ಭಾನುವಾರ, ಸೆಪ್ಟೆಂಬರ್ 26, 2021
21 °C
ಜೆಡಿಎಸ್‌ ಮುಖಂಡ ಅಗಿಲೆ ಯೋಗೇಶ್‌ ಟೀಕೆ

‘ಪ್ರೀತಂಗೆ ರಾಜಕೀಯ ಅನುಭವದ ಕೊರತೆ’; ಜೆಡಿಎಸ್ ಮುಖಂಡ ಅಗಿಲೆ ಯೋಗೇಶ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ
ಹತಾಶರಾಗಿ ಬಿಜೆಪಿ ನಾಯಕರ ವಿರುದ್ಧ ಶಾಸಕ ಪ್ರೀತಂ ಗೌಡ ಇಲ್ಲ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದು ಜೆಡಿಎಸ್ ಮುಖಂಡ ಅಗಿಲೆ ಯೋಗೇಶ್‌ ಟೀಕಿಸಿದರು.

ಪ್ರೀತಂ ಅವರಲ್ಲಿ ರಾಜಕೀಯ ಅನುಭವ ಕೊರತೆ ಇದೆ. ಹಾಗಾಗಿ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ
ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಸ್‍.ಆರ್‍.ಬೊಮ್ಮಾಯಿ ರಾಜ್ಯದ ಮುಖ್ಯಮಂತ್ರಿ ಆಗಿದ್ದವರು. ಅಂದು ಜನತಾ ಪರಿವಾರದಲ್ಲಿದ್ದವರು. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಅವರ ಪುತ್ರ ಬಸವರಾಜ ಬೊಮ್ಮಾಯಿ ಅವರು ದೇವೇಗೌಡರನ್ನು ಭೇಟಿ ಮಾಡಿ ಸಲಹೆ ಪಡೆದಿದ್ದಾರೆ. ಉತ್ತಮ ಆಡಳಿತ ನೀಡಲು ಹಿರಿಯರ ಸಲಹೆ, ಮಾರ್ಗದರ್ಶನ ಪಡೆಯುವುದರಲ್ಲಿ ತಪ್ಪಿಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ದೇವೇಗೌಡರ ಕುಟುಂಬಕ್ಕೆ 50 ವರ್ಷಗಳ ರಾಜಕೀಯ ಇತಿಹಾಸವಿದೆ. ಹೈಕಮಾಂಡ್‌ ಸೂಚನೆ ಮೇರೆಗೆ ಗೌಡರನ್ನು ಭೇಟಿ ಮಾಡಿದ್ದು ಎಂಬುದನ್ನು ಶಾಸಕರು ತಿಳಿದುಕೊಳ್ಳಬೇಕು ಎಂದರು.

‘ಬೊಮ್ಮಾಯಿ, ದೇವೇಗೌಡರ ಭೇಟಿಯಿಂದ ಕಾರ್ಯಕರ್ತರಿಗೆ ನೋವಾಗಿರುವುದನ್ನು ಹೇಳಿದ್ದೇನೆ ಎಂದಿದ್ದಾರೆ. ಪ್ರೀತಂ ಅವರು ಮೈಸೂರು ವಿಭಾಗದ ಸಹ ಪ್ರಭಾರಿಯಾಗಿದ್ದಾರೆ. ಎಷ್ಟು ದಿನ ಕಾರ್ಯಕರ್ತರ ಸಭೆ ಕರೆದು ನೋವುಗಳಿಗೆ ಸ್ವಂದಿಸಿದ್ದಾರೆ? ಅವರು ಪಕ್ಷಕ್ಕೆ ನೀಡಿರುವ ಕೊಡುಗೆ ಏನು? ಎಷ್ಟು ವರ್ಷ ಪಕ್ಷಕ್ಕಾಗಿ ದುಡಿದಿದ್ದಾರೆ? ವಿ.ಸೋಮಣ್ಣ ಇಲ್ಲದಿದ್ದರೆ ಶಾಸಕರೇ ಆಗುತ್ತಿರಲಿಲ್ಲ. ಪ್ರೀತಂ ಅವರನ್ನು ಯಡಿಯೂರಪ್ಪ ಬಳಿ ಕರೆದುಕೊಂಡು ಹೋಗಿದ್ದೇ ಸಿ.ಪಿ.ಯೋಗೇಶ್ವರ್‍. ಎಲ್ಲವನ್ನು ಮರೆತು ನಾಯಕರ ಬಗ್ಗೆ ಹೇಳಿಕೆ ನೀಡುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

‘ಹಾಸನ ಜಿಲ್ಲೆ ಮಾತ್ರವಲ್ಲದೇ ದೇಶಕ್ಕೆ ದೇವೇಗೌಡರ ಕೊಡುಗೆ ಆಪಾರ. ಎಲ್ಲಿಯೂ ಅವರು ಫ್ಲೆಕ್ಸ್‌ ಹಾಗೂ
ಭಾವಚಿತ್ರ ಹಾಕಿಸಿಕೊಂಡು ಚಾರ ಪಡೆದಿಲ್ಲ. ಆಕಸ್ಮಿಕವಾಗಿ ಶಾಸಕರಾಗಿರುವ ಇವರು, ₹200 ಕೆಲಸ
ಮಾಡಿ ₹2 ಲಕ್ಷದ ಪ್ರಚಾರ ಪಡೆಯುತ್ತಿದ್ದಾರೆ. ಇನ್ನಾದರೂ ಕ್ಷೇತ್ರದ ಅಭಿವೃದ್ದಿಗೆ ಗಮನಹರಿಸಬೇಕು’
ಎಂದು ಸಲಹೆ ನೀಡಿದರು.

ಗೋಷ್ಠಿಯಲ್ಲಿ ಜೆಡಿಎಸ್‍ ಕಾರ್ಯಕರ್ತರಾದ ಸಚಿನ್‍, ಅಭಿ, ಸುರೇಂದ್ರ, ಸುನಿಲ್‍ ಆಡುವಳ್ಳಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು