ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀತವಿಮುಕ್ತರ ಒಕ್ಕಲೆಬ್ಬಿಸದಿರಲು ಆಗ್ರಹ

ಜಮೀನು ಮಂಜೂರು ಮಾಡದಿದ್ದರೆ ಡಿ.ಸಿ ಕಚೇರಿ ಮುಂದೆ ಧರಣಿ: ಎಚ್ಚರಿಕೆ
Last Updated 4 ಮೇ 2021, 14:33 IST
ಅಕ್ಷರ ಗಾತ್ರ

ಹಾಸನ: ಅರಕಲಗೂಡು ತಾಲ್ಲೂಕಿನ ರಾಮನಾಥಪುರ ಹೋಬಳಿಯ ಗಂಗೂರು ಗ್ರಾಮದ ಜೀತವಿಮುಕ್ತರನ್ನು ಸಾಗುವಳಿ ಮಾಡುತ್ತಿರುವ ಭೂಮಿಯಿಂದ ಅರಣ್ಯ ಇಲಾಖೆ ಒಕ್ಕಲೆಬ್ಬಿಸಿದರೆ ಹೋರಾಟ ಆರಂಭಿಸಲಾಗುವುದು ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಎಚ್‌.ಕೆ. ಸಂದೇಶ್‌ ಎಚ್ಚರಿಕೆ ನೀಡಿದರು.

ಕಳೆದ 35-40 ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಜೀತವಿಮುಕ್ತರಿಗೆ ಪರ್ಯಾಯ ವ್ಯವಸ್ಥೆ ಮಾಡದೆ ಏಕಾಏಕಿ ಒಕ್ಕಲೆಬ್ಬಿಸುತ್ತಿರುವುದು ದೌರ್ಜನ್ಯದ ಪರಮಾವಧಿಯಾಗಿದೆ. ಕೂಡಲೇ ಜಿಲ್ಲಾಡಳಿತ ಅವರಿಗೆ ಜಮೀನು ನೀಡಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

1994 ರಲ್ಲಿಯೇ ಜಿಲ್ಲಾಡಳಿತ ಗಂಗೂರು ಗ್ರಾಮದಲ್ಲಿ 91 ಪರಿಶಿಷ್ಟ ಜಾತಿ ಕುಟುಂಬಗಳನ್ನು ಜೀತವಿಮುಕ್ತಗೊಳಿಸಿ, ಅವರಿಗೆ ಕೃಷಿ ಭೂಮಿ ಮತ್ತು ಇತರೆ ಜೀವನೋಪಾಯ ವ್ಯವಸ್ಥೆಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಪ್ರಸ್ತಾವನೆ ಕಳುಹಿಸಿ 27 ವರ್ಷ ಕಳೆದರೂಭೂಮಿ ನೀಡಲು ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಸಾಧ್ಯವಾಗಿಲ್ಲ ಎಂದುಆರೋಪಿಸಿದರು.

ಪರಿಶಿಷ್ಟ ಜಾತಿಯ ಕುಟುಂಬಗಳು ಸಾಗುವಳಿ ಮಾಡುತ್ತಿರುವ ಭೂಮಿಯಿಂದಲೂ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ತೆರವುಗೊಳಿಸಿರುವುದು ಸರಿಯಲ್ಲ. ಕುಟುಂಬಗಳ ಮೇಲೆ ದೌರ್ಜನ್ಯ ನಡೆಸಲು ಮುಂದಾಗಿರುವ ಅರಣ್ಯ ಇಲಾಖೆಯ ಕ್ರಮವನ್ನು ಜಿಲ್ಲಾಧಿಕಾರಿ ತಡೆಯಬೇಕು ಎಂದರು.

ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಸಂಚಾಲಕ ಎಂ.ಜಿ. ಪೃಥ್ವಿ ಮಾತನಾಡಿ, ಪರಿಶಿಷ್ಟ ಜಾತಿ ಆದಿದ್ರಾವಿಡ
ಸಮುದಾಯಕ್ಕೆ ಸೇರಿದ ಅಂದಾಜು 101 ಕುಟುಂಬಗಳು ಗಂಗೂರು ಗ್ರಾಮದ ಮೇಲ್ಜಾತಿಯ ಮನೆಗಳಲ್ಲಿ
ಜೀತ ಮಾಡುತ್ತಿದ್ದರು. 1994ರ ಸೆ. 22ರಂದು ಜಿಲ್ಲಾಧಿಕಾರಿ ಸ್ಥಳ ಪರಿಶೀಲನೆ ಮಾಡಿ, ಜೀತಗಾರಿಕೆ ಪದ್ಧತಿ (ನಿರ್ಮೂಲನೆ) ಕಾಯ್ದೆ-1976ರ ಅನ್ವಯ ವಿಮುಕ್ತಿಗೊಳಿಸಿದ್ದರು.ಕಾಯ್ದೆಯ ಅನುಸಾರ ಕೃಷಿ ಭೂಮಿ ಸೇರಿದಂತೆ ವಿವಿಧ ಶಾಶ್ವತ ಪರಿಹಾರ ಸೌಲಭ್ಯಗಳನ್ನು ನೀಡುವಭರವಸೆ ನೀಡಲಾಗಿತ್ತು. ಆದರೆ ಯಾವುದೂ ಈಡೇರಿಲ್ಲ ಎಂದು ಆರೋಪಿಸಿದರು.

ಈವರೆಗೂ ಸಾಗುವಳಿ ಮಾಡುತ್ತಿರುವ ಜಾಗದಲ್ಲಿಯೇ ತಲಾ 4 ಎಕರೆ ಕೃಷಿ ಭೂಮಿ ಮಂಜೂರು ಮಾಡಬೇಕು. ತಕ್ಷಣದ ಪರಿಹಾರವಾಗಿ ಕನಿಷ್ಠ ತಲಾ ₹10 ಸಾವಿರ ಮಾಸಿಕ ಸಹಾಯಧನ ಹಾಗೂ ಉಚಿತ ಪಡಿತರ ನೀಡಬೇಕು. ಜೀತ ವಿಮುಕ್ತರನ್ನು ವಿಶೇಷ ಸಂತ್ರಸ್ತರೆಂದು ಪರಿಗಣಿಸಿ ವಿಶೇಷ ಯೋಜನೆಗಳಡಿ ಪರಿಹಾರ, ಸೌಲಭ್ಯಗಳನ್ನು ನೀಡಬೇಕು ಎಂದು ಆಗ್ರಹಿಸಿದರು.

ಸಿಪಿಎಂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧರ್ಮೇಶ್‍, ಮುಖಂಡ ಕೃಷ್ಣದಾಸ್‍ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT