ ವಿಧಾನಸೌಧ, ತಾಲ್ಲೂಕು ಆಸ್ಪತ್ರೆ, ತಾಲ್ಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ, ಬ್ಯಾಂಕ್‌ ಕೇವಲ 200 ಮೀ. ಅಂತರದಲ್ಲಿ ಇರುವುದರಿಂದ ಈ ವ್ಯಾಪ್ತಿಯಲ್ಲಿ ಮಾತ್ರ ಅಂಗಡಿ ಮುಂಗಟ್ಟುಗಳಿಗೆ ಪ್ರತಿದಿನ ಜನಜಂಗುಳಿ ಇರುತ್ತದೆ. 200 ಮೀ. ದೂರ ದಾಟಿದರೆ ಜನಜಂಗುಳಿ ಮೌನವಾಗಿರುತ್ತದೆ.

ಮುಂದಿನ ದಿನಗಳಲ್ಲಾಗುವ ಕ್ಷೇತ್ರ ವಿಂಗಡಣೆ ಸಂದರ್ಭದಲ್ಲಾದರೂ, ಹಾಸನ ತಾಲ್ಲೂಕಿನ ಕೆಲ ಗ್ರಾಮಗಳನ್ನು ಸೇರಿಸಿಕೊಂಡು ಮತದಾರರ ಸಂಖ್ಯೆ ವೃದ್ಧಿಸಿಕೊಂಡು ಆಲೂರು ತಾಲ್ಲೂಕನ್ನು ಪ್ರತ್ಯೇಕ ವಿಧಾನಸಭೆ ಕ್ಷೇತ್ರವಾಗಿ ಮಾಡಬೇಕು. ಆಗ ಮಾತ್ರ ಅಭಿವೃದ್ಧಿಯತ್ತ ಸಾಗುತ್ತದೆ. ಇಲ್ಲದಿದ್ದರೆ ತಾಲ್ಲೂಕು ವರ್ಷದಿಂದ ವರ್ಷಕ್ಕೆ ನಶಿಸುತ್ತ ಸಾಗುವುದರಲ್ಲಿ ಅನುಮಾನವಿಲ್ಲ. ಪ್ರತ್ಯೇಕ ವಿಧಾನಸಭಾ ಕ್ಷೇತ್ರ ಕೂಗು ಜನಪ್ರತಿನಿಧಿಗಳ ಕೂಗಿನಿಂದ ಮಾತ್ರ ಸಾಧ್ಯವಾಗುತ್ತದೆ ಎಂದು ಇಲ್ಲಿನ ಜನರು ಹೇಳುತ್ತಿದ್ದಾರೆ.

ಮತ ಕೇಳಲು ಮಾತ್ರ ಬರುವ ರಾಜಕೀಯ ಮುಖಂಡರು ಅಭಿವೃದ್ಧಿಗಾಗಿ ಪ್ರತ್ಯೇಕ ವಿಧಾನಸಭೆ ಕ್ಷೇತ್ರ ರಚನೆಗೆ ಆಗ್ರಹ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವ ಆಲೂರು ತಾಲ್ಲೂಕು

ಆಲೂರು ತಾಲ್ಲೂಕು ಕೇಂದ್ರ ಎನಿಸಿಕೊಳ್ಳಲು ಯೋಗ್ಯತೆ ಇಲ್ಲ. ಕನಿಷ್ಠ ಸೌಕರ್ಯಗಳು ಇಲ್ಲ. ಸಮಾನ ಮನಸ್ಕರು ಸೇರಿ ತಾಲ್ಲೂಕು ಅಭಿವೃದ್ಧಿಗಾಗಿ ಪ್ರತ್ಯೇಕ ವಿಧಾನಸಭೆ ಕ್ಷೇತ್ರಕ್ಕೆ ಹೋರಾಟ ಮಾಡುವುದು

- ಅನಿವಾರ್ಯ. ಕೆ.ಜಿ. ನಾಗರಾಜ್ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT