ಭಾನುವಾರ, ಜನವರಿ 17, 2021
17 °C
ಸಿಐಟಿಯು ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಸಿಡಿಪಿಒ ವರ್ಗಾವಣೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ)ಯಿಂದ ಅಧೀನ ನೌಕರರಿಗೆ ಕಿರುಕುಳವಾಗುತ್ತಿದ್ದು, ಕೂಡಲೇ ಅವರನ್ನು ಬೇರೆಡೆಗೆ ವರ್ಗಾಯಿಸಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಶುಕ್ರವಾರ ಪ್ರತಿಭಟನೆ ನಡೆಸಿದರು.

ನಗರದ ಹೇವಾವತಿ ಪ್ರತಿಮೆ ಬಳಿಯಿಂದ ಮೆರವಣಿಗೆಯಲ್ಲಿ ಸಾಗಿದ ಪ್ರತಿಭಟನಕಾರರು ಎನ್‌.ಆರ್‌. ವೃತ್ತ, ಬಿ.ಎಂ.ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿ ಸಿಡಿಪಿಒ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ. ಪುಷ್ಪಾ ಮಾತನಾಡಿ, ‘ಹಾಸನ ಸಿಡಿಪಿಒ ಆಗಿ ಎರಡು ವರ್ಷಗಳಿಂದ ಕೆಲಸ ಮಾಡುತ್ತಿರುವ ಜಯಕಿರಣ ಅವರು ಕಚೇರಿಯನ್ನು ಖಾಸಗಿ ಸ್ವತ್ತು ಎಂಬಂತೆ ಪರಿಗಣಿಸಿದ್ದಾರೆ. ಅಂಗನವಾಡಿ ನೌಕರರ ಕುಂದುಕೊರತೆ ಸಭೆ ನಡೆಸಿಲ್ಲ. ಅಂಗನವಾಡಿಗಳ ತಪಾಸಣೆಯನ್ನು ಅವರ ತಂದೆ, ತಾಯಿ ಹಾಗೂ ಸಹೋದರ ನಡೆಸುತ್ತಾರೆ. ಮೊಟ್ಟೆ, ತರಕಾರಿ ಖರೀದಿಗೆ ಸಮಯಕ್ಕೆ ಸರಿಯಾಗಿ ಹಣ ಬಿಡುಗಡೆ ಮಾಡುವುದಿಲ್ಲ. ತಾಲ್ಲೂಕಿನ ಯಾವ ಅಂಗನವಾಡಿ ನೌಕರರೊಂದಿಗೂ ಸೌಹಾರ್ದತೆ ಹೊಂದಿಲ್ಲ’ ಎಂದು ಆರೋಪಿಸಿದರು.

‘ಕಚೇರಿಯ ಗುಮಾಸ್ತರು ಇವರ ಕಿರುಕುಳ ತಾಳದೆ ನಾಲ್ಕು ತಿಂಗಳಿಂದ ರಜೆ ಹಾಕಿದ್ದಾರೆ. ಇದರಿಂದ ಇಲಾಖೆ ಕೆಲಸಗಳು ಕುಂಠಿತವಾಗಿವೆ. ಅಂಗನವಾಡಿ ನೌಕರರ ಮುಂಬಡ್ತಿ ಕಡತಗಳು ನನೆಗುದಿಗೆ ಬಿದ್ದಿವೆ. ಇತರೆ ಸಿಬ್ಬಂದಿಗೂ ಇದೇ ರೀತಿ ಕಿರುಕುಳ ನೀಡುತ್ತಾರೆ. ಜಯಕಿರಣ ಅವರ ಕುಟುಂಬ ಸದಸ್ಯರ ದಬ್ಬಾಳಿಕೆ ಮಿತಿ ಮೀರಿದೆ. ಸಿಡಿಪಿಒ ತಮ್ಮ ಅಧಿಕಾರ ವ್ಯಾಪ್ತಿ ಮೀರಿ ವರ್ತಿಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‌‘ಕಚೇರಿ ಮತ್ತು ಇಲಾಖೆಯಲ್ಲಿನ ಇಂತಹ ಪರಿಸ್ಥಿತಿಯನ್ನು ಪ್ರಶ್ನಿಸಿದರೆ ನೌಕರರ ವಿರುದ್ಧ ದೌರ್ಜನ್ಯ ಪ್ರಕರಣ ದಾಖಲಿಸುತ್ತಾರೆ. ಜೊತೆಗೆ ಸೇಡಿನ ಕ್ರಮ ಕೈಗೊಳ್ಳುತ್ತಾರೆ. ಕಾರ್ಮಿಕ ವಿರೋಧಿ ಮತ್ತು ಜನ ವಿರೋಧಿ ಆಗಿರುವ ಸಿಡಿಪಿಒ ವಿರುದ್ಧ ತನಿಖೆಗೆ ಆದೇಶಿಸಬೇಕು’ ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಆರ್. ಗಿರೀಶ್ ಅವರಿಗೆ ಮನವಿ ಸಲ್ಲಿಸಿದರು.

ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಧರ್ಮೇಶ್, ಮುಖಂಡರಾದ ಅರವಿಂದ, ಜಿ.ಪಿ. ಸತ್ಯನಾರಾಯಣ ಹಾಗೂ ಇತರರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.