ಭಾನುವಾರ, ಆಗಸ್ಟ್ 25, 2019
20 °C

ಅಧಿಕಾರಿಗಳ ಸ್ಥಳ ನಿಯೋಜನೆಗೆ ಬಿಡ್ಡಿಂಗ್‌: ಎಚ್.ಡಿ.ಕುಮಾರಸ್ವಾಮಿ ಆರೋಪ

Published:
Updated:

ಹಾಸನ: ‘ರಾಜ್ಯ ಬಿಜೆಪಿ ಸರ್ಕಾರದಲ್ಲಿ ಸಚಿವ ಸಂಪುಟ ರಚನೆಗೂ ಮುನ್ನವೇ ಪ್ರಮುಖ ಇಲಾಖೆಗಳ ಅಧಿಕಾರಿಗಳ ಸ್ಥಳ ನಿಯೋಜನೆಗಾಗಿ ಬಿಡ್ಡಿಂಗ್ ನಡೆಯುತ್ತಿದೆ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.

‘ಅತಿವೃಷ್ಟಿ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ಜನರ ಹಿತದೃಷ್ಟಿಯಿಂದಲಾದರೂ ವರ್ಗಾವಣೆ ಬಿಡ್ಡಿಂಗ್ ಮುಂದೂಡಬೇಕು. ಮಾರ್ಕೆಟ್ ರೀತಿಯಲ್ಲಿ ಲೋಕೋಪಯೋಗಿ, ಕಂದಾಯ ಮೊದಲಾದ ಇಲಾಖೆಗಳ ಅಧಿಕಾರಿಗಳನ್ನು ಬಿಡ್ಡಿಂಗ್ ಮಾಡಿದರೆ ಅವರನ್ನು ವಿಶ್ವಾಸಕ್ಕೆ ಪಡೆಯೋದು ಹೇಗೆ’ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

‘ಕೇವಲ ರಾಜಕೀಯಕ್ಕಾಗಿ ಆರೋಪ ಮಾಡುತ್ತಿಲ್ಲ. ವಿರೋಧ ಪಕ್ಷದ ಒಬ್ಬ ನಾಯಕನಾಗಿ ಸಲಹೆ ನೀಡುತ್ತಿದ್ದೇನೆ. 14 ತಿಂಗಳು ಎಂದೂ ನನ್ನ ಕಚೇರಿಯನ್ನು ಮಾರ್ಕೆಟ್ ರೀತಿ ಮಾಡಿರಲಿಲ್ಲ. ಮುಖ್ಯ ಕಾರ್ಯದರ್ಶಿ ಸೇರಿ, ಒಳ್ಳೆಯ ಕೆಲಸ ಮಾಡುವ ಅಧಿಕಾರಿಗಳಿದ್ದು, ಅವರನ್ನು ವಿಶ್ವಾಸಕ್ಕೆ ಪಡೆಯಿರಿ’ ಎಂದು ಸಲಹೆ ನೀಡಿದರು.

ರಾಜ್ಯದ ನೆರೆಹಾವಳಿ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಗೃಹ ಸಚಿವ ಅಮಿತ್ ಶಾ ವೈಮಾನಿಕ ಸಮೀಕ್ಷೆ ನಡೆಸಿ ಹೋಗಿದ್ದಾರೆ. ಆದರೆ, ಯಾರೊಬ್ಬರೂ ಸಂಕಷ್ಟದಲ್ಲಿರುವ ನಾಡಿನ ಜನರಲ್ಲಿ ಆತ್ಮಸ್ಥೈರ್ಯ ತುಂಬುವ ಭರವಸೆ ನೀಡಿಲ್ಲ. ಪರಿಹಾರ ಘೋಷಣೆ ಭರವಸೆ ನೀಡಬಹುದಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಳೆದ ವರ್ಷ ಕೊಡಗು ಸೇರಿದಂತೆ ಅನೇಕ ಕಡೆ ಅತಿವೃಷ್ಟಿ ಹಾನಿ ಸಂಭವಿಸಿದಾಗಲೂ, ಬೇರೆ ರಾಜ್ಯಗಳಿಗೆ ನೀಡಿದಂತೆ ನಿರೀಕ್ಷಿತ ನೆರವು ನೀಡಲಿಲ್ಲ ಎಂದು ದೂರಿದರು.

‘ಸಮ್ಮಿಶ್ರ ಸರ್ಕಾರ ಟೇಕ್ ಆಫ್ ಆಗಿಲ್ಲ ಎಂದು ದೂರುತ್ತಿದ್ದ ಬಿಜೆಪಿ ನಾಯಕರಲ್ಲಿ ನಾನೂ ಅದೇ ಪ್ರಶ್ನೆ ಮಾಡಲು ಹೋಗುವುದಿಲ್ಲ. ಸರ್ಕಾರ ಟೇಕಾಫ್ ಆಗುವುದು ಅಧಿಕಾರಿಗಳ ಬಿಡ್ಡಿಂಗ್‌ನಲ್ಲಿ ಅಲ್ಲ. ಕೆಲಸದಲ್ಲಿ ಆಗಬೇಕು’ ಎಂದು ಟಾಂಗ್ ನೀಡಿದರು.

ಐಪಿಎಸ್‌ ಅಧಿಕಾರಿಗಳ ಫೋನ್‌ ಕದ್ದಾಲಿಕೆಯ ಸಂಭಾಷಣೆ ಸೋರಿಕೆಯ ತನಿಖೆ ನಡೆಸುವ ಬದಲು ಅಧಿಕಾರಿಗಳ ಸ್ಥಳ ನಿಯೋಜನೆ ಬಿಡ್ಡಿಂಗ್‌ ಬಗ್ಗೆ ತನಿಖೆಯಾಗಲಿದ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ರಾಜ್ಯದ ಬೊಕ್ಕಸ ಖಾಲಿಯಾಗಿದ್ದು, ದೇವರೇ ಕಾಪಾಡಬೇಕು’ ಎಂಬ ಸಿ.ಎಂ ಯಡಿಯೂರಪ್ಪ ಆರೋಪಕ್ಕೆ ತಿರುಗೇಟು ನೀಡಿದ ಕುಮಾರಸ್ವಾಮಿ, ‘ರಾಜ್ಯದ ಜನರ ತೆರಿಗೆ ಹಣದಿಂದ ಬೊಕ್ಕಸ ಸುಭದ್ರವಾಗಿದೆ. ಇದನ್ನು ದೇವರು ಕಾಪಾಡಬೇಕಿಲ್ಲ. ಬದಲಾಗಿ ಇರುವ ಹಣವನ್ನು ವಿನಿಯೋಗ ಮಾಡುವುದು ಹೇಗೆ ಎಂಬ ಬಗ್ಗೆ ಅವರಿಗೇ ದೇವರು ಬುದ್ಧಿ ಕೊಡಲಿ’ ಎಂದು ಲೇವಡಿ ಮಾಡಿದರು.

Post Comments (+)