ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೌಶಲ ಕೊರತೆ: ಅಭಿವೃದ್ಧಿಗೆ ಹಿನ್ನೆಡೆ

ಶಿಕ್ಷಕರ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಆರ್‌.ಗಿರೀಶ್‌
Last Updated 5 ಸೆಪ್ಟೆಂಬರ್ 2021, 12:54 IST
ಅಕ್ಷರ ಗಾತ್ರ

ಹಾಸನ: ದೇಶದ ಶಿಕ್ಷಣ ವ್ಯವಸ್ಥೆ ಹಾಳಾಗಬಾರದು. ಹಾಗಾಗಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಜತೆಗೆ ಮೌಲ್ಯಗಳನ್ನು ತುಂಬುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಹೇಳಿದರು.

ನಗರದ ಎಸ್.ಆರ್.ಎಸ್. ಪ್ರಜ್ಞಾವಿದ್ಯಾಶಾಲೆಯಲ್ಲಿ ಜಿಲ್ಲಾಡಳಿತ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಡಾ.ಸರ್ವಪಲ್ಲಿ ರಾಧಕೃಷ್ಣನ್ ಅವರ ಜನ್ಮ ದಿನಾಚರಣೆ ಹಾಗೂ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ಶಿಕ್ಷಣ ಪಡೆದವರ ಸಂಖ್ಯೆ ಹೆಚ್ಚಿದ್ದರೂ ಕೌಶಲದ ಕೊರತೆಯಿಂದ ಅಭಿವೃದ್ಧಿಯಲ್ಲಿ ಹಿನ್ನಡೆ ಉಂಟಾಗುತ್ತಿದೆ. ಶಿಕ್ಷಣ ವಲಯದ ಮೇಲೆ ಉಳಿದೆಲ್ಲಾ ವಲಯಗಳು ನಿಂತಿವೆ ಎಂದು ಹೇಳಿದರು.

ಕೊರೊನಾ ಸಂದರ್ಭದಲ್ಲಿ ಸಹಕಾರ ನೀಡಿ ಶಿಕ್ಷಕರಿಗೆಧನ್ಯವಾದ ತಿಳಿಸಿದರು.

ಶಿಕ್ಷಣ ತಜ್ಞ, ಆಧ್ಯಾತ್ಮಿಕ ಚಿಂತಕ, ತತ್ವಜ್ಞಾನಿ ಹಾಗೂ ಉತ್ತಮ ಆಡಳಿತಗಾರ ಡಾ.ಸರ್ವಪಲ್ಲಿ ರಾಧಕೃಷ್ಣನ್ ಅವರು ಭಾರತದ ಎರಡನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ ನಂತರ ಪ್ರಾಧ್ಯಾಪಕರಾಗಿ ಮುಂದುವರೆಯುವ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಹಾಗೂ ದೇಶಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ ಎಂದರು.

ಭವ್ಯ ಭಾರತ ನಿರ್ಮಾತೃಗಳನ್ನು ಸೃಷ್ಠಿಸುವ ದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದೆ. ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದ್ದು. ಉತ್ತಮ ಸಮಾಜ ಕಟ್ಟುವಲ್ಲಿ ಶಿಕ್ಷಕರ ಪಾತ್ರ ದೊಡ್ಡದು. ಮಕ್ಕಳಲ್ಲಿ ದೇಶ ಭಕ್ತಿ, ಸುಳ್ಳು ಹೇಳದಿರುವುದು, ಪರೋಪಕಾರಿ ಮನೋಭಾವ ಈ ರೀತಿಯ ಸದ್ಗುಣಗಳನ್ನು ತುಂಬಬೇಕು. ಮಗುವನ್ನು ತಿದ್ದಿ, ಜ್ಞಾನ ನೀಡಿ ಸಮಾಜಮುಖಿಯಾಗಿ ಯೋಚನೆ ಮಾಡುವಂತಹ ಬುದ್ದಿಯನ್ನು ಕಲಿಸಿ, ಪರಿಪೂರ್ಣ ವ್ಯಕ್ತಿಯನ್ನಾಗಿ ಮಾಡುವವರು ಶಿಕ್ಷಕರು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ.ಪರಮೇಶ್ ಮಾತನಾಡಿ,ವಿದ್ಯಾರ್ಥಿಗಳು ಶಿಕ್ಷಕರನ್ನು ಅನುಕರಣೆ ಮಾಡುತ್ತಾರೆ. ದೇಶವನ್ನು ಮುನ್ನೆಡೆಸುವಂತಹ ಯುವ ಪೀಳಿಗೆಯನ್ನು ನಿರ್ಮಾಣ ಮಾಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.

ಸಂಪನ್ಮೂಲ ವ್ಯಕ್ತಿ ತಮ್ಮಣ್ಣಗೌಡ ಮಾತನಾಡಿ, ಹಿಂದಿನಿಂದಲೂ ಪ್ರಪಂಚದಲ್ಲಿ ಗುರು ಪರಂಪರೆ ಇದೆ. ನವ ಗ್ರಹಗಳಲ್ಲಿ ದೊಡ್ಡದಾದ ಗ್ರಹಕ್ಕೆ ಗುರು ಎಂದು ಹೆಸರಿಸಲಾಗಿದೆ. ನೆಲ್ಸನ್‌ ಮಂಡೇಲಾ ಹೇಳುವಂತೆ ಶಿಕ್ಷಣ ಇಡೀ ಜಗತ್ತನೇ ಬದಲಿಸುವ ಶಕ್ತಿ ಹೊಂದಿರುವ ಅಸ್ತ್ರ. ಅದನ್ನು ಬಳಸುವವರು ಶಿಕ್ಷಕರು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಆರ್. ಮೋಹನ್, ರಾಜ್ಯ ಸರ್ಕಾರಿ ನೌಕರರ ಸಂಘದ ಜಿ‌ಲ್ಲಾ ಅಧ್ಯಕ್ಷ ಈ.ಕೃಷ್ಣೇಗೌಡ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಎಸ್. ಪ್ರಕಾಶ್, ಜಿಲ್ಲಾ ಶಿಕ್ಷಣ ಮತ್ತು ಜಿಲ್ಲಾ ತರಬೇತಿ ಸಂಸ್ಥೆ ಪ್ರಾಂಶುಪಾಲ ಡಿ.ಟಿ. ಪುಟ್ಟರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎನ್. ಬಲರಾಮ್, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಸಿ. ಬಸವರಾಜು. ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎನ್. ರಾಜಶೇಖರಪ್ಪ, ದೈಹಿಕ ಶಿಕ್ಷಣಾಧಿಕಾರಿ ಸಿ.ಕೆ.ರಘು, ಕೆ.ಪಿ.ನಾರಾಯಣ,
ಸೋಮಶೇಖರ್, ಕತ್ತಿಹಳ್ಳಿ ಪರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT