ಹಾಸನ: ತ್ಯಾಗ, ಬಲಿದಾನಗಳಿಂದ ಪಡೆದುಕೊಂಡಿರುವ ಹಕ್ಕುಗಳನ್ನು ಕಸಿಯಲು ಯಾರಿಗೂ ಅವಕಾಶ ಕೊಡುವುದಿಲ್ಲ ಎಂಬ ದೃಢಸಂಕಲ್ಪದ ಮೂಲಕ ಸಮಾನತೆಯೆಡೆಗೆ ಮುನ್ನಡೆಯಬೇಕು ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ರಾಜ್ಯ ಅಧ್ಯಕ್ಷೆ ಎಸ್.ವರಲಕ್ಷ್ಮೀ ಹೇಳಿದರು.
“ಯಾರು ಸಂಪತ್ತನ್ನು ಸೃಷ್ಟಿಸುತ್ತಾರೋ ಅವರಿಗೇ ಅದು ಸೇರಬೇಕು” ಎಂಬ ಘೋಷಣೆಯೊಂದಿಗೆ ಸಿಐಟಿಯು ಜಿಲ್ಲಾ ಸಮಿತಿ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಕಾರ್ಮಿಕ ಸಂಘಟನೆ ಶಕ್ತಿಯಾಗಿ ರೂಪುಗೊಳ್ಳುವ ಮುಂಚಿತವಾಗಿ ಜನರು 10 ರಿಂದ 16 ತಾಸು ದುಡಿಯುತ್ತಿದ್ದರು. ಅಮೆರಿಕಾದ ಚಿಕಾಗೋದಲ್ಲಿ ಸಭೆ ನಡೆಸುವಾಗ ಬಾಂಬ್ ಸ್ಫೋಟಗೊಂಡಿತು. ಇದನ್ನು ಖಂಡಿಸಿ 1889ರಲ್ಲಿ ಅಂತರರಾಷ್ಟ್ರೀಯ ಸಮಾಜವಾದಿ ಸಮ್ಮೇಳನ ನಡೆಯಿತು. ಬಾಂಬ್ ಸ್ಫೋಟದಿಂದ ಹುತಾತ್ಮರಾದ ಕಾರ್ಮಿಕರ ನೆನಪಿಗಾಗಿ ಮೇ ಒಂದನ್ನು ಅಂತರರಾಷ್ಟ್ರೀಯ ಕಾರ್ಮಿಕರ ದಿನವಾಗಿ ಆಚರಿಸಲಾಗುತ್ತಿದೆ ಎಂದು ವಿವರಿಸಿದರು.
1991ರಲ್ಲಿ ದೇಶದಲ್ಲಿ ಜಾರಿಯಾದ ಆರ್ಥಿಕ ನೀತಿಯ ಫಲವಾಗಿ ದುಡಿಯುವ ವರ್ಗಕ್ಕೆ ಹಲವಾರು ಸೌಲಭ್ಯಗಳು ಸಿಕ್ಕಿವೆ. ಕಾರ್ಮಿಕರ ಪರಿಸ್ಥಿತಿ ಬದಲಾಗಿದ್ದು, ಅಪಾರ ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿಗಳನ್ನು ಕೆಲವೇ ದೇಶಗಳು ಮತ್ತು ಕಾರ್ಪೊರೇಟ್ ಸಂಸ್ಥೆಗಳು ಕಬಳಿಸಿವೆ ಎಂದು ನುಡಿದರು.
ಮಾಲೀಕರು ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವ ಸಲುವಾಗಿ ಕಡಿಮೆ ಕೂಲಿ ಕೊಡುತ್ತಾರೆ. ಆದರೆ, ಇತರ ಸೇವಾ ವೆಚ್ಚಗಳು ಹೆಚ್ಚು ಇರುವಾಗ ಕೇವಲ ಕೂಲಿಯನ್ನು ಮಾತ್ರ ಕಡಿಮೆ ಮಾಡುವುದು ಹೇಗೆ ಎಂದು ಪ್ರಶ್ನಿಸಿದರು.
ಕೋಟ್ಯಂತರ ಜನರು ನಿರುದ್ಯೋಗ, ಬಡತನ, ಅನಕ್ಷರತೆ, ಅನಾರೋಗ್ಯ, ಪುನರ್ವಸತಿ, ಮೂಲ ಸೌಲಭ್ಯಗಳ ಕೊರತೆಯಿಂದ ನರಳುತ್ತಿದ್ದಾರೆ. ಇದನ್ನು ಕೊನೆಗಾಣಿಸುವ ಹೋರಾಟ ರೂಪಿಸಬೇಕಿದೆ ಎಂದು ಕರೆ ನೀಡಿದರು.
ಕಾರ್ಮಿಕರಿಗೆ ಕನಿಷ್ಟ ಕೂಲಿ ನೀಡುವಂತೆ ಹೈಕೋರ್ಟ್ ಆದೇಶವನ್ನು ಸಿಐಟಿಯು ಸ್ವಾಗತಿಸುತ್ತದೆ ಎಂದರು.
ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ಮಾತನಾಡಿ, ಬಂಡವಾಳಶಾಹಿ ವ್ಯವಸ್ಥೆಯನ್ನು ಕಿತ್ತು ಹಾಕುವಲ್ಲಿ ಕಾರ್ಮಿಕ ವರ್ಗದ ಪಾತ್ರ ಪ್ರಮುಖವಾಗಿದೆ. ಕಾರ್ಮಿಕರ ಪ್ರಜ್ಞೆಯನ್ನು ಎತ್ತರಿಸಲು ಮತ್ತು ಶೋಷಣೆ ಕೊನೆಗಾಣಿಸುವ ಅಂತಿಮ ಸಂಘರ್ಷಕ್ಕಾಗಿ ಕಾರ್ಮಿಕ ವರ್ಗ ಪ್ರತಿಜ್ಞೆ ಮಾಡುತ್ತದೆ ಎಂದು ಹೇಳಿದರು.
ಪ್ರಾಂತ ರೈತ ಸಂಘ (ಕೆಪಿಆರ್‍ಎಸ್) ಜಿಲ್ಲಾಧ್ಯಕ್ಷ ಎಚ್.ಆರ್.ನವೀನ್ ಕುಮಾರ್ ಮಾತನಾಡಿ, ಕಾರ್ಮಿಕರು ಋಣ ಸಂದಾಯ ಮಾಡುವ ಸಮಯ ಬಂದಿದೆ. ಇದುವರೆಗೆ ಏನಾದರೂ ಸ್ವಲ್ಪ ಸೌಲಭ್ಯ ಪಡೆದುಕೊಂಡಿದ್ದರೆ ಅದು ಕೆಂಬಾವುಟದಡಿಯಲ್ಲಿ ನಡೆಸಿದ ಹೋರಾಟಗಳಿಂದ ಮಾತ್ರ. ಆದರೆ, ಈಗ ಕಾರ್ಮಿಕರು ಪಡೆದುಕೊಂಡಿರುವ ಹಕ್ಕುಗಳನ್ನು ಆಳುವ ಸರ್ಕಾರಗಳು ಕಿತ್ತು ಮಾಲೀಕರ ಕೈಗೆ ಒಪ್ಪಿಸುತ್ತಿವೆ. ಇದು ಹೀಗೆ ಮುಂದುವರಿದರೆ ಕಾರ್ಮಿಕರು 1850ರ ಹಿಂದಿನ ಸ್ಥಿತಿಗೆ ಮರಳಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಸಿಐಟಿಯು ಗೌರವಾಧ್ಯಕ್ಷ ವಿ.ಸುಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವಿಮಾ ನೌಕರರ ಸಂಘದ ವಲಯ ಅಧ್ಯಕ್ಷ ಸಿ.ಮಂಜುನಾಥ್, ಅಂಗನವಾಡಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷೆ ಇಂದ್ರಮ್ಮ, ಬಿಸಿಯೂಟ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಎಂ.ಬಿ.ಪುಷ್ಪ, ಕೆಎಸ್‍ಆರ್‌ಟಿಸಿ ನೌಕರರ ಸಂಘದ ಜಿಲ್ಲಾಧ್ಯಕ್ಷ ವೀರಪ್ಪ, ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಟಿ.ಹೊನ್ನೇಗೌಡ, ಡಿವೈಎಫ್‍ಐ ಜಿಲ್ಲಾ ಕಾರ್ಯದರ್ಶಿ ಎಂ.ಜಿ.ಪೃಥ್ವಿ, ಎಸ್‍ಎಫ್‍ಐ ಮುಖಂಡ ವಿವೇಕ ಹಾಜರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ತೋಟ ಕಾರ್ಮಿಕರು, ಪೌರಕಾರ್ಮಿಕರು, ಗ್ರಾಮ ಪಂಚಾಯಿತಿ, ಅಂಗನವಾಡಿ, ಬಿಸಿಯೂಟ ನೌಕರರು ನಗರದಲ್ಲಿ ಮೆರವಣಿಗೆ ನಡೆಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.