ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಚ ಪಡೆದಿದ್ದು ಸಾಬೀತು ಮಾಡಿದರೆ ರಾಜಕೀಯ ಬಿಡುತ್ತೇನೆ: ಸಚಿವ ಕೆ.ಎನ್.ರಾಜಣ್ಣ

Published 11 ಫೆಬ್ರುವರಿ 2024, 13:17 IST
Last Updated 11 ಫೆಬ್ರುವರಿ 2024, 13:17 IST
ಅಕ್ಷರ ಗಾತ್ರ

ಬೇಲೂರು: ‘ನಾನು ಯಾರ ಹತ್ತಿರವಾದರೂ ಅರ್ಧ ಪೈಸೆ ಲಂಚ ಪಡೆದಿರುವ ಬಗ್ಗೆ ಆರೋಪವಿದ್ದರೆ, ಯಾವುದಾದರೂ ದೇವಸ್ಥಾನಕ್ಕೆ ಬಂದು ಪ್ರಮಾಣ ಮಾಡಲು ಹೇಳಿ, ನಾನು ರಾಜಕೀಯವನ್ನೇ ಬಿಟ್ಟು ಬಿಡುತ್ತೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಸವಾಲು ಹಾಕಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಬಿ.ಶಿವರಾಂ ಅವರ ಶೇ 40 ಕಮಿಷನ್ ಆರೋಪಕ್ಕೆ ಈ ರೀತಿ ಪ್ರತಿಕ್ರಿಯೆ ನೀಡಿದರು. ‘ನಾಲಿಗೆ ಹೇಗೆ ಬೇಕಾದರೂ ತಿರುಗುತ್ತೆ. ಎಲುಬಿಲ್ಲದ ನಾಲಿಗೆ, ಆಚಾರವಿಲ್ಲದ ನಾಲಿಗೆ. ಪ್ರಾಮಾಣಿಕತೆಯಲ್ಲಿ ಯಾರಿಗೇನು ನಾನು ಕಡಿಮೆಯಿಲ್ಲ. ಆರೋಪ ಮಾಡುವವರು ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ’ ಎಂದರು.

‘ಕಾಂಗ್ರೆಸ್ ಪಕ್ಷ ಲೋಕಸಭಾ ಚುನಾವಣೆಗೆ ತಯಾರಿ ಮಾಡಿಕೊಳ್ಳುತ್ತಿದೆ. ಯಾರು ಅಭ್ಯರ್ಥಿ ಆಗಬೇಕು ಎಂದು ದೆಹಲಿ ಮಟ್ಟದಲ್ಲಿ ಕೂಡ ಚರ್ಚೆ ಆಗಿದೆ. ರಣದೀಪ್‌ಸಿಂಗ್‌ ಸುರ್ಜೇವಾಲ ಇಂದು ಬೆಂಗಳೂರಿಗೆ ಬರುತ್ತಾರೆ. ಎಲ್ಲರೊಟ್ಟಿಗೆ ಚರ್ಚೆ ಮಾಡಿ,  ಅಂತಿಮವಾಗಿ ಹೈ ಕಮಾಂಡ್ ತೀರ್ಮಾನ ಮಾಡುತ್ತದೆ’ ಎಂದರು.

‘ಹಾಸನ ಕ್ಷೇತ್ರಕ್ಕೆ ನಾಲ್ಕೈದು ಜನ ಆಕಾಂಕ್ಷಿಗಳಿದ್ದಾರೆ. ಮಾಜಿ ಸಚಿವ ದಿ.ಶ್ರೀಕಂಠಯ್ಯ ಅವರ ಮಗ ವಿಜಯ್ ಕುಮಾರ್, ಶ್ರೇಯಸ್ ಪಟೇಲ್, ಬಿ.ಶಿವರಾಂ, ಬಾಗೂರು ಮಂಜೇಗೌಡ, ಗೋಪಾಲಸ್ವಾಮಿ ಮುಂತಾದವರು. ಅಂತಿಮವಾಗಿ ಗೆಲುವೇ ಮಾನದಂಡವಾಗಿದೆ’ ಎಂದರು.

‘ತುಮಕೂರು ಕ್ಷೇತ್ರಕ್ಕೆ ಶೇ 99ರಷ್ಟು ಮುದ್ದುಹನುಮೇಗೌಡರು ಅಭ್ಯರ್ಥಿ ಆಗಲಿದ್ದಾರೆ ಎಂದು ನಾನು ಹೇಳಿದ್ದೇನೆ. ಇನ್ನೂ ಒಂದು ಪರ್ಸೆಂಟ್ ಇದೆಯಲ್ಲ. ಶೇ 100 ಎಂದು ಹೇಳುತ್ತಿದ್ದೆ. ಹಾಗೆ ಹೇಳಲು ನಾನು ಹೈಕಮಾಂಡ್‌ ಅಲ್ಲ’ ಎಂದರು.

ದೇಶ ವಿಭಜನೆ ಹೇಳಿಕೆ ನೀಡುವವರನ್ನು ಗುಂಡಿಕ್ಕಿ ಹತ್ಯೆ ಮಾಡುವ ಕಾನೂನು ಮಾಡಬೇಕು ಎಂಬ ಈಶ್ವರಪ್ಪ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಡಿ.ಕೆ. ಸುರೇಶ್ ಬಗ್ಗೆ ಆ ರೀತಿ ಮಾತನಾಡಿಲ್ಲ ಎಂದು ಈಶ್ವರಪ್ಪ ಹೇಳಿದ್ದಾರೆ. ಅದೊಂದು ಮುಗಿದ ವಿಚಾರ’ ಎಂದರು.

‘ರಾಜಕೀಯ ನಿಂತ ನೀರಲ್ಲ. ಅದು ಹರಿಯುತ್ತಿರುತ್ತದೆ. ಅದೇ ರೀತಿ ಕೆಲವರು ಪಕ್ಷಕ್ಕೆ ಬರುತ್ತಾರೆ. ಇನ್ನೂ ಕೆಲವರು ಪಕ್ಷ ಬಿಡುತ್ತಾರೆ. ಈಗಲೇ ಅವರೂ ಬರುತ್ತಾರೆ, ಇವರೂ ಬರುತ್ತಾರೆ ಎನ್ನಲು ಆಗುವುದಿಲ್ಲ’ ಎಂದರು. ಕಾಂಗ್ರೆಸ್ ಮುಖಂಡ ವೈ.ಎನ್.ಕೃಷ್ಣೇಗೌಡ, ಸಿದ್ದಯ್ಯ, ಅಬ್ದುಲ್ ಸಮದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT