ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ ಜಿಲ್ಲಾ ಕಳ್ಳರ ಬಂಧನ; ₹31 ಲಕ್ಷ ಮೌಲ್ಯದ ಚಿನ್ನಾಭರಣ, ನಗದು, ಬೈಕ್‌ ವಶ

₹31 ಲಕ್ಷ ಮೌಲ್ಯದ ಚಿನ್ನಾಭರಣ, ನಗದು, ಬೈಕ್‌ ವಶ
Last Updated 26 ಮಾರ್ಚ್ 2021, 15:04 IST
ಅಕ್ಷರ ಗಾತ್ರ

ಹಾಸನ: ಅಂತರ ಜಿಲ್ಲಾ ನಾಲ್ವರು ಕಳ್ಳರನ್ನು ಬಂಧಿಸಿರುವ ಅರಸೀಕೆರೆ ಠಾಣೆ ಪೊಲೀಸರು, ₹31 ಲಕ್ಷ ಮೌಲ್ಯದ ಚಿನ್ನಾಭರಣ, ಒಂದು ಲಕ್ಷ ರೂಪಾಯಿ ನಗದು ಹಾಗೂ ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಗಂಜಿಗೆರೆ ಕೊರಚರಹಟ್ಟಿ ಗ್ರಾಮದಗವಿರಾಜ, ರಂಗನಾಥ, ಲೋಕೇಶ್‌ ಹಾಗೂ ವೆಂಕಟೇಶ್‌ನನ್ನು ಬಂಧಿಸಲಾಗಿದೆ. ಈ ನಾಲ್ವರು ಕೂಲಿ ಕೆಲಸದ ಜತೆಗೆ ವಿವಿಧ ಜಿಲ್ಲೆಗಳಲ್ಲಿ ಮನೆಕಳ್ಳತನ ಪ್ರಕರಣದಲ್ಲಿಭಾಗಿಯಾಗಿದ್ದಾರೆಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪೊಲೀಸ್‌ ವರಿಷ್ಠಾಧಿಕಾರಿ ಆರ್‌.ಶ್ರೀನಿವಾಸ್ ಗೌಡ ತಿಳಿಸಿದರು.

ಅರಸೀಕೆರೆ ಗ್ರಾಮಾಂತರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 3, ಬಾಣಾವಾರ 2, ಬೇಲೂರು 2, ಅರೇಹಳ್ಳಿ 2, ಹಾಸನ ನಗರ 1, ಅರಕಲಗೂಡು 2, ಬಳ್ಳಾರಿ ಜಿಲ್ಲೆಯ ಕೂಡ್ಲಗಿ 1, ಚಿಕ್ಕಮಗಳೂರು ಜಿಲ್ಲೆಯ ಯಗಟಿ ಪೊಲೀಸ್‌ ಠಾಣೆ ವ್ಯಾಪ್ತಿಯ 1 ಪ್ರಕರಣದಲ್ಲಿ ಭಾಗಿಯಾಗಿರುವುದು ತನಿಖೆಯಿಂದ ಗೊತ್ತಾಗಿದೆ. ಇವರಬಂಧನದಿಂದ 14 ಪ್ರಕರಣಗಳು ಪತ್ತೆಯಾಗಿವೆ ಎಂದರು.

ಪ‍್ರಮುಖ ಆರೋಪಿ ಗವಿರಾಜ ಎಂಬಾತ 21 ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ತುಮಕೂರು ಜಿಲ್ಲೆಯ ಕುಣಿಗಲ್‌ ವೃತ್ತದ ಅಮೃತೂರು ಪೊಲೀಸ್‌ ಠಾಣೆಯ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದು, ವಾರೆಂಟ್‌ ಸಹ ಜಾರಿಯಾಗಿದೆ ಎಂದು ಹೇಳಿದರು.

ಅರಸೀಕೆರೆ ತಾಲ್ಲೂಕಿನ ಕಾರೇಹಳ್ಳಿ ತಾಂಡ್ಯ ಗ್ರಾಮದ ನವೀನ್ ನಾಯ್ಕ್‌ ಅವರು ಕುಟುಂಬದದೊಂದಿಗೆ ಫೆ. 14ರಂದು ಮನೆಗೆ ಬೀಗ ಹಾಕಿಕೊಂಡು ಕಡೂರು ತಾಲ್ಲೂಕಿಗೆ ತೆರಳಿದ್ದರು. ವಾಪಸ್‌ ಬಂದು ನೋಡಿದಾಗ ಮನೆಯ ಹಿಂದಿನ ಬಾಗಿಲು ಒಡೆದು, ಬೀರುವಿನಲ್ಲಿದ್ದ ₹1.45 ಲಕ್ಷ ಮೌಲ್ಯದ ಚಿನ್ನದ ಓಲೆ, ಉಂಗುರಗಳನ್ನು ಕಳವುಮಾಡಲಾಗಿತ್ತು. ಮನೆ ಮಾಲೀಕನ ದೂರು ಆಧರಿಸಿ ಆರೋಪಿಗಳ ಪತ್ತೆಗೆ ತಂಡ ರಚಿಸಲಾಯಿತು. ಖಚಿತ ಮಾಹಿತಿ ಆಧರಿಸಿ ಆರೋಪಿಗಳನ್ನು ಮಾರ್ಚ್‌ 21ರಂದು ಚಿತ್ರದುರ್ಗದ ಹ್ಯಾಂಡ್‌ಪೋಸ್ಟ್‌ ಬಳಿ ಬಂಧಿಸಿ, ವಿಚಾರಣೆ ನಡೆಸಿದಾಗ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡರು ಎಂದು ವಿವರಿಸಿದರು.

ಹಾಸನ ಜಿಲ್ಲೆಯ 12 ಪ್ರಕರಣ, ಬಳ್ಳಾರಿ ಹಾಗೂ ಚಿಕ್ಕಮಗಳೂರು ಜಿಲ್ಲೆಯ ತಲಾ ಒಂದು ಪ್ರಕರಣಗಳಲ್ಲಿ ಆರೋಪಿಗಳಿಂದ ₹30.50 ಲಕ್ಷ ಮೌಲ್ಯದ 720ಗ್ರಾಂ ಚಿನ್ನದ ಆಭರಣ, ಒಂದೂವರೆ ಕೆ.ಜಿ. ಬೆಳ್ಳಿ ವಸ್ತು, ಒಂದು ಲಕ್ಷ ರೂಪಾಯಿ ನಗದು ಹಾಗೂ ಬಜಾಜ್‌ ಪ್ಲಾಟಿನಾ ಬೈಕ್ ವಶಪಡಿಸಿಕೊಳ್ಳಲಾಗಿದೆ ಎಂದರು.

ಆರೋಪಿಗಳನ್ನು ಬಂಧಿಸಿದ ತಂಡಕ್ಕೆ ₹ 10 ಸಾವಿರ ನಗದು ಬಹುಮಾನವನ್ನು ಎಸ್ಪಿ ನೀಡಿದರು.

ಪತ್ತೆ ಕಾರ್ಯದಲ್ಲಿ ಅರಸೀಕೆರೆ ಡಿವೈಎಸ್‌ಪಿ ನಾಗೇಶ್‌, ಸಿಪಿೈ ಕೆ.ಎಂ.ವಸಂತ, ಬಾಣಾವರ ಠಾಣೆ ಪಿಎಸ್‌ಐ ಅರುಣ್‌, ಸಿಬ್ಬಂದಿಗಳಾದ ಹೀರಾಸಿಂಗ್‌, ನಂಜುಂಡೇಗೌಡ, ಲೋಕೇಶ್‌, ನಾಗೇಂದ್ರ, ಮಧು, ಹೇಮಂತ, ಪುಟ್ಟಸ್ವಾಮಿ, ಹರೀಶ್‌, ನಾಗರಾಜ ನಾಯ್ಕ, ಪ್ರಕಾಶನಾಯ್ಕ ಹಾಗೂ ಇತರರು ಶ್ರಮಿಸಿದ್ದಾರೆ.

ಅಪ್ಪ–ಮಗ ಬಂಧನ: ಮತ್ತೊಂದು ಪ್ರಕರಣದಲ್ಲಿ ಸಮನ್ಸ್‌ ನೀಡಲು ಹೋದ ಪೊಲೀಸ್‌ ಕಾನ್‌ಸ್ಟೇಬಲ್‌ ಯೋಗೇಶ್‌ ಮೇಲೆ ಹಲ್ಲೆ ನಡೆಸಿದ ಹೊಳೆನರಸೀಪುರ ತಾಲ್ಲೂಕಿನ ಹಿರೇಬೆಳಗುಲಿ ಗ್ರಾಮದ ಅಪ್ಪ, ಮಗ ಸೋಮಶೇಖರ್‌ ಹಾಗೂ ನಿತಿನ್‌ನನ್ನುಬಂಧಿಸಲಾಗಿದೆ.

ಮಾರ್ಚ್‌ 24ರಂದು ಯೋಗೇಶ್‌ ಅವರು ಸಮನ್ಸ್‌ ಜಾರಿ ಮಾಡಲು ಹಿರೇಬೆಳಗುಲಿ ಗ್ರಾಮಕ್ಕೆ ತೆರಳಿದ್ದರು. ಆದರೆ ಮನೆಯಲ್ಲಿ ಸೋಮಶೇಖರ್ ಇರಲಿಲ್ಲ. ಅವರನ್ನು ಹುಡುಕಿಕೊಂಡು ಚೆನ್ನಾಂಬಿಕ ಛತ್ರದ ಬಳಿ ಬಂದ ಪೊಲೀಸ್‌ ನೋಡಿ ಆರೋಪಿ ತನ್ನ ಮಗನ ಜತೆ ಹೇಮಾವತಿ ನದಿ ಸೇತುವೆ ಕಡೆ ಓಡಿ ಹೋದ. ಅವರನ್ನು ಹಿಂಬಾಲಿಸಿದ ಯೋಗೇಶ್‌ ಜತೆ ಜಗಳವಾಡಿ, ಅವಾಚ್ಯ ಶಬ್ಧಗಳಿಂದ ನಿಂದಿಸಿ, ಕಲ್ಲಿನಿಂದ ಅಪ್ಪ,ಮಗ ಹಲ್ಲೆ ನಡೆಸಿದ್ದರು. ಅಲ್ಲದೇ ಮೊಬೈಲ್‌ ಕಿತ್ತುಕೊಂಡು ಪರಾರಿಯಾಗಿದ್ದರು ಎಂದು ಎಸ್ಪಿ ಹೇಳಿದರು.

ಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎನ್‌.ನಂದಿನಿ, ಡಿವೈಎಸ್‌ಪಿ ನಾಗೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT