ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಸನ | ಕನಕದಾಸರ ಭಕ್ತಿಗೆ ಕೃಷ್ಣನ ದೇಗುಲ ಸಾಕ್ಷಿ: ಜಿಲ್ಲಾಧಿಕಾರಿ ಸತ್ಯಭಾಮಾ

ಕನಕದಾಸ ಜಯಂತಿ ಉದ್ಘಾಟಿಸಿದ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ
Published 30 ನವೆಂಬರ್ 2023, 13:33 IST
Last Updated 30 ನವೆಂಬರ್ 2023, 13:33 IST
ಅಕ್ಷರ ಗಾತ್ರ

ಹಾಸನ: ಕನಕದಾಸರು ಕರ್ನಾಟಕದಲ್ಲಿ 15-16 ನೇ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ದಾಸರಲ್ಲಿ ಒಬ್ಬರಾಗಿದ್ದರು ಎಂದು ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಹೇಳಿದರು.

ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಗುರುವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ದಾಸ ಶ್ರೇಷ್ಠ ಕನಕದಾಸ ಜಯಂತ್ಯುತ್ಸವ ಸಮಿತಿ ಆಶ್ರಯದಲ್ಲಿ ನಡೆದ ಕನಕದಾಸ ಜಯಂತಿ ಉದ್ಘಾಟಿಸಿ ಮಾತಮಾಡಿದರು.

ಕನಕ ದಾಸರ ಭಕ್ತಿ ಎಷ್ಟು ಶ್ರೇಷ್ಠ ಎಂಬುದಕ್ಕೆ ಉಡುಪಿಯ ಶ್ರೀಕೃಷ್ಣನ ದೇವಸ್ಥಾನ ಸಾಕ್ಷಿಯಾಗಿದೆ. ಕನಕದಾಸರು ಎಲ್ಲವನ್ನೂ ತೊರೆದು, ಕೃಷ್ಣನ ದಾಸರಾಗಿದ್ದರು. ಕನಕದಾಸರ ಹೆಸರು ಅಜರಾಮರವಾಗಿದೆ. ಸಾಧು– ಸಂತರು ಯಾವುದೇ ಒಂದು ವರ್ಗಕ್ಕೆ ಸೀಮಿತವಾಗಿಲ್ಲ. ಅವರು ಕೊಡುಗೆ ಅಪಾರವಾಗಿದ್ದು, ಇಂತಹ ಮಹನೀಯರ ಬಗ್ಗೆ ಸಮಾಜ ಅರಿತುಕೊಳ್ಳಬೇಕು ಎಂದು ತಿಳಿಸಿದರು.

ತುಮಕೂರು ವಿಶ್ವವಿದ್ಯಾಲಯದ ವಿಶ್ರಾಂತ ಡೀನ್ ಆರ್. ಓಬಳೇಶಘಟ್ಟಿ ಮಾತನಾಡಿ, ಕನಕದಾಸರ ಮೂಲ ಹೆಸರು ತಿಮ್ಮಪ್ಪ ನಾಯಕ, ಯುದ್ಧ ಕಲೆ, ಮಲ್ಲ ಯುದ್ಧ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಅರಿತಿದ್ದರು. 75 ಹಳ್ಳಿಗಳ ದಂಡನಾಯಕರಾಗಿ ಸೇವೆ ಸಲ್ಲಿಸುವ ವೇಳೆಯಲ್ಲಿ ಅಲ್ಲಿಯ ಜನರು ಇವರ ಸೇವೆಗಾಗಿ ಕನಕನಾಯಕ ಎಂಬ ಹೆಸರನ್ನು ನೀಡುತ್ತಾರೆ ಎಂದರು.

‘ಕುಲ ಕುಲ ಕುಲವೆಂದು ಹೊಡೆದಾಡದಿರಿ. ನಿಮ್ಮ ಕುಲದ ನೆಲಯ ಬಲ್ಲಿರಾ’ ಎಂದು 15 ನೇ ಶತಮಾನದಲ್ಲಿ ಕನಕದಾಸರು ಹೇಳಿದ್ದಾರೆ ಎಂದು ಕನಕದಾಸರ ಜೀವನ ಚರಿತ್ರೆಯ ಬಗ್ಗೆ ಸುದೀರ್ಘವಾಗಿ ಮಾಹಿತಿ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಮಲ್ಲೇಶ್ ಗೌಡ ಮಾತನಾಡಿ, ದಾಸ ಶ್ರೇಷ್ಠರ ಬಗ್ಗೆ, ಕನ್ನಡ ನಾಡಿನ ಸಂತರ ವಿಶ್ವ ಪ್ರಸಿದ್ಧಿಯ ಬಗ್ಗೆ ತಿಳಿಸಿದರು.

ಕುರುಬರ ಸಂಘದ ಹಾಸನ ಜಿಲ್ಲಾ ಘಟಕದ ಅಧ್ಯಕ್ಷ ಪಟೇಲ್ ಶಿವಪ್ಪ ಮಾತನಾಡಿ, ಶ್ರೀಕೃಷ್ಣನ ದಾಸನಾದ ಕನಕದಾಸರು, ಒಂದು ಸಮಾಜಕ್ಕೆ ಸೀಮಿತವಲ್ಲ. ಸಾಧು– ಸಂತರು ಎಲ್ಲ ಸಮಾಜಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ ಎಂಬುದನ್ನು ನಾವು ಅರಿಯಬೇಕು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಚಂದ್ರಶೇಖರ್ , ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಈ. ಕೃಷ್ಣೇಗೌಡ, ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಪುಟ್ಟಸ್ವಾಮಿಶೆಟ್ಟಿ, ಕ್ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ತಾರಾನಾಥ್ ಹಾಜರಿದ್ದರು.

ಮೆರವಣಿಗೆಗೆ ಚಾಲನೆ: ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಜಿಲ್ಲಾಧಿಕಾರಿ ಸಿ. ಸತ್ಯಭಾಮ, ಮೆರವಣಿಗೆಗೆ ಚಾಲನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT