ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಸನ: ಹೇಮೆಯ ಒಡಲಿಗೆ ಹೆಚ್ಚಿದ ಒಳಹರಿವು- ರೈತರ ಸಂತಸ

ಜಿಲ್ಲೆಯಲ್ಲಿ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆ: ರೈತರ ಸಂತಸ
Published 21 ಮೇ 2024, 13:33 IST
Last Updated 21 ಮೇ 2024, 13:33 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯ ಜೀವನಾಡಿ ಹೇಮಾವತಿ ಜಲಾಶಯ ಇನ್ನೇನು ಬರಿದಾಗಲಿದೆ ಎನ್ನುವ ಆತಂಕದಲ್ಲಿ ಇರುವಾಗಲೇ ವರುಣ ಕೃಪೆ ತೋರಿದ್ದಾರೆ. ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹೇಮಾವತಿ ಜಲಾಶಯಕ್ಕೆ ನಿಧಾನವಾಗಿ ಒಳಹರಿವು ಹೆಚ್ಚಾಗುತ್ತಿದೆ. ಕುಡಿಯುವ ನೀರಿಗೂ ತತ್ವಾರ ಎದುರಾಗುವ ಸಂದರ್ಭದಲ್ಲಿಯೇ ಸುರಿದ ಮಳೆ, ಕೆಲ ದಿನಗಳ ಮಟ್ಟಿಗೆ ನೀರಿನ ಬವಣೆಯನ್ನು ನೀಗಿಸಿದಂತಾಗಿದೆ.

ಗೊರೂರಿನ ಹೇಮಾವತಿ ಜಲಾಶಯದಿಂದ ಮಂಡ್ಯ, ಹಾಸನ, ತುಮಕೂರು ಜಿಲ್ಲೆಗಳ ಬಹುತೇಕ ಪಟ್ಟಣಗಳಿಗೆ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ. ಕಳೆದ ವರ್ಷ ಮಳೆಯ ಅಭಾವದಿಂದಾಗಿ ಹೇಮಾವತಿ ಜಲಾಶಯ ಬರಿದಾಗುತ್ತಲೇ ಸಾಗಿತ್ತು. ಅದರಲ್ಲಿಯೂ ಎರಡು ಬಾರಿ ನಾಲೆಯ ಮೂಲಕ ತುಮಕೂರು ಹಾಗೂ ಹಾಸನ ಜಿಲ್ಲೆಯ ಕೆರೆಗಳಿಗೆ ನೀರು ಹರಿಸಲಾಗಿದ್ದು, ನೀರಿನ ಪ್ರಮಾಣ ಮತ್ತಷ್ಟು ಕಡಿಮೆಯಾಗಿತ್ತು.

ಇದೀಗ ಮೇ ಕೊನೆಯ ವಾರ ಬಂದಿದ್ದು, ಈಗಲೂ ಅಲ್ಪಸ್ವಲ್ಪ ಮಳೆಯಾಗದೇ ಇದ್ದರೆ, ಕುಡಿಯುವ ನೀರಿಗೂ ಅಭಾವ ಎದುರಿಸುವ ಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಇದೀಗ ಆರಂಭವಾಗಿರುವ ಮಳೆಯಿಂದ ಹೇಮಾವತಿ ಜಲಾಶಯದಲ್ಲಿ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇದರಿಂದಾಗಿ ಜನರು ತುಸು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಹೇಮಾವತಿ ಜಲಾನಯನ ಪ್ರದೇಶವಾದ ಚಿಕ್ಕಮಗಳೂರು ಜಿಲ್ಲೆಯಲ್ಲೂ ಉತ್ತಮ ಮಳೆಯಾಗುತ್ತಿದ್ದು, ಹೇಮಾವತಿ ನದಿಯಲ್ಲಿ ನೀರಿನ ಹರಿವು ತುಸು ಹೆಚ್ಚಳವಾಗಿದೆ. ಸಕಲೇಶಪುರದ ಬಳಿ ಸಂಪೂರ್ಣ ಒಣಗಿ ಹೋಗಿದ್ದ ಹೇಮಾವತಿ ನದಿಯಲ್ಲಿ ನೀರು ಕಾಣಿಸಿಕೊಂಡಿದೆ.

ಚನ್ನರಾಯಪಟ್ಟಣ, ಅರಕಲಗೂಡು ತಾಲ್ಲೂಕಿನಲ್ಲಿಯೇ ಅಧಿಕ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಅನುಕೂಲ ಆಗಿದೆ. ಪ್ರಮುಖವಾಗಿ ದ್ವಿದಳ ಧಾನ್ಯ, ತಂಬಾಕು ಸಸಿಗಳ ನಾಟಿಗೆ ರೈತರು ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ, ಸಕಲೇಶಪುರ, ಆಲೂರು ತಾಲ್ಲೂಕಿನಲ್ಲಿ ಮಳೆಯ ಪ್ರಮಾಣ ಇನ್ನೂ ಅಧಿಕವಾಗಿಲ್ಲ.

ಬೇಲೂರು, ಅರಸೀಕೆರೆ, ಹಾಸನ ತಾಲ್ಲೂಕಿನಲ್ಲಿಯೂ ಉತ್ತಮ ಮಳೆ ಬೀಳುತ್ತಿದ್ದು, ಈ ಭಾಗದಲ್ಲಿ ಆಲೂಗಡ್ಡೆ ಬಿತ್ತನೆಗೆ ರೈತರು ತಯಾರಿ ಆರಂಭಿಸಿದ್ದಾರೆ. ಈಗಾಗಲೇ ಹಾಸನದ ಎಪಿಎಂಸಿಯಲ್ಲಿ ಆಲೂಗಡ್ಡೆ ಬಿತ್ತನೆ ಬೀಜಗಳ ಮಾರಾಟಕ್ಕೆ ಚಾಲನೆ ನೀಡಲಾಗಿದ್ದು, ರೈತರು ಖರೀದಿಯಲ್ಲಿ ತೊಡಗಿದ್ದಾರೆ.

‘ಯುಗಾದಿಯ ನಂತರ ಸ್ವಲ್ಪ ಮಳೆ ಬರಬೇಕಿತ್ತು. ಆದರೆ, ಮೇ ಎರಡನೇ ವಾರದವರೆಗೆ ಮಳೆಯ ಲಕ್ಷಣವೇ ಇಲ್ಲದ್ದರಿಂದ ಕೃಷಿ ಚಟುವಟಿಕೆಗಳು ವಿಳಂಬವಾಗಿ ಆರಂಭವಾಗುತ್ತಿವೆ. ಈಗಾಗಲೇ ಸುರಿದಿರುವ ಮಳೆಯಿಂದ ಬಿತ್ತನೆಗೆ ಜಮೀನನ್ನು ಹದ ಮಾಡಲು ಅನುಕೂಲವಾಗಿದೆ’ ಎನ್ನುತ್ತಾರೆ ರೈತರು.

ರೈತಾಪಿ ಜನರು ಕೃಷಿ ಕಾರ್ಯಕ್ಕೆ ಸಿದ್ಧತೆ ಮಾಡಿಕೊಂಡಿದ್ದು ಇನ್ನೆರಡು ದಿನ ಉತ್ತಮ ಮಳೆಯಾದಲ್ಲಿ ಮುಂಗಾರು ಪೂರ್ವ ಬಿತ್ತನೆ ಆರಂಭಿಸಬಹುದು.
ಎಂ.ಡಿ. ರಘು ನುಗ್ಗೇಹಳ್ಳಿ ರೈತ
ಇಲಾಖೆಯಿಂದ ಬಿತ್ತನೆ ಬೀಜ ರಸಗೊಬ್ಬರ ಸೇರಿದಂತೆ ಎಲ್ಲ ಅಗತ್ಯ ವಸ್ತುಗಳ ದಾಸ್ತಾನು ಮಾಡಲಾಗಿದ್ದು ರೈತರ ಬೇಡಿಕೆಗೆ ಅನುಗುಣವಾಗಿ ವಿತರಣೆ ಮಾಡಲಾಗುತ್ತಿದೆ.
ರಾಜಸುಲೋಚನಾ ಕೃಷಿ ಇಲಾಖೆ ಜಂಟಿ ನಿರ್ದೇಶಕಿ

ಹೇಮಾವತಿ ಜಲಾಶಯದ ಒಳಹರಿವು

ದಿನಾಂಕ; ಪ್ರಮಾಣ (ಕ್ಯುಸೆಕ್‌)

ಮೇ 15; 111

ಮೇ 16; 63

ಮೇ 17; 299

ಮೇ 18; 393

ಮೇ 19; 629

ಮೇ 20; 628

ಮೇ 21; 1855

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT