ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೇಬೀಡು: ಹೊನ್ನಾರು ಹೂಡುವ ‘ಚಿನ್ನದ ಉಳಿಮೆ’

Last Updated 2 ಏಪ್ರಿಲ್ 2022, 2:37 IST
ಅಕ್ಷರ ಗಾತ್ರ

ಹಳೇಬೀಡು: ವರ್ಷವಿಡೀ ಮಳೆ, ಬೆಳೆ ಸಮೃದ್ಧವಾಗಿ, ಜನರು ನೆಮ್ಮದಿ ಜೀವನ ನಡೆಸುವಂತಾಗಲೆಂದು ಮುಂಗಾರು ಕೃಷಿ ಆರಂಭವಾಗುವ ಮೊದಲು ಯುಗಾದಿ ದಿನ ಹೊನ್ನಾರು ಹೂಡುವ ಪದ್ಧತಿ ಈ ಭಾಗದಲ್ಲಿ ಚಾಲ್ತಿಯಲ್ಲಿದೆ.

ಬಸ್ತಿಹಳ್ಳಿಯಲ್ಲಿ ಹೊನ್ನಾರು ವಿಭಿನ್ನವಾಗಿ ಸಂಭ್ರಮದಿಂದ ನಡೆಯುತ್ತಿದೆ.ಗ್ರಾಮಸ್ಥರು ಯುಗಾದಿ ದಿನ ಜಾನುವಾರುಗಳ ಮೈ ತೊಳೆದು ಪೂಜಿಸುತ್ತಾರೆ. ಮನೆ ಮುಂದೆ ರಂಗೋಲಿ ಬಿಡಿಸಿ, ಕೃಷಿ ಪರಿಕರಗಳನ್ನು ಒಪ್ಪವಾಗಿ ಜೋಡಿಸಿಟ್ಟು ಪೂಜೆ ಸಲ್ಲಿಸುತ್ತಾರೆ.

ನೆಗಿಲು, ನೊಗ ಹೂಡಿಕೊಂಡು ಜಮೀನಿನಲ್ಲಿ ಒಂದು ಸುತ್ತು ಉಳಿಮೆ ಮಾಡುತ್ತಾರೆ. ತಲೆಮಾರಿನಿಂದ ನಡೆದುಕೊಂಡು ಬಂದಿರುವ ಹೊನ್ನಾರು ಹೂಡುವ ಸಂಪ್ರದಾಯಕ್ಕೆ ‘ಚಿನ್ನದ ಉಳಿಮೆ’ ಎಂದು ಕರೆಯಲಾಗುತ್ತದೆ.

ಹಬ್ಬದ ದಿನ ರೈತರ ಮನೆಯಲ್ಲಿ ಸಂಭ್ರಮದ ವಾತಾವರಣ ಇರುತ್ತದೆ. ಹೋಳಿಗೆಸೇರಿದಂತೆ ವಿವಿಧ ಖಾದ್ಯ ತಯಾರಿಸುತ್ತಾರೆ. ಎತ್ತುಗಳಿದ್ದರೆ ಮಾತ್ರ ಉತ್ತಮಬೇಸಾಯ ಎಂದು ನಂಬಿರುವ ಬಸ್ತಿಹಳ್ಳಿ ಜನರು ಹಬ್ಬದ ಊಟವನ್ನು ಎತ್ತುಗಳಿಗೆ ಮೊದಲು ನೀಡಿ, ನಂತರ ಮನೆ ಮಂದಿ ತಿನ್ನುತ್ತಾರೆ.

ಈ ವರ್ಷ ಯಾವ ಅಕ್ಷರದ ಹೆಸರಿನವರು ಹೊನ್ನಾರು ಹೂಡಬೇಕು ಎಂದು ಜೋಯಿಸರು ತಿಳಿಸುತ್ತಾರೆ. ಅವರ ಸೂಚನೆಯಂತೆ ಊರಿನ ಸುತ್ತ ಹೊನ್ನಾರು ಮೆರವಣಿಗೆಯಲ್ಲಿ ಸಾಗುತ್ತದೆ. ಮನೆಗಳ ಮುಂದೆ ಹೊನ್ನಾರು ಹೂಡಿಕೊಂಡು ಬರುವ ಎತ್ತುಗಳಿಗೆ ಆರತಿ ಮಾಡಿ, ಹಣ್ಣು, ಕಾಯಿ ಪೂಜೆ ನೆರವೇರಿಸುತ್ತಾರೆ.

‘ಕೃಷಿ ಕಾಯಕದಲ್ಲಿ ಸಹಾಯವಾಗುವ ಎತ್ತುಗಳನ್ನು ಗೌರವ ಭಾವನೆಯಿಂದ ಕಾಣುವ ಆಚರಣೆ ಹೊನ್ನಾರು. ಭೂಮಿ ತಾಯಿಗೆ ವರ್ಷದ ಮೊದಲು ನೇಗಿಲು ತಾಗಿಸಿ, ಎಲ್ಲರಿಗೂ ನೆಮ್ಮದಿ ನೀಡುವಂತೆ ಪ್ರಾರ್ಥಿಸುವ ಸುದಿನ’ ಎಂದು ಬಸ್ತಿಹಳ್ಳಿ ರೈತ ಬಿ.ಜೆ.ಗಣೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT