ಹಾಸನಕ್ಕೆ ಪ್ರಜ್ವಲ್‌ ರೇವಣ್ಣ ಕೊಡುಗೆ ಏನು?

ಮಂಗಳವಾರ, ಏಪ್ರಿಲ್ 23, 2019
29 °C
ನಗರದಲ್ಲಿ ಬಿಜೆಪಿ ನಾಯಕಿ ಮಾಳವಿಕ ಅವಿನಾಶ್ ರೋಡ್‌ ಷೋ

ಹಾಸನಕ್ಕೆ ಪ್ರಜ್ವಲ್‌ ರೇವಣ್ಣ ಕೊಡುಗೆ ಏನು?

Published:
Updated:
Prajavani

ಹಾಸನ: ಲೋಕಸಭೆ ಚುನಾವಣಾ ಅಖಾಡದಲ್ಲಿ ದಿನದಿಂದ ದಿನಕ್ಕೆ ಅಭ್ಯರ್ಥಿಗಳ ಪ್ರಚಾರದ ಭರಾಟೆ ಜೋರಾಗಿದೆ.
ಬಿಜೆಪಿ ನಾಯಕಿ ಮಾಳವಿಕ ಅವಿನಾಶ್‌ ಅವರು ಭಾನುವಾರ ಬಿಜೆಪಿ ಅಭ್ಯರ್ಥಿ ಎ.ಮಂಜು ಪರವಾಗಿ ಪ್ರಚಾರ ನಡೆಸಿದರು.

ಬಸವೇಶ್ವರ ದೇವಸ್ಥಾನ, ಗಾಣಿಗರ ಬೀದಿಯಲ್ಲಿರುವ ಕನ್ನಂಬಾಡಿಯಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಅರಳೇಪೇಟೆ ವೃತ್ತದ ಗಾಣಿಗರ ಬೀದಿ, ಪೆನ್ಷನ್‌ ಮೊಹಲ್ಲಾದಲ್ಲಿ ರೋಡ್‌ ಷೋ ನಡೆಸಿ, ಮತಯಾಚಿಸಿದರು.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಜನರಿಗೆ ಸನ್ ಆಫ್ ದ ಸಾಯಿಲ್ ಬಗ್ಗೆ ಪ್ರೀತಿ ಇದೆ. ಆದರೆ, ಗ್ರ್ಯಾಂಡ್ ಸನ್ ಬಗ್ಗೆ ಪ್ರೀತಿ ಯಾಕೆ ಇರಬೇಕು. ಜಿಲ್ಲೆಯಲ್ಲಿ ದೇವೇಗೌಡರು ಸಾಕಷ್ಟು ಕೆಲಸ ಮಾಡಿದ್ದಾರೆ. ಜಿಲ್ಲೆಗೆ ಪ್ರಜ್ವಲ್ ಕೊಡುಗೆ ಹಾಗೂ ಪರಿಶ್ರಮ ಏನು’ ಎಂದು ಪ್ರಶ್ನಿಸಿದ ಅವರು, ‘ಗೌಡರ ಮೊಮ್ಮಗ ಎಂಬ ಕಾರಣಕ್ಕೆ ಜನರು ಆಯ್ಕೆ ಮಾಡುತ್ತಾರೆ ಎಂಬುದನ್ನು ಒಪ್ಪುವುದಿಲ್ಲ’ ಎಂದು ತಿಳಿಸಿದರು.

‘ಸಿಂಹಾಸನಪುರಿಯನ್ನ ಒಬ್ಬ ಮೊಮ್ಮಗನಿಗೆ ಬಿಟ್ಟು ಕೊಟ್ಟಿದ್ದಾರೆ. ಮತ್ತೊಂದೆಡೆ ಮಂಡ್ಯವನ್ನ ಮತ್ತೊಬ್ಬರಿಗೆ ಕೊಟ್ಟಿದ್ದಾರೆ. ಯಾರು ಜನರಿಗೆ ಸ್ಪಂದಿಸುತ್ತಾರೆ ಅವರಿಗೆ ಮತ ಕೊಡಬೇಕು. ನಾವು ನಾಮ್‌ಧಾರ್ ಅಲ್ಲ, ಕಾಮ್‌ಧಾರ್. ಸುಮಲತಾ ಅಂಬರೀಷ್‌ಗೆ ಬಿಜೆಪಿ ಸಂಪೂರ್ಣ ಬೆಂಬಲ ನೀಡಲಿದೆ’ ಎಂದರು.

‘ಹೊಸ ವರ್ಷ ಪ್ರಾರಂಭವಾಗಿದೆ. ಹೊಸ ಗಾಳಿ ಬೀಸಲಿದೆ. ಈ ಬಾರಿ ಜಿಲ್ಲೆಯ ಜನರು ಬಿಜೆಪಿ ಅಭ್ಯರ್ಥಿ ಎ.ಮಂಜು ಅವರನ್ನು ಆಯ್ಕೆ ಮಾಡಿ ದೆಹಲಿಗೆ ಕಳುಹಿಸುವರು. ಮೂರು ದಶಕಗಳಿಂದ ಜಿಲ್ಲೆಯ ಜನರ ಪರವಾಗಿ ಅವರು ಕೆಲಸ ಮಾಡುತ್ತಿದ್ದಾರೆ’ ಎಂದು ಹೇಳಿದರು.

‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಸಾಧನೆಗಳು ಕೈ ಹಿಡಿಯಲಿವೆ. ದೇಶದ ರಕ್ಷಣೆಗೆ ಅವರು ತೆಗೆದುಕೊಂಡ ದಿಟ್ಟ ನಿರ್ಧಾರಗಳು, ಭ್ರಷ್ಟಾಚಾರ ನಿಯಂತ್ರಣ, ಜನಧನ್ ಯೋಜನೆ, ಇವೆಲ್ಲಕ್ಕಿಂತ ಮಿಗಿಲಾಗಿ ಭವ್ಯ ಭಾರತದ ನಿರ್ಮಾಣಕ್ಕೆ ಮನ್ನಣೆ ಸಿಗುವುದು ಸತ್ಯ’ ಎಂದು ಭವಿಷ್ಯ ನುಡಿದರು.

ಗವೇನಹಳ್ಳಿಯಲ್ಲಿ ಪ್ರಚಾರ ನಡೆಸಿ ಮಾತನಾಡಿದ ಎ.ಮಂಜು, ‘ಸರ್ಜಿಕಲ್‌ ಸ್ಟ್ರೈಕ್‌ನಿಂದ ದೇಶ ರಕ್ಷಿಸಿರುವ ಏಕೈಕ ಪ್ರಧಾನಿ ನರೇಂದ್ರ ಮೋದಿ. ಮತ್ತೊಮ್ಮೆ ಮೋದಿ ಪ್ರಧಾನಿ ಆಗಬೇಕು ಎಂಬುದು ಜನರ ಆಸೆ. ಸಮೀಕ್ಷೆ ಪ್ರಕಾರ 305 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ. ಅದರಲ್ಲಿ ಹಾಸನ ಕ್ಷೇತ್ರವೂ ಸೇರಿದೆ. ಕುಟುಂಬದ ರಾಜಕಾರಣ ವಿರುದ್ಧ ಹೋರಾಡಬೇಕು. ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರಿಗೆ ಅಧಿಕಾರ ನೀಡಿದರೆ ಸಾಮಾನ್ಯರಿಗೆ ಅಧಿಕಾರ ಸಿಗುವುದು ಯಾವಾಗ. ಪ್ರೀತಂ ಗೌಡರಿಗೆ ಆಶೀರ್ವಾದ ಮಾಡಿದಂತೆ ನನಗೂ ಮಾಡಬೇಕು’ ಎಂದು ಮನವಿ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !