ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಳೆನರಸೀಪುರ | ಬಸ್‌ ನಿಲ್ದಾಣದಲ್ಲಿ ಅವ್ಯವಸ್ಥೆ: ಪ್ರಯಾಣಿಕರು ಹೈರಾಣ

ಎಚ್.ವಿ. ಸುರೇಶ್‌ಕುಮಾರ್
Published 28 ಅಕ್ಟೋಬರ್ 2023, 8:14 IST
Last Updated 28 ಅಕ್ಟೋಬರ್ 2023, 8:14 IST
ಅಕ್ಷರ ಗಾತ್ರ

ಹೊಳೆನರಸೀಪುರ: ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣ ವಿಸ್ತರಣೆ ಹಾಗೂ ನವೀಕರಣಗೊಂಡು 6 ತಿಂಗಳು ಕಳೆಯುತ್ತ ಬಂದಿದ್ದರೂ, ಸೌಲಭ್ಯ ಸಿಗದೆ ಪ್ರಯಾಣಿಕರು ಪರದಾಡುವಂತಾಗಿದೆ.

ಈ ಮೊದಲು ಫ್ಲಾಟ್ ಫಾರಂನಲ್ಲಿ 15 ರಿಂದ 20 ಬಸ್ ನಿಲ್ಲಲು ಸ್ಥಳಾವಕಾಶ ಇತ್ತು. ನಿಲ್ದಾಣ ವಿಸ್ತೀರ್ಣಗೊಂಡ ನಂತರ 25 ರಿಂದ 30 ಬಸ್ ನಿಲ್ಲಲು ಫ್ಲಾಟ್‌ಫಾರಂ ವ್ಯವಸ್ಥೆ ಇದೆ.  ಫ್ಲಾಟ್ ಫಾರಂನಲ್ಲಿ ಮಾರ್ಗಸೂಚಿ ಫಲಕ,  ಸಂಖ್ಯೆ ನೀಡದಿರುವುದರಿಂದ ಯಾವ ಬಸ್‌, ಎಲ್ಲಿ ನಿಲ್ಲುತ್ತದೆ ಎಂದು ತಿಳಿಯದೆ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.

ಪ್ರಯಾಣಿಕರು ಪ್ರತಿ ಬಾರಿ ಯಾವ ಬಸ್, ಎಲ್ಲಿ ನಿಲ್ಲುತ್ತದೆ ಎಂದು ಕೇಳಿದರೆ, ಫ್ಲಾಟ್‌ಫಾರಂ ಸಂಖ್ಯೆ ಹೇಳಲು ನಿಲ್ದಾಣಾಧಿಕಾರಿಗೂ ಸಾಧ್ಯವಾಗುತ್ತಿಲ್ಲ. ಆ ಕಡೆ, ಈ ಕಡೆ ನಿಲ್ಲುತ್ತದೆ ಎಂದು ಹೇಳಿ ಕಳುಹಿಸುತ್ತಾರೆ. ಜನರಿಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಬೇರೆ ಬೇರೆ ಘಟಕಗಳಿಂದ ಬರುವ ಬಸ್‌ಗಳ ಚಾಲಕರಿಗೂ, ಬಸ್ ಎಲ್ಲಿ ನಿಲ್ಲಿಸಬೇಕೆಂದು ತಿಳಿಯದೇ ಗೊಂದಲಕ್ಕೆ ಒಳಗಾಗುತ್ತಿದ್ದಾರೆ.

ನಿಲ್ದಾಣದಲ್ಲಿ ಕುಳಿತುಕೊಳ್ಳಲು ಅಗತ್ಯಕ್ಕೆ ತಕ್ಕಷ್ಟು ಆಸನಗಳಿಲ್ಲ. ಹೀಗಾಗಿ ಬಸ್ ಬರುವವರೆಗೂ ನಿಂತುಕೊಂಡೇ ಇರಬೇಕಾದ ಪರಿಸ್ಥಿತಿ ಇದೆ. ಅಗತ್ಯವಾಗಿ ಬೇಕಾದ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. ಪುರುಷರ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯಗಳಿದ್ದರೂ, ಅವುಗಳ ಬಾಗಿಲು ತೆರೆಯದೇ ಇರುವುದರಿಂದ ಯಾರಿಗೂ ಉಪಯೋಗ ಇಲ್ಲದಂತಿದೆ.

ನಿಲ್ದಾಣಾಧಿಕಾರಿ ಕೊಠಡಿಯ ಬಾಗಿಲು ಚಿಕ್ಕದಾಗಿದ್ದು, ಚಾಲಕ, ನಿರ್ವಾಹಕರು ಎಂಟ್ರಿ ಹಾಕಿಸಲು ಪರದಾಡುವ ಪರಿಸ್ಥಿತಿ ಇದೆ. ಬಸ್‌ಗಳ ಬಗ್ಗೆ ಮಾಹಿತಿ ಕೇಳಲೂ ಪ್ರಯಾಣಿಕರಿಗೆ ತೀವ್ರ ತೊಂದರೆ ಆಗುತ್ತಿದೆ.

ಹೊಳೆನರಸೀಪುರ ಬಸ್ ನಿಲ್ದಾಣದ ಒಳಗಡೆ ಹೋಗುವ ದ್ವಾರದಲ್ಲಿ ದೊಡ್ಡ ಗುಂಡಿ ಬಿದ್ದಿದ್ದು ಬಸ್‌ಗಳ ಹಾಗೂ ಪ್ರಯಾಣಿಕರ ಓಡಾಟಕ್ಕೆ ತೊಂದರೆ ಆಗಿದೆ.
ಹೊಳೆನರಸೀಪುರ ಬಸ್ ನಿಲ್ದಾಣದ ಒಳಗಡೆ ಹೋಗುವ ದ್ವಾರದಲ್ಲಿ ದೊಡ್ಡ ಗುಂಡಿ ಬಿದ್ದಿದ್ದು ಬಸ್‌ಗಳ ಹಾಗೂ ಪ್ರಯಾಣಿಕರ ಓಡಾಟಕ್ಕೆ ತೊಂದರೆ ಆಗಿದೆ.
ಬಸ್ ನಿಲ್ದಾಣದ ದ್ವಾರ ಹಾಗೂ ನಿಲ್ದಾಣದ ಒಳಗೆ ರಸ್ತೆ ಗುಂಡಿ ಬಿದ್ದಿದ್ದು ಓಡಾಟಕ್ಕೆ ತೊಂದರೆ ಆಗಿದೆ. ಅಧಿಕಾರಿಗಳು ನಮಗೆ ಸಂಬಂಧ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ.
ಪುಟ್ಟಸ್ವಾಮಿ ಪ್ರಯಾಣಿಕ
ಬಸ್ ನಿಲ್ದಾಣದಲ್ಲಿ ಅಗತ್ಯ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ. ಪ್ಲಾಟ್‌ಫಾರಂ ನಾಮಫಲಕ ಸಂಖ್ಯೆ ಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು.
ಪಾಪಾನಾಯಕ್ ಕೆಎಸ್‌ಆರ್‌ಟಿಸಿ ಘಟಕ ವ್ಯವಸ್ಥಾಪಕ
ಇದು ದೇವೇಗೌಡರು ಎಚ್.ಡಿ. ರೇವಣ್ಣ ಅವರ ಊರು. ಎಲ್ಲ ವ್ಯವಸ್ಥೆ ಅಚ್ಚುಕಟ್ಟಾಗಿರುತ್ತದೆ ಎಂದು ಭಾವಿಸಿದ್ದೆ. ಆದರೆ ಇಲ್ಲಿನ ಬಸ್‌ನಿಲ್ದಾಣದಲ್ಲಿ ಯಾವುದೇ ಮೂಲ ಸೌಕರ್ಯಗಳಿಲ್ಲ.
ಶ್ರೀನಿವಾಸ್ ಗಿರಿನಗರ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT