ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇಮಾವತಿ ಸಕ್ಕರೆ ಕಾರ್ಖಾನೆಯಲ್ಲಿ ಅಕ್ರಮ ಆರೋಪ: ನ್ಯಾಯಾಂಗ ತನಿಖೆಗೆ ಒತ್ತಾಯ

Last Updated 28 ಜುಲೈ 2020, 13:28 IST
ಅಕ್ಷರ ಗಾತ್ರ

ಹಾಸನ: ದಿವಾಳಿ ಸ್ಥಿತಿ ತಲುಪಿರುವ ಚನ್ನರಾಯಪಟ್ಟಣ ತಾಲ್ಲೂಕಿನ ಶ್ರೀನಿವಾಸಪುರದ ಹೇಮಾವತಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್‌ ಮುಖಂಡ ಸಿ.ಎಸ್‌. ಪುಟ್ಟೇಗೌಡ ಆಗ್ರಹಿಸಿದರು.

1973-74ರ ಅವಧಿಯಲ್ಲಿ ಸಚಿವರಾಗಿದ್ದ ಎಚ್‌.ಸಿ.ಶ್ರೀಕಂಠಯ್ಯ ಅವರ ಪರಿಶ್ರಮದಿಂದ ಹೇಮಾವತಿ ಸಕ್ಕರೆ ಕಾರ್ಖಾನೆ ಆರಂಭಗೊಂಡಿತು. 1250 ಟನ್ ಕಬ್ಬು ಅರೆಯುವ ಸಾಮರ್ಥ್ಯ ಹೊಂದಿದ್ದು, ಹಾಸನ ಜಿಲ್ಲೆ ಸೇರಿದಂತೆ ಕೆ.ಆರ್‌.ಪೇಟೆ, ತುರುವೆಕೆರೆ ಭಾಗದ ರೈತರು ಕಬ್ಬು ಪೂರೈಸುತ್ತಾರೆ. ನಾಲ್ಕು ವರ್ಷದಿಂದ ಕಬ್ಬು ಅರೆಯುತ್ತಿಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಸಕ್ಕರೆ ಕಾರ್ಖಾನೆಗಳ ಸಾಮರ್ಥ್ಯ ಹೆಚ್ಚಿಸುವ ಉದ್ದೇಶದಿಂದ ಹೇಮಾವತಿ ಕಾರ್ಖಾನೆಯನ್ನು ಚಾಮುಂಡೇಶ್ವರಿ ಕಂಪನಿಗೆ 30 ವರ್ಷಗಳ ಅವಧಿಗೆ ₹106 ಕೋಟಿ ಮೊತ್ತಕ್ಕೆ ಗುತ್ತಿಗೆ ನೀಡಲಾಯಿತು. ಕಂಪನಿ ಐದು ವರ್ಷದಿಂದ ಗುತ್ತಿಗೆ ಹಣ ನೀಡಿಲ್ಲ. ಅಸಲು, ಬಡ್ಡಿ ಸೇರಿ ಅಂದಾಜು ₹ 35 ಕೋಟಿ ಆಗಿದೆ. ಅಲ್ಲದೇ ಪರೀಕ್ಷಾ ವೇಳೆ ಮೂರು ತಿಂಗಳ ಹಿಂದೆ ಬಾಯ್ಲರ್ ಸಿಡಿದಿದೆ. ಹಳೇ ಉಪಕರಣಗಳನ್ನು ಜೋಡಿಸಿ, ಹೊಸ ಸಾಮಗ್ರಿಗಳನ್ನು ಬೇರೆ ಕಡೆ ಜೋಡಿಸಲಾಗುತ್ತಿದೆ ಎಂಬ ಮಾತು ಕೇಳಿ ಬಂದಿದೆ. ತಜ್ಞರಿಂದ ವರದಿ ಪಡೆದು, ಸರ್ಕಾರ ತನಿಖೆ ನಡೆಸಬೇಕು. ಕಾರ್ಖಾನೆ ಪ್ರಾರಂಭಿಸಿ ರೈತರ ಹಿತ ಕಾಪಾಡಬೇಕು ಎಂದು ಮನವಿ ಮಾಡಿದರು.

ಕಾರ್ಖಾನೆ ಅಭಿವೃದ್ಧಿಗೋಸ್ಕರ ಕೆಲವು ಆಸ್ತಿಗಳನ್ನು ಅಡವಿಟ್ಟು ₹ 150 ಕೋಟಿ ಸಾಲ ಪಡೆದಿದೆ. ಕಾರ್ಖಾನೆ ಆಸ್ತಿ ಅಡವಿಟ್ಟು ಸಾಲ ಪಡೆದು ಅಭಿವೃದ್ಧಿಪಡಿಸುವುದಾದರೆ ಚಾಮುಂಡೇಶ್ವರಿ ಕಂಪನಿಗೆ ಗುತ್ತಿಗೆ ಕೋಡುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದರು.

ಕಾರ್ಖಾನೆ ಸರಿಯಾಗಿ ನಿರ್ವಹಣೆ ಮಾಡದ ಕಾರಣ ಕಬ್ಬು ಅರೆಯುವ ಸಾಮರ್ಥ್ಯ ಕಡಿಮೆ ಆಯಿತು. ಶುಂಠಿ ಬೆಳೆ ಕಡೆಗೆ ಒಲವು ಹೆಚ್ಚಾದ ಕಾರಣ ಕಬ್ಬು ಬೆಳೆಯುವ ಪ್ರದೇಶ ಕಡಿಮೆ ಆಯಿತು. ಕಾರ್ಖಾನೆಯ ಆಸ್ತಿ ಸಂರಕ್ಷಿಸಲಾರದ ಆಡಳಿತ ಮಂಡಳಿ ಅವಶ್ಯಕತೆ ಇಲ್ಲ. ಹಾಗಾಗಿ ಆಡಳಿತ ಮಂಡಳಿ ರದ್ದು ಮಾಡಿ ಆಡಳಿತಾಧಿಕಾರಿ ನೇಮಿಸಬೇಕು. ರೈತರ ಹಿತ ಕಾಪಾಡದಕಂಪನಿ ಜತೆಗಿನ ಗುತ್ತಿಗೆ ಒಪ್ಪಂದ ರದ್ದು ಪಡಿಸಬೇಕು ಎಂದು ಒತ್ತಾಯಿಸಿದರು.

ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಕಾರ್ಖಾನೆ ಅಭಿವೃದ್ಧಿಗೆ ಗಮನಹರಿಸುವುದಿಲ್ಲ. ಈಗಲಾದರೂ ಮುಖ್ಯಮಂತ್ರಿಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಜಿಲ್ಲೆಯ ಎಲ್ಲಾ ಶಾಸಕರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಕಾರ್ಖಾನೆ ಪುನಶ್ಚೇತನಕ್ಕೆ ಮುಂದಾಗಬೇಕು ಎಂದರು.

ಕಾಂಗ್ರೆಸ್‌ ಮುಖಂಡ ಎಚ್‌.ಕೆ. ಜವರೇಗೌಡ ಮಾತನಾಡಿ, ಸಕ್ಕರೆ ಕಾರ್ಖಾನೆಯ ದಾಖಲೆಗಳನ್ನು ಬ್ಯಾಂಕ್‌ನಲ್ಲಿ ಅಡವಿಟ್ಟು ಸಾಲ ಪಡೆದು ಕೆಲವರು ಲಾಭ ಮಾಡಿಕೊಂಡಿದ್ದಾರೆ. ಸರ್ಕಾರ ಈ ಬಗ್ಗೆ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಜನ ಪ್ರತಿನಿಧಿಗಳು ಪಕ್ಷಬೇಧ ಮರೆತು ಕಾರ್ಖಾನೆಯ ಪುನಶ್ಚೇತನಕ್ಕೆ ಕೈಗೂಡಿಸಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ರೈತಸಂಘದ ಜಿಲ್ಲಾ ವಕ್ತಾರ ಶ್ರೀಕಂಠದೊಡ್ಡೇರಿ, ಪರಿಸರ ಪ್ರೇಮಿ ಹೆಮ್ಮಿಗೆ ಮೋಹನ್‌, ಹೇಮಾವತಿ ಸಕ್ಕರೆ ಕಾರ್ಖಾನೆಯ ಮಾಜಿ ನಿರ್ದೇಶಕ ಸಿ.ಎಸ್‌. ಜಯರಾಮ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT