ಶುಕ್ರವಾರ, ಡಿಸೆಂಬರ್ 4, 2020
21 °C
ಡಿಸಿ ಕಚೇರಿ ಎದುರು ಅಂಗನವಾಡಿ, ಬಿಸಿಯೂಟ ನೌಕರರ ಧರಣಿ

ಕನಿಷ್ಠ ವೇತನ ₹21 ಸಾವಿರಕ್ಕೆ ಹೆಚ್ಚಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಅಂಗನವಾಡಿ ಮತ್ತು ಬಿಸಿಯೂಟ 
ಕಾರ್ಯಕರ್ತೆಯರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ನಗರದ ಹೇಮಾವತಿ ಪ್ರತಿಮೆ ಬಳಿ ಸಮಾವೇಶಗೊಂಡ ನೂರಾರು ಕಾರ್ಯಕರ್ತೆಯರು ಬಿ.ಎಂ.ರಸ್ತೆ, ಎನ್‌.ಆರ್‌ ವೃತ್ತದ ಮೂಲಕ ಜಿಲ್ಲಾ ಪಂಚಾಯಿತಿ ಕಚೇರಿವರೆಗೆ ಮೆರವಣಿಗೆಯಲ್ಲಿ ಬಂದು ಕೆಲ ಕಾಲ ಧರಣಿ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿ ತಲುಪಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಅಂಗನವಾಡಿ ನೌಕರರಿಗೆ 21 ಸಾವಿರ ಕನಿಷ್ಠ ವೇತನ ನಿಗದಿಪಡಿಸಬೇಕು ಮತ್ತು ಸೇವೆ ಕಾಯಂ ಮಾಡಬೇಕು. ₹ 10
ಸಾವಿರ ನಿವೃತ್ತಿ ವೇತನ ನೀಡಬೇಕು. 2020ರ ನೂತನ ಶಿಕ್ಷಣ ನೀತಿಯಿಂದ ಅಂಗನವಾಡಿ ಕೇಂದ್ರಗಳನ್ನು ರಕ್ಷಿಸಬೇಕು. ಅಂಗನವಾಡಿ ಕೇಂದ್ರಗಳಲ್ಲಿಯೇ ಶಾಲಾ ಪೂರ್ವ ಪ್ರಾಥಮಿಕ ಶಿಕ್ಷಣ ಕಡ್ಡಾಯಗೊಳಿಸಿ ಹೆಚ್ಚುವರಿ ಕೆಲಸ ನಿರ್ಬಂಧಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಈಗಾಗಲೇ ನಿವೃತ್ತಿಯಾದವರಿಗೆ ನಿವೃತ್ತಿ ವೇತನ ಘೋಷಣೆ ಮಾಡಿ ಎನ್‌ಪಿಎಸ್‌ ಲೈಟ್‌ ವಂತಿಗೆಯನ್ನು ಶೇಕಡಾ 10ರಷ್ಟು ಏರಿಸಬೇಕು. ಎಲ್ಲರಿಗೂ ಪಿಂಚಣಿ ಒದಗಿಸಿ, ಎನ್‌ಪಿಎಸ್‌ ಅನ್ನು ರದ್ದು ಮಾಡಿ ಹಿಂದಿನ ಪಿಂಚಣಿ ಯೋಜನೆಯನ್ನು ಪುನರ್‌ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ. ಪುಷ್ಪ ಮಾತನಾಡಿ, ಸೇವಾ ಜೇಷ್ಠತೆ ಆಧಾರದಲ್ಲಿ ವೇತನ ನಿಗದಿ ಪಡಿಸಬೇಕು. ಕೋವಿಡ್‌ನಿಂದ ಮೃತರಾದ 26 ಜನ ಮತ್ತು ಕೆಲಸದ ಒತ್ತಡದಿಂದ ಮೃತರಾದ ಅಂಗನವಾಡಿ
ನೌಕರರ ಮಕ್ಕಳಿಗೆ ನೇಮಕಾತಿ ನಿಯಮ ಸಡಿಲಿಸಿ ಅನುಕಂಪದ ಆಧಾರದ ಮೇಲೆ ಕೆಲಸ ನೀಡಬೇಕು. ಕೋವಿಡ್‌ನಿಂದ
ಮೃತಪಟ್ಟ 32 ಜನ ಅಂಗನವಾಡಿ ನೌಕರರಿಗೆ ಕನಿಷ್ಠ ₹5 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಇಲಾಖೆಯಿಂದಲೇ ಅಂಗನವಾಡಿಗಳಿಗೆ ಕೋಳಿ ಮೊಟ್ಟೆ ಸರಬರಾಜು ಮಾಡಬೇಕು. ಐಸಿಡಿಎಸ್‌ಗೆ ಕಡಿತವಾಗಿರುವ
ಅನುದಾನ ವಾಪಸ್‌ ನೀಡಬೇಕು. ಲಾಕ್‌ಡೌನ್‌ ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾದ ಆದಾಯ ತೆರಿಗೆ ವ್ಯಾಪ್ತಿ ಹೊರಗಿರುವ ಕುಟುಂಬಕ್ಕೆ ₹7,500 ಸಹಾಯಧನ ನೀಡಬೇಕು ಎಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್‌, ರಾಜ್ಯ ಅಂಗನವಾಡಿ ನೌಕರರ ಸಂಘದ (ಸಿಐಟಿಯು) ಅಧ್ಯಕ್ಷೆ ಇಂದ್ರಮ್ಮ, ಖಜಾಂಚಿ ಜಿ.ಪಿ.ಶೈಲಜಾ, ಉಪಾಧ್ಯಕ್ಷರಾದ ಕಾಮಾಕ್ಷಿ ರಾಜು, ಲತಾ, ಶಾರದ, ಕೆ.ಪಿ. ವಿಣಾ ಹಾಗೂ ಪದಾಧಿಕಾರಿಗಳಾದ ಸಾವಿತ್ರಿ, ಮೀನಾಕ್ಷಿ, ಪೂರ್ಣಿಮಾ, ಟಿ.ಎಚ್‌. ಜಯಂತಿ, ನಾಗಲಕ್ಷ್ಮಿ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಎಚ್‌.ಆರ್‌. ನವೀನ್‌ ಕುಮಾರ್‌ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.