ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹48 ಸಾವಿರ ಕೋಟಿ ನಷ್ಟದಲ್ಲಿ ಕೆಪಿಟಿಸಿಎಲ್: ಎಚ್.ಡಿ. ರೇವಣ್ಣ ಆರೋಪ

Published 1 ಏಪ್ರಿಲ್ 2024, 13:23 IST
Last Updated 1 ಏಪ್ರಿಲ್ 2024, 13:23 IST
ಅಕ್ಷರ ಗಾತ್ರ

ನುಗ್ಗೇಹಳ್ಳಿ: ರಾಜ್ಯದ ಕಾಂಗ್ರೆಸ್ ಸರ್ಕಾರ ಉಚಿತ ವಿದ್ಯುತ್‌ ನೀಡುತ್ತಿರುವುದರಿಂದ ಕೆಪಿಟಿಸಿಎಲ್ ₹48 ಸಾವಿರ ಕೋಟಿ ನಷ್ಟದಲ್ಲಿದ್ದು, ಮುಚ್ಚುವ ಸ್ಥಿತಿಗೆ ಬಂದಿದೆ ಎಂದು ಶಾಸಕ ಎಚ್.ಡಿ. ರೇವಣ್ಣ ಆರೋಪಿಸಿದರು.

ಹೋಬಳಿ ಕೇಂದ್ರದ ಎಪಿಎಂಸಿ ಉಪ ಮಾರುಕಟ್ಟೆ ಆವರಣದಲ್ಲಿ ಆಯೋಜಿಸಿದ್ದ ಹೋಬಳಿ ಮಟ್ಟದ ಜೆಡಿಎಸ್– ಬಿಜೆಪಿ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು.

‘ನಾನು ಇಂಧನ ಸಚಿವನಾಗಿದ್ದ ಸಮಯದಲ್ಲಿ ಕೆಪಿಟಿಸಿಎಲ್ ಲಾಭದಲಿತ್ತು. ರಾಜ್ಯದಲ್ಲಿ ಸುಮಾರು 600 ಸಬ್ ಸ್ಟೇಷನ್, ಜಿಲ್ಲೆಯಲ್ಲಿ ಸುಮಾರು 60 ಸಬ್ ಸ್ಟೇಷನ್ ಗಳನ್ನು ಮಂಜೂರು ಮಾಡಿದ್ದೆ. ಆದರೆ ಕಾಂಗ್ರೆಸ್ ಸರ್ಕಾರ ಉಚಿತ ವಿದ್ಯುತ್‌ ನೀಡಲು ಹೋಗಿ ಕೆಪಿಟಿಸಿಎಲ್ ಅನ್ನು ನಷ್ಟಕ್ಕೆ ದೂಡಿದೆ. ನಾನು ಸಚಿವನಾಗಿದ್ದಾಗ ರೈತರಿಂದ ₹5 ಸಾವಿರ ಕಟ್ಟಿಸಿಕೊಂಡು ಟಿಸಿ ಕೊಡಲಾಗುತ್ತಿತ್ತು, ಆದರೆ ಈಗ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರೈತರು ₹3 ಲಕ್ಷ ಖರ್ಚು ಮಾಡಿ ಸಂಪರ್ಕ ಪಡೆಯಬೇಕಾಗಿದೆ. ಇದೊಂದು ರೈತ ವಿರೋಧಿ ಸರ್ಕಾರವಾಗಿದೆ ಎಂದರು.

ಜಿಲ್ಲೆಯ ಉಸ್ತುವಾರಿ ಸಚಿವರು ತಮ್ಮ ತವರು ಜಿಲ್ಲೆ ತುಮಕೂರಿಗೆ ನೀರು ಹರಿಸಲು 144 ಸೆಕ್ಷನ್ ಜಾರಿ ಮಾಡಿ ಸುಮಾರು 400 ಪೊಲೀಸರನ್ನು ನಿಯೋಜಿಸಿದ್ದರು. ಹೇಮಾವತಿ ನದಿಯಿಂದ 2 ಟಿಎಂಸಿ ಅಡಿ ನೀರನ್ನು ಹರಿಸಲಾಗಿದೆ. ಆದರೆ ಜಿಲ್ಲೆಯಲ್ಲಿ ಬರಗಾಲವಿದ್ದು, ಜಿಲ್ಲೆಯ ಅನೇಕ ತಾಲ್ಲೂಕುಗಳ ಹಳ್ಳಿಗಳಲ್ಲಿ ಕೆರೆಗಳಲ್ಲಿ ನೀರಿಲ್ಲದೆ ಬತ್ತಿ ಹೋಗಿವೆ. ಜಿಲ್ಲೆಯ ಕೆರೆಗಳಿಗೂ ನೀರು ಹರಿಸುವಂತೆ ಪ್ರತಿಭಟನೆ ನಡೆಸಿದರೂ ಸಚಿವರು ಕ್ಯಾರೇ ಎನ್ನಲಿಲ್ಲ. ಇಂತಹ ಕೆಟ್ಟ ಜಿಲ್ಲಾ ಉಸ್ತುವಾರಿ ಸಚಿವರನ್ನು ನನ್ನ ರಾಜಕೀಯ ಜೀವನದಲ್ಲಿ ನೋಡಿಲ್ಲ. ರೈತರಿಗೆ ಅನ್ಯಾಯ ಮಾಡಿದವರು ಎಂದು ಉಳಿದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ ಈಗ ಲೋಕಸಭಾ ಚುನಾವಣೆ ಬಂದಿದೆ ಎಂದು ಕಾಂಗ್ರೆಸ್ ಮುಖಂಡರು ತಮ್ಮ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. 5 ವರ್ಷಗಳ ಅವಧಿಯಲ್ಲಿ ಲೋಕಸಭಾ ವ್ಯಾಪ್ತಿಯ ಎಲ್ಲ ತಾಲ್ಲೂಕು ಕೇಂದ್ರ, ಹೋಬಳಿ ಕೇಂದ್ರ ಸೇರಿದಂತೆ ಸಾವಿರಾರು ಹಳ್ಳಿಗಳಿಗೆ ಭೇಟಿ ನೀಡಿ ಜನರಿಂದ ಕುಂದು ಕೊರತೆ ಆಲಿಸಿದ್ದೇನೆ. ನುಗ್ಗೇಹಳ್ಳಿ ಹೋಬಳಿ ಕೇಂದ್ರಕ್ಕೂ 4 ಬಾರಿ ಭೇಟಿ ನೀಡಿ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಲಾಗಿದೆ ಎಂದರು.

ಶಾಸಕ ಸಿಎನ್ ಬಾಲಕೃಷ್ಣ ಮಾತನಾಡಿ, ರಾಜ್ಯದ 28 ಲೋಕಸಭಾ ಕ್ಷೇತ್ರಗಳನ್ನು ಎನ್‌ಡಿಎ ಅಭ್ಯರ್ಥಿಗಳು ಜಯಗಳಿಸಲಿದ್ದು, ಜಿಲ್ಲೆಯಲ್ಲಿ ಹಾಲಿ ಸಂಸದ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರನ್ನು ಅಧಿಕ ಮತಗಳಿಂದ ಗೆಲ್ಲಿಸುವಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ತಾಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಪರಮ ದೇವರಾಜೇಗೌಡ, ಬಿಜೆಪಿ ಮುಖಂಡ ಅಣತಿ ಅನಂದ, ಮಹದೇವಮ್ಮ ಶಂಕರ್, ಎಚ್.ಎಂ. ನಟರಾಜ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮಿ ಜಗದೀಶ್, ಉಪಾಧ್ಯಕ್ಷೆ ದ್ರಾಕ್ಷಾಯಿಣಿ ಎಲ್ಲಪ್ಪ, ಮುಖಂಡರಾದ ಬಿ.ಎಚ್. ಶಿವಣ್ಣ, ತೋಟಿ ನಾಗರಾಜ್ , ದೊರೆಸ್ವಾಮಿ, ಹಿರೀಸಾವೆ ರಾಮಕೃಷ್ಣ , ನಾಗೇಂದ್ರ ಬಾಬು, ಓಬಳಾಪುರ ಬಸವರಾಜ್, ಚಂದ್ರಪ್ಪ, ಜಯಲಿಂಗೇಗೌಡ, ಕುಳೇಗೌಡ , ಕೆಂಪೇಗೌಡ, ದುಗ್ಗೇನಹಳ್ಳಿ ವೀರೇಶ್, ಹುಲಿಕೆರೆ ಸಂಪತ್ ಕುಮಾರ್, ಮಹಮದ್ ಜಾವಿದ್,  ಎನ್.ಎಸ್ ಗಿರೀಶ್, ಪುಟ್ಟಸ್ವಾಮಿ, ಜೆ.ಸಿ. ಕುಮಾರ್, ಚಿಪ್ಪಿನ ಚಂದ್ರು, ಜಗದೀಶ್, ಲಕ್ಷ್ಮೀದೇವಿ ಜಯರಾಮ್, ಅವೇರಹಳ್ಳಿ ಅನಿಲ್, ರಂಗಸ್ವಾಮಿ, ಪಟೇಲ್ ಕುಮಾರ್, ಸಾಧಿಕ್ ಪಾಶ (ಅಕು) ಶಿವಕುಮಾರ್, ಮಂಜುನಾಥ್, ನಟರಾಜ್, ಹೊನ್ನೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT