ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌ನಲ್ಲಿ ಅಭ್ಯರ್ಥಿ ಆಗುವುದಕ್ಕೆ ಕಿತ್ತಾಟ: ಶಾಸಕ ಪ್ರೀತಂ ಗೌಡ

2023ಕ್ಕೆ ಸೆಮಿಫೈನಲ್‌, 2024ಕ್ಕೆ ಫೈನಲ್‌
Last Updated 10 ಫೆಬ್ರುವರಿ 2023, 19:30 IST
ಅಕ್ಷರ ಗಾತ್ರ

ಹಾಸನ: ಜೆಡಿಎಸ್ ಪಕ್ಷದಲ್ಲಿ ಹಾಸನ ಕ್ಷೇತ್ರಕ್ಕೆ ಅಭ್ಯರ್ಥಿ ಆಗುವುದಕ್ಕೆ ಕಿತ್ತಾಟ ನಡೆದಿದೆಯೇ ಹೊರತು, ಕ್ಷೇತ್ರದ ಶಾಸಕರಾಗಲು ಅಲ್ಲ ಎಂದು ಶಾಸಕ ಪ್ರೀತಂ ಗೌಡ ಲೇವಡಿ ಮಾಡಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದ ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ. ಕ್ಷೇತ್ರದ ಚುನಾವಣೆ ಗೆಲ್ಲುವುದಾಗಿದ್ದರೆ, ಇಂದು ಜನರ ಮಧ್ಯೆ ಇರುತ್ತಿದ್ದರು. ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದರು ಎಂದರು.

‘ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ವಿರುದ್ಧ ರೇವಣ್ಣ ಸ್ಪರ್ಧೆ ಮಾಡಿದರೆ 50ಸಾವಿರ ಮತಗಳಿಂದ ಗೆಲುವು ಸಾಧಿಸುತ್ತೇನೆ ಎಂಬ ಮಾತಿಗೆ ಈಗಲೂ ಬದ್ಧನಾಗಿದ್ದೇನೆ. ಈ ಪಂಥಾಹ್ವಾನ ನೀಡಿ 18 ತಿಂಗಳಾದ ಮೇಲೆ ರೇವಣ್ಣ ಉತ್ತರಿಸಿದ್ದಾರೆ ಎಂದರೆ, ಅವರ ಬದ್ಧತೆ ಪ್ರಶ್ನಿಸಬೇಕಾಗುತ್ತದೆ. ನಾಮಪತ್ರ ಸಲ್ಲಿಸಿದ ಬಳಿಕ ನನ್ನ ವಿರೋಧಿ ಯಾರು ಎಂಬುದನ್ನು ಗಮನಿಸಿ, ಪ್ರತಿಕ್ರಿಯೆ ನೀಡಿದರೆ ಸೂಕ್ತ’ ಎಂದರು.

‘ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ವಿರೋಧಿಗಳು ಯಾರೇ ಇದ್ದರೂ ನನ್ನ ಹೆಜ್ಜೆ ಸಕಾರಾತ್ಮಕವಾಗಿ ಇರಲಿದೆ. ಅಪ್ಪ ಹಾಕಿದ ಆಲದ ಮರ ಎಂಬಂತೆ ಹಳೆ ಕಾಲದ ರಾಜಕೀಯ ಹಾಸನ ಜಿಲ್ಲೆಯಲ್ಲಿ ಇನ್ನು ಮುಂದೆ ನಡೆಯುವುದಿಲ್ಲ’ ಎಂದು ಹೇಳಿದರು.

‘ಹಾಸನ ವಿಧಾನಸಭಾ ಕ್ಷೇತ್ರದ ಮಟ್ಟಿಗೆ ಹಳೆ ಕಾಲದ ರಾಜಕೀಯ ನಡೆಯವುದಿಲ್ಲ ಎಂಬುದು 2018ರಲ್ಲಿಯೇ ರುಜುವಾತು ಮಾಡಲಾಗಿದೆ. 2023 ಸೆಮಿ ಫೈನಲ್ ಹಾಗೂ 2025 ಫೈನಲ್. ಜಿಲ್ಲಾ ರಾಜಕೀಯದ ಆಟ ನೋಡಲಿದ್ದೀರಿ’ ಎಂದು ತಿಳಿಸಿದರು.

‘ಸಾಮಾನ್ಯ ಕುಟುಂಬದಿಂದ ಬಂದು ಶಾಸಕನಾಗಿರುವ ನನ್ನ ವಿರುದ್ಧ ಜಿಲ್ಲೆಯ ಹಾಗೂ ರಾಜ್ಯದ ದೈತ್ಯ ರಾಜಕೀಯ ಶಕ್ತಿ ಮುಗಿಬಿದ್ದಿದ್ದು, ಇದರಿಂದಲೇ ಹಾಸನ ವಿಧಾನಸಭಾ ಕ್ಷೇತ್ರ ರಾಜ್ಯದ ಜನರ ಗಮನ ಸೆಳೆದಿದೆ’ ಎಂದರು.

‘ನಮ್ಮ ಕುಟುಂಬದಿಂದ ನಾನೊಬ್ಬನೇ ಅಧಿಕಾರದಲ್ಲಿದ್ದು, ಗ್ರಾಮ ಪಂಚಾಯಿತಿಯಲ್ಲೂ ನಮ್ಮ ಕುಟುಂಬದ ಯಾವೊಬ್ಬ ಸದಸ್ಯರು ಇಲ್ಲ. ಆದರೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬದಲ್ಲಿ ನಾಲ್ಕು ಬಾರಿ ಸಚಿವರಾಗಿರುವ ಎಚ್.ಡಿ. ರೇವಣ್ಣ, ಅವರ ಪುತ್ರರಾದ ಸಂಸದ ಪ್ರಜ್ವಲ್‌, ವಿಧಾನಪರಿಷತ್ ಸದಸ್ಯ ಸೂರಜ್‌ ರೇವಣ್ಣ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಎಲ್ಲರೂ ನನ್ನ ವಿರುದ್ಧ ರಾಜಕೀಯ ಮಾಡುತ್ತಿರುವುದು ಜನರ ಗಮನ ಸೆಳೆಯಲು ಕಾರಣವಾಗಿದೆ’ ಎಂದು ತಿಳಿಸಿದರು.

‘ರೇವಣ್ಣ ಸಾಮಾನ್ಯ ಕಾರ್ಯಕರ್ತರೆ?’
‘ಕುಮಾರಸ್ವಾಮಿಯವರು ಕೇವಲ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಪಡೆಯುವುದಾಗಿ ಹೇಳಿದ್ದರು. ಆದರೆ ಇದೀಗ ಎಚ್.ಡಿ. ರೇವಣ್ಣ ಸ್ಪರ್ಧೆ ಮಾಡುವ ಬಗ್ಗೆ ಮಾತನಾಡಿದ್ದು, ಹಾಗಾದರೆ ಸಾಮಾನ್ಯ ಕಾರ್ಯಕರ್ತ ಯಾರು ಎಂಬುದು ಜನರಿಗೆ ತಿಳಿದಂತಾಗಿದೆ’ ಎಂದು ಪ್ರೀತಂ ಗೌಡ ಹೇಳಿದರು.

‘ದೇವೇಗೌಡರ ಕುಟುಂಬದಲ್ಲಿ ಅವರ ಮನೆಯವರೇ ಸಿಎಂ, ಡಿಸಿಎಂ ಆಗಬೇಕು ಎಂಬುದು ಹೊಸ ವಿಷಯವಲ್ಲ. ಇದರಿಂದ ಕಾರ್ಯಕರ್ತರು ಸಹ ಭ್ರಮನಿರಸನಗೊಂಡಿದ್ದಾರೆ’ ಎಂದು ಟೀಕಿಸಿದರು.

‘ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಜನರ ಮಧ್ಯೆ ಕೆಲಸ ಮಾಡಿದ್ದು, ಕೋವಿಡ್–19 ಸಂದರ್ಭದಲ್ಲಿ ಜನರ ಕಷ್ಟಕ್ಕೆ ಸ್ಪಂದಿಸಿದ್ದೇನೆ. ಆದರೆ ಜೆಡಿಎಸ್‌ನವರು ಅಂದು ಹೇಗೆ ಸ್ಪಂದಿಸಿದ್ದಾರೆ ಎಂಬುದು ಇಲ್ಲಿನ ಜನರಿಗೆ ತಿಳಿದಿದೆ. ನನ್ನನ್ನು ಮನೆಯ ಮಗನಂತೆ ಕ್ಷೇತ್ರದ ಜನರು ಆಶೀರ್ವದಿಸುತ್ತಿದ್ದು, ಮುಂದಿನ ಚುನಾವಣೆಯಲ್ಲಿ ಸ್ಪಷ್ಟವಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT