ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ಮಳೆಗೆ 196 ಮನೆ ಭಾಗಶಃ ಹಾನಿ

ಧರೆಗುರುಳಿದ 400ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು, ಉಕ್ಕಿ ಹರಿದ ಹೇಮಾವತಿ ನದಿ
Last Updated 7 ಆಗಸ್ಟ್ 2020, 13:45 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯಲ್ಲಿ ಶುಕ್ರವಾರವೂ ವರುಣನ ಆರ್ಭಟ ಮುಂದುವರಿದಿದೆ. ವಾಸದ ಮನೆಗಳ ಗೋಡೆ ಕುಸಿದಿದ್ದು, ಅಪಾರ ಪ್ರಮಾಣದ ಬೆಳೆಗಳು ಹಾನಿಯಾಗಿವೆ.

ಪ‍್ರಾಥಮಿಕ ಅಂದಾಜಿನ ಪ್ರಕಾರ 196 ಮನೆಗಳು ಭಾಗಶಃ ಹಾನಿಗೊಳಗಾಗಿದ್ದು, ಎರಡು ಎತ್ತುಗಳು ಅಸುನೀಗಿವೆ.
ಸಕಲೇಶಪುರ ತಾಲ್ಲೂಕು ಯಸಳೂರು ಪೊಲೀಸ್‌ ಠಾಣೆ ಜಖಂಗೊಂಡಿದೆ. ರೈತರು ಬೆಳೆದ 2036 ಹೆಕ್ಟೇರ್‌ ಮುಸುಕಿನ ಜೋಳ ಹಾಗೂ 771 ಹೆಕ್ಟೇರ್ ಭತ್ತ ಹಾನಿಯಾಗಿದೆ. ವಾಡಿಕೆ ಮಳೆ 48 ಮಿ.ಮೀ. ಪೈಕಿ 135 ಮಿ.ಮೀ. ಮಳೆಯಾಗಿದೆ.

ಸಕಲೇಶಪುರ, ಆಲೂರು, ಬೇಲೂರು, ಅರಕಲಗೂಡು ವ್ಯಾಪ್ತಿಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ ಹಾಗೂ ಗಾಳಿಯಿಂದ 400ಕ್ಕೂ ಹೆಚ್ಚು ವಿದ್ಯುತ್‌ ಕಂಬ, ಮರಗಳು ನೆಲಕ್ಕುರುಳಿದ್ದು, ಹಲವು ಗ್ರಾಮಗಳಲ್ಲಿ ಕತ್ತಲು ಆವರಿಸಿದೆ.

ಸಕಲೇಶಪುರ - ಸುಬ್ರಹ್ಮಣ್ಯ ರೈಲ್ವೆಮಾರ್ಗದಲ್ಲಿ ಮಣ್ಣು ಕುಸಿತ ಉಂಟಾಗಿತ್ತು. ಮಳೆಯ ನಡುವೆಯೇ ರೈಲ್ವೆ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಮಣ್ಣಿನ ರಾಶಿ ತೆರವುಗೊಳಿಸಿ, ಮಣ್ಣು ಕುಸಿಯದಂತೆ ಕಲ್ಲು ತುಂಬಿದ ಚೀಲವನ್ನು ಅಡ್ಡ ಇಟ್ಟರು.ಹೆತ್ತೂರು ರಸ್ತೆಯಲ್ಲಿ ರಸ್ತೆಗೆ ಅಡ್ಡಲಾಗಿ ಮರಗಳು ಬಿದ್ದು, ವಾಹನ ಸಂಚಾರಕ್ಕೆ ತೊಂದರೆ ಆಗಿತ್ತು.‌

ಮಲೆನಾಡಿನಲ್ಲಿ ಮಳೆ ಹೆಚ್ಚಿರುವ ಕಾರಣ ನದಿ ಪಾತ್ರದ ಜನರು ಪ್ರವಾಹ ಭೀತಿ ಎದುರಿಸುತ್ತಿದ್ದಾರೆ. ಸಕಲೇಶಪುರ ಪಟ್ಟಣದಲ್ಲಿ ಹಾದು ಹೋಗಿರುವ ಹೇಮಾವತಿ ನದಿ ಮೈದುಂಬಿ ಹರಿಯುತ್ತಿದೆ. ಜಲಾವೃತಗೊಂಡಿರುವ ಹೊಳೆ ಮಲ್ಲೇಶ್ವರಸ್ವಾಮಿ ದೇವಾಲಯ ವೀಕ್ಷಣೆಗೆ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ.

ಆಲೂರಿನಲ್ಲಿ ಧಾರಾಕಾರ ಮಳೆಗೆ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಫಸಲಿಗೆ ಬಂದಿದ್ದ ಮೆಕ್ಕೆಜೋಳ ಮಳೆ, ಗಾಳಿಯ ರಭಸಕ್ಕೆ ನೆಲಕಚ್ಚಿದೆ. ಭತ್ತದ ಗದ್ದೆಗೆ ನೀರು ತುಂಬಿಕೊಂಡಿದೆ. ನಾಟಿ ಮಾಡಿದ್ದ ಭತ್ತ ಕೊಚ್ಚಿ ಹೋಗಿದೆ. ಅಲ್ಲದೇ ಕಾಫಿ ಭತ್ತ , ಬಾಳೆ ಮತ್ತಿತ್ತರ ಬೆಳೆ ನಷ್ಟವಾಗಿದೆ. ಹಲವೆಡೆ ಭಾರಿ ಗಾತ್ರದ ಮರಗಳು ಮನೆ ಹಾಗೂ ರಸ್ತೆ ಮೇಲೆ ಬಿದ್ದು ಹಾನಿಯಾಗಿದೆ. ಕೆಲವು ಕಡೆ ವಿದ್ಯುತ್ ಕಂಬ, ವಿದ್ಯುತ್‌ ಪರಿವರ್ತಕಗಳು ಹಾನಿಯಾಗಿವೆ.

ಕಾವೇರಿ ನದಿ ಪಾತ್ರದ ತಗ್ಗು ಪ್ರದೇಶದಲ್ಲಿ ಬೆಳೆದಿದ್ದ ಹೊಗೆಸೊಪ್ಪು ಬೆಳೆ ನೀರಿನಲ್ಲಿ ಮುಳುಗಿ ಕೊಳೆಯುತ್ತಿದೆ. ಕಟಾವಿನ ಹಂತಕ್ಕೆ ಬಂದಿದ್ದ ಗಿಡಗಳು ಪ್ರವಾಹಕ್ಕೆ ಸಿಲುಕಿ ಅಪಾರ ಪ್ರಮಾಣದಲ್ಲಿ ನಷ್ಟಕ್ಕೀಡಾಗಿದೆ ಎಂದು ರೈತರು ಅಳಲು ತೋಡಿಕೊಂಡರು.

ಮೂಡಿಗೆರೆ, ಸಕಲೇಶಪುರದಲ್ಲಿ ಭಾರಿ ಮಳೆ ಆಗುತ್ತಿರುವುದರಿಂದ ಹೇಮಾವತಿ ಜಲಾಶಯದ ಒಳ ಹರಿವು 47,320
ಕ್ಯುಸೆಕ್‌ಗೆ ಏರಿದೆ. 2922 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ 2911 ಅಡಿ ನೀರು ಸಂಗ್ರಹವಾಗಿದ್ದು, ಎರಡು
ದಿನದಲ್ಲಿ ಹತ್ತು ಅಡಿ ನೀರು ಸಂಗ್ರಹವಾಗಿದೆ.

ಬೇಲೂರಿನಲ್ಲಿರುವ 3.6 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಯಗಚಿ ಜಲಾಶಯದ ಐದು ಕ್ರೆಸ್ಟ್‌ ಗೇಟ್‌ಗಳ ಮೂಲಕ 3,500 ಕ್ಯುಸೆಕ್‌ ನೀರು ನದಿಗೆ ಬಿಡಲಾಗುತ್ತಿದೆ. ‌ಆಲೂರಿನ ವಾಟೆಹೊಳೆ ಜಲಾಶಯವು ಭರ್ತಿ ಹಂತ ತಲುಪಿದೆ. 1.51 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 1089 ಕ್ಯುಸೆಕ್‌ ಒಳ ಹರಿವು ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT