ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‌ಕೆಜಿ ಅಂಗನವಾಡಿಯಲ್ಲಿ ಆರಂಭಿಸಿ

10ರಂದು ಜಿಲ್ಲಾಧಿಕಾರಿ ಕಚೇರಿ ಚಲೋ ಚಳುವಳಿ
Last Updated 5 ಜುಲೈ 2018, 14:16 IST
ಅಕ್ಷರ ಗಾತ್ರ

ಹಾಸನ: ಅಂಗನವಾಡಿ ನೌಕರರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜು. 10 ರಂದು ಜಿಲ್ಲಾಧಿಕಾರಿ ಕಚೇರಿ ಚಲೋ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಅಂಗನವಾಡಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಎಲ್.ರಾಘವೇಂದ್ರ ತಿಳಿಸಿದರು.

ಅಂಗನವಾಡಿ ನೌಕರರಿಗೆ ಕೆಲಸದ ಹೊರೆ ಹೆಚ್ಚುತ್ತಿದ್ದು ಕಡಿಮೆ ಸಂಬಳದಲ್ಲಿ ಕುಟುಂಬ ನಿರ್ವಹಣೆ ಅಸಾಧ್ಯವಾಗಿದೆ. ಮಕ್ಕಳ ನಿಗಾ ನೋಡಿಕೊಳ್ಳುವುದು ಮಾತ್ರವಲ್ಲದೆ ಚುನಾವಣೆ, ಭಾಗ್ಯಲಕ್ಷ್ಮಿ, ಸ್ತ್ರಿಶಕ್ತಿ, ಅಂಗವಿಕಲರಿಗೆ ಸಂಬಂಧಿಸಿದ ಕೆಲಸಗಳಿಗೆ ನಿಯೋಜನೆ ಮಾಡಿಕೊಳ್ಳಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಎಲ್‍ಕೆಜಿ ಮತ್ತು ಯುಕೆಜಿ ಕಾನ್ವೆಂಟ್‍ಗಳಿಗೆ ಪಂಚಾಯಿತಿ, ಹೋಬಳಿ ಮಟ್ಟದಲ್ಲಿ ಅವಕಾಶ ನೀಡಿರುವುದರಿಂದ ಪೋಷಕರು ಇಂಗ್ಲಿಷ್ ವ್ಯಾಮೋಹಕ್ಕೆ ಒಳಗಾಗಿ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಇದರಿಂದ ಅಂಗನವಾಡಿಗಳಲ್ಲಿ ಮಕ್ಕಳ ದಾಖಲಾತಿ ಕಡಿಮೆಯಾಗುತ್ತಿದ್ದು, ಕೇಂದ್ರಗಳು ಮುಚ್ಚುವ ಆತಂಕ ನೌಕರರಲ್ಲಿ ಶುರುವಾಗಿದೆ. ಆದ್ದರಿಂದ ಎಲ್‍ಕೆಜಿ ಹಾಗೂ ಯುಕೆಜಿಯನ್ನು ಅಂಗನವಾಡಿ ಕೇಂದ್ರಗಳಲ್ಲೇ ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.

ಪ್ರತಿ ತಿಂಗಳು ಪಾವತಿಯಾಗುತ್ತಿದ್ದ ಗೌರವಧನ ರಾಜ್ಯದ ಹಲವೆಡೆ 5 ತಿಂಗಳಿಂದ ಪಾವತಿಯಾಗಿಲ್ಲ. ಇಲಾಖೆಯಲ್ಲಿ ಖಾಲಿ ಇರುವ ಹಾಗೂ ಸೃಷ್ಟಿಯಾಗುವ ಶೇಕಡಾ 50 ರಷ್ಟು ಮೇಲ್ವಿಚಾರಕಿ ಹುದ್ದೆಗಳಿಗೆ ಅಂಗನವಾಡಿ ನೌಕರರಿಗೆ ಮುಂಬಡ್ತಿ ನೀಡಬೇಕು. ಹಿಂದಿನ ಸರ್ಕಾರ ಜಾರಿಗೊಳಿಸಿದ ಮಾತೃಪೂರ್ಣ ಯೋಜನೆಯಿಂದ ನೌಕರರಿಗೆ ಕೆಲಸದೊತ್ತಡ ಹೆಚ್ಚುತ್ತಿದ್ದು, ಅದರಲ್ಲಿ ಬದಲಾವಣೆ ಕಂಡುಕೊಳ್ಳಬೇಕು. ಹೀಗೆ ಇತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಚಲೋ ಆಯೋಜಿಸಲಾಗಿದೆ ಎಂದರು.

45ನೇ ಐ.ಎಲ್.ಸಿ.ಯ ಶಿಫಾರಸ್ಸಿನ ಪ್ರಕಾರ ₹ 18,000 ಕನಿಷ್ಠ ವೇತನ ಜಾರಿ ಮಾಡಬೇಕು. ಈಗಾಗಲೇ ಹರಿಯಾಣ, ತೆಲಂಗಾಣ, ಆಂದ್ರಪ್ರದೇಶ, ತಮಿಳುನಾಡು, ಗೋವಾ, ಪಾಂಡಿಚೇರಿ, ಕೇರಳ ರಾಜ್ಯಗಳಲ್ಲಿ ನೌಕರರಿಗೆ ₹ 11 ರಿಂದ ₹ 12 ಸಾವಿರ ವೇತನ ಹೆಚ್ಚಳವಾಗಿದೆ. ಆದ್ದರಿಂದ ರಾಜ್ಯದಲ್ಲಿಯೂ ಗೌರವಧನ ಹೆಚ್ಚಳವಾಗಬೇಕು ಮತ್ತು ಸೇವಾ ಜೇಷ್ಠತೆ ಆಧಾರದಲ್ಲಿ ವೇತನವನ್ನು ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.

ಮಾತೃ ವಂದನಾ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ ಅಂಗನವಾಡಿ ನೌಕರರ ಮುಖಾಂತರ ಜಾರಿ ಮಾಡಿಸುತ್ತಿದೆ. ಆದ್ದರಿಂದ ಕಾರ್ಯಕ್ರಮಕ್ಕೆ ಒಂದು ಕಂತಿನ ₹ 300 ನಿಗದಿಪಡಿಸಬೇಕು. ಅಂಗನವಾಡಿ ಸಹಾಯಕಿಯರಿಗೆ ಕಾರ್ಯಕರ್ತೆಯಾಗಿ ಮುಂಬಡ್ತಿ ಪಡೆಯಲು ಇರುವ ವಯಸ್ಸಿನ ಮತ್ತು ಭೌಗೋಳಿಕ ವಿಸ್ತೀರ್ಣದ ಮಿತಿಯನ್ನು ಸಡಿಲಿಸಬೇಕು ಎಂದು ಒತ್ತಾಯಿಸಿದರು.

ಅನುಕಂಪದ ಆಧಾರದಲ್ಲಿರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳನ್ನು ‘ಅದೇ ಕುಟುಂಬದ ಮದುವೆಯಾಗದ ಹೆಣ್ಣು ಮಕ್ಕಳಿಗೆ’ ಎಂಬ ಷರತ್ತನ್ನು ತೆಗೆದು ‘ಕುಟುಂಬದ ಹೆಣ್ಣುಮಕ್ಕಳಿಗೆ’ ಎಂದು ತಿದ್ದುಪಡಿಯಾಗಬೇಕು. ಖಾಲಿ ಇರುವ ಸಹಾಯಕಿ ಮತ್ತು ಕಾರ್ಯಕರ್ತೆಯರ ಹುದ್ದೆಗಳನ್ನು ತುಂಬಬೇಕು. ಅಂಗನವಾಡಿ ಕಾರ್ಯಕರ್ತೆಯರಿಗೆ ಸೇವಾ ನಿಯಾಮಾವಳಿ ರಚಿಸಬೇಕು. ಕೇಂದ್ರ ಸರ್ಕಾರ ಕಡಿತ ಮಾಡಿರುವ ಅನುದಾನವನ್ನು ವಾಪಸ್ಸು ನೀಡಬೇಕು ಎಂದು ಒತ್ತಾಯಿಸಿದರು.

ರಾಜ್ಯ ಅಂಗನವಾಡಿ ನೌಕರರ ಸಂಘದ ಉಪಾಧ್ಯಕ್ಷೆ ಎಂ.ಬಿ.ಪುಷ್ಪಾ, ಜಯಂತಿ, ಶೈಲಜಾ, ಅರವಿಂದ ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT