25ಕ್ಕೆ ‘ಹುಡಾ ಅದಾಲತ್’; ಸಚಿವ ಯು.ಟಿ.ಖಾದರ್

7
ಪ್ರತಿ ಜಿಲ್ಲೆಯಲ್ಲಿ ಅದಾಲತ್‌: ಸಮಸ್ಯೆ ಬಗೆಹರಿಸಿಕೊಳ್ಳಲು ಸಲಹೆ

25ಕ್ಕೆ ‘ಹುಡಾ ಅದಾಲತ್’; ಸಚಿವ ಯು.ಟಿ.ಖಾದರ್

Published:
Updated:
Prajavani

ಹಾಸನ : ಹಾಸನ ನಗರಾಭಿವೃದ್ಧಿ ಪ್ರಾಧಿಕಾರ (ಹುಡಾ)ಕ್ಕೆ ಸಂಬಂಧಿಸಿದಂತೆ ಜನಸಾಮಾನ್ಯರ ಸಮಸ್ಯೆ ಬಗೆಹರಿಸುವ ಉದ್ದೇಶದಿಂದ ನಗರದಲ್ಲಿ ಫೆ. 25ರಂದು ‘ಹುಡಾ ಅದಾಲತ್’ ಹಮ್ಮಿಕೊಳ್ಳಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಹೇಳಿದರು.

ಮೈಸೂರು ಹಾಗೂ ಮಂಗಳೂರು ಜಿಲ್ಲೆಗಳಲ್ಲಿ ಅದಾಲತ್ ನಡೆಸಲಾಗಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಹಾಗಾಗಿ ಪ್ರತಿ ಜಿಲ್ಲೆಯಲ್ಲೂ ಅದಾಲತ್ ಆಯೋಜಿಸಿ ಜನರ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸಂಬಂಧಪಟ್ಟ ಯಾವುದೇ ಸಮಸ್ಯೆ ಇದ್ದರೂ ಅದಾಲತ್ ಗೆ ಒಂದು ವಾರ ಮೊದಲೇ ಸಾರ್ವಜನಿಕರು ತಮ್ಮ ಸಮಸ್ಯೆಗಳ ಕುರಿತು ಪ್ರಾಧಿಕಾರದಲ್ಲಿ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳಬೇಕು. ಇದರಿಂದ ಅರ್ಜಿಗೆ ಸಂಬಂಧಿಸಿದಂತೆ ಅಧ್ಯಯನ ಮಾಡಲು ಸಮಯ ಸಿಗಲಿದೆ. ಇದುವರೆಗೂ ಬಗೆಹರಿಯದೆ ಇರುವ ಆಡಳಿತಾತ್ಮಕ ಸಮಸ್ಯೆಗಳನ್ನು ಅದಾಲತ್ ನಲ್ಲಿ ಬಗೆಹರಿಸಲಾಗುವುದು. ಹೆಸರು ನೋಂದಾಯಿಸಿಕೊಳ್ಳದಿದ್ದರೂ ಅದಾಲತ್‌ನಲ್ಲಿ ನೇರವಾಗಿ ಭಾಗವಹಿಸುವ ಅವಕಾಶವಿದೆ ಎಂದರು.

ಸೌಲಭ್ಯ ಸಿಗುತ್ತದೆ ಎಂಬ ಕಾರಣಕ್ಕೆ ಜನರು ಖಾಸಗಿ ನಿವೇಶನಗಳಿಗಿಂತ ಹುಡಾ ಅಭಿವೃದ್ಧಿ ಪಡಿಸಿದ ನಿವೇಶನ ಖರೀದಿಸಲು ಮುಂದೆ ಬರುತ್ತಾರೆ. ಖಾಸಗಿ ನಿವೇಶ ಮಾಡುವವರು, ನಿವೇಶನವನ್ನು ಅರ್ಧ ಅಭಿವೃದ್ಧಿ ಮಾಡಿ ಮಾರಾಟ ಮಾಡುತ್ತಾರೆ. ಅಲ್ಲಿ ನಿವೇಶನ ಖರೀದಿಸಿದವರು ಯಾವುದೇ ಸೌಕರ್ಯ ಇಲ್ಲದೆ ತೊಂದರೆ ಅನುಭವಿಸಬೇಕಾಗುತ್ತದೆ. ಈ ಬಗ್ಗೆ ಅನೇಕ ದೂರು ಬಂದಿದೆ. ಆದ್ದರಿಂದ ನಿವೇಶನ ಪೂರ್ಣ ಅಭಿವೃದ್ಧಿ ಮಾಡುವ ವರೆಗೂ ಮಾರಾಟ ಮಾಡದಂತೆ ಹೊಸ ಕಾನೂನು ರೂಪಿಸುವ ಕುರಿತು ಚಿಂತಿಸಲಾಗಿದೆ ಎಂದು ಹೇಳಿದರು.

ಲೋಕಸಭೆ ಚುನಾವಣೆಯಲ್ಲಿ ಯಾವ ಕ್ಷೇತ್ರ ಯಾರಿಗೆ ನೀಡಬೇಕು ಎಂಬುದರ ಕುರಿತು ಜೆಡಿಎಸ್ ಹಾಗೂ ಕಾಂಗ್ರೆಸ್ ವರಿಷ್ಠರು ಕುಳಿತು ಚರ್ಚಿಸಲಿದ್ದಾರೆ. ಪ್ರಾಬಲ್ಯ ಇರುವ ಕಡೆ ಅವರ ಪಕ್ಷದ ಅಭ್ಯರ್ಥಿಗಳನ್ನು ಹಾಕುತ್ತಾರೆ. ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಎಲ್ಲಾವೂ ಸರಿಯಾಗಿದೆ. ಮೈತ್ರಿ ಸರ್ಕಾರ ಐದು ವರ್ಷ ಆಡಳಿತ ಪೂರ್ಣಗೊಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !