ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ | ಚಿರತೆ, ಆನೆಯ ಬಳಿಕ ಕಾಡುಹಂದಿ ಉಪಟಳ

Published 19 ಡಿಸೆಂಬರ್ 2023, 5:20 IST
Last Updated 19 ಡಿಸೆಂಬರ್ 2023, 5:20 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯಲ್ಲಿ ವನ್ಯಜೀವಿ–ಮಾನವ ನಡುವಿನ ಸಂಘರ್ಷ ತಾರಕಕ್ಕೆ ಏರುತ್ತಿದ್ದು, ಕಾಡು ಪ್ರಾಣಿಗಳ ಉಪಟಳದಿಂದಾಗಿ ಜಿಲ್ಲೆಯ ರೈತರು ಕೃಷಿಯ ಸಹವಾಸವೇ ಬೇಡ ಎನ್ನುವಷ್ಟು ರೋಸಿ ಹೋಗಿದ್ದಾರೆ. ಇದುವರೆಗೆ ಕಾಡಾನೆ, ಚಿರತೆ ದಾಳಿಯಿಂದ ನಲುಗಿದ್ದ ರೈತಾಪಿ ಜನರು, ಇದೀಗ ಕಾಡು ಹಂದಿಗಳ ದಾಳಿಯಿಂದ ಬೆಚ್ಚಿ ಬಿದ್ದಿದ್ದಾರೆ.

ಸಕಲೇಶಪುರ ತಾಲ್ಲೂಕಿನಲ್ಲಿ ಕಾಡಾನೆ ಹಾವಳಿಯಿಂದ ನಿತ್ಯ ಕೃಷಿ ಜಮೀನು ಹಾಳಾಗುತ್ತಿದೆ. ಇನ್ನೊಂದೆಡೆ ಚಿರತೆ ದಾಳಿ ನಿರಂತರವಾಗಿ ನಡೆಯುತ್ತಲೇ ಇದೆ. ಇದುವರೆಗೆ 10ಕ್ಕೂ ಹೆಚ್ಚು ಜಾನುವಾರುಗಳ ಮೇಲೆ ದಾಳಿ ನಡೆಸಿರುವ ಚಿರತೆ ಮಾತ್ರ ಇನ್ನೂ ಸಿಕ್ಕಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕಾಡು ಹಂದಿಗಳು ಜಮೀನಿನಲ್ಲಿ ಏಕಾಏಕಿ ದಾಳಿ ನಡೆಸುತ್ತಿದ್ದು, ರೈತರು ಜಮೀನುಗಳಿಗೆ ಹೋಗುವುದಕ್ಕೂ ಹಿಂದೇಟು ಹಾಕುವಂತಾಗಿದೆ.

‘ಈ ವರ್ಷ ಮಳೆ ಇಲ್ಲ. ಜಮೀನಿನಲ್ಲಿ ಬೆಳೆದಿರುವ ಅಲ್ಪಸ್ವಲ್ಪ ಬೆಳೆಯನ್ನು ಉಳಿಸಿಕೊಳ್ಳಲು ನೀರು ಹಾಯಿಸಬೇಕು. ವಿದ್ಯುತ್‌ ಯಾವಾಗ ಬರುತ್ತದೆಯೋ ಆಗ ಮೋಟಾರ್‌ ಶುರು ಮಾಡಬೇಕು. ರಾತ್ರಿ ವೇಳೆ ನೀರು ಹಾಯಿಸಲು ತೋಟ, ಗದ್ದೆಗಳಿಗೆ ಹೋಗುವುದಕ್ಕೂ ಭಯವಾಗುತ್ತಿದೆ. ಚಿರತೆ, ಆನೆ, ಕಾಡುಹಂದಿ ಹೀಗೆ ಪ್ರಾಣಿಗಳು ಯಾವಾಗ ದಾಳಿ ಮಾಡುತ್ತವೆಯೋ ಎನ್ನುವ ಆತಂಕ ಸದಾ ಕಾಡುತ್ತಲೇ ಇರುತ್ತದೆ’ ಎನ್ನುತ್ತಾರೆ ಬೇಲೂರು ತಾಲ್ಲೂಕಿನ ಅರೇಹಳ್ಳಿಯ ರೈತ ವೆಂಕಟಪ್ಪ.

ಕಷ್ಟದಲ್ಲಿ ಭತ್ತದ ಕೃಷಿ ಮಾಡುತ್ತಿರುವುದರಿಂದ ಅಸಲು ಪಡೆಯುವುದೇ ಕಷ್ಟವಾಗಿದೆ. ಕಾಡು ಪ್ರಾಣಿಗಳ ಉಪಟಳದಿಂದ ನಷ್ಟ ಅನುಭವಿಸಬೇಕಾಗಿದೆ‌.
ಭೋಜೆಗೌಡ, ಸಕಲೇಶಪುರ ತಾಲ್ಲೂಕಿನ ಬಾಚ್ಚಿಹಳ್ಳಿ ಗ್ರಾಮದ ಕೃಷಿಕ

ಸಕಲೇಶಪುರ ತಾಲ್ಲೂಕಿನಲ್ಲಿ ಕಾಫಿ ಬೆಳೆಗಾರರು ಕಾಡಾನೆ ದಾಳಿಯಿಂದ ಮೊದಲೇ ಕಂಗೆಟ್ಟಿದ್ದಾರೆ. ಭತ್ತದ ಬೆಳೆಗಾರರೂ ನಲುಗಿ ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಇದೀಗ ಚಿರತೆಯೊಂದು ವಿಪರೀತ ದಾಳಿ ನಡೆಸುತ್ತಿದೆ. ಸಕಲೇಶಪುರ ತಾಲ್ಲೂಕಿನ ಮಾವಿನಹಳ್ಳಿ ಗ್ರಾಮದಲ್ಲಿ ಈಗಾಗಲೇ 10 ಕ್ಕೂ ಹೆಚ್ಚಿನ ಹಸು, ಕರುಗಳ ಮೇಲೆ ದಾಳಿ ನಡೆಸಿದೆ. ಇನ್ನೊಂದೆಡೆ ಅರಸೀಕೆರೆ ತಾಲ್ಲೂಕಿನ ಕಲ್ಲನಾಯ್ಕನಹಳ್ಳಿ ಕೆರೆ ಬಳಿ ಸಿದ್ದಪ್ಪ ಎಂಬುವವರ ಮೇಲೆ ಇತ್ತೀಚೆಗೆ ಚಿರತೆ ದಾಳಿ ಮಾಡಿ ಗಾಯಗೊಳಿಸಿದೆ.

ದಾಳಿ ಸಾಲಿಗೆ ಹೊಸ ಸೇರ್ಪಡೆ: ಇದುವರೆಗೆ ಬೆಳೆ ನಾಶ ಮಾಡುತ್ತಿದ್ದ ಕಾಡುಹಂದಿಗಳು ಇದೀಗ ಜನರ ಮೇಲೆ ದಾಳಿ ನಡೆಸುತ್ತಿವೆ. ಹೊಳೆನರಸೀಪುರ ತಾಲ್ಲೂಕಿನ ಹಾರಗೌಡನಹಳ್ಳಿಯಲ್ಲಿ ಸೋಮವಾರ ಬೆಳಿಗ್ಗೆ ಕಾಡುಹಂದಿ ದಾಳಿ ನಡೆಸಿದ್ದು, ವೃದ್ಧರೊಬ್ಬರು ಮೃತಪಟ್ಟಿದ್ದಾರೆ. ಇಬ್ಬರು ಮಹಿಳೆಯರು ಸೇರಿದಂತೆ ಐದು ಜನರು ಗಾಯಗೊಂಡಿದ್ದಾರೆ. ಬೇಲೂರು ತಾಲ್ಲೂಕಿನ ನಿಟ್ಟೂರಿನಲ್ಲೂ ಜಮೀನಿಗೆ ತೆರಳಿದ್ದ ಮಹಿಳೆಯೊಬ್ಬರ ಮೇಲೆ ಕಾಡು ಹಂದಿ ದಾಳಿ ಮಾಡಿ, ಗಾಯಗೊಳಿಸಿದೆ. ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೆರೆ ಹಿಡಿದ ಪ್ರಾಣಿಗಳನ್ನು ಬಿಡುವ ತಾಣ: ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಬಿಸಿಲೆ ಘಾಟಿಯಲ್ಲಿ ಹಲವಾರು ಕಾಡುಪ್ರಾಣಿಗಳನ್ನು ಬಿಡಲಾಗುತ್ತಿದೆ. ಬೇರೆ ಜಿಲ್ಲೆ, ಇತರ ತಾಲ್ಲೂಕುಗಳಲ್ಲಿ ಸೆರೆ ಹಿಡಿದ ಚಿರತೆ, ಕಾಳಿಂಗ ಸರ್ಪ ಮುಂತಾದ ಕಾಡು ಪ್ರಾಣಿಗಳನ್ನು ಬಿಸಿಲೆ ಅರಣ್ಯ ಪ್ರದೇಶದಲ್ಲಿ ಬಿಟ್ಟು ಹೋಗುತ್ತಿದ್ದು, ಇವುಗಳು ಗ್ರಾಮಗಳಿಗೆ ನುಗ್ಗುತ್ತಿವೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

ಅಬ್ಬನ ಗ್ರಾಮದಲ್ಲಿ ಪ್ರತ್ಯಕ್ಷನಾದ ಭೀಮ

ಮಲೆನಾಡು ಭಾಗವಾದ ಸಕಲೇಶಪುರ ಆಲೂರು ತಾಲ್ಲೂಕಿನಲ್ಲಿ ಕಾಡಾನೆಗಳ ದಾಂಧಲೆ ನಡೆಯುತ್ತಿದ್ದು ಈ ಮಧ್ಯೆ ಭೀಮ ಆನೆ ನಿರ್ಭಯವಾಗಿ ಗ್ರಾಮಗಳಲ್ಲಿ ಸಂಚರಿಸುತ್ತಿದೆ. ಆಲೂರು ತಾಲ್ಲೂಕಿನ ಅಬ್ಬನ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ಕಾಡಾನೆ ಭೀಮ ರಾಜಾರೋಷವಾಗಿ ಓಡಾಡಿದ್ದು ಗ್ರಾಮಸ್ಥರು ಮನೆಯ ಕಾಂಪೌಂಡ್ ಒಳಗೆ ನಿಂತು ಕಾಡಾನೆಯ ವಿಡಿಯೋ ಮಾಡುವುದರಲ್ಲಿ ತಲ್ಲೀನರಾಗಿದ್ದರು. ಶಾರ್ಪ್‌ಶೂಟರ್‌ ವೆಂಕಟೇಶ್‌ ಅವರ ಮೇಲೆ ದಾಳಿ ನಡೆಸಿ ಕೊಂದು ಹಾಕಿದ್ದ ಕಾಡಾನೆ ಭೀಮ ಇದೀಗ ಚೇತರಿಸಿಕೊಂಡಿದ್ದು ಗ್ರಾಮಗಳಲ್ಲಿ ಓಡಾಡುತ್ತಿದೆ. ಆದರೆ ಗ್ರಾಮಸ್ಥರಲ್ಲಿ ಯಾವುದೇ ಭಯ ಕಾಣಿಸುತ್ತಿಲ್ಲ. ಎಲ್ಲರೂ ಜೋರಾಗಿ ಭೀಮನನ್ನು ಕರೆಯುತ್ತ ವಿಡಿಯೋ ಮಾಡುತ್ತಿದ್ದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಅರ್ಜುನನ ಸಾವಿನ ನಂತರ ಕಾಡಾನೆ ಸೆರೆ ಹಾಗೂ ರೇಡಿಯೊ ಕಾಲರ್ ಅಳವಡಿಕೆ ಕಾರ್ಯಾಚರಣೆ ನಿಂತು ಹೋಗಿದ್ದು ಅರಣ್ಯ ಇಲಾಖೆ ಕಾಡಾನೆಗಳ ಉಪಟಳ ತಡೆಯುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕಾಫಿ ಬೆಳೆಗಾರರು ಹಾಗೂ ರೈತರು ಒತ್ತಾಯಿಸಿದ್ದಾರೆ.

ಕಾಡಾನೆ ಮರಿ ಕಳೇಬರ ಪತ್ತೆ

ಸಕಲೇಶಪುರ ತಾಲ್ಲೂಕಿನ ಮಳಲಿ ಗ್ರಾಮದ ಬಳಿ ನವಜಾತ ಕಾಡಾನೆ ಮರಿಯ ಕಳೇಬರ ಪತ್ತೆಯಾಗಿದೆ. ಆಗ ತಾನೇ ಹುಟ್ಟಿರುವ ಕಾಡಾನೆ ಮರಿ ತಾಯಿಯ ಗರ್ಭದಲ್ಲಿದ್ದಾಗಲೇ ಮೃತಪಟ್ಟಿದೆ. ಇದೇ ಕಾರಣಕ್ಕೆ ಕೆಲಹೊತ್ತು ಅದರ ಬಳಿಯೇ ಇದ್ದ ತಾಯಿ ಹಾಗೂ ಇತರೆ ಆನೆಗಳು ನಂತರ ಕಳೇಬರ ಬಿಟ್ಟು ಹೋಗಿವೆ. ಅನಾರೋಗ್ಯವೋ ಅಥವಾ ಗರ್ಭದಲ್ಲಿದ್ದಾಗ ಏನಾದರೂ ಪೆಟ್ಟಾಗಿತ್ತೋ ಎಂಬುದು ತಿಳಿದಿಲ್ಲ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ವೈದ್ಯರು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT