ಗುರುವಾರ , ಆಗಸ್ಟ್ 11, 2022
21 °C

ಹಾಸನದಲ್ಲಿ 3 ವರ್ಷಗಳಿಂದ ವಾಡಿಕೆಗಿಂತಲೂ ಹೆಚ್ಚು ಮಳೆ: ಅಂತರ್ಜಲಕ್ಕೆ ಬಂತು ಜೀವಕಳೆ

ಜೆ.ಎಸ್‌.ಮಹೇಶ್‌ Updated:

ಅಕ್ಷರ ಗಾತ್ರ : | |

Prajavani

ಹಾಸನ: ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ವಾಡಿಕೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮಳೆ ಆಗುತ್ತಿರುವುದರಿಂದಅಂತರ್ಜಲ ಮಟ್ಟ ಏರಿಕೆಯಾಗುತ್ತಿದೆ. 2017ಕ್ಕೆ ಹೋಲಿಸಿದರೆ ಈ ವರ್ಷ ಸರಾಸರಿ 4 ಮೀಟರ್‌ ಏರಿಕೆಯಾಗಿದೆ.

2017ರ ನವೆಂಬರ್‌ ಅಂತ್ಯಕ್ಕೆ ಸರಾಸರಿ ಅಂತರ್ಜಲ ಮಟ್ಟ 14.66 ಮೀಟರ್‌ ಇದ್ದರೆ, 2018ರಲ್ಲಿ 15.65ಮೀ., 2019ರಲ್ಲಿ 9.65 ಮೀ ಹಾಗೂ 2020ರಲ್ಲಿ 10.71 ಮೀಟರ್‌ ಇದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವತಿಯಿಂದ ಜಿಲ್ಲೆಯ 8 ತಾಲ್ಲೂಕುಗಳಿಂದ 95 ಅಧ್ಯಯನ ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ಪ್ರತಿ ತಿಂಗಳು ಅಂತರ್ಜಲ ಸರಾಸರಿ ಸ್ಥಿರ ಮಟ್ಟವನ್ನು ದಾಖಲಿಸಲಾಗುತ್ತದೆ.

ಅರಸೀಕೆರೆ ಮತ್ತು ಚನ್ನರಾಯಪಟ್ಟಣ ತಾಲ್ಲೂಕುಗಳಲ್ಲಿ ಕಳೆದ ವರ್ಷ ಕೇಂದ್ರ ಸರ್ಕಾರದ ಜಲಶಕ್ತಿ ಅಭಿಯಾನ ಆರಂಭಿಸಲಾಗಿತ್ತು. ಈ ಅಭಿಯಾದನದಡಿ ಎರಡೂ ತಾಲ್ಲೂಕುಗಳಲ್ಲಿ ಕೆರೆಗಳಲ್ಲಿ ಹೂಳು ತೆಗೆಯಲಾಗಿದೆ. ಅಲ್ಲದೇ ಜಿಲ್ಲಾ ಪಂಚಾಯಿತಿ ವತಿಯಿಂದ ಇಂಗು ಗುಂಡಿ, ಚೆಕ್‌ ಡ್ಯಾಮ್‌ ನಿರ್ಮಾಣ, ಕೊಳವೆ ಬಾವಿ ಮರುಪೂರಣದಿಂದ ಮಳೆಯ ನೀರು ಭೂಮಿಯಲ್ಲಿ ಇಂಗುವಂತೆ ಮಾಡಲಾಗಿದೆ.

ಏಕಲವ್ಯ ಜೀವ ಜಲ ಫೌಂಡೇಶನ್ ವತಿಯಿಂದ ಸಾಮಾಜಿಕ ಕಾರ್ಯಕರ್ತ ಆರ್.ಜಿ. ಗಿರೀಶ್ ನೇತೃತ್ವದಲ್ಲಿ ಹಾಸನ, ಅರಸೀಕೆರೆ ಹಾಗೂ ಚನ್ನರಾಯಪಟ್ಟಣ ತಾಲ್ಲೂಕುಗಳಲ್ಲಿ ಸುಮಾರು 85ಕ್ಕೂ ಹೆಚ್ಚು ಕಲ್ಯಾಣಿಗಳ ಹೂಳು ತೆಗೆಯಲಾಗಿದೆ.

ಜಲಶಕ್ತಿ ಅಭಿಯಾನದಡಿ ಜಿಲ್ಲಾ ಪಂಚಾಯಿತಿ ವತಿಯಿಂದ ವಿವಿಧ ಸಂಘ ಸಂಸ್ಥೆಗಳೊಂದಿಗೆ  ಅರಸೀಕೆರೆ ಹಾಗೂ ಚನ್ನರಾಯಪಟ್ಟಣ ತಾಲ್ಲೂಕುಗಳಲ್ಲಿ ನೂರಕ್ಕು ಹೆಚ್ಚು ಕಲ್ಯಾಣಿಗಳನ್ನು ಸ್ವಚ್ಛಗೊಳಿಸಿದ್ದರಿಂದ ಕಲ್ಯಾಣಿಗಳಲ್ಲಿ ನೀರು ಸಂಗ್ರಹವಾಗಿದೆ.

‘ಈ ವರ್ಷದ ಜಿಲ್ಲೆಯಲ್ಲಿ ಹೇಮಾವತಿ, ಯಗಚಿ ಹಾಗೂ ವಾಟೆಹೊಳೆ ಜಲಾಶಯಗಳು ಭರ್ತಿಯಾಗಿದ್ದವು. ನಾಲೆಗಳ ಮೂಲಕ ಅಚ್ಚುಕಟ್ಟು ಪ್ರದೇಶದ ಕೃಷಿಗೆ ನೀರು ಹರಿಸಲಾಗಿದೆ. ಜೊತೆಗೆ ಹಳೇಬೀಡಿನ ದ್ವಾರ ಸಮುದ್ರ ಕೆರೆ, ನುಗ್ಗೇಹಳ್ಳಿಯ ಹೀರೆಕೆರೆ, ನಾಗರ ನವಿಲೆ ಕೆರೆ ಸೇರಿದಂತೆ ಹಲವು ಕೆರೆಗಳನ್ನು ತುಂಬಿಸಲಾಗಿದೆ. ಅಲ್ಲದೇ ಮೂರು ವರ್ಷಗಳಿಂದ ಸತತವಾಗಿ ಮಳೆಯಾಗಿದ್ದು, ಕೆರೆಗಳಲ್ಲಿ ನೀರು ತುಂಬಿದೆ. ಅಂತರ್ಜಲ ಮಟ್ಟ ಏರಿಕೆಯಾಗಲು ಕೆರೆಗಳು ಪ್ರಮುಖ ಪಾತ್ರ ವಹಿಸುತ್ತವೆ’ ಎಂದು ಜಿಲ್ಲಾ ಅಂತರ್ಜಲ ಕಚೇರಿಯ ಭೂ ವಿಜ್ಞಾನಿ ಎಸ್‌. ಸುಧಾ ಮಾಹಿತಿ ನೀಡಿದರು.

‘ಅರಸೀಕೆರೆ ತಾಲ್ಲೂಕು ಅಂತರ್ಜಲ ಅತಿ ಬಳಕೆ ಪ್ರದೇಶ, ಚನ್ನರಾಯಪಟ್ಟಣ ಕ್ಲಿಷ್ಟಕರ ಪ್ರದೇಶ ಹಾಗೂ ಉಳಿದ ತಾಲ್ಲೂಕುಗಳನ್ನು ಸುರಕ್ಷಿತ ಪ್ರದೇಶ ಎಂದು ಘೋಷಿಸಲಾಗಿದೆ. ಅರಸೀಕೆರೆ ತಾಲ್ಲೂಕಿನಲ್ಲಿ ಕೊಳವೆ ಬಾವಿ ಕೊರೆಯಲು ಅಂತರ್ಜಲ ಪ್ರಾಧಿಕಾರದ ಜಿಲ್ಲಾ ಸಮಿತಿಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಅನುಮತಿ ಇಲ್ಲದೆ ಕೊರೆದರೆ ಕೊಳೆವೆ ಬಾವಿ ಮಾಲೀಕ ಹಾಗೂ ಬೋರ್ ಕೊರೆದ ವಾಹನದ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಿ ದಂಡ ವಿಧಿಸಲಾಗುವುದು’ಎಂದು ಎಚ್ಚರಿಕೆ ನೀಡಿದರು.

ಉಳಿದ ತಾಲ್ಲೂಕುಗಳಲ್ಲಿಯೂ ಕೊಳವೆ ಬಾವಿ ಕೊರೆಯಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. www.antharjala.kar.nic.in ವೆಬ್‍ಸೈಟ್‍ನಿಂದ ಅರ್ಜಿಗಳನ್ನು ಪಡೆದು, ಭರ್ತಿ ಮಾಡಿ ಇಲಾಖೆಗೆ ಸಲ್ಲಿಸಬಹುದು ಎಂದರು. 

ಅಂತರ್ಜಲ ಮಟ್ಟ ಅಳತೆ ಹೇಗೆ?

ಜಿಲ್ಲೆಯಲ್ಲಿ ಎರಡು ವಿಧದಲ್ಲಿ ಅಂತರ್ಜಲ ಮಾಪನ ಮಾಡಲಾಗುತ್ತದೆ. 8 ತಾಲ್ಲೂಕುಗಳಿಂದ 95 ಅಧ್ಯಯನ ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ಈ ಬಾವಿಗಳಲ್ಲಿ ಸ್ವಯಂ ಚಾಲಿತ ಡಿಜಿಟಲ್‌ ವಾಟರ್‌ ಲೆವೆಲ್‌ ರೆಕಾರ್ಡ್‌ರ್‌ ಅಳವಡಿಸಲಾಗಿದೆ. ಈ ಯಂತ್ರಕ್ಕೆ ಸಿಮ್‌ ಅಳವಡಿಸಿದ್ದು, ಗಂಟೆಗೆ ಒಮ್ಮೆ ಇಲಾಖೆಯ ಅಧಿಕಾರಿಗಳ ಮೊಬೈಲ್‌ಗೆ ಸಂದೇಶ ರವಾನೆಯಾಗುತ್ತದೆ. ಅಂತರ್ಜಲ ಏರಿಕೆಯಾದರೂ, ಇಳಿಕೆಯಾದರೂ ಇದರಿಂದ ಸುಲಭವಾಗಿ ತಿಳಿಯಲಿದೆ. ಜೊತೆಗೆ  ಸೆನ್ಸರ್‌ ಮೂಲಕವೂ ಅಂತರ್ಜಲ ಮಟ್ಟವನ್ನು ಅಳತೆ ಮಾಡಲಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು