ಸೋಮವಾರ, ಆಗಸ್ಟ್ 8, 2022
21 °C
ಬಡವರ ಸುಲಿಗೆ ಮಾಡುವ ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳಿ: ರೇವಣ್ಣ

ದೂರು ನೀಡಿದರೆ ಹೆದರಿ ಓಡಿ ಹೋಗಲ್ಲ: ಶಾಸಕ ಎಚ್.ಡಿ. ರೇವಣ್ಣ

ಪ್ರಜಾವಾಣಿ ವಾರ್ತೆ‌ Updated:

ಅಕ್ಷರ ಗಾತ್ರ : | |

Prajavani

ಹಾಸನ: ಬಡವರ ಸುಲಿಗೆ ಮಾಡುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೇಳಿದ ಕಾರಣಕ್ಕೆ ತಮ್ಮ ವಿರುದ್ಧ ಪುತ್ತೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದರೆ ಹೆದರಿ ಓಡಿ ಹೋಗುವುದಿಲ್ಲ ಎಂದು ಶಾಸಕ ಎಚ್.ಡಿ. ರೇವಣ್ಣ ಹೇಳಿದರು.

ಕೋವಿಡ್‌ ಸಂಕಷ್ಟದ ಕಾಲದಲ್ಲಿ ಖಾಸಗಿ ಆಸ್ಪತ್ರೆಗಳು ಜನರ ರಕ್ತ ಹೀರುತ್ತಿದ್ದರೆ ನೋಡಿಕೊಂಡು ಸುಮ್ಮನೆ ಕೂರಲು ಆಗುವುದಿಲ್ಲ. ವೈದ್ಯರ ಮನಸ್ಸಿಗೆ ನೋವಾಗುವಂತೆ ಮಾತನಾಡಿಲ್ಲ. ಒಳ್ಳೆಯ ಕೆಲಸ ಮಾಡುವ ಆಸ್ಪತ್ರೆಗಳ ಬಗ್ಗೆಯೂ ಮಾತನಾಡಿದ್ದೇನೆ. ಹಾಸನದ ಖಾಸಗಿ ಆಸ್ಪತ್ರೆಗಳ ಕುರಿತು ಮಾತನಾಡಿದ್ದೇನೆ ಹೊರತು ಪುತ್ತೂರು ವೈದ್ಯರ ಬಗ್ಗೆ ಅಲ್ಲ. ಇಲ್ಲಿಯ ವೈದ್ಯರೇ ನನ್ನ ವಿರುದ್ಧ ದೂರು ನೀಡಬಹುದಿತ್ತು. ಆದರೆ, ಇಂಡಿಯನ್‌ ಮೆಡಿಕಲ್‌ ಅಸೋಸಿಯೇಶನ್‌ ದೌರ್ಜನ್ಯ ತಡೆ ಸಮಿತಿ ರಾಜ್ಯ ಶಾಖೆ ಅಧ್ಯಕ್ಷ ಡಾ.ಗಣೇಶ್‌ ಪ್ರಸಾದ್‌ ಮುದ್ರಜೆ ಅವರಿಂದ ದೂರು ಕೊಡಿಸಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

‘ನಾನೂ ಮಾಡಿರುವ ಆರೋಪ ಸುಳ್ಳು ಎಂದು ಜನರು ಹೇಳಿದರೆ ಈಗಲೇ ಖಾಸಗಿ ಆಸ್ಪತ್ರೆಗಳ ಕ್ಷಮೆ ಕೇಳುತ್ತೇನೆ. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಜಿಲ್ಲೆಯ ಖಾಸಗಿ ಆಸ್ಪತ್ರೆಗಳ ಆಡಿಟ್‌ ಮಾಡಿಸಲಿ. ಯಾರು ತಪ್ಪು ಮಾಡಿದ್ದರೂ ಕ್ರಮ ಕೈಗೊಳ್ಳಲಿ. ಕೋವಿಡ್‌ ಚಿಕಿತ್ಸೆಗೆ ನಾಲ್ಕು ಪಟ್ಟು ವಸೂಲಿ ಮಾಡುತ್ತಿದ್ದರೂ ನೋಡಿಕೊಂಡು ಸುಮ್ಮನೆ ಇರುವುದಿಲ್ಲ’ ಎಂದರು.

ಕೋವಿಡ್‌ ನಿರ್ವಹಣೆ ಹಾಗೂ ಹಣಕಾಸು ಸ್ಥಿತಿ ಕುರಿತು ಚರ್ಚಿಸಲು ವಿಧಾನಸಭಾ ಅಧ್ಯಕ್ಷರು ಕೂಡಲೇ ವಿಶೇಷ ಅಧಿವೇಶನ ಕರೆಯಬೇಕು. ವರ್ಷದಲ್ಲಿ 120 ದಿನ ಅಧಿವೇಶನ ನಡೆಯಬೇಕು. ಆರು ತಿಂಗಳು ಕಳೆಯುತ್ತ ಬಂದರೂ ಈ ವರ್ಷ ಕೇವಲ 5 ರಿಂದ 6 ದಿನ ಮಾತ್ರವೇ ನಡೆದಿದೆ. ಕೂಡಲೇ ಸಲಹಾ ಸಮಿತಿಗಳ ಸಭೆ ಕರೆಯಬೇಕು ಎಂದು ಆಗ್ರಹಿಸಿದರು.

ಹೊಳೆನರಸೀಪುರದ 120 ಗ್ರಾಮ ಪಂಚಾಯಿತಿಗಳಲ್ಲಿಯೂ ಕೋವಿಡ್‌ ಲಸಿಕೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಇದೇ ರೀತಿ ಜಿಲ್ಲಾದಾದ್ಯಂತ ನಡೆಯಬೇಕು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಜಿಲ್ಲಾಧಿಕಾರಿ ಬಳಿಯೂ ಮಾತನಾಡಿದ್ದೇನೆ ಎಂದರು. 

ನಾಲ್ಕು ತಿಂಗಳಿನಿಂದ ನೀರು ಗಂಟಿಗಳಿಗೆ ಸಂಬಳ ನೀಡದ ಕಾರಣ ಜೀವನ ನಡೆಸುವುದು ಕಷ್ಟವಾಗಿದೆ. ಶಾಸಕರು, ಸಚಿವರು, ಅಧಿಕಾರಿಗಳು ಸಂಬಳ ನೀಡದಿದ್ದರೆ ಸುಮ್ಮನೆ ಇರುತ್ತಾರೆಯೇ? ನೀರು ಗಂಟಿಗಳ ಸಮಸ್ಯೆ ಅರ್ಥ ಮಾಡಿಕೊಳ್ಳಬೇಕು. ಕೋವಿಡ್‌ ನಿರ್ವಹಣೆಗೆ ಪ್ರತಿ ಗ್ರಾಮ ಪಂಚಾಯಿತಿಗೆ ₹50 ಸಾವಿರ ನೀಡುವುದಾಗಿ ಘೋಷಿಸಿ ಹದಿನೈದು ಕಳೆದರೂ ಈ ವರೆಗೂ ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ. ಅಲ್ಲದೇ ಗ್ರಾಮ ಪಂಚಾಯಿತಿಗೆ ನೀಡುತ್ತಿದ್ದ ಅನುದಾನವನ್ನು ಶೇ 50 ರಷ್ಟು ಕಡಿತ ಮಾಡಲಾಗಿದೆ ಎಂದು ಆರೋಪಿಸಿದರು.

ಜಲಸಂಪನ್ಮೂಲ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಚಾರದ ಬಗ್ಗೆ ಮೊದಲೇ ಹೇಳಿದ್ದೆ. ರಾಜ್ಯ ಲೂಟಿಕೋರರ ಕೈಗೆ ಸಿಲುಕಿದೆ. ಅಧಿಕಾರಿಗಳು ವರ್ಗಾವಣೆಗಾಗಿ ಎಲ್ಲ ಕಡತಗಳಿಗೂ ಸಹಿ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು