ಹೊಳೆನರಸೀಪುರ: ಪಟ್ಟಣ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಪ್ರಕಟಗೊಂಡಿದ್ದು, ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೂ, ಉಪಾಧ್ಯಕ್ಷ ಸ್ಥಾನ ಬಿಸಿಎಂ ಮಹಿಳೆಗೆ ಮೀಸಲಾಗಿದೆ. ಪುರಸಭೆಯಲ್ಲಿ 23 ಸ್ಥಾನಗಳಿದ್ದು, ಜೆಡಿಎಸ್‌ನ 22 ಸದಸ್ಯರು, ಕಾಂಗ್ರೆಸ್ ಒಬ್ಬ ಸದಸ್ಯರಿದ್ದಾರೆ.
ಇದುವರೆಗೂ ಶಾಸಕ ಎಚ್.ಡಿ. ರೇವಣ್ಣ ಅವರ ನಿರ್ಧಾರದಂತೆಯೇ ಹೊಳೆನರಸೀಪುರ ಪುರಸಭೆಯ ಅಧ್ಯಕ್ಷರ ಆಯ್ಕೆ ನಡೆಯುತ್ತ ಬಂದಿದೆ. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ ಆಯ್ಕೆ ಆಗಿರುವ ಎಲ್ಲ ಜೆಡಿಎಸ್ ಸದಸ್ಯರಿಗೂ ಅಧ್ಯಕ್ಷರಾಗಬೇಕು ಎನ್ನುವ ಆಸೆ ಚಿಗುರಿದೆ.
ಆದರೆ ಪ್ರಮುಖವಾಗಿ ಆರ್ಯವೈಶ್ಯ ಸಮಾಜದ ಶ್ರೀಧರ್, ಒಕ್ಕಲಿಗ ಸಮಾಜದ ಎಚ್.ಕೆ. ಪ್ರಸನ್ನ, ದೇವಾಂಗ ಸಮುದಾಯದ ಎ. ಜಗನ್ನಾಥ್ ಅಧ್ಯಕ್ಷ ಸ್ಥಾನದ ತೀವ್ರ ಆಕಾಂಕ್ಷಿಗಳಾಗಿದ್ದಾರೆ ಎಂಬ ಮಾಹಿತಿ ಇದೆ.
ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ನ ಪ್ರಜ್ವಲ್ ರೇವಣ್ಣ ಪರಾಭವಗೊಂಡಿದ್ದು, ಹೊಳೆನರಸೀಪುರ ತಾಲ್ಲೂಕಿನಲ್ಲಿಯೇ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ 14 ಸಾವಿರ ಮತಗಳನ್ನು ಹೆಚ್ಚಾಗಿ ಪಡೆದಿದ್ದಾರೆ. ಹೊಳೆನರಸೀಪುರ ಪಟ್ಟಣದ ಬಹುತೇಕ ಬೂತ್‌ಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೇ ಹೆಚ್ಚು ಮತಗಳು ಲಭಿಸಿವೆ. ಆದರೆ ವಿಧಾನ ಸಭೆ ಹಾಗೂ ಲೋಕಸಭಾ ಚುನಾವಣೆಯಲ್ಲಿ 8 ನೇ ವಾರ್ಡ್‌ನಲ್ಲಿ ಜೆಡಿಎಸ್ ಪಕ್ಷಕ್ಕೆ ಹೆಚ್ಚು ಮತಗಳನ್ನು ಹಾಕಿಸಿದ ಪುರಸಭಾ ಸದಸ್ಯ ಎ. ಜಗನ್ನಾಥ್. ಇದರಿಂದಾಗಿ ಅಧ್ಯಕ್ಷ ಸ್ಥಾನವನ್ನು ಜಗನ್ನಾಥ್ ಅವರಿಗೆ ನೀಡಲಾಗುವುದು ಎಂಬ ಮಾತುಗಳಿವೆ.
ಉಪಾಧ್ಯಕ್ಷ ಸ್ಥಾನ ಬಿಸಿಎಂ ಮಹಿಳೆಗೆ ಮೀಸಲಾಗಿದ್ದು ವಾರ್ಡ್ ನಂ 7 ರಿಂದ ಆಯ್ಕೆ ಆಗಿರುವ ಶಫಿನಾಜ್ ಅವರಿಗೆ ಅವಕಾಶ ಸಿಗುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ.
ಶಾಸಕ ರೇವಣ್ಣ ಜಾರಿಬಿದ್ದು ವಿಶ್ರಾಂತಿ ಪಡೆಯುತ್ತಿದ್ದು, ಅವರ ಓಡಾಟ ಕಡಿಮೆ ಆಗಿದೆ. ಆದರೆ ಜೆಡಿಎಸ್ ಸದಸ್ಯರು ಒಗ್ಗಟ್ಟಾಗಿದ್ದು, ರೇವಣ್ಣ ಅವರ ನಿರ್ಧಾರವೇ ಅಂತಿಮ ಎನ್ನುತ್ತಿದ್ದಾರೆ. ಕಾಂಗ್ರೆಸ್ ಏಕೈಕ ಸದಸ್ಯರನ್ನು ಹೊಂದಿದ್ದು, ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದಂತಿಲ್ಲ ಎನ್ನುವುದು ಮೇಲ್ನೋಟಕ್ಕೆ ಕಾಣುತ್ತಿದೆ.
ಈ ಹಿಂದೆ ಜೆಡಿಎಸ್‌ನಿಂದ ಗೆದ್ದು ಪುರಸಭೆ ಅಧ್ಯಕ್ಷರಾಗಿದ್ದ ಎಚ್.ವಿ. ಪುಟ್ಟರಾಜು, ಸದಸ್ಯರಾಗಿದ್ದ ಓಲೆಕುಮಾರ್, ವಿಧಾನಸಭೆ ಚುನಾವಣೆಗೆ ಮುನ್ನವೇ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಪಕ್ಷಾಂತರ ನಿಷೇಧ ಕಾಯ್ದೆಗೆ ಒಳಗಾಗದಂತೆ ಪುರಸಭೆ ಆಡಳಿತ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಕಾರ್ಯಕರ್ತರು ಯೋಜನೆ ರೂಪಿಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಪುರಸಭೆಯಲ್ಲಿ ಜೆಡಿಎಸ್ ಆಡಳಿತವನ್ನು ಕಸಿಯುವುದು ಸುಲಭದ ಮಾತಲ್ಲ ಎಂದು ಜೆಡಿಎಸ್ ಕಾರ್ಯಕರ್ತರು ವಿಶ್ವಾಸದ ಮಾತುಗಳನ್ನು ಆಡುತ್ತಿದ್ದಾರೆ.
ಹಾಸನ: ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟಿಸಲಾಗಿದ್ದು ಚುನಾವಣೆಗೆ ಸಿದ್ಧತೆಗಳು ಆರಂಭಿಸಲಾಗಿದೆ. ವಿವಿಧ ಸ್ಥಳೀಯ ಸಂಸ್ಥೆಗಳಿಗೆ ಚುನಾವಣಾ ಅಧಿಕಾರಿಗಳನ್ನು ನೇಮಿಸಿ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಆದೇಶಿಸಿದ್ದಾರೆ. ಹಾಸನ ಹಾಗೂ ಅರಸೀಕೆರೆ ನಗರಸಭೆಗೆ ಹಾಸನ ಉಪ ವಿಭಾಗಾಧಿಕಾರಿ ಹಾಸನ ಚನ್ನರಾಯಪಟ್ಟಣ ಹೊಳೆನರಸೀಪುರ ಸಕಲೇಶಪುರ ಬೇಲೂರು ಪುರಸಭೆಗೆ ಆಯಾ ತಾಲ್ಲೂಕುಗಳ ತಹಶೀಲ್ದಾರರು ಅರಕಲಗೂಡು ಮತ್ತು ಆಲೂರು ಪಟ್ಟಣ ಪಂಚಾಯಿತಿಗೆ ಆಯಾ ತಹಶೀಲ್ದಾರನ್ನು ನೇಮಕ ಮಾಡಲಾಗಿದೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ನಿಯಮಗಳಂತೆ ಕ್ರಮಗಳನ್ನು ಕೈಗೊಂಡು ಚುನಾವಣೆ ನಡೆಸಬೇಕು. ಆಯ್ಕೆಯ ಕುರಿತು ಕಚೇರಿಗೆ ವರದಿ ಸಲ್ಲಿಸಲು ಆದೇಶದಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.