ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಗ್ಗಿನ ಅಪ್ಪಣೆ; ರಥೋತ್ಸವ ಆಕರ್ಷಣೆ

29ರಿಂದ ರಥೋತ್ಸವ, ದೇವಿ ದರ್ಶನಕ್ಕೆ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ ಭಕ್ತರು
ಪೂಜಾರು ರಮೇಶ್‌
Published 13 ಏಪ್ರಿಲ್ 2024, 6:38 IST
Last Updated 13 ಏಪ್ರಿಲ್ 2024, 6:38 IST
ಅಕ್ಷರ ಗಾತ್ರ

ಅರಸೀಕೆರೆ: ನಗರದ ಗ್ರಾಮದೇವತೆ, ನಿತ್ಯ ಸಾವಿರಾರು ಭಕ್ತರ ಕಷ್ಟ ಕಾರ್ಪಣ್ಯಗಳನ್ನು ಮೊಗ್ಗಿನ ಅಪ್ಪಣೆ ಮೂಲಕ ಪರಿಹರಿಸಿ ಆಕರ್ಷಿಸುವ ಕರಿಯಮ್ಮ, ಮಲ್ಲಿಗೆಮ್ಮ ದೇವಿಯವರ 55ನೇ ವರ್ಷದ ಮಹಾರಥೋತ್ಸವ ಹಾಗೂ ಆನೆ ಅಂಬಾರಿ ಉತ್ಸವ ಏ. 29ರಿಂದ ಮೇ 3ರವರೆಗೆ ನಡೆಯಲಿದೆ.

ಸುಮಾರು 5 ತಲೆಮಾರುಗಳಿಂದಲೂ ನಗರದಲ್ಲಿ ನೆಲೆಯೂರಿ, ಎಲ್ಲಾ ವರ್ಗದ ಭಕ್ತರ ಸಮಸ್ಯೆಗಳನ್ನು ಮೊಗ್ಗಿನ ಅಪ್ಪಣೆ, ಹರಕೆ ಕಟ್ಟಿಕೊಳ್ಳುವುದು, ನಿಂಬೆಹಣ್ಣಿನ ಆರತಿ, ಬಲಿ ನೀಡುವುದು, ಕರ್ಪೂರದ ಸೇವೆ ಮೂಲಕ ಪರಿಹಾರ ನೀಡುವ ಗ್ರಾಮದೇವತೆಗೆ, ನಿತ್ಯ ಸಾವಿರಾರು ಭಕ್ತರು ತಮ್ಮ ಕೋರಿಕೆ ಈಡೇರಿಸುವಂತೆ ಪ್ರಾರ್ಥಿಸುತ್ತಾರೆ. ದೇವಿ ದರ್ಶನ ಪಡೆದು ಆಶೀರ್ವಾದ ಪಡೆಯುತ್ತಾರೆ.

 ಶುಕ್ರವಾರ, ಮಂಗಳವಾರ ಶ್ರೀದೇವಿಯವರಿಗೆ ವಿಶೇಷ ಹೂವು, ಅರಿಸಿನ, ಕುಂಕುಮ, ಬೆಣ್ಣೆ ಹೀಗೆ ನಾನಾ ತರದ ಅಲಂಕಾರಗಳು ನೋಡುಗರ ಮನಸೂರೆಗೊಳ್ಳುತ್ತವೆ. ಪ್ರತಿ ತಿಂಗಳು ಅಮಾವಾಸ್ಯೆ ದಿನ ಸಾವಿರಾರು ಭಕ್ತರಿಗೆ ಅನ್ನ ದಾಸೋಹದ ವ್ಯವಸ್ಥೆ ಇರುತ್ತದೆ.

ಏ.29ರಂದು ಬೆಳಿಗ್ಗೆ ಮಲ್ಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಕರಿಯಮ್ಮ, ಮಲ್ಲಿಗೆಮ್ಮ, ಕೆಂಚರಾಯ, ದೂತರಾಯ, ಚೆಲುವರಾಯ ಸ್ವಾಮಿಗೆ ರುದ್ರಾಭಿಷೇಕ, ಅಂಕುರಾರ್ಪಣೆ ನಡೆಯಲಿದ್ದು, ದೇವಿಯವರಿಗೆ ಸ್ವರ್ಣರಂಜಿತ ಒಡವೆ ಧರಿಸುತ್ತಾರೆ. ನಂತರ ಮಲ್ಲಿಗೆಮ್ಮನವರ ಬಾನ ಸಿಹಿ ಎಡೆ ನಡೆಯುತ್ತದೆ. ಸಂಜೆ ಗುರುಸಿದ್ಧರಾಮೇಶ್ವರ ಸಮೇತ ಕೆಂಗಲ್ ಸಿದ್ಧೇಶ್ವರ ಸ್ವಾಮಿಯವರ ನೂರೊಂದೆಡೆ ಸೇವೆ ನಡೆಯುತ್ತವೆ.

ಏ. 30ರಂದು ಹಗಲು ದೇವಿ ಮದುವಣಿಗೆ ಶಾಸ್ತ್ರ ನಡೆಯುತ್ತದೆ. ಸಾವಿರಾರು ಸುಮಂಗಲೆಯರು ಉಪವಾಸವಿದ್ದು, ಕಳಸ ಹೊರುವುದು, ಅದರಲ್ಲೂ ಕರಿಯಮ್ಮನ ಕನ್ನಡಿ ಕಳಸವನ್ನು ಗಂಗಾಮತ ಕುಲದವರು ಹೊರುವ ಪದ್ಧತಿ ಇದೆ. ಇದನ್ನು ವೀಕ್ಷಿಸಲು ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ. ಮಲ್ಲಿಗೆಮ್ಮ, ಚೆಲುವರಾಯ, ದೂತರಾಯ ಸ್ವಾಮಿ ಉತ್ಸವವಿದ್ದು, ಕುಣಿತ ನೋಡುಗರನ್ನು ಆಕರ್ಷಿಸುತ್ತದೆ. ಸಂಜೆ ಮೂಲಸನ್ನಿಧಿಗೆ ದೇವಿ ಉತ್ಸವ ತಲುಪಿದ ಮೇಲೆ ಕರಿಯಮ್ಮನವರಿಗೆ ಮಾಂಸಾಹಾರ ಎಡೆ ಸಲ್ಲಿಸುತ್ತಾರೆ.

ಮೇ 1ರಂದು ಗಂಗಾಸ್ನಾನ ಕಾರ್ಯಕ್ರಮವಿದ್ದು, ಕರಿಯಮ್ಮ ದೇವಿಯವರ ಮುತ್ತಿನ ಪಲ್ಲಕ್ಕಿ ಉತ್ಸವ ಜರುಗುತ್ತದೆ. ಮೇ 2ರಂದು ದೇವಿಯವರಿಗೆ ವಿಶೇಷ ಅಲಂಕಾರದೊಂದಿಗೆ ಮಹಾರಥೋತ್ಸವ ನಡೆಯುತ್ತದೆ. ಅಂದು ಜಾತ್ರೆ ಮೈದಾನದಲ್ಲಿ ಮಲ್ಲಿಗೆಮ್ಮ ದೇವಿಯವರು ರಥಕ್ಕೆ ಕಾಯಿ ಒಡೆಯುವ ಮೂಲಕ ಚಾಲನೆ ನೀಡಲಾಗುತ್ತದೆ.

ವೈಭವದ ಅಂಬಾರಿ ಉತ್ಸವ

ಜಿಲ್ಲೆಯಲ್ಲಿ ಎಲ್ಲೂ ನಡೆಯದ ಕರಿಯಮ್ಮ, ಮಲ್ಲಿಗೆಮ್ಮ ದೇವಿಯವರ ವೈಭವದ ಆನೆ ಅಂಬಾರಿ ಉತ್ಸವ ಮೇ 3ರಂದು ಸಂಜೆ ನಡೆಯುತ್ತದೆ.

ಈ ಉತ್ಸವವು ಸಕಲ ಬಿರುದಾವಳಿಗಳೊಂದಿಗೆ   ರಾಜ್ಯದ ನಾನಾ ಭಾಗಗಳಿಂದ ಬರುವ ಸಾಂಸ್ಕ್ರತಿಕ ಕಲಾತಂಡಗಳು, ಮಂಗಳವಾದ್ಯಗಳ ಸಮೇತ ನಗರದ ಪ್ರಮುಖ ಬೀದಿಗಳಲ್ಲಿ ಜರುಗುತ್ತದೆ. ಇದನ್ನು ವೀಕ್ಷಿಸಲು ಪ್ರಮುಖ ಬೀದಿಗಳಲ್ಲಿ ಜನರು ರಸ್ತೆಯ ಎರಡು ಬದಿಗಳಲ್ಲಿ ನಿಂತು ಮಧ್ಯರಾತ್ರಿಯವರಿಗೆ ಕಾದು ಕುಳಿತಿರುತ್ತಾರೆ. ಜಾತ್ರಾ ಮೈದಾನದಲ್ಲಿ ಸಹಸ್ರಾರು ಭಕ್ತಾದಿಗಳು, ಸುತ್ತಲಿನ ಗ್ರಾಮಸ್ಥರು ಬಂದು ಜಂಬೂ ಸವಾರಿಯನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಾರೆ.    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT