ಗುರುವಾರ , ನವೆಂಬರ್ 26, 2020
20 °C
ಕಡಿವಾಣ ಹಾಕದಿದ್ದರೆ ಖಾಸಗಿ ಆಸ್ಪ್ರತ್ರೆ ಬಾಗಿಲು ಮುಚ್ಚಿಸುವೆ; ರೇವಣ್ಣ ಎಚ್ಚರಿಕೆ

ಕೋವಿಡ್‌ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ವಸೂಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಕೋವಿಡ್‌  ಚಿಕಿತ್ಸೆ ನೆಪದಲ್ಲಿ ಖಾಸಗಿ ಆಸ್ಪತ್ರೆಗಳು ಲಕ್ಷಾಂತರ ರೂಪಾಯಿ ಹಣ ವಸೂಲು ಮಾಡುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಜಿಲ್ಲಾಧಿಕಾರಿ ತಕ್ಷಣ ಖಾಸಗಿ ಆಸ್ಪತ್ರೆ ಮಾಲೀಕರ ಸಭೆ ಕರೆಯಬೇಕು ಎಂದು ಶಾಸಕ ಎಚ್.ಡಿ.ರೇವಣ್ಣ ಆಗ್ರಹಿಸಿದರು.

ಕೋವಿಡ್‌ ದೃಢಪಟ್ಟು ನಗರದ ಸ್ಪರ್ಶ ಆಸ್ಪತ್ರೆಯಲ್ಲಿ ದಾಖಲಾಗಿದ್ದ ತಾಲ್ಲೂಕಿನ ಕಂಚಮಾರನಹಳ್ಳಿಯ ರೇಖಾ ಎಂಬುವರು ಮೃತಪಟ್ಟಿದ್ದಾರೆ. ₹ 10 ಲಕ್ಷ ಬಿಲ್‌ ಕಟ್ಟುವವರೆಗೂ ಮೃತದೇಹ ಹಸ್ತಾಂತರಿಸಲಿಲ್ಲ. ಇತ್ತ ಹಣವೂ ಹೋಯಿತು ಮಗಳನ್ನೂ ಕಳೆದುಕೊಂಡ ನೋವಿನಲ್ಲಿ ಪೋಷಕರು ಕಣ್ಣೀರು ಹಾಕುತ್ತಿದ್ದಾರೆ. ಮತ್ತೊಬ್ಬ ರೋಗಿಗೆ ₹ 16 ಲಕ್ಷ ಕಟ್ಟುವಂತೆ ಹೇಳಿದ್ದಾರೆ. ಇದನ್ನ ಕೇಳೋಕೆ ಯಾರು ಇಲ್ಲ. ಹಾಸನದಲ್ಲಿ ಆಡಳಿತ ಇದೆಯೋ ? ಇಲ್ಲವೋ ಗೊತ್ತಿಲ್ಲ. ಇದಕ್ಕೆಲ್ಲಾ ಕಡಿವಾಣ ಹಾಕದಿದ್ದರೆ ಖಾಸಗಿ ಆಸ್ಪತ್ರೆಗಳಿಗೆ ಸಾರ್ವಜನಿಕರೊಂದಿಗೆ ತೆರಳಿ ಬೀಗ ಹಾಕಿಸಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

21 ವರ್ಷದಿಂದ ಶಾಸಕನಾಗಿ ಕೆಲಸ ಮಾಡುತ್ತಿದ್ದೇನೆ. ಇಂತಹ ಕೆಟ್ಟ ಪರಿಸ್ಥಿತಿ ಕಂಡಿರಲಿಲ್ಲ. ಜಿಲ್ಲಾಧಿಕಾರಿ ಕೂಡಲೇ ಖಾಸಗಿ ಆಸ್ಪತ್ರೆಗಳ ಸಭೆ ಕರೆದು ಹಣ ವಸೂಲಿ ಮಾಡುತ್ತಿರುವ ಖಾಸಗಿ ಆಸ್ಪತ್ರೆಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು. ಕೋವಿಡ್‌ ಚಿಕಿತ್ಸೆಗೆ ಸರ್ಕಾರ ನಿಗದಿ ಪಡಿಸಿರುವ ಶುಲ್ಕದ ವಿವರಗಳನ್ನು ಆಸ್ಪತ್ರೆಗಳ ಮುಂದೆ ಪ್ರದರ್ಶಿಸಬೇಕು ಎಂದು ಹೇಳಿದರು.

‘ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಅವರು ಪ್ರಾಮಾಣಿಕ ಅಧಿಕಾರಿ, ಯಾರಿಗೂ ಹೆದರುವ ಅವಶ್ಯಕತೆ ಇಲ್ಲ. ಕೂಡಲೇ ಜಿಲ್ಲಾ
ಶಸ್ತ್ರಚಿಕಿತ್ಸಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮತ್ತು ಹಿಮ್ಸ್‌ ಪ್ರಾಂಶುಪಾಲರು ಈ ಕೂಡಲೇ ಖಾಸಗಿ ಆಸ್ಪತ್ರೆಯವರ ಸಭೆ ಕರೆದು ಚರ್ಚಿಸಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡೇತರ ಕಾಯಿಲೆಗೆ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ. ಎಲ್ಲಾ ಕಾಯಿಲೆಗೂ ಖಾಸಗಿ ಆಸ್ಪತ್ರೆಗೆ ಕಳುಹಿಸುತ್ತಿದ್ದಾರೆ. ಲಕ್ಷಾಂತರ ರೂಪಾಯಿ ಚಿಕಿತ್ಸಾ ವೆಚ್ಚವನ್ನು ಬಡವರು ಭರಿಸಲು ಸಾಧ್ಯವೇ ? ಶಿರಾ ಕ್ಷೇತ್ರದ ಉಪಚುನಾವಣೆ ಪ್ರಚಾರಕ್ಕೆ ತೆರಳುತ್ತಿದ್ದೇನೆ. ಜನರ ಹಿತಕ್ಕಾಗಿ ಪ್ರಚಾರ ಮೊಟಕುಗೊಳಿಸಿ ಒಂದು ದಿನ ಬಂದು ಆಸ್ಪತ್ರೆ ಬಾಗಿಲು ಮುಚ್ಚಿಸುತ್ತೇನೆ’ ಎಂದರು.

‘ಸಂಜೀವಿನಿ ಸಹಕಾರಿ ಆಸ್ಪತ್ರೆಯಲ್ಲಿ ಕೋವಿಡ್‌ ಚಿಕಿತ್ಸೆ ಪಡೆದ ಲೋಕಾಯುಕ್ತ ಇನ್‌ಸ್ಪೆಕ್ಟರ್‌ ವೈದ್ಯಕೀಯ ಚಿಕಿತ್ಸಾ ವೆಚ್ಚ
₹2.5 ಲಕ್ಷ ಪಾವತಿಸದಿದ್ದರೂ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇನ್‌ಸ್ಪೆಕ್ಟರ್‌ ಪತಿ ಸಹಕಾರ ಅಭಿವೃದ್ಧಿ ಅಧಿಕಾರಿ ಸುನಿಲ್‌ ಅವರು ಆಸ್ಪತ್ರೆಯ ಆಡಳಿತಾಧಿಕಾರಿಯೂ ಆಗಿದ್ದಾರೆ. ಇನ್‌ಸ್ಪೆಕ್ಟರ್ ವಿರುದ್ಧ ಲೋಕಾಯುಕ್ತ ಐಜಿಪಿಗೆ ದೂರು ನೀಡಿದ್ದು, ಅಮಾನತುಗೊಳಿಸಿ, ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯ ಐದು ತಾಲ್ಲೂಕುಗಳನ್ನು ಮಳೆ ಪೀಡಿತ ಎಂದು ಸರ್ಕಾರ ಘೋಷಿಸಿ ಪರಿಹಾರ ಹಣ ಬಿಡುಗಡೆ ಮಾಡಿಲ್ಲ. ಮನೆ
ಕಳೆದುಕೊಂಡವರಿಗೆ ಇನ್ನೂ ಪರಿಹಾ ಕೊಟ್ಟಿಲ್ಲ. ಹಣ ಬಿಡುಗಡೆ ಮಾಡದಿದ್ದರೆ ಪರಿಹಾರ ಕಾರ್ಯ ಕೈಗೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಕಾವೇರಿ ಗ್ರಾಮೀಣ ಬ್ಯಾಂಕ್ ನಲ್ಲಿ ಐದು ಲಕ್ಷ ರೂಪಾಯಿಗೆ ಟ್ರ್ಯಾಕ್ಟರ್ ಗೆ ₹ 25 ಲಕ್ಷ ಬಡ್ಡಿ ಹಾಕಿ ರೈತರ ಮನೆ ಹಾಳು
ಮಾಡುತ್ತಿದ್ದಾರೆ. ಮೋದಿಯೂ ಇಲ್ಲ, ಸಿಎಂ ಕೂಡ ಇಲ್ಲ. ಇದೇ ಪರಿಸ್ಥಿತಿ ಮುಂದುವರೆದರೆ ಜನ ದಂಗೆ ಏಳುತ್ತಾರೆ ಎಂದು ಎಚ್ಚರಿಸಿದರು.

ಹಾಸನ ಸಹಕಾರ ಅಭಿವೃದ್ಧಿ ಅಧಿಕಾರಿ ಹಾಗೂ ಚುನಾವಣಾಧಿಕಾರಿಯೂ ಆಗಿರುವ ಸುನಿಲ್ ವಿರುದ್ಧ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಸಂಜೀವಿನಿ ಸಹಕಾರ ಸಂಘದ ಚುನಾವಣೆಯನ್ನು ಮುಂದೂಡಲಾಗುವುದು ಎಂದು ಸಹಕಾರ ಸಂಘಗಳ ಉಪನಿಬಂಧಕ ಎಚ್.ಕೆ. ದಯಾನಂದ ಭರವಸೆ ನೀಡಿದ್ದಾರೆ ಎಂದು ರೇವಣ್ಣ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು