ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಿತಾ ಭಟ್ಟರ ಗ್ಲಾಮರ್‌ ಇಲ್ಲದ ಪಾತ್ರ!

Last Updated 26 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

* ‘... ಬೋರಾಪುರ’ ಸಿನಿಮಾದಲ್ಲಿ ನಿಮ್ಮದು ಯಾವ ತರಹದ ಪಾತ್ರ?
ಈ ಚಿತ್ರದಲ್ಲಿ ಬರುವ ಹಳ್ಳಿಯ ಜನ ತಮ್ಮ ಪಾಡಿಗೆ ತಾವು ಬದುಕು ಸಾಗಿಸುತ್ತಿರುತ್ತಾರೆ. ಇದರಲ್ಲಿ ನನ್ನದು ನಾಟಕ ಕಲಾವಿದೆಯ ಪಾತ್ರ. ನಾನು ನನ್ನ ಪಾಡಿಗೆ ಹೊಟ್ಟೆ ಪಾಡು ನೋಡಿಕೊಂಡು, ಬದುಕು ಸಾಗಿಸುತ್ತ ಇರುತ್ತೇನೆ. ನನಗೆ ಹೆಸರಿಗೆ ಅಂತ ಒಬ್ಬ ಗಂಡ ಇರುತ್ತಾನೆ. ಆದರೆ ಆತ ಸರಿ ಇರುವ ಮನುಷ್ಯನಲ್ಲ. ನನಗೆ ನನ್ನದೇ ಆದ ಒಂದು ಜೀವನ ಬೇಕಿರುತ್ತದೆ. ಹೀಗಿರುವಾಗ, ಈ ಹಳ್ಳಿಗೆ ಹೊಸದಾದ ಒಂದು ವಿಚಾರ ಹಳ್ಳಿಯ ಜನರ ಮೇಲೆ ‍ಪ್ರಭಾವ ಬೀರುತ್ತದೆ. ಅದು ಹಳ್ಳಿಯ ಎಲ್ಲರ ಬದುಕಿನಲ್ಲೂ ಬದಲಾವಣೆ ತರುತ್ತದೆ.

ಅಲ್ಲಿ ಒಂದು ಸಮಸ್ಯೆ ಸೃಷ್ಟಿಯಾಗುತ್ತದೆ. ನಾನು ಹೇಗೋ ಆ ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತೇನೆ ಅಥವಾ ಸಮಸ್ಯೆಯ ಜೊತೆ ಕನೆಕ್ಟ್‌ ಆಗುತ್ತೇನೆ. ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ನನ್ನ ಪಾತ್ರ ಮತ್ತು ಆ ಅಂಶ ಪ್ರಮುಖವಾಗಿ ಕಾಣಿಸುತ್ತವೆ. ಹೆಣ್ಣು, ಮಣ್ಣು, ಹೊನ್ನು ಋಣ ಇರುವವರಿಗೆ ಮಾತ್ರ ಸಿಗುತ್ತವೆ ಎಂಬುದನ್ನು ಬಹಳ ಸ್ಪಷ್ಟವಾಗಿ ಇದರಲ್ಲಿ ತೋರಿಸಿದ್ದಾರೆ. ಹೆಣ್ಣು, ಮಣ್ಣು, ಹೊನ್ನಿಗಾಗಿ ಪ್ರಪಂಚದಲ್ಲಿ ಎಷ್ಟೊಂದು ಹೊಡೆದಾಟಗಳು ಆಗುತ್ತವೆ ಎನ್ನುವುದನ್ನು ಕೂಡ ನನ್ನ ಪಾತ್ರದ ಮೂಲಕ ತೋರಿಸಲಾಗಿದೆ. ಹೆಣ್ಣು ಸಹನಾಧರಿತ್ರಿ ಅನ್ನುತ್ತಾರೆ. ಆದರೆ, ಆಕೆ ಮುನಿದರೆ ಏನೇನು ಸಮಸ್ಯೆ ಆಗುತ್ತದೆ ಎಂಬ ಸಂದೇಶ ಕೂಡ ಇದೆ.

* ಈ ಚಿತ್ರದಲ್ಲಿ ಯಾವುದಕ್ಕೆ ಹೆಚ್ಚಿನ ಪ್ರಾಧಾನ್ಯ ನೀಡಲಾಗಿದೆ?
ಇದರಲ್ಲಿ ಹಾಸ್ಯ ಹೆಚ್ಚು ಆದ್ಯತೆ ಪಡೆದಿದೆ. ದ್ವಂದ್ವಾರ್ಥದ ಸಂಭಾಷಣೆಗಳು ಇಲ್ಲ. ಸಿನಿಮಂದಿರಗಳಿಗೆ ಜನರನ್ನು ಕರೆಸಲು ಪ್ರೋಮೊ, ಟ್ರೇಲರ್‌ಗಳಲ್ಲಿ ಕೆಲವು ಅಂತಹ ಸಂಭಾಷಣೆ ತೋರಿಸಿದ್ದಿರಬಹುದು. ಆದರೆ, ಇದು ಸಂಪೂರ್ಣವಾಗಿ ಮನೋರಂಜನೆ ನೀಡುವ ಸಿನಿಮಾ. ಎಲ್ಲರೂ ಜೊತೆಯಾಗಿ ನೋಡುವಂತಹ ಚಿತ್ರ. ಹಳ್ಳಿ ಜನರ ಮುಗ್ಧತೆಯನ್ನು ಇದರಲ್ಲಿ ಕಾಣಬಹುದು.

* ನಿಮ್ಮ ವೃತ್ತಿಯಲ್ಲಿ ಇದು ಎಷ್ಟು ಮುಖ್ಯವಾದ ಸಿನಿಮಾ?
ಅನಿತಾ ಅಂದರೆ ಗ್ಲಾಮರ್ ಎನ್ನುವ ಮಾತು ಇದೆ. ಆದರೆ ಇದರಲ್ಲಿ ನಾನು ಗ್ಲಾಮರ್‌ನಿಂದ ಸಂಪೂರ್ಣವಾಗಿ ಹೊರಗೆ ಇದ್ದೇನೆ. ನನ್ನ ಪೋಸ್ಟರ್‌ಗಳನ್ನು ಕಂಡರೆ ಅದು ಗೊತ್ತಾಗುತ್ತದೆ. ಇದರಲ್ಲಿ ಎಲ್ಲರೂ ಮೇಕಪ್‌ ಇಲ್ಲದೆ ಕಾಣಿಸಿಕೊಂಡಿದ್ದಾರೆ– ನನ್ನನ್ನು ಹೊರತುಪಡಿಸಿ. ’ ನನ್ನ ಅಭಿನಯದ ಬಗ್ಗೆ ಯಾರೂ ಕೆಟ್ಟ ಮಾತು ಆಡಿಲ್ಲವಾದರೂ, ಅದನ್ನು ಎಲ್ಲರೂ ಗುರುತಿಸಿದ್ದಾರೆ ಎಂದು ಹೇಳಲೂ ಆಗದು. ಆದರೆ ಈ ಸಿನಿಮಾ ಮೂಲಕ ನನ್ನ ಅಭಿನಯವನ್ನು ಜನ ಗುರುತಿಸುತ್ತಾರೆ ಎಂಬ ನಂಬಿಕೆ ಇದೆ.

‘ಟಗರು’ ಸಿನಿಮಾದ ನಂತರ ನನಗೆ ಎಲ್ಲರೂ ಬೋಲ್ಡ್‌ ಪಾತ್ರಗಳನ್ನೇ ಕೊಡುತ್ತಿದ್ದಾರೆ. ಅಂತಹ ಪಾತ್ರ ಇರುವ ಹತ್ತು ಸಿನಿಮಾ ತಿರಸ್ಕರಿಸಿದ್ದೇನೆ. ಬೋಲ್ಡ್ ಪಾತ್ರ ಅಂದರೆ ಅದಕ್ಕೊಂದು ತೂಕ ಇರಬೇಕು. ಆದರೆ, ಅದು ಇರಲಿಲ್ಲ ಎಂಬ ಕಾರಣಕ್ಕೆ ತಿರಸ್ಕರಿಸಿದ್ದೇನೆ. ಈ ಸಿನಿಮಾ ತೆರೆಗೆ ಬಂದ ನಂತರ, ನನಗೆ ಸೂಕ್ತವಾದ ಪಾತ್ರಗಳು ಹುಡುಕಿಕೊಂಡು ಬರಬಹುದು.

* ಮಂಡ್ಯದ ಭಾಷೆಯಲ್ಲಿ ಸಂಭಾಷಣೆ ನಡೆಸುವುದು ನಿಮಗೆ ಕಷ್ಟವಾಗಲಿಲ್ಲವೇ?
ಭಾಷೆಯ ವಿಚಾರದಲ್ಲಿ ನಾನು ಆತಂಕದಲ್ಲೇ ಇದ್ದೆ. ನಾನು ಡಬ್ಬಿಂಗ್ ಹೇಗೆ ಮಾಡುತ್ತೇನೆ ಎಂಬ ಭಯ ನನ್ನಲ್ಲಿ ಇತ್ತು. ಆದರೆ, ಅದನ್ನು ಚೆನ್ನಾಗಿ ಮಾಡಿದ್ದೇನೆ. ಈ ರೀತಿಯ ಪಾತ್ರ ನನಗೆ ಸಿಕ್ಕಿರುವುದು ಇದೇ ಮೊದಲು.

* ಮುಂದಿನ ಸಿನಿಮಾ ಪ್ರಯಾಣ?
‘ವೈಶಾಖಿನಿ’, ‘ಅಭಿರಾಮಿ‘, ‘ಪ್ರಭುತ್ವ’ ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ‘ಹೊಸ ಸಿನಿಮಾ’ ಎನ್ನುವ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ‘ಡಿಎನ್‌ಎ’ ಎಂಬ ಇನ್ನೊಂದು ಸಿನಿಮಾದಲ್ಲಿ ಕೂಡ ಅಭಿನಯಿಸಿದ್ದೇನೆ. ಬಹಳ ಸುಂದರವಾದ ಪಾತ್ರ ನನಗೆ ಅದರಲ್ಲಿ ಸಿಕ್ಕಿದೆ. ಎರಡು–ಮೂರು ಸಿನಿಮಾಗಳಿಗೆ ಒಪ್ಪಿಕೊಳ್ಳಬೇಕಿದೆ. ಪರಭಾಷೆಗಳಿಂದ ನನಗೆ ಅವಕಾಶ ಬಂದಿಲ್ಲ, ಅವಕಾಶ ಪಡೆಯಲು ನಾನು ಪ್ರಯತ್ನ ಮಾಡಿಯೂ ಇಲ್ಲ. ‘ಟಗರು’ ಸಿನಿಮಾ ಕಾರಣದಿಂದಾಗಿ ನನಗೆ ಬೇರೆ ಕಡೆಗಳಿಂದ ಅವಕಾಶಗಳು ಬರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT