ಮಂಗಳವಾರ, ಜನವರಿ 18, 2022
24 °C
ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಕೆ. ರವಿಕಾಂತ್ ಸಲಹೆ

ಹಣ ಗಳಿಕೆಯೇ ಮುಖ್ಯ ಗುರಿಯಾಗದಿರಲಿ: ಬಿ.ಕೆ. ರವಿಕಾಂತ್ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಜೀವನದಲ್ಲಿ ಹಣ ಗಳಿಕೆಯೊಂದೇ ಮುಖ್ಯ ಗುರಿಯಾಗದೆ ಸಮಾಜ ಕಟ್ಟುವ ಚಿಂತನೆ ಪ್ರಯತ್ನದಲ್ಲಿ ಯುವ ಸಮುದಾಯ ತೊಡಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಕೆ. ರವಿಕಾಂತ್ ತಿಳಿಸಿದರು.

ನಗರದ ಎಸ್‌ಡಿಎಂ ಆಯುರ್ವೇದ ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವಕೇಂದ್ರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಿದ್ದ ಬುಧವಾರ ರಾಷ್ಟ್ರೀಯ ಯುವ ಸಪ್ತಾಹ ಹಾಗೂ ಸ್ವಾಮಿ ವಿವೇಕಾನಂದ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದರು.

ಯುವ ಜನತೆ ದೇಶದ ಬಹು ಮುಖ್ಯ ಸಂಪತ್ತು. ಆಕರ್ಷಣೆಗಳಿಗೆ ಒಳಗಾಗದೇ, ವ್ಯಸನಗಳಿಗೆ ದಾಸರಾಗದೇ ದೇಶಕ್ಕೆ ಕೊಡುಗೆ ನೀಡಬೇಕು. ಯುವಕರು ಸ್ವಾಮಿ ವಿವೇಕಾನಂದರ ತತ್ವದಾರ್ಶಗಳನ್ನು ಅಳವಡಿಸಿಕೊಳ್ಳಬೇಕು. ಜೀವನದಲ್ಲಿ ಹಣ ಸಂಪಾದನೆ ಮಾಡುವುದು ಸಾಧನೆಯಲ್ಲ. ಮಾನವೀಯ ಗುಣಗಳೊಂದಿಗೆ ಇತರರಿಗೆ ಪ್ರೇರಣೆಯಾಗುವಂತೆ ಬದುಕಬೇಕು ಎಂದು ಸಲಹೆ ನೀಡಿದರು.

ಶಾಸಕ ಪ್ರೀತಂ ಜೆ.ಗೌಡ ಮಾತನಾಡಿ, ಸ್ವಾಮಿ ವಿವೇಕಾನಂದರು ಬಹುತೇಕರಿಗೆ ಒಂದು ರೀತಿಯಲ್ಲಿ ಸ್ಪೂರ್ತಿ ಅಥವಾ ಮಾದರಿ ಆಗಿರುತ್ತಾರೆ. ವಿಶ್ವವೇ ಒಂದು ಕುಟುಂಬ ಅದರಲ್ಲಿ ಎಲ್ಲರೂ ಸಹಬಾಳ್ವೆಯಿಂದ ಬದುಕಬೇಕು ಎಂದು ವಿಶ್ವವನ್ನು
ಒಗ್ಗೂಡಿಸುವ ಕನಸನ್ನು ವಿವೇಕಾನಂದರು ಹೊಂದಿದ್ದರು. ಇಂದು ಕೋವಿಡ್‌ ಇಡೀವಿಶ್ವವನ್ನು ಒಂದು ಮಾಡಿದ್ದು, ಒಂದು ದೇಶದ ಕಷ್ಟಕ್ಕೆ ಮತ್ತೊಂದು ದೇಶ ಸ್ಪಂದಿಸುವ ಕೆಲಸ ಆಗುತ್ತಿದೆ ಎಂದು ಹೇಳಿದರು.

ಜೀವನದಲ್ಲಿ ಗುರಿ ಮುಖ್ಯ, ಗುರಿ ತಲುಪಲು ನಿಶ್ಚಯವಾದ ದೃಢ ಮನಸ್ಸು ಬೇಕಾಗಿದೆ. ನನಗೂ ವಿವೇಕಾನಂದ ಸ್ಫೂರ್ತಿ ಆಗಿದ್ದಾರೆ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಾಂತರಾಜ್‌ ಮಾತನಾಡಿ, ಕೇವಲ 39 ವರ್ಷ ಬದುಕಿದ್ದ ವಿವೇಕಾನಂದರು ಭಾರತದ ಯೂತ್‌ ಐಕಾನ್‌ ಆಗಿದ್ದರು ಎಂದರು.

ಪೊಲೀಸ್ ವರಿಷ್ಠಾಧಿಕಾರಿ ಆರ್‌. ಶ್ರೀನಿವಾಸ್‌ಗೌಡ ಮಾತನಾಡಿ, ಸ್ವಾಮಿ ವಿವೇಕಾನಂದರು ದೇಶ ಭಕ್ತಿ ಮತ್ತು ವ್ಯಕ್ತಿತ್ವ ವಿಕಸನದ ಬಗ್ಗೆ ಹೆಚ್ಚಿನ ಚಿಂತನೆ ಮಾಡಿದ್ದರು ಎಂದರು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಆರ್‌.ಮೋಹನ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸಿ.ಕೆ. ಹರೀಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್, ಎಸ್‌ಡಿಎಂ ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಪ್ರಸನ್ನ ಎನ್‌. ರಾವ್, ವಾರ್ತಾ ಮತ್ತು
ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ವಿನೋದ್ ಚಂದ್ರ, ಕಲಾವಿದರಾದ ಗ್ಯಾರಂಟಿ ರಾಮಣ್ಣ, ಬಿ.ಟಿ ಮಾನವ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.