ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮತ್ತೆ ಮುನ್ನೆಲೆಗೆ ಬಂದ ಹಾಸನ ಐಐಟಿ

ಕೇಂದ್ರ ಸಚಿವರಿಗೆ ಮನವಿ ಮಾಡಿದ ಸಂಸದ ಶ್ರೇಯಸ್ ಪಟೇಲ್‌
Published : 4 ಆಗಸ್ಟ್ 2024, 5:51 IST
Last Updated : 4 ಆಗಸ್ಟ್ 2024, 5:51 IST
ಫಾಲೋ ಮಾಡಿ
Comments

ಹಾಸನ: ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಾದ ಐಐಟಿ ಸ್ಥಾಪನೆ ನನೆಗುದಿಗೆ ಬಿದ್ದಿದೆ. ಒಂದೆಡೆ ಜಾಗ, ಸಂಪನ್ಮೂಲಗಳೆಲ್ಲವೂ ಸಿದ್ಧವಾಗಿದ್ದರೂ, ಇನ್ನೊಂದು ಇಚ್ಛಾಶಕ್ತಿಯ ಕೊರತೆಯಿಂದ ಐಐಟಿಯ ಕನಸು ಕನಸಾಗಿಯೇ ಉಳಿಯುತ್ತಿದೆ.

ಈ ಮಧ್ಯೆ ಸಂಸದ ಶ್ರೇಯಸ್ ಪಟೇಲ್‌, ಮತ್ತೊಮ್ಮೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದು, ಐಐಟಿ ಸ್ಥಾಪನೆಗೆ ಅವಕಾಶ ಕೊಡುವಂತೆ ಮನವಿ ಮಾಡಿದ್ದಾರೆ.

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಭೇಟಿಯಾಗಿರುವ ಶ್ರೇಯಸ್‌, ಐಐಟಿಯು ತಾಂತ್ರಿಕ ಶಿಕ್ಷಣ ಮತ್ತು ಸಂಶೋಧನೆಯಲ್ಲಿನ ಶ್ರೇಷ್ಠತೆಗೆ ಅನ್ವರ್ಥನಾಮವಾಗಿದೆ. ಹಾಸನದಲ್ಲಿ ಐಐಟಿ ಸ್ಥಾಪನೆಯಾದರೆ, ನಾವು ನಮ್ಮ ವಿದ್ಯಾರ್ಥಿಗಳಿಗೆ ವಿಶ್ವ ದರ್ಜೆಯ ಅಧ್ಯಾಪಕರು, ಅತ್ಯಾಧುನಿಕ ಸೌಲಭ್ಯಗಳು ಮತ್ತು ಅದ್ಭುತವಾದ ಶೈಕ್ಷಣಿಕ ವಾತಾವರಣವನ್ನು ಒದಗಿಸಬಹುದು. ಇದು ಉದ್ಯೋಗಾವಕಾಶ ಸೃಷ್ಟಿಸುವ ಮತ್ತು ಸ್ಥಳೀಯ ಆರ್ಥಿಕತೆಗೆ ಕೊಡುಗೆ ನೀಡುವ ವ್ಯವಸ್ಥೆಯನ್ನು ರೂಪಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.

ಹಾಸನದಲ್ಲಿ ಉದ್ದೇಶಿತ ಐಐಟಿಗಾಗಿ ಭೂಸ್ವಾಧೀನ ಈಗಾಗಲೇ ಪೂರ್ಣಗೊಂಡಿದೆ. ಆಯ್ಕೆ ಮಾಡಿದ ಜಾಗವು, ಬೆಂಗಳೂರು-ಮಂಗಳೂರು ಹೆದ್ದಾರಿಯ ಬಳಿ ಇದ್ದು, ಅತ್ಯುತ್ತಮ ಸಂಪರ್ಕವನ್ನು ಹೊಂದಿದೆ. , ಐಐಟಿ ಸ್ಥಾಪನೆಯಿಂದ ಹಾಸನದಲ್ಲಿ ಹೂಡಿಕೆಗೆ ಉತ್ತೇಜನ ದೊರೆಯಲಿದ್ದು, ಕೈಗಾರಿಕೆಗಳಿಗೆ ಸ್ಥಾಪನೆಗೂ ಅವಕಾಶಗಳನ್ನು ತೆರೆದಿಡಲಿದೆ ಎಂದು ಮನವಿ ಮಾಡಿದ್ದಾರೆ.

ದೇವೇಗೌಡರ ಕನಸು: 1996 ರಲ್ಲಿ ಎಚ್.ಡಿ. ದೇವೇಗೌಡರು ಪ್ರಧಾನಿ ಆಗಿದ್ದಾಗ ಹಾಸನದಲ್ಲಿ ಐಐಟಿ ಸ್ಥಾ‍‍ಪನೆಗೆ ಪ್ರಯತ್ನ ಆರಂಭವಾಗಿತ್ತು. ಆಗ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿ ಎಚ್.ಡಿ. ರೇವಣ್ಣ, ಐಐಟಿ ಸ್ಥಾಪನೆಯ ಪ್ರಸ್ತಾವ ಸಲ್ಲಿಸಿದ್ದರು. ದೇವೇಗೌಡರ ಸಂಪುಟದಲ್ಲಿ ಕರ್ನಾಟಕದವರೇ ಆದ ಎಸ್‌.ಆರ್. ಬೊಮ್ಮಾಯಿ ಮಾನವ ಸಂಪನ್ಮೂಲ ಸಚಿವರಾಗಿದ್ದರು. ಇನ್ನೇನು ಪ್ರಸ್ತಾವಕ್ಕೆ ಒಪ್ಪಿಗೆ ಸಿಗಲಿದೆ ಎನ್ನುವಷ್ಟರಲ್ಲಿ ದೇವೇಗೌಡರು ಪ್ರಧಾನಿ ಹುದ್ದೆಯಿಂದ ಕೆಳಗೆ ಇಳಿದಿರು.

ಅದಾದ ನಂತರ ಅಟಲ್‌ ಬಿಹಾರಿ ವಾಜಪೇಯಿ ಅವರು ಪ್ರಧಾನಿ ಆಗಿದ್ದಾಗಲೂ ಎಚ್.ಡಿ. ದೇವೇಗೌಡರು ಐಐಟಿ ಸ್ಥಾಪನೆ ಪ್ರಯತ್ನ ಮುಂದುವರಿಸಿದರು. 2004 ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌–ಜೆಡಿಎಸ್‌ ಸರ್ಕಾರ ಅಧಿಕಾರದಲ್ಲಿದ್ದಾಗ ಮತ್ತೆ ಐಐಟಿ ಸ್ಥಾಪನೆಗೆ ಹೆಚ್ಚಿನ ಒತ್ತು ಸಿಕ್ಕಿತು. ಆಗ ಕೇಂದ್ರ ಮಾನವ ಸಂಪನ್ಮೂಲ ಸಚಿವರಾಗಿದ್ದ ಅರ್ಜುನ್‌ ಸಿಂಗ್, ಹಾಸನಕ್ಕೆ ಐಐಟಿ ಮಂಜೂರು ಮಾಡುವ ಭರವಸೆ ನೀಡಿದ್ದರು.

ಅದರ ಪರಿಣಾಮವಾಗಿಯೇ ಐಐಟಿ ಸ್ಥಾಪನೆಗೆ ನಗರದ ಹೊರವಲಯದಲ್ಲಿ 1,050 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಯಿತು. ಆದರೆ, ಅರ್ಜುನ್‌ ಸಿಂಗ್‌ ಅವರ ಖಾತೆ ಬದಲಾಗಿದ್ದರಿಂದ ಹಾಸನದ ಐಐಟಿ ಮತ್ತೆ ನನೆಗುದಿಗೆ ಬೀಳುವಂತಾಯಿತು.

ಧಾರವಾಡದ ಐಐಟಿ ಮಂಜೂರಾತಿ ಸಂದರ್ಭದಲ್ಲಿಯೂ ಹಾಸನಕ್ಕೆ ಅವಕಾಶ ಸಿಗಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ, ಉತ್ತರ ಕರ್ನಾಟಕಕ್ಕೆ ಆದ್ಯತೆ ನೀಡಲಾಯಿತು.

ನರೇಂದ್ರ ಮೋದಿ ಪ್ರಧಾನಿಯಾದ ನಂತರವೂ ಎಚ್‌.ಡಿ. ದೇವೇಗೌಡರು ನಿರಂತರವಾಗಿ ಪತ್ರ ಬರೆಯುತ್ತಲೇ ಇದ್ದು, ಐಐಟಿ ಮಾತ್ರ ಮಂಜೂರಾಗುತ್ತಿಲ್ಲ.

ಜಮೀನಿಗಾಗಿ ಜಟಾಪಟಿ

ಐಐಟಿಗಾಗಿ ಸ್ವಾಧೀನಪಡಿಸಿಕೊಂಡಿರುವ ಜಮೀನು ಜೆಡಿಎಸ್–ಬಿಜೆಪಿ ನಾಯಕರ ನಡುವಿನ ವಾಕ್ಸಮರಕ್ಕೂ ಕಾರಣವಾಗಿತ್ತು. ಐಐಟಿಗೆ 250 ಎಕರೆ ಜಾಗವಾದರೆ ಸಾಕು 1 ಸಾವಿರ ಎಕರೆ ಅಗತ್ಯವಿಲ್ಲ ಎಂದು ಮಾಜಿ ಶಾಸಕ ಪ್ರೀತಂಗೌಡ ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಎಚ್‌.ಡಿ. ರೇವಣ್ಣ ಐಐಟಿಗೆ ನಿಗದಿಯಾಗಿರುವ ಜಾಗವನ್ನು ಕೈಗಾರಿಕೆ ಹಾಗೂ ಇನ್ನಿತರ ಉದ್ದೇಶಕ್ಕೆ ಬಳಕೆ ಮಾಡಿದರೆ ಧರಣಿ ನಡೆಸುವುದಾಗಿಯೂ ಎಚ್ಚರಿಕೆ ನೀಡಿದ್ದರು. ನಂತರ ಆ ವಿಷಯ ಅಲ್ಲಿಗೆ ಸ್ಥಗಿತಗೊಂಡಿದೆ. ಆದರೆ 20 ವರ್ಷಗಳಿಂದ ಸಾವಿರ ಎಕರೆ ಜಮೀನು ವ್ಯರ್ಥವಾಗಿ ನಿಂತಿದ್ದು ಅದರ ಸದ್ಬಳಕೆ ಆಗಬೇಕು. ಇಲ್ಲವೇ ಸ್ಥಾಧೀನ ಪಡಿಸಿಕೊಂಡ ಜಮೀನನ್ನು ರೈತರಿಗೆ ವಾಪಸ್‌ ನೀಡಬೇಕು ಎನ್ನುವ ಒತ್ತಾಯವೂ ಕೇಳಿ ಬರುತ್ತಿದೆ. ಐಐಟಿ ಸ್ಥಾಪನೆ ಆಗದೇ ಇದ್ದರೆ ಸ್ವಾಧೀನಪಡಿಸಿಕೊಂಡಿರುವ ಜಮೀನನ್ನು ಆಯಾ ರೈತರಿಗೆ ಮರಳಿಸಬೇಕು. ಈ ಬಗ್ಗೆ ಪಕ್ಷದಲ್ಲಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಸ್ವರೂಪ್‌ ಪ್ರಕಾಶ್‌ ಹೇಳಿದ್ದಾರೆ.

ಹಾಸನದಲ್ಲಿ ನೂತನ ಐಐಟಿ' ಸ್ಥಾಪಿಸುವಂತೆ ಮನವಿ ಮಾಡಿದ್ದೇನೆ. ಈ ಬೇಡಿಕೆಗೆ ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ನಿರಂತರ ಪ್ರಯತ್ನ ಮಾಡುತ್ತೇನೆ.
ಶ್ರೇಯಸ್ ಪಟೇಲ್‌, ಸಂಸದ
ಸಂಸದ ಶ್ರೇಯಸ್‌ ಪಟೇಲ್‌ ಅವರು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ಅವರಿಗೆ ಮನವಿ ಸಲ್ಲಿಸಿದರು.
ಸಂಸದ ಶ್ರೇಯಸ್‌ ಪಟೇಲ್‌ ಅವರು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ಅವರಿಗೆ ಮನವಿ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT