ಶುಕ್ರವಾರ, ಆಗಸ್ಟ್ 19, 2022
25 °C
ಕಸ್ತೂರಿ ರಂಗನ್‌ ವರದಿ ಜಾರಿಗೂ ಮುನ್ನ ಸ್ಥಳೀಯರ ವಿಶ್ವಾಸ ಪಡೆಯಲಿ: ಶಾಸಕ ರೇವಣ್ಣ

ರೈತರಿಗೆ ತೊಂದರೆಯಾದರೆ ‌ಹೋರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಮಲೆನಾಡು ಭಾಗದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಕಸ್ತೂರಿ ರಂಗನ್ ವರದಿ ಜಾರಿ ಮಾಡಬಾರದು ಎಂದು ಶಾಸಕ ಎಚ್‌.ಡಿ. ರೇವಣ್ಣ ಸರ್ಕಾರಕ್ಕೆ ಸಲಹೆ ನೀಡಿದರು.

ಸರ್ಕಾರ ಯಾವುದೇ ವರದಿಯನ್ನು ಜಾರಿಗೊಳಿಸುವ ಮುನ್ನ ಆ ಭಾಗದ ರೈತರನ್ನು ಕರೆದು ಸಮಾಲೋಚನೆ ನಡೆಸಬೇಕು. ಕಸ್ತೂರಿ ರಂಗನ್‌ ವರದಿಯಲ್ಲಿರುವ ಅಂಶಗಳನ್ನು ಗ್ರಾಮಸ್ಥರಿಗೆ ತಿಳಿಸಬೇಕು. ವರದಿ ಜಾರಿಯಿಂದ ರೈತರಿಗೆ ತೊಂದರೆ ಉಂಟಾದರೆ ಹೋರಾಟ ಮಾಡಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.‌

ಕಳೆದ ವರ್ಷ ಮತ್ತು ಈ ವರ್ಷ ಮಳೆಯಿಂದ ಉಂಟಾಗಿರುವ ಬೆಳೆ ನಷ್ಟ ಹಾಗೂ ಮನೆ ಹಾನಿಗೆ ಈವರೆಗೂ ಬಿಡಿಗಾಸು ಪರಿಹಾರ ಬಿಡುಗಡೆಯಾಗಿಲ್ಲ. ಮಳೆಯಿಂದ ಸಕಲೇಶಪುರ, ಆಲೂರು, ಹಾಸನ, ಹೊಳೆನರಸೀಪುರ ತಾಲ್ಲೂಕಿನಲ್ಲಿ ಅನೇಕರು ಮನೆ ಕಳೆದುಕೊಂಡಿದ್ದಾರೆ. ರಸ್ತೆಗಳು ಹಾಳಾಗಿವೆ, ಕೆರೆ, ಕಟ್ಟೆಗಳಿಗೆ ಹಾನಿಯಾಗಿದೆ. ಸರಿಯಾಗಿ ಸಮೀಕ್ಷೆ ಮಾಡದ ಕಾರಣ ಅರ್ಹ ಹೂವು ಬೆಳೆಗಾರರಿಗೆ ಪರಿಹಾರ ಸಿಕ್ಕಿಲ್ಲ. ಪರಿಹಾರ ಕಾರ್ಯ ಕೈಗೊಳ್ಳಲು ಪ್ರತಿ ತಾಲ್ಲೂಕಿಗೆ ಕನಿಷ್ಟ ಎರಡು ಕೋಟಿ ರೂಪಾಯಿ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯ ಬಹುತೇಕ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆ ಇದೆ. ಅನೇಕ ಕಡೆ ವಿಷಯವಾರು ಉಪನ್ಯಾಸಕರಿಲ್ಲದೆ
ವಿದ್ಯಾರ್ಥಿಗಳು ಸಮಸ್ಯೆ ಅನುಭವಿಸುವಂತಾಗಿದೆ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಊರು ಸೇರಿದಂತೆ ಜಿಲ್ಲೆಯ
ಬಹುತೇಕ ಆಸ್ಪತ್ರೆಗಳಲ್ಲಿ ವೈದ್ಯರೇ ಇಲ್ಲ. ಸರ್ಕಾರ ಕೂಡಲೇ ಉಪನ್ಯಾಸಕರನ್ನು ನೇಮಕ ಮಾಡಬೇಕು ಹಾಗೂ
ಮೂಲಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯ 48 ಸಾವಿರ ಜನರಿಗೆ ವೃದ್ಧಾಪ್ಯ ವೇತನ ವಿಧಾವಾ ವೇತನ ಹತ್ತು ತಿಂಗಳಿಂದ ಬಂದಿಲ್ಲ. ಜಿಲ್ಲೆಯಲ್ಲಿ ಮೆಕ್ಕೆ ಜೋಳ ಬೆಳೆದವರ ಸ್ಥಿತಿ ಹೇಳತೀರದಾಗಿದೆ. ಕ್ವಿಂಟಲ್‌ಗೆ ₹800 ರಿಂದ ₹900 ಕ್ಕೆ ಖರೀದಿಸಿ, ಕೆಎಂಎಫ್‌ಗೆ ₹1200ಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದರು.

ಹಾಸನ ನಗರ ಸುತ್ತಮುತ್ತ ರಿಯಲ್‌ ಎಸ್ಟೇಟ್‌ ಮಾಲೀಕರನ್ನು ಬೆದರಿಸಿ ನಿವೇಶನಗಳನ್ನು ಬಿಜೆಪಿ ಅವರಿಗೆ ಮಾರಾಟ
ಮಾಡುವಂತೆ ಅಧಿಕಾರಿಗಳು ಬೆದರಿಕೆ ಹಾಕುತ್ತಿದ್ದಾರೆ. ಇವರಿಂದ ಕಡಿಮೆ ಹಣಕ್ಕೆ ಪಡೆದು ಹೆಚ್ಚು ಬೆಲೆಗೆ ಬೇರೆಯವರಿಗೆ
ಮಾರಾಟ ಮಾಡುತ್ತಿದ್ದಾರೆ. ಇದರಿಂದ ಅಧಿಕಾರಿಗಳಿಗೂ ಶೇಕಡಾ 50ರಷ್ಟು ಹಣ ಹೋಗುತ್ತಿದೆ. ಉದಾಹರಣೆಗೆ ಬುಸ್ತೇನಹಳ್ಳಿ ಬಳಿ ಬಡಾವಣೆ ನಿರ್ಮಾಣ ಮಾಡುತ್ತಿದ್ದವರಿಗೆ ತೊಂದರೆ ನೀಡಲಾಗಿದೆ. ಕಾನೂನು ಪ್ರಕಾರ ಕೈಗೊಂಡರೆ ಅಭ್ಯಂತರ ಇಲ್ಲ. ಮುಂದಿನ ದಿನಗಳಲ್ಲಿ ಅಧಿಕಾರಿಗಳೇ ತನಿಖೆ ಎದುರಿಸಬೇಕಾಗುತ್ತದೆ ಎಂದರು.

ವಿಧಾನ ಪರಿಷತ್‌ನಲ್ಲಿ ಉಪ ಸಭಾಪತಿಯನ್ನು ಕಾಂಗ್ರೆಸ್‌ ಸದಸ್ಯರು ಎಳೆದಾಡಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ  ರೇವಣ್ಣ, ‘ಕಾಂಗ್ರೆಸ್, ಬಿಜೆಪಿ ಶಾಸಕರು ನಡೆದುಕೊಳ್ಳುತ್ತಿರುವ ರೀತಿಯನ್ನು ರಾಜ್ಯದ ಜನರೇ ನೋಡಿ ತೀರ್ಮಾನ ಕೈಗೊಳ್ಳುತ್ತಾರೆ. ಹಾಲಿ ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಬೆಂಬಲ ಇಲ್ಲದ ಮೇಲೆ ಕುರ್ಚಿಯಲ್ಲಿ ಕೂರಲು ಬಿಡಬಾರದಿತ್ತು’ ಎಂದು ಅಭಿಪ್ರಾಯಪಟ್ಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.